May 6, 2024

Chitradurga hoysala

Kannada news portal

ಗ್ರಾಪಂ ಅಧಿಕಾರ ಮೊಟಕುಗೊಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಎಚ್.ಆಂಜನೇಯ ವಾಗ್ದಾಳಿ

1 min read



ಭರಮಸಾಗರದಲ್ಲಿ ನಡೆದ ಹೋಬಳಿ ಮಟ್ಟದ ಕಾಂಗ್ರೆಸ್ ಸಮಾವೇಶವನ್ನು ಮಾಜಿ ಸಚಿವ ಎಚ್.ಆಂಜನೇಯ ಉದ್ಘಾಟಿಸಿ ಮಾತನಾಡಿದರು.

ಗ್ರಾಪಂ ಅಧಿಕಾರ ಮೊಟಕುಗೊಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಎಚ್.ಆಂಜನೇಯ ವಾಗ್ದಾಳಿ

ಭರಮಸಾಗರ.ಡಿ.2

ಗ್ರಾಪಂಗಳಿಗೆ ಕಾಂಗ್ರೆಸ್ ನೀಡಿದ್ದ ಶಕ್ತಿಯನ್ನು ಮೊಟಕುಗೊಳಿಸುವಂತಹ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವ ಎಚ್.ಆಂಜನೇಯ ವಾಗ್ದಾಳಿ ನಡೆಸಿದರು.

ಭರಮಸಾಗರದ ನಿರಂಜನ ಕಲ್ಯಾಣ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಹೋಬಳಿ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು ರಾಜ್ಯದ ಪ್ರಸ್ತುತ ಬಿಜೆಪಿ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದ್ದು ಗ್ರಾಪಂಗೆ ಆಯ್ಕೆಯಾಗಿರುವ ಸದಸ್ಯರಿಗೆ ಕಳೆದ ಒಂದು ವರ್ಷದಿಂದ ಅವರಿಗೆ ಗೌರವ ಧನವನ್ನೂ ನೀಡಲಾಗದ ಸ್ಥಿತಿಯಲ್ಲಿದೆ.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ದೇಶದ ಗ್ರಾಮ ಪಂಚಾಯ್ತಿಗಳಿಗೆ ಶಕ್ತಿ ತುಂಬುವಂತಹ ಮಸೂದೆಗಳನ್ನು ಜಾರಿಗೊಳಿಸಿದ್ದರು. ಈಗ ಆ ಮಸೂದೆಗಳ ಶಕ್ತಿಯನ್ನೇ ಕಿತ್ತುಹಾಕುವಂತಹ ಕೆಲಸ ನಡೆಯುತ್ತಿದೆ ಎಂದರು.

ಭರಮಸಾಗರ ಹೋಬಳಿಯು ಕಾಂಗ್ರೆಸ್ಸಿನ ಭದ್ರಕೋಟೆಯಾಗಿದೆ. ಇಲ್ಲಿ ಕಾಂಗ್ರೆಸ್ಸಿಗೆ ವಿರೋಧ ಪಕ್ಷವೆಂಬುದೇ ಇಲ್ಲ. ಹೋಬಳಿಯ 10 ಗ್ರಾಮ ಪಂಚಾಯ್ತಿಗಳಿಗೆ ಆಯ್ಕೆಯಾಗಿರುವ 220 ಸದಸ್ಯರುಗಳಲ್ಲಿ ಶೇ. 80ಕ್ಕೂ ಹೆಚ್ಚು ಸದಸ್ಯರು ಈ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.
ನಾನು ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿದ್ದ ಸಂದರ್ಭದಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಕೊರೆಸಲಾದ ಕೊಳವೆಬಾವಿಗಳಿಗೆ ವಿದ್ಯುತ್ ಹಾಗೂ ಮೋಟಾರುಗಳನ್ನು ನೀಡದಂತಹ ಅಡ್ಡಿಯನ್ನು ಡಾಂಬರು ರಾಜರೊಬ್ಬರು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ಪಡಿಸಿದರು.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಸೋಮಶೇಖರ್ ಸ್ವತಹ: ಗ್ರಾಮ ಪಂಚಾಯ್ತಿ ಸದಸ್ಯರಾಗಿ ಕೆಲಸ ನಿರ್ವಹಿಸಿದವರು. ಅವರಿಗೆ ಗ್ರಾಮಗಳ ಅಭ್ಯುದಯದ ಮಾರ್ಗ ಗೊತ್ತಿದೆ. ಅವರನ್ನು ತಾವೆಲ್ಲರೂ ಒಕ್ಕೊರಲಿನಿಂದ ಬೆಂಬಲಿಸಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಭರಮಸಾಗರದ ಐತಿಹಾಸಿಕ ಬಿಚ್ಚುಗತ್ತಿ ಭರಮಣ್ಣನಾಯಕನ ಕೆರೆ 1000 ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದೆ. ಅದು ಹಲವು ವರ್ಷಗಳ ಕಾಲ ನೀರಿಲ್ಲದೆ ಬತ್ತಿ ಹೋಗಿತ್ತು. ಅಂತಹ ಕೆರೆಗೆ ನೀರು ತಂದು ಈ ಭಾಗದ ಜನರಿಗೆ ಒಳಿತು ಮಾಡುವಂತಹ ಕೆಲಸವನ್ನು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಮಾಡಿದ್ದಾರೆ. ಅವರ ಕೃಪೆಯಿಂದ ಈಗ ಕೆರೆ ತುಂಬಿತುಳುಕುವಂತೆ ಮೈದುಂಬಿದೆ. ಇನ್ನು ಮುಂದೆ ಈ ಭಾಗ ನೀರಿನ ಕೊರತೆಯಿಂದ ಮುಕ್ತಿಪಡೆಯಲಿದೆ ಎಂದು ಆಂಜನೇಯ ಹೇಳಿದರು.
ಅಭ್ಯರ್ಥಿ ಸೋಮಶೇಖರ್ ಮಾತನಾಡಿ, ಗ್ರಾಮ ಪಂಚಾಯ್ತಿಗಳಿಗೆ ನೀಡಿದ್ದ ಅನುದಾನದಲ್ಲಿ ಶೇ. 40 ರಷ್ಟು ಹಣವನ್ನು ಸರ್ಕಾರ ಹಿಂದಕ್ಕೆ ಪಡೆಯುತ್ತಿರುವ ಕ್ರಮವನ್ನು ಟೀಕಿಸಿದರು. ಗ್ರಾಪಂ ಸದಸ್ಯನಾಗಿ ಕೆಲಸ ಮಾಡಿರುವುದರಿಂದ ಅವುಗಳನ್ನು ಶಕ್ತಿಯುತವಾಗಿ ಮಾಡುವ ರೀತಿಯನ್ನು ತಿಳಿದುಕೊಂಡಿದ್ದೇನೆ. ಈ ಕ್ಷೇತ್ರದಲ್ಲಿ ಯಾವೊಂದು ವಿವಾದವಿಲ್ಲದೆ 25 ವರ್ಷಗಳಿಂದ ತಾಳ್ಮೆಯಿಂದ ಕೆಲಸ ಮಾಡಿದ್ದೇನೆ. ಟಿಕೇಟ್ ನೀಡುವಲ್ಲಿಯೂ ನಾನು ನಿಷ್ಠೆಯಿಂದಲೇ ನಡೆದುಕೊಂಡಿದ್ದೇನೆ. ಒಂದೇ ಒಂದು ದೂರು ತನ್ನ ವಿರುದ್ಧ ಬಂದರೆ ನನಗೆ ಟಿಕೇಟ್ ನೀಡುವುದು ಬೇಡವೆಂದು ಪಕ್ಷಕ್ಕೆ ತಿಳಿಸಿದ್ದೆ ಎಂದರು.
ಕಾಂಗ್ರೆಸ್ ಪಕ್ಷದ ವಕ್ತಾರ ಮೇರುಜ್ ಖಾನ್ ಮಾತನಾಡಿ ಗ್ರಾಮಸ್ವರಾಜ್ಯದ ಕಲ್ಪನೆಯನ್ನೇ ಬಿಜೆಪಿ ಸರ್ಕಾರ ನಾಶ ಮಾಡುತ್ತಿದೆ. ಕಾಂಗ್ರೆಸ್ ಪಕ್ಷವು ಜಾರಿಗೆ ತಂದ ನರೇಗದಂತಹ ಯೋಜನೆಗಳಿಂದ ಬಡತನದ ರೇಖೆಗಿಂತ ಕೆಳಗಿದ್ದ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‍ಪೀರ್, ಕೋಡಿಹಳ್ಳಿ ಹನುಮಂತಪ್ಪ, ಜಿಪಂ ಸದಸ್ಯ ಕೃಷ್ಣಮೂರ್ತಿ
ಮಾತನಾಡಿದರು.
ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಂತಪ್ಪ, ಭರಮಸಾಗರ ಕೆರೆ ಯೋಜನೆ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಚೌಲಿಹಳ್ಳಿ ಶಶಿಪಾಟೀಲ್, ಭರಮಸಾಗರ ಬ್ಲಾಕ್ ಅಧ್ಯಕ್ಷ ದುರುಗೇಶ ಪೂಜಾರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಾತ್ಯರಾಜನ್ ಶಮೀಮ್ ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *