April 20, 2024

Chitradurga hoysala

Kannada news portal

ಉಪೇಂದ್ರ – ಕ್ಷಮೆ – ಅಸ್ಪೃಶ್ಯತೆಯ ನೋವು – ಅನಾಗರಿಕ ಹೊಲಗೇರಿಯ ಸೃಷ್ಟಿಕರ್ತರು……..

1 min read

ಉಪೇಂದ್ರ – ಕ್ಷಮೆ – ಅಸ್ಪೃಶ್ಯತೆಯ ನೋವು – ಅನಾಗರಿಕ ಹೊಲಗೇರಿಯ ಸೃಷ್ಟಿಕರ್ತರು……..

 

ಇತರರನ್ನು ಕ್ಷಮಿಸಿ. ಕಾರಣ ಅವರು ಕ್ಷಮೆಗೆ ಅರ್ಹರು ಎಂದಲ್ಲ. ಬದಲಿಗೆ ನಾವು ಶಾಂತಿಗೆ ಅರ್ಹರು……ಗೌತಮ ಬುದ್ದ….

ದುರ್ಬಲರು ಎಂದೂ ಕ್ಷಮಿಸುವುದಿಲ್ಲ. ಕ್ಷಮೆ ಪ್ರಬಲರ ಬಹುದೊಡ್ಡ ಗುಣಲಕ್ಷಣ….ಮಹಾತ್ಮ ಗಾಂಧಿ…..

ಕ್ಷಮಯಾ ಧರಿತ್ರಿ – ಭೂಮಿ ಮತ್ತು ಹೆಣ್ಣು….. ಭಗವದ್ಗೀತೆ……

ಶತ್ರುಗಳನ್ನು ಕ್ಷಮಿಸಿ ಬಿಡಿ. ಆದರೆ ಅವರ ಹೆಸರುಗಳನ್ನು ಮರೆಯಬೇಡಿ….ಬೈಬಲ್…

ದೇವರು ಕರುಣಾಮಯಿ. ಎಲ್ಲರನ್ನೂ ಕ್ಷಮಿಸುವರು…..ಖುರಾನ್…

ಕ್ಷಮೆ ಮನುಷ್ಯನೊಳಗಿನ ಸಹಜ ಸ್ವಭಾವ……. ಜೈನ ಧರ್ಮ….

ಸಾರ್ವಜನಿಕ ಬದುಕು ಅಷ್ಟು ಸುಲಭವಲ್ಲ. ಅದು ಅಪಾರವಾದ ತಾಳ್ಮೆ, ದೃಢ ಮನಸ್ಸು, ವಿಶಾಲ ಮನೋಭಾವ, ಭಂಡತನ, ನಿರಂತರ ಕ್ರಿಯಾಶೀಲತೆ, ಸ್ಥಿತ ಪ್ರಜ್ಞತೆ ಅಷ್ಟೇ ಏಕೆ ಬಹುಶಃ ಸಂಕುಚಿತ ಮನೋಭಾವವೂ ಸೇರಿ ಬಹುಶಃ 64 ವಿದ್ಯೆಗಳು ಇರಬೇಕಾಗುತ್ತದೇನೋ. ಅದರಲ್ಲೂ ಸಮೂಹ ಸಂಪರ್ಕ ಮಾಧ್ಯಮಗಳ ಬೆಳವಣಿಗೆಯೊಂದಿಗೆ ರಾಜಕೀಯ ವಾತಾವರಣದಲ್ಲಿ ಸಂತೆಯಲ್ಲಿ ಬೆತ್ತಲೆ ನಿಂತಂತ ಬದುಕು ಈ ಸಾರ್ವಜನಿಕ ಜೀವನ……

ಕನ್ನಡ ಸಿನಿಮಾ ರಂಗ ಎಂಬ ಮನರಂಜನಾ ಉದ್ಯಮದಲ್ಲಿ ಕಳೆದ ಎರಡು ಮೂರು ದಶಕಗಳಲ್ಲಿ ಹಸಿ ಹಸಿ ಸಂಭಾಷಣೆಗಳನ್ನು, ತಿಕ್ಕಲುತನದ ವೇಷಗಳನ್ನು, ಪ್ರಾಮಾಣಿಕತೆಯ ಆದರೆ ಅವಾಸ್ತವಿಕ ಕ್ರಾಂತಿಕಾರಿ ವಿಚಾರಗಳನ್ನು ಹೇಳುತ್ತಾ ಹಣ ಮತ್ತು ಖ್ಯಾತಿ ಗಳಿಸಿರುವ ಹಾಗು ಒಂದು ಪ್ರಯೋಗಾತ್ಮಕ ರಾಜಕೀಯ ಪಕ್ಷದ ಮುಖ್ಯಸ್ಥರು ಆಗಿರುವ ಉಪೇಂದ್ರ ಎಂಬ ನಟನ ಮೇಲಿನ ಆಕ್ಷೇಪಾರ್ಹ ಪದ ಬಳಕೆಯ ವಿವಾದದ ಬಗ್ಗೆ ಯೋಚಿಸಿದಾಗ…….

ಇಲ್ಲಿ ಯಾವುದೇ ಮುಚ್ಚುಮರೆ ಏನೂ ಇಲ್ಲ. ಭಾರತದ ಸಾಮಾಜಿಕ ವ್ಯವಸ್ಥೆ ರೂಪಗೊಂಡಿರುವುದೇ ಜಾತಿ ಪದ್ದತಿಯ ಆಧಾರದ ಮೇಲೆ. ಇದರಲ್ಲಿ ಮೇಲು ಕೀಳಿನ ನಂತರವೂ ಉಳಿದ ಮತ್ತೊಂದು ಸಮುದಾಯವನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಂಡು ಮುಟ್ಟಿಸಿಕೊಳ್ಳದ ಅಸ್ಪೃಶ್ಯರೆಂದು ಪರಿಗಣಿಸಿ ಊರ ಹೊರಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಕೊಡದೆ, ಕಸ ಕೊಚ್ಚೆ ಕೊಳಕು ವಾತಾವರಣದಲ್ಲಿ ಬದುಕಲು ಬಿಟ್ಟು ಅದನ್ನು ಹೊಲಗೇರಿಗಳು ಎಂದು ಕರೆಯಲಾಗುತ್ತಿದ್ದ ಸನಾತನ ಜೀವನಶೈಲಿ ಭಾರತದ ಇತಿಹಾಸದ ಪುಟ ಪುಟಗಳಲ್ಲಿ ದಾಖಲಾಗಿದೆ. ಕೊನೆಗೆ ಅದೇ ಆಡು ಮಾತಾಗಿ ಊರಿದ್ದಲ್ಲಿ ಹೊಲಗೇರಿ ಇದ್ದೇ ಇರುತ್ತದೆ ಎಂದು ಪ್ರಚಲಿತವಾಗಿ ಶತ ಶತಮಾನಗಳಿಂದ ಚಾಲ್ತಿಯಲ್ಲಿದೆ. ವಚನ ಸಾಹಿತ್ಯವೂ ಸೇರಿ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ, ಸಿನಿಮಾಗಳಲ್ಲಿ, ಭಾಷಣಗಳಲ್ಲಿ ಇದು ಉಲ್ಲೇಖವಾಗುತ್ತಲೇ ಇದೆ…..

ದುಷ್ಟ ಅಸಹ್ಯ ಪದ್ದತಿಯೊಂದು ತನ್ನ ಅರಿವಿನ ಅಂಚಿನಲ್ಲಿಯೇ ಜನ ಮಾನಸದಲ್ಲಿ ಬೆರೆತು ಅದು ಸಹಜವೇ ಆಗಿ ಕೊಳೆತ ಜಾತಿ ಮನಸ್ಸುಗಳಿಗೆ ದುರ್ವಾಸನೆಯೇ ಮೂಗಿಗೆ ಬಡಿದರೂ ಅದನ್ನು ನಿರ್ಲಕ್ಷಿಸಿ ಮುಂದುವರಿಯುತ್ತಲೇ ಇದೆ. ಅದು ಉಪೇಂದ್ರ ಅವರ ಪ್ರಕರಣದಲ್ಲಿ ಮತ್ತೆ ಮುನ್ನಲೆಗೆ ಬಂದಿದೆ…….

ನಮ್ಮ ಸಮಾಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ರಾಹ್ಮಣ, ದಲಿತ, ಲಿಂಗಾಯತ, ಒಕ್ಕಲಿಗ, ಕುರುಬ ಮುಂತಾದ ಜಾತಿಯ ಪರವಾಗಿ ಅಥವಾ ವಿರುದ್ಧವಾಗಿ ಹಾಗು ಅಸಮಾನತೆಯ ಪರವಾಗಿ ಜನರಿದ್ದಾರೆಯೇ ಹೊರತು ಮನುಷ್ಯರ ಪರ, ಸಮಾನತೆಯ ಪರ, ಜೀವಪರ ನಿಲುವುಗಳನ್ನು ಹೊಂದಿರುವವರ ಸಂಖ್ಯೆ ತುಂಬಾ ಕಡಿಮೆ ಇದೆ. ಆ ಕಾರಣಕ್ಕಾಗಿಯೇ ಇಂತಹ ವಿಷಯಗಳಲ್ಲಿ ಸತ್ಯ ಮತ್ತು ವಾಸ್ತವದ ಚರ್ಚೆಗಿಂತ ದ್ವೇಷ ಅಸೂಯೆಯ ಮಾತುಗಳು ಮೇಲುಗೈ ಪಡೆಯುತ್ತದೆ. ಕೊನೆಗೆ ಕಾನೂನು ಜಯಶಾಲಿಯಾಗುತ್ತದೆಯೇ ಹೊರತು ನ್ಯಾಯ ನೀತಿ ಮನುಷ್ಯತ್ವವಲ್ಲ……..

ಆದರೂ ಸಮಸ್ಯೆಯ ಮೂಲ ಹುಡುಕುವ ಒಂದು ಪ್ರಯತ್ನ. ಕೆಲವು ಗೆಳೆಯರು ವಿರೋಧಿಗಳಾಗಬಹುದಾದ ಸಾಧ್ಯತೆ ಇದ್ದರೂ ಸಹ……..

ಮೊದಲನೆಯದಾಗಿ, ಎಲ್ಲರಿಗೂ ತಿಳಿದಿರುವಂತೆ ನಮ್ಮ ಸಮಾಜದಲ್ಲಿ ಬೇರೋರಿರುವ ಜಾತಿ ವ್ಯವಸ್ಥೆ ಮತ್ತು ಅದಕ್ಕಿಂತ ನೀಚವಾದ ಅಸ್ಪೃಶ್ಯತೆ. ಅದಕ್ಕೆ ನಾವೆಲ್ಲರೂ ತಲೆ ತಗ್ಗಿಸಬೇಕು. ಅದು ಸಮಸ್ಯೆಯ ಮೂಲ.

ಎರಡನೆದಾಗಿ, ಉಪೇಂದ್ರ ಅವರು ಒಂದು ರಾಜಕೀಯ ಪಕ್ಷದ ನಾಯಕರು. ಸಹಜವಾಗಿ ಅವರ ನಿಲುವುಗಳು ಬಗ್ಗೆ ಸಾರ್ವಜನಿಕರಿಗೆ ಕುತೂಹಲವಿರುತ್ತದೆ. ಉಪೇಂದ್ರ ಅವರಿಗೆ ಸಮಾಜದ ಬಗ್ಗೆ ಆಳವಾದ ಅಧ್ಯಯನ ಅಥವಾ ಇತಿಹಾಸದ ತಿಳುವಳಿಕೆ ಅಷ್ಟಾಗಿ ಇರುವ ಸಾಧ್ಯತೆ ಕಡಿಮೆ. ಸಹಜವಾಗಿ ಸಿನಿಮಾ ಲೋಕದ ಶೈಲಿಯ ಯೋಚನೆ ಯೋಜನೆ ಮತ್ತು ಜೀವನ ವಿಧಾನ ರೂಪಿಸಿಕೊಂಡವರು. ಬಹುಶಃ ಬಾಲ್ಯದ ಸ್ವಲ್ಪ ಬಡತನ ಬಿಟ್ಟರೆ ಶ್ರೀಮಂತ ಜೀವನ ಶೈಲಿಗೆ ಒಗ್ಗಿರುವವರು. ಅವರ ರಾಜಕೀಯ ಸಿದ್ದಾಂತ ಕೇವಲ ಭ್ರಷ್ಟಾಚಾರ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿದೆಯೇ ಹೊರತು ಜಾತಿ ಅಸ್ಪೃಶ್ಯತೆಯ ಬಗ್ಗೆ ಅವರೆಂದೂ ನಿಖರವಾಗಿ ಮಾತನಾಡಿಲ್ಲ ಅಥವಾ ದಲಿತರ ಮೇಲೆ ಇತ್ತೀಚೆಗೆ ನಡೆದ ಯಾವುದೇ ‌ಅಮಾನುಷ ಕೃತ್ಯಗಳನ್ನು ಖಂಡಿಸಿಲ್ಲ. ಸಹಜವಾಗಿ ಇದು ಆ ಸಮುದಾಯದ ಜನರಲ್ಲಿ ‌ಆಕ್ರೋಶ ಇದ್ದೇ ಇರುತ್ತದೆ…..

ಮೂರನೆಯದಾಗಿ, ಯಾವುದೇ ಸಂಘಟನೆಗಳಲ್ಲಿ ಮೂರು ರೀತಿಯ ಹಂತಗಳು ಇರುತ್ತವೆ. ಕನ್ನಡ ಸಂಘಟನೆ, ರೈತ ಸಂಘಟನೆ, ಹಿಂದುತ್ವದ ಸಂಘಟನೆ, ದಲಿತ ಸಂಘಟನೆ ಹೀಗೆ ಕೆಲವು ಸಂಘಟನೆಗಳ ಮೊದಲ ಹಂತದಲ್ಲಿ ಅತ್ಯಂತ ಪ್ರಾಮಾಣಿಕ, ಪ್ರಬುದ್ಧ, ಸೈದ್ದಾಂತಿಕ ಬದ್ದತೆಯ ಜನರು ಹೋರಾಟಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅಪಾರ ಅಧ್ಯಯನ, ಚಿಂತನೆ, ತ್ಯಾಗ, ತಾಳ್ಮೆ, ದೂರದೃಷ್ಟಿ ಇವರಲ್ಲಿ ಇರುತ್ತದೆ. ಎರಡನೆಯ ಹಂತದಲ್ಲಿ ಹೋರಾಟ ಮಾಡುತ್ತಾ, ಸ್ವಂತ ಬದುಕನ್ನು ಕಟ್ಟಿಕೊಳ್ಳುತ್ತಾ, ಪ್ರಚಾರ ಪಡೆಯುತ್ತಾ, ಜನರನ್ನು ಸಂಘಟಿಸುತ್ತಾ, ಯಾವುದೋ ಒಂದು ರಾಜಕೀಯ ಪಕ್ಷದ ಹಣ ಮತ್ತು ಪ್ರಭಾವ ಬಳಸುತ್ತಾ ಇರುವುದರಲ್ಲಿ ಸಮಾಜಮುಖಿ ಹೋರಾಟ ಮಾಡುವ ಮ್ಯಾನೇಜ್ಮೆಂಟ್ ಸಂಘಟನೆಗಳು ಇರುತ್ತವೆ. ಇವರಿಗೆ ದೂರದೃಷ್ಟಿಗಿಂತ ಆ ಸಂದರ್ಭದ ವಿಷಯಗಳು ಮುಖ್ಯವಾಗುತ್ತವೆ.
ಮೂರನೆಯ ಹಂತದಲ್ಲಿ, ಈ ಎರಡು ಹಂತದ ಸಂಘಟನೆಗಳಿಂದ ಬೇರೆಯಾಗಿ ಅಥವಾ ಸ್ವತಃ ಒಂದು ಸಂಘಟನೆ ಮಾಡಿಕೊಂಡು, ಆಕ್ರಮಣಕಾರಿಯಾಗಿ ಪ್ರತಿಭಟನೆಗಳನ್ನು ಮಾಡುತ್ತಾ, ಯಾವುದೋ ಒಂದು ಸಣ್ಣ ವಿಷಯ ಸಿಕ್ಕ ತಕ್ಷಣ ಮಾಧ್ಯಮಗಳ ಸಹಾಯದಿಂದ ಅದನ್ನು ದೊಡ್ಡದಾಗಿ ಬಿಂಬಿಸುತ್ತಾರೆ. ಅದರಿಂದ ಭವಿಷ್ಯದಲ್ಲಿ ಆಗಬಹುದಾದ ಸಮುದಾಯಗಳ, ಸೈದ್ದಾಂತಿಕ ನಿಲುವುಗಳ ಪರಿಣಾಮ – ಫಲಿತಾಂಶಗಳನ್ನು ಲೆಕ್ಕಿಸದೆ ಸ್ವಲ್ಪ ವಿವೇಚನಾರಹಿತವಾಗಿ ವರ್ತಿಸುತ್ತಾರೆ…‌

ಈ ಅಂಶ ಕೂಡ ಉಪೇಂದ್ರ ಅವರ ವಿವಾದಾತ್ಮಕ ವಿಷಯದಲ್ಲಿ ಪರಿಣಾಮ ಬೀರಿರಬಹುದು.

ನಾಲ್ಕನೆಯದಾಗಿ, ಸಾರ್ವಜನಿಕ ಅಥವಾ ಮುಖ್ಯವಾಗಿ ಭಾರತದ ರಾಜಕೀಯ ಕ್ಷೇತ್ರ ಪ್ರವೇಶಿಸುವ ಯಾರೇ ಆಗಲಿ ಬುದ್ದ ಬಸವ ವಿವೇಕಾನಂದ ಗಾಂಧಿ ಅಂಬೇಡ್ಕರ್ ಮತ್ತು ಲೋಹಿಯಾ ಅವರ ವಿಚಾರಗಳ ಬಗ್ಗೆ ಸ್ವಲ್ಪಮಟ್ಟಿಗೆ ತಿಳಿದಿರುವುದು ಅತ್ಯವಶ್ಯಕ. ಇಲ್ಲದಿದ್ದರೆ ಅವರಿಗೆ ಭಾರತದ ಒಟ್ಟು ವ್ಯವಸ್ಥೆ ಅರ್ಥವೇ ಆಗುವುದಿಲ್ಲ.

ಉದಾಹಾರಣೆಗೆ ಉಪೇಂದ್ರ ಅವರಿಗೆ ಗಾಂಧಿಗಿರಿಯ ಬಗ್ಗೆ ಅರ್ಥವಾಗಿದ್ದರೆ ಈ ವಿವಾದವನ್ನು ಸುಲಭವಾಗಿ ಪರಿಹರಿಸಿಕೊಳ್ಳುವ ಸಾಧ್ಯತೆ ಇತ್ತು. ಅವರೇನು ಉದ್ಯಮಿಯಲ್ಲ. ಅಪರಾಧಿಯಲ್ಲ. ಸಾರ್ವಜನಿಕ ಸೇವೆ ಮಾಡಲು ಬಯಸುವ ವ್ಯಕ್ತಿ. ತಾನು ಪರಿಪರಿಯಾಗಿ ಕ್ಷಮೆ ಕೇಳಿದ ನಂತರವೂ ತನ್ನ ಮೇಲೆ ದೂರು ದಾಖಲಾದಾಗ ರಾಜ್ಯದ ಪ್ರಖ್ಯಾತ ವಕೀಲರನ್ನು ನೇಮಿಸಿಕೊಳ್ಳದೆ ದಲಿತ ಮುಖಂಡರನ್ನು ಅಥವಾ ದೂರು ಕೊಟ್ಟವರನ್ನು ಸಂಪರ್ಕಿಸಿ ” ನಾನು ಯಾವುದೇ ಕಾರಣಕ್ಕೂ ಉದ್ದೇಶ ಪೂರ್ವಕವಾಗಿ ಒಂದು ಸಮುದಾಯವನ್ನು ಕೀಳು ಮಟ್ಟದಲ್ಲಿ ನಿಂದಿಸುವ ಅರ್ಥ ಬರುವ ಮಾತನ್ನು ಹೇಳಿಲ್ಲ. ಹೊಲಗೇರಿ ಎಂಬುದು ಆಕ್ಷೇಪಾರ್ಹ ಪದವಲ್ಲದ ಸಹಜ ಮಾತು ಎಂದು ತಪ್ಪಾಗಿ ಭಾವಿಸಿ ಆ ಪದ ಬಳಕೆ ಮಾಡಿದೆ. ಈಗ ಅದು ಕಾನೂನಾತ್ಮಕ ಅಪರಾಧ ಎಂದು ಅರಿವಾಗಿದೆ. ಅದಕ್ಕಾಗಿ ನಿಮ್ಮೆಲ್ಲರ ಕ್ಷಮೆ ಕೇಳಿದ್ದೇನೆ. ಹಿಂದೆಯೂ ಬಹಳಷ್ಟು ಜನ ಈ ಪದ ಬಳಸುವುದನ್ನು ಗಮನಿಸಿ ನಾನು ನಿರ್ಲಕ್ಷ್ಯ ಮಾಡಿದೆ. ಇರಲಿ ನಾನು ಆತ್ಮಸಾಕ್ಷಿಯಾಗಿ ಸಮಾನತೆಯ ಪರ. ಜಾತಿ ಪದ್ದತಿಯ ವಿರೋಧಿ. ಇಷ್ಟು ಹೇಳಿದ ನಂತರವೂ ನೀವು ನನ್ನನ್ನು ಉದ್ದೇಶ ಪೂರ್ವಕ ಅಪರಾಧಿ ಎಂದು ಪರಿಗಣಿಸಿ ಜೈಲಿಗೆ ಕಳುಹಿಸುವುದಾದರೆ ನಾನು ಯಾವುದೇ ವಕೀಲರನ್ನು ನೇಮಿಸಿಕೊಳ್ಳುವುದಿಲ್ಲ. ನ್ಯಾಯಾಲಯ ಸೂಚಿಸಿದರೆ ನೇರವಾಗಿ ಜೈಲಿಗೆ ಹೋಗುತ್ತೇನೆ. ನಿಮಗೆ ಮನಸ್ಸು ಪರಿವರ್ತನೆಯಾದಾಗ ನೀವೇ ದೂರು ವಾಪಸ್ಸು ಪಡೆದು ಬಿಡಿಸಿಕೊಂಡು ಬನ್ನಿ. ಇದನ್ನು ನಿಮ್ಮ ವಿವೇಚನೆಗೆ ಬಿಡುತ್ತೇನೆ ಎಂದು ಹೇಳಬಹುದಿತ್ತು. ಜಮೀನು ಪಡೆದ ತಕ್ಷಣ ಗೆಲುವಿನ ಪ್ರತಿಕ್ರಿಯೆ ಬೇಕಿರಲಿಲ್ಲ.

ಗಾಂಧಿ ಗಿರಿಯ ಒಂದು ವಿಷಯ ನೆನಪಿಸಿಕೊಳ್ಳಿ. ಅಂದು ಅತ್ಯಂತ ಪ್ರಬಲರಾಗಿದ್ದ ಗಾಂಧಿ ಪೂನಾ ಒಪ್ಪಂದದ ವಿಷಯದಲ್ಲಿ ಬಾಬಾ ಸಾಹೇಬರ ಮನವೊಲಿಸಲು ಕೆಲವು ದಿನಗಳ ಅಮರಣಾಂತ ಉಪವಾಸ ಕೈಗೊಳ್ಳುತ್ತಾರೆ. ಕೊನೆಗೆ ಅನೇಕ ಗಾಂಧಿ ಹಿತೈಷಿಗಳ ಒತ್ತಡಕ್ಕೆ ಮಣಿದು ಬಾಬಾ ಸಾಹೇಬರು ” ಗಾಂಧಿಯವರೆ ನಿಮ್ಮ ಪ್ರಾಣ ಉಳಿಸಲು ನನ್ನ ‌ಸಮುದಾಯದ ಹಿತಾಸಕ್ತಿ ಬಲಿಕೊಟ್ಟು ಈ ಒಪ್ಪಂದಕ್ಕೆ ಸಹಿಹಾಕುತ್ತಿದ್ದೇನೆ ” ಎಂದು ಹೇಳುತ್ತಾರೆ. ಬಹುತೇಕ ಈ ವಿಷಯಕ್ಕಾಗಿಯೇ ಸಾಕಷ್ಟು ದಲಿತರು ಈಗಲೂ ಗಾಂಧಿಯವರನ್ನು ಕ್ಷಮಿಸುತ್ತಿಲ್ಲ. ಇರಲಿ ಆ ವಿಷಯ ಬೇರೆ. ಆದರೆ ‌ಅದು‌ ಗಾಂಧಿ ಗಿರಿಯ ಶಕ್ತಿ.

ಏನೇ ಆಗಲಿ. ತಾಳ್ಮೆ ಇರಲಿ, ಕ್ಷಮೆ ಇರಲಿ. ದಲಿತರ ನೋವನ್ನು ಸಮಾಜ ಮರೆಯದಿರಲಿ. ಹಾಗೆಯೇ ಜಾತಿ ಪದ್ದತಿಯ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಗೊಳಿಸೋಣ. ಇದು ಉಪೇಂದ್ರ ಮತ್ತು ದಲಿತರ ನಡುವಿನ ಹೋರಾಟವಲ್ಲ. ಜಾತಿ ಅನಿಷ್ಟದ ವಿರುದ್ಧ ಹೋರಾಟವಾಗಲಿ. ಇನ್ನೊಮ್ಮೆ ಈ ರೀತಿಯ ಜಾತಿ ನಿಂದನೆ ಪದಗಳನ್ನು ಉಪಯೋಗಿಸುವಾಗ ಸ್ವಲ್ಪ ಎಚ್ಚರದಿಂದ ಇರೋಣ. ಆಕಸ್ಮಿಕವಾಗಿ ಮಾತಿನ ಬರದಲ್ಲಿ ಆಡಿದರೆ ತಕ್ಷಣ ಕ್ಷಮೆ ಕೇಳೋಣ. ಜೊತೆಗೆ ಉದ್ದೇಶ ಪೂರ್ವಕವಲ್ಲದ ಎಲ್ಲರ ತಪ್ಪುಗಳನ್ನು ಕ್ಷಮಿಸುವ ಗುಣ ಬೆಳೆಸಿಕೊಳ್ಳೋಣ.

ಉಪೇಂದ್ರ ಅವರು ಇನ್ನು ಮುಂದೆ ಅಸ್ಪೃಶ್ಯತೆಯ, ಜಾತಿ ಪದ್ದತಿಯ ನಿವಾರಣೆಗಾಗಿಯೂ ಹೋರಾಡುವಂತಾಗಲಿ ಎಂದು ಆಶಿಸುತ್ತಾ…..

ದಲಿತರು ಈ ಉದ್ದೇಶ ಪೂರ್ವಕವಲ್ಲದ ಆಚಾತುರ್ಯಗಳನ್ನು ಸೂಕ್ಷ್ಮವಾಗಿ ಗುರುತಿಸಿ ಕ್ಷಮಿಸದಿದ್ದರೆ ಸಮಾಜದ ಸಹಾನುಭೂತಿ ಕಳೆದುಕೊಳ್ಳಬಹುದು. ಆ ಎಚ್ಚರಿಕೆಯೂ ಇರಲಿ ಎಂದು ಮನವಿ ಮಾಡಿಕೊಳ್ಳಿತ್ತಾ…..

ನಾವೆಲ್ಲರೂ ಒಂದೇ ತಾಯಿಯ ಮಕ್ಕಳು, ಒಂದೇ ಬಳ್ಳಿಯ ಹೂಗಳು,
ಒಂದೇ ದೋಣಿಯ ಪಯಣಿಗರು. ಉಳಿದದ್ದು ನಿಮ್ಮ ವಿವೇಚನೆಗೆ ಬಿಡುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

About The Author

Leave a Reply

Your email address will not be published. Required fields are marked *