May 2, 2024

Chitradurga hoysala

Kannada news portal

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

1 min read



ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆ

ಚಿತ್ರದುರ್ಗ:
ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಚುನಾವಣೆ ಘೋಷಿಸಿದ್ದು, ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನವಂಬರ್ 16 ರಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರಗಳ ಸ್ವೀಕಾರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 16 ರಿಂದ ನಾಮಪತ್ರಗಳನ್ನು ಸಲ್ಲಿಸಬಹುದಾಗಿದ್ದು ಪ್ರತಿ ದಿನ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಲ್ಲಿಸಬಹುದು. ನಾಮಪತ್ರ ಸಲ್ಲಿಕೆಗೆ ನವೆಂಬರ್ 23 ಕೊನೆಯ ದಿನವಾಗಿರುತ್ತದೆ. ನವೆಂಬರ್ 24 ರಂದು ನಾಮಪತ್ರಗಳನ್ನು ಪರಿಶೀಲನೆ, ನ.26 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್ 10ರಂದು ಬೆಳಿಗ್ಗೆ 8 ರಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14 ರಂದು ಮತಗಳ ಎಣಿಕೆ ನಡೆಯಲಿದ್ದು, ನೀತಿ ಸಂಹಿತೆ ಡಿಸೆಂಬರ್ 16 ರವರೆಗೆ ಇರಲಿದೆ ಎಂದರು.
ಜಿಲ್ಲಾಧಿಕಾರಿಗಳು ಮತದಾರರ ನೊಂದಣಾಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಚಿತ್ರದುರ್ಗ ಹಾಗೂ ದಾವಣಗೆರೆ ಅಪರ ಜಿಲ್ಲಾಧಿಕಾರಿಗಳು ಸಹಾಯಕ ಮತದಾರರ ನೊಂದಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3.00 ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ನಾಮಪತ್ರದ ಜೊತೆ ಭದ್ರತಾ ಠೇವಣಿ ಸಾಮಾನ್ಯ ವರ್ಗದವರಿಗೆ ರೂ.10,000/-, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ.5000/-ಗಳನ್ನು ನಿಗಧಿಪಡಿಸಲಾಗಿದೆ. ನಾಮಪತ್ರದಲ್ಲಿ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮತದಾರರಾಗಿರುವ 10 ಸೂಚಕರು ಸಹಿ ಮಾಡಬೇಕು ಎಂದು ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆ ತಂಡಗಳ ರಚನೆ: ಮಾದರಿ ನೀತಿ ಸಂಹಿತೆಗಾಗಿ ತಂಡಗಳನ್ನು ರಚನೆ ಮಾಡಲಾಗಿದೆ. 18 ಎಫ್‍ಎಸ್‍ಟಿ ತಂಡ, 6 ವಿಎಸ್‍ಟಿ ತಂಡ, 6 ವಿವಿಟಿ ತಂಡ ಹಾಗೂ 1 ಎಂಸಿಎಂಸಿ ತಂಡ ರಚನೆ ಮಾಡಲಾಗಿದೆ.
ಎಂಸಿಎಂಸಿ; ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವೀಚಾರಣಾ ಸಮಿತಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲಾಧಿಕಾರಿಯವರು ಸಮಿತಿ ಅಧ್ಯಕ್ಷರಾಗಿರುತ್ತಾರೆ. ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ರೇಣಕಾ ಪ್ರಕಾಶ್ ಸದಸ್ಯರಾಗಿದ್ದು ವಾರ್ತಾಧಿಕಾರಿ ಧನಂಜಯ ಸದಸ್ಯ ಕಾರ್ಯದರ್ಶಿಯಾಗಿರುವರು. ಯಾವುದೇ ಎಲೆಕ್ಟ್ರಾನಿಕ್ಸ್ ಮಾಧ್ಯಮ, ಕೇಬಲ್ ಟಿವಿಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹಿರಾತು ನೀಡುವುದಕ್ಕೂ ಮುಂಚಿತವಾಗಿ ಈ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು.
ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಸಹಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು ಇದು ದಿನದ 24 ಗಂಟೆಗಳ ಕಾಲ ಕೆಲಸ ನಿರ್ವಹಿಸಲಿದೆ. ಸಹಾಯ ಹಾಗೂ ದೂರು ನೀಡಲು 08194-222176 ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *