May 3, 2024

Chitradurga hoysala

Kannada news portal

ಸಾರ್ವಜನಿಕ ಆಸ್ಪತ್ರೆಯಲ್ಲಿ ರೂ.85 ಲಕ್ಷ ವೆಚ್ಚದ ನೂತನ ಆಕ್ಸಿಜನ್ ಘಟಕ ಲೋಕಾರ್ಪಣೆಗೊಳಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

1 min read

ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೂ.85 ಲಕ್ಷ ವೆಚ್ಚದ ನೂತನ ಆಕ್ಸಿಜನ್ ಘಟಕ  ಲೋಕಾರ್ಪಣೆ

ಕೋವಿಡ್ ವಾರಿಯರ್ಸ್ ಕಾರ್ಯ ಶ್ಲಾಘನೀಯ   ಕೇಂದ್ರ  ಸಚಿವ ಎ.ನಾರಾಯಣಸ್ವಾಮಿ

 

ಚಿತ್ರದುರ್ಗ,ಅಕ್ಟೋಬರ್08:
ಕೋವಿಡ್-19ರ ಸಾಂಕ್ರಾಮಿಕ ರೋಗದ ಕುರಿತು ನಿರಂತರವಾಗಿ ಜನರಿಗೆ ಜಾಗೃತಿ ಮೂಡಿಸಿ, ಕೋವಿಡ್ ತಡೆ ಹಾಗೂ ನಿಯಂತ್ರಣದಲ್ಲಿ ಕೋವಿಡ್ ವಾರಿಯರ್ಸ್ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರಾದ ಎ. ನಾರಾಯಣ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಳ್ಳಕೆರೆ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಸಾರ್ವಜನಿಕ ಆಸ್ಪತ್ರೆ ಹಾಗೂ ಎನ್‍ಎಲ್‍ಸಿ ಇಂಡಿಯಾ ಲಿಮಿಟೆಡ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆಮ್ಲಜನಕ ಉತ್ಪಾದನಾ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೋವಿಡ್‍ಗೆ ತುತ್ತಾದವರನ್ನು ಮನೆಯಿಂದ ಹೊರಹಾಕಲಾಯಿತು. ತಂದೆ, ತಾಯಿ, ಮಗಳು, ಮಗ, ಅಳಿಯ, ಸೊಸೆ ಸೇರಿದಂತೆ ಕುಟುಂಬದ ಸದಸ್ಯರನ್ನು ಮನೆಯಿಂದ ಹೊರಗೆ ಹಾಕಲಾಯಿತು. ಇಂತಹ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕಿಯರು, ಆಶಾ, ಕಾರ್ಯಕರ್ತೆಯರು, ಪೊಲೀಸ್ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣವನ್ನು ಲೆಕ್ಕಿಸದೇ, ಕೋವಿಡ್‍ಗೆ ತುತ್ತಾದವರನ್ನು ರಕ್ಷಣೆ ಮಾಡಿದರು. ದೇಶದಲ್ಲಿ ಸಮಾಜವನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೋವಿಡ್ ವಾರಿಯರ್ಸ್‍ಗಳ ಸೇವೆ ಶ್ಲಾಘನೀಯ ಎಂದು ಹೇಳಿದರು.

ಕೋವಿಡ್‍ಗೆ ತುತ್ತಾದವರನ್ನು ರಕ್ಷಣೆ ಮಾಡುತ್ತಿದ್ದ ಅನೇಕ ಕೋವಿಡ್ ವಾರಿಯರ್ಸ್‍ಗಳನ್ನು ನಾವುಗಳು ಕಳೆದುಕೊಂಡಿದ್ದೇವೆ. ಆದರೂ ಎದೆಗುಂದದೇ ಕೋವಿಡ್ ವಾರಿಯರ್ಸ್‍ಗಳು ದೇಶ ಮೆಚ್ಚುವ ರೀತಿಯಲ್ಲಿ ತಮ್ಮ ಕಾರ್ಯನಿರ್ವಹಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಅಷ್ಟೋಂದು ಭಯದ ವಾತಾವರಣ ಇರಲಿಲ್ಲ. ಸಮಾಜದ ಮೇಲೆ ಕೋವಿಡ್ ದುಷ್ಪಾರಿಣಾಮ ಕುರಿತು ತಜ್ಞರು ಎಚ್ಚರಿಕೆ ನೀಡಿದರೂ ಸಹ ನಿರ್ಲಕ್ಷೆ ಮಾಡಲಾಯಿತು. ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ನಿಯಮ ಪಾಲನೆ ಮಾಡದೇ ಇದ್ದಿದ್ದರೆ ಬಹಳ ಅನಾಹುತ ಎದುರಿಸಬೇಕಾಗಿತ್ತು. ಎರಡನೇ ಸಂದರ್ಭದಲ್ಲಿ ದೇಶದ ಅನೇಕ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಾಧ್ಯಮದವರು ಹಾಗೂ ಯುವಶಕ್ತಿ ಸೇರಿದಂತೆ ಅನೇಕರು ಸಾಮಾಜಿಕ ಕಳಕಳಿಯಿಂದ ಕೋವಿಡ್ ವಿರುದ್ಧ ಅನೇಕ ಮಹನೀಯರು ಹೋರಾಡಿದರು ಎಂದರು.
ದೇಶದಲ್ಲಿ ಶೇ.89ರಷ್ಟು ಕೋವಿಡ್ ಲಸಿಕೆ ನೀಡಲಾಗಿದೆ. ಲಸಿಕೆ ತಯಾರು ಮಾಡಲು ಅಶಕ್ತವಾದ ದೇಶಗಳಿಗೂ ಸಹ ದೇಶದ ಪ್ರಧಾನಿಗಳು ಅವರಿಗೂ ಲಸಿಕೆ ಸರಬರಾಜು ಮಾಡಿ ಬೇರೆ ದೇಶದ ಜನರ ರಕ್ಷಣೆಗೂ ಮುಂದಾದರು. ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಾದ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ದೇಶದ ಪ್ರಧಾನಿಗಳು ನೀಡಿದ್ದಾರೆ ಎಂದು ಹೇಳಿದರು.
ದೇಶದಲ್ಲಿ 1ಲಕ್ಷ22 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡುವ ಘಟಕಗಳನ್ನು ದೇಶದ ಪ್ರಧಾನಿಗಳು ಉದ್ಘಾಟನೆ ಮಾಡಿದ್ದಾರೆ. ಈ ದೇಶದ ನಾಗರಿಕರ ಪ್ರಾಣರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಪಿಎಂ ಕೇರ್ ವತಿಯಿಂದ ಜಿಲ್ಲೆಗೆ ನಾಲ್ಕು ಆಕ್ಸಿಜನ್ ಘಟಕಗಳನ್ನು ನೀಡಲಾಗಿದೆ. ಹೊಳಲ್ಕೆರೆ, ಚಿತ್ರದುರ್ಗ, ಮೊಳಕಾಲ್ಮುರು ಹಾಗೂ ಚಳ್ಳಕೆರೆಯಲ್ಲಿ ತಲಾ ಒಂದು ಆಕ್ಸಿಜನ್ ಘಟಕಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.
ಕೋವಿಡ್ ತಡೆ ಹಾಗೂ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹ ಸರ್ಕಾರ, ವೈದ್ಯರು ಹಾಗೂ ಡಬ್ಲ್ಯೂಹೆಚ್‍ಓ ನಿರ್ದೇಶನಗಳನ್ನು ಪಾಲನೆ ಮಾಡಬೇಕು. ಪಾಲನೆ ಮಾಡದಿದ್ದರೆ ದುರಂತ ಸಂಭವಿಸಲಿದೆ.ಹಾಗಾಗಿ ಕೋವಿಡ್ ನಿಯಮಗಳನ್ನು ಎಲ್ಲರು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.

ಶಾಸಕ ಟಿ. ರಘುಮೂರ್ತಿ ಮಾತನಾಡಿ, ಕೋವಿಡ್-19 ವಿಶ್ವದೆಲ್ಲೆಡೆ ಹಬ್ಬಿದ ಭಯಾನಕ ಸಾಂಕ್ರಾಮಿಕ ರೋಗ. ಇದರ ಪರಿಣಾಮ ಮೊದಲನೇ ಅಲೆಯಲ್ಲಿ ಗೊತ್ತಾಗಲಿಲ್ಲ. ನಂತರ ಇದರ ಪಾಠ ಕೋವಿಡ್ ಎರಡನೇ ಅಲೆಯಲ್ಲಿ ಗೊತ್ತಾಗಿದೆ. ಎರಡನೇ ಅಲೆಯಲ್ಲಿ ಬಹಳಷ್ಟು ಸಾವು-ನೋವುಗಳು ಸಂಭವಿಸಿ ನಿರ್ಗತಿಕರಾಗಿದ್ದಾರೆ ಎಂದು ಹೇಳಿದರು.
ಚಳ್ಳಕೆರೆ ಆಸ್ಪತ್ರೆಗೆ ಐರಾನ್ ಅಂಡ್ ಸ್ಪಾಂಜ್ ಕಂಪನಿಯವರು 130 ಹಾಸಿಗೆಗಳಿಗೂ ಸಂಪೂರ್ಣವಾಗಿ ಆಕ್ಸಿಜನ್ ಬೆಡ್ ಆಗಿ ವ್ಯವಸ್ಥೆ ಮಾಡಿದ್ದಾರೆ. ಎನ್‍ಎಲ್‍ಸಿ ಕಂಪನಿಯವರು ಆಸ್ಪತ್ರೆಗೆ ಆಕ್ಸಿಜನ್ ಉತ್ಪಾದನೆ ಘಟಕ ಅನುಷ್ಠಾನ ಮಾಡಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಒಟ್ಟು 50 ಆಸ್ಪತ್ರೆಗಳಿಗೆ ಪಿಎಸ್‍ಎ ಆಮ್ಲಜನಕ ಘಟಕ ಮಂಜೂರು ಮಾಡಲಾಗಿದೆ. 1000 ಪಿಎಸ್‍ಎ ಆಮ್ಲಜನಕ ಘಟಕ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಮಂಜೂರು ಮಾಡಲಾಗಿದೆ. 300 ಪಿಎಸ್‍ಎ ಆಮ್ಲಜನಕ ಘಟಕವನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ಮಂಜೂರು ಮಾಡಲಾಗಿದೆ.

ಸಮಾರಂಭದಲ್ಲಿ ಚಳ್ಳಕೆರೆ ನಗರಸಭೆ ಅಧ್ಯಕ್ಷರಾದ ಸಿ.ಬಿ. ಜಯಲಕ್ಷ್ಮೀ ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ಜೈತುಂಬಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶಗೌಡ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್, ತಹಶೀಲ್ದಾರ್ ಎನ್.ರಘುಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಸುಧಾ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್, ಎನ್‍ಎಲ್‍ಸಿ ಇಂಡಿಯಾ ಲಿಮಿಟೆಡ್‍ನ ರಿಜನಲ್ ಮ್ಯಾನೇಜರ್ ರಾಜೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *