April 20, 2024

Chitradurga hoysala

Kannada news portal

ನಾಡಸಿರಿ ವಾರಪತ್ರಿಕೆ ಸಂಪಾದಕ ಪಿ.ಸೀತಾರಾಂ ನಿಧನ: ಹಳೇಬೀಡು ರಾಮಪ್ರಸಾದ್ ದಿಗ್ಬ್ರಮೆ

1 min read

ನಾಡಸಿರಿ ವಾರಪತ್ರಿಕೆ ಸಂಪಾದಕ ಪಿ.ಸೀತಾರಾಂ ನಿಧನ:

ಹಳೇಬೀಡು ರಾಮಪ್ರಸಾದ್ ದಿಗ್ಬ್ರಮೆ

ಚಿತ್ರದುರ್ಗ ಹೊಯ್ಸಳ:

ದಾವಣಗೆರೆ:

ಪತ್ರಿಕೋದ್ಯಮ ಹಾಗೂ ವ್ಯಾಪಾರೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ , ನನ್ನ ಐದು ದಶಕಗಳ ಆತ್ಮೀಯ ಮಿತ್ರ ಪಿ.ಸೀತಾರಾಂ ಇಂದು ಶುಕ್ರವಾರ ಮಧ್ಯಾಹ್ನ ಬಾಪೂಜಿ ಆಸ್ಪತ್ರೆಯಲ್ಲಿ ನಿಧನರಾದ ಕಹಿ ವಾರ್ತೆಯನ್ನು ಕೇಳಿ ದಿಗ್ಬ್ರಮೆಗೊಂಡಿದ್ದೇನೆ.

ವಿದ್ಯಾರ್ಥಿ ಭವನ್ ವೃತ್ತದ ನಮ್ಮ ಮಿತ್ರಮಂಡಳಿಯ ಸಕ್ರಿಯ ಸದಸ್ಯರಾಗಿದ್ದ ಪಿ.ಸೀತಾರಾಂ ತಮ್ಮ ಸ್ನೇಹಮಯಿ ವ್ಯಕ್ತಿತ್ವದಿಂದ ಎಲ್ಲರ ಮನಗೆದ್ದಿದ್ದರು. ಯಾವುದೇ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದರೂ “ಸೀತಾರಾಂ ಇಲ್ಲದೆ ನಡೆಯದು” ಎಂಬಸ್ಟರ ಮಟ್ಟಿಗೆ ಅನಿವಾರ್ಯವೆನಿಸಿದ್ದ ಸೀತಾರಾಂ ಎಂಬತ್ತರ ದಶಕದಲ್ಲಿ ನನ್ನ ಸಲಹೆಯಂತೆ ಪತ್ರಿಕಾರಂಗ ಪ್ರವೇಶಿಸಿ *ನಾಡಸಿರಿ* ವಾರಪತ್ರಿಕೆ ಆರಂಭಿಸಿದ್ದೂ ಅಲ್ಲದೆ , ಹಲವಾರು ದೈನಿಕಗಳಲ್ಲಿ ಸಹ – ಸಂಪಾದಕ, ವ್ಯವಸ್ಥಾಪಕರಾಗಿಯೂ ದುಡಿದಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಬಹುಕಾಲ ಪದಾಧಿಕಾರಿಯಾಗಿಯೂ ಶ್ರಮಿಸಿದ್ದರು.ಅವರ ಅಂಗಡಿ ನಮ್ಮ ಮಿತ್ರರ ಖಾಯಂ ಅಡ್ದೆಯಾಗಿದ್ದೂ ಉಂಟು !.

ಎಪ್ಪತ್ತರ ಅಂಚಿನಲ್ಲಿದ್ದರೂ ಯುವಕರನ್ನು ನಾಚಿಸುವಂತಹ ದೈಹಿಕ ಚಟುವಟಿಕೆಯೊಂದಿಗೆ ಆರೋಗ್ಯವಂತರಾಗಿಯೇ ಇದ್ದ ಸೀತಾರಾಂ ರನ್ನು ಒಂದೆರಡು ದಿನಗಳ ಅಸ್ವಸ್ಥತೆ ( ಲೋ ಬಿಪಿ ) ಮರಳಿಬಾರದ ಲೋಕಕ್ಕೆ ಕರೆದೊಯ್ದಿರುವುದು ಮಿತ್ರಮಂಡಳಿಗೆ ಬಹುದೊಡ್ಡ ಹೊಡೆತ. ಓರ್ವ ಪುತ್ರಿ , ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು – ಮಿತ್ರರನ್ನಗಲಿರುವ ಸೀತಾರಾಂ ಸದಾ ಹಸಿರಾದ ನೆನಪಿನಲ್ಲಿರುತ್ತಾರೆ.

ಹೋಗಿ ಬನ್ನಿ ಸೀತಾರಾಂ ,ನಿಮ್ಮ ಅಗಲಿಕೆಯ ನೋವು ಭರಿಸುವ ಶಕ್ತಿ ಕುಟುಂಬ ವರ್ಗದವರಿಗೆ ಪ್ರಾಪ್ತವಾಗಲಿ.

– ಹಳೇಬೀಡು ರಾಮಪ್ರಸಾದ್.

About The Author

Leave a Reply

Your email address will not be published. Required fields are marked *