February 26, 2024

Chitradurga hoysala

Kannada news portal

ಶಾಸಕ ಚಂದ್ರಪ್ಪನಿಗೆ ಲೆಕ್ಕ ಕೇಳಿದ ಮಾಜಿ ಸಚಿವ ಆಂಜನೇಯ : ನಾಮಪತ್ರ ಸಲ್ಲಿಕೆಗೆ ಜನಸಾಗರ

1 min read

ಆಂಜನೇಯ ನಾಮಪತ್ರ ಸಲ್ಲಿಕೆಗೆ ಜನಸಾಗರ

ಜಿಲ್ಲೆಯಲ್ಲಿ ಅತಿ ಹೆಚ್ಚು ಜನ ಸೇರಿದ ಮೆರವಣಿಗೆ

ಶಾಸಕ ಚಂದ್ರಪ್ಪನಿಗೆ ಲೆಕ್ಕ ಕೇಳಿದ ಮಾಜಿ ಸಚಿವ

ಹೊಳಲ್ಕೆರೆ: ಏ.20
ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ಗುರುವಾರ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಚ್.ಆಂಜನೇಯ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಕೊಟ್ರೆನಂಜಪ್ಪ ಪದವಿ ಪೂರ್ವ ಕಾಲೇಜು ಮೈದಾನದ ಬಳಿ ಬೆಳಗ್ಗೆ 11 ಗಂಟೆಗೆ ಆರಂಭವಾದ ಮೆರವಣಿಗೆಯಲ್ಲಿ 50 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡು ದಾಖಲೆ ಬರೆದರು.
ತೆರೆದ ವಾಹನದಲ್ಲಿ ಪ್ರಮುಖ ಮುಖಂಡರ ಜೊತೆ ಮೆರವಣಿಗೆ ಮೂಲಕ ಸಾಗಿದ ಆಂಜನೇಯ ಹಾಗೂ ಇತರೆ ನಾಯಕರುಗಳಿಗೆ ಕಾರ್ಯಕರ್ತರು, ಅಭಿಮಾನಿಗಳು ರಸ್ತೆಯುದ್ದಕ್ಕೂ ಹೂವಿನ ಮಳೆ ಸುರಿಸಿ, ಬೃಹಧಾಕಾರದ ಸೇಬಿನ ಹಾರ ಹಾಕಿ ಜಯಘೋಷ ಮೊಳಗಿಸಿದರು.
ಸುಡು ಬಿಸಿಲನ್ನು ಲೆಕ್ಕಿಸದೆ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ, ಆಂಜನೇಯ ಅವರಿಗೆ ಬೆಂಬಲ ಸೂಚಿಸಿದರು. ಬನ್ಸ್ ಲಾರಿ ಟ್ರಾಕ್ಟರ್ ಅಪೆ ಗಾಡಿಗಳಲ್ಲಿ ತಂಡೋಪ ತಂಡವಾಗಿ ಕ್ಷೇತ್ರದ ವಿವಿಧ ಮೂಲೆಗಳಿಂದ ಜನ ಆಗಮಿಸಿದ್ದರು. ಕಾಂಗ್ರೆಸ್ ಬಾವುಟ ಮೆರವಣಿಗೆಯಲ್ಲಿ ರಾರಾಜಿಸಿದವು.
ನಾಮಪತ್ರ ಸಲ್ಲಿಕೆಗೂ ಮುನ್ನ ಮೆರವಣಿಗೆಯಲ್ಲಿ ಮಾತನಾಡಿದ ಅಭ್ಯರ್ಥಿ ಆಂಜನೇಯ, ಹೊಳಲ್ಕೆರೆ ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಸಾಮಾನ್ಯ ಕುಟುಂಬದ ನಾನು ರಾಜ್ಯದಲ್ಲಿ ಸಮಾಜ ಕಲ್ಯಾಣ ಸಚಿವನಾಗಿ ಐದು ವರ್ಷ ಆಡಳಿತ ನಡೆಸಲು ಅವಕಾಶ ಕೊಟ್ಟವರು ಹೊಳಲ್ಕೆರೆ ಕ್ಷೇತ್ರದ ಜನ ಎಂದರು.

ಸಚಿವನಾಗಿದ್ದ ಸಂದರ್ಭದಲ್ಲಿ ಎಲ್ಲ ಸಮುದಾಯದವರಿಗೆ ಸಾವಿರಾರು ಕೊಳವೆಬಾವಿ ಕೊರೆಯಿಸಿದ್ದು, ಕೊನೇ ಗಳಿಗೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಬೋರ್‌ವೆಲ್ ಸೌಲಭ್ಯ ಮಂಜೂರು ಮಾಡಿದ್ದೇ. ಆದರೆ, ಚುನಾವಣೆ ಘೋಷಣೆ ಕಾರಣಕ್ಕೆ ಕೊರೆಯಿಸಲು ಸಾಧ್ಯವಾಗಿರಲಿಲ್ಲ. ಆದರೆ, ಬಳಿಕ ಗೆದ್ದ ಎಂ.ಚಂದ್ರಪ್ಪ, ರೈತರಿಗೆ ನನ್ನ ಅವಧಿಯಲ್ಲಿ ಕೊಟ್ಟಿದ್ದ ಕೊಳವೆಬಾವಿ ಸೌಲಭ್ಯ ಕಸಿದುಕೊಂಡರು. ರೈತಸಂಘದವರು ಪ್ರತಿಭಟನೆ ನಡೆಸಿದರು ಸರ್ವಾಧಿಕಾರಿ ರೀತಿ ವರ್ತಿಸಿ, ಅನ್ನದಾತರಿಗೆ ಅನ್ಯಾಯ ಮಾಡಿದರು ಎಂದು ದೂರಿದರು.
ಇಂತಹ ಸರ್ವಾಧಿಕಾರಿ ಧೋರಣೆಯ ವ್ಯಕ್ತಿಯನ್ನು ಸೋಲಿಸಲೇಬೇಕೆಂದು ನನ್ನ ಮೇಲೆ ಒತ್ತಡ ತಂದು ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಚುನಾವಣೆಗೆ ನಿಲ್ಲಿಸಿದ್ದಾರೆ. ಜನರ ಮನವಿಗೆ ಸ್ಪಂದಿಸಿ ಸ್ಪರ್ಧಿಸಿದ್ದು, ಸುಳ್ಳಿನ ರಾಜ ಚಂದ್ರಪ್ಪನಿಗೆ ಜನ ಪಾಠ ಕಲಿಸಲು ಕಾತರದಿಂದ ಕಾಯುತ್ತಿದ್ದಾರೆ ಎಂದರು.

ಕ್ಷೇತ್ರದಲ್ಲಿ ಎಷ್ಟು ಕೆರೆಗಳು ಇವೆ ಎಂಬ ಲೆಕ್ಕ ಗೊತ್ತಿಲ್ಲ ಶಾಸಕರು, 300 ಕೆರೆ ಅಭಿವೃದ್ಧಿ ಗೊಳಿಸಿದ್ದೇನೆ. ಬೇಕಿದ್ದರೆ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಹೇಳಿ, ಈಗ ಜನರಿಗೆ ನನ್ನ ಸುಳ್ಳು ಗೊತ್ತಾಗಿದೆ ಎಂದು ಬೇರೆ ಸುಳ್ಳು ಹೇಳಲು ಆರಂಭಿಸಿದ್ದಾರೆ ಎಂದು ಟಿಕಿಸಿದರು.
ಹೊಳಲ್ಕೆರೆ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು, ಶಾಲೆ, ಕಾಲೇಜು, ತರಬೇತಿ ಕೇಂದ್ರದ ಕಟ್ಟಡಗಳನ್ನು ನಿರ್ಮಿಸಿದ್ದೇನೆ. ಪ್ರತಿ ಹಳ್ಳಿಗಳ ರಸ್ತೆ ಅಭಿವೃದ್ಧಿಗೊಳಿಸಿದ್ದೇನೆ. ಹತ್ತಾರು ಸಮುದಾಯಗಳ ನಿರ್ಮಾಣ ಮಾಡಲಾಗಿದೆ. ನನ್ನ ಅವಧಿ ಕೆಲಸಗಳನ್ನು ಉದ್ಘಾಟಿಸಿದ ಚಂದ್ರಪ್ಪ, ಇವುಗಳು ನಾನೇ ಮಾಡಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಜನರನ್ನು ದಡ್ಡರು ಎಂದು ಭಾವಿಸಿದಂತೆ ಇದೆ. ಆದರೆ ಜನರು ಪ್ರಜ್ಞಾವಂತರು, ಪ್ರಬುದ್ಧರು ಇದ್ದು, ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ಧಿ ಮಾಡಿದ್ದು ಆಂಜನೇಯ, ಸುಳ್ಳು ಹೇಳಿಕೊಂಡು ತಿರುಗುತ್ತಿರುವುದು ಚಂದ್ರಪ್ಪ ಎಂದು ಪ್ರತಿ ಹಳ್ಳಿಯಲ್ಲಿ ಜನ ಮಾತನಾಡುತ್ತಾರೆ. ಶಾಸಕರಿಗೆ ಸುಳ್ಳೇ ಮನೆ ದೇವರು ಆಗಿದೆ ಎಂದು ಹೇಳಿದರು.
ಆಂಧ್ರ ಸೇರಿ ವಿವಿಧೆಡೆಯಿಂದ ಗುತ್ತಿಗೆದಾರರನ್ನು ಕರೆಯಿಸಿ ಕ್ಷೇತ್ರದಲ್ಲಿ ಕೋಟ್ಯಂತರ ರೂ. ಅನುದಾನದಲ್ಲಿ ಅವ್ಯವಹಾರ ಆಗಿದೆ. ಬಿಜೆಪಿ ಕಾರ್ಯಕರ್ತರ ಮೂಗಿಗೆ ತುಪ್ಪು ಸವರಿ, ಅವರ ಹೆಸರಿಗೆ ಕಳಂಕ ತಂದಿದ್ದಾರೆ. ಈ ಮಾತನ್ನು ಅವರ ಪಕ್ಷದವರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಬಹುತೇಕ ಹಳ್ಳಿಗಳಲ್ಲಿ ಶಾಸಕ ಚಂದ್ರಪ್ಪ ಅವರಿಗೆ ಪ್ರವೇಶ ನೀಡದೆ, ಬಹಿಷ್ಕಾರ ಹಾಕುತ್ತಿದ್ದಾರೆ. ಕೇವಲ ಸುಳ್ಳಿನ ಐದು ವರ್ಷ ಕಳೆದ ನೀವು ಬೇಡ ಎಂದು ಹೇಳುತ್ತಿದ್ದಾರೆ ಎಂದರು.
ಕ್ಷೇತ್ರದ ಜನ ನನ್ನ ಹಾಗೂ ನನ್ನ ಕೆಲಸ ಕುರಿತು ಬಹಳಷ್ಟು ನಂಬಿಕೆ, ಅಭಿಮಾನ ಇಟ್ಟಿದ್ದಾರೆ. ಅವರ ಅಭಿಮಾನಕ್ಕೆ ನಾನು ಚಿರ ಋಣಿ. ಐದು ವರ್ಷದಲ್ಲಿ ಅವರು ಪಟ್ಟು ಕಷ್ಟ ಹೇಳತೀರದು. ಒಂದು ಮನೆ, ಒಂದು ಕೊಳವೆಬಾವಿ ಸೌಲಭ್ಯ ಬಡಜನರಿಗೆ ತಲುಪಿಲ್ಲ. ನನ್ನ ಮೊದಲ ಆದ್ಯತೆ ಸೂರಿಲ್ಲದವರಿಗೆ ಮನೆ ಕೊಡುವುದು, ಕ್ಷೇತ್ರದ ಸಮಗ್ರ ಅಭಿವೃದ್ಧಿ ಆಗಿದೆ ಎಂದರು.

ಜಿ.ಎಸ್‌ಮಂಜುನಾಥ್, ಓ.ಶಂಕರ್, ಸವಿತಾ ಸೇರಿ ಅನೇಕರು ಕ್ಷೇತ್ರದಲ್ಲಿ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳು ಆಗಿದ್ದರು. ಯಾರಿಗೆ ಟಿಕೆಟ್ ಕೊಟ್ಟಿದ್ದರೂ ನಾನು ಅವರ ಗೆಲುವಿಗೆ ಶ್ರಮಿಸಲು ಸಿದ್ಧನಿದ್ದೇ. ಆದರೆ, ಪಕ್ಷ, ಕೊನೇ ಗಳಿಗೆಯಲ್ಲಿ ನಡೆಸಿದ ಸರ್ವೇ ಆಧಾರದಡಿ ನನಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಇಂತಹ ಸಂದರ್ಭ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಲ್ಲರೂ ನನ್ನ ಗೆಲುವಿಗೆ ಕೈಜೋಡಿಸಿ, ಮೆರಣಿಗೆಯಲ್ಲಿ ಪಾಲ್ಗೊಂಡಿರುವುದು ಪಕ್ಷದ ಬಲವರ್ಧಗೆ ಸಹಕಾರಿ ಆಗಿದೆ ಎಂದರು.

ವೀಕ್ಷಕ ಸಂಜಯ್‌ದತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ ಕೆ ತಾಜಪೀರ್, ಕೆ.ಪಿ.ಸಿ.ಸಿ ಕೋಆರ್ಡಿನೇಟ್ ಡಾ.ರಾಘವೇಂದ್ರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್, ಜೆ. ಜೆ. ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಶಿವಮೂರ್ತಿ, ಮಾಜಿ ಉಪಾಧ್ಯಕ್ಷ ಗಂಗಾಧರ್, ಸದಸ್ಯರಾದ ಶಿವಮೂರ್ತಿ ಲೋಹಿತ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ ಹೊಳಲ್ಕೆರೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಎಂ.ಪ್ರಕಾಶ್, ಕೆಪಿಸಿಸಿ ಸದಸ್ಯ ಜಿಪಂ ಮಾಜಿ ಉಪಾಧ್ಯಕ್ಷ ಎಸ್. ಎಂ .ಎಲ್ .ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್ ಮೈಲಾರಪ್ಪ ಕೆ.ಪಿ.ಸಂಪತ್ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

*ಜನಸಾಗರವೇ ಗೆಲುವಿನ ಮುನ್ಸೂಚನೆ*
ಇದೊಂದು ಐತಿಹಾಸಿಕ ಮೆರವಣಿಗೆ. ನಾನು ಬಹಳಷ್ಟು ನಾಮಪತ್ರ ಸಲ್ಲಿಕೆ ಮೆರವಣಿಗೆಗೆ ಹೋಗಿದ್ದೇನೆ. ಇಲ್ಲಿ ನೋಡಿದಷ್ಟು ಜನ ನನ್ನ ಜೀವನದಲ್ಲಿಯೇ ನೋಡಿಲ್ಲ. ಕಣ್ಣಾಯಿಸಿದಲ್ಲೆಲ್ಲಾ ಜನಸಾಗರವೇ ಇದೆ. ಇದನ್ನು ನೋಡಿದರೆ ಆಂಜನೇಯ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುವುದು ಖಚಿತ ಎಂಬುದು ನನ್ನ ಅನುಭವದ ಮಾತು. ಶೇ.40 ಪರ್ಸೆಂಟ್ ಬಿಜೆಪಿ ಜನಪ್ರತಿನಿಧಿಗಳನ್ನು ಸೋಲಿಸಿ, ಜನಪರ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನ ಆಸೆ ಪಡುತ್ತಿದ್ದಾರೆ ಎಂಬುದು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಸಹಸ್ರಾರು ಸಂಖ್ಯೆಯ ಜನರೇ ಸಾಕ್ಷಿ.
-ಮಯೂರ್ ಜೈಕುಮಾರ್ ಎಐಸಿಸಿ ಕಾರ್ಯದರ್ಶಿ

*ಗೆಲುವಿನ ಶುಭಸೂಚನೆ*
ಆಂಜನೇಯ ನಿಜಕ್ಕೂ ಬಹಳ ಒಳ್ಳೆ ವ್ಯಕ್ತಿ. ಸಚಿವರಾಗಿದ್ದ ಸಂದರ್ಭ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳೇ ಅವರ ದಕ್ಷತೆ, ಕ್ಷೇತ್ರದ ಜನರ ಮೇಲೆ ಇರುವ ಪ್ರೀತಿಗೆ ಸಾಕ್ಷಿ. ಆದರೆ, ಈಗಿನ ಶಾಸಕರು ಅಹಂಕಾರದಲ್ಲಿ ಜನರನ್ನು ನಿರ್ಲಕ್ಷಿೃಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಂಜನೇಯ ಗೆಲುವು ಖಚಿತ ಎಂಬ ಶುಭ ಸೂಚನೆ ಇಲ್ಲಿ ಸೇರಿರುವ ಜನರು ನೀಡಿದ್ದಾರೆ. ನನಗೆ ಜನರ ನಾಡಿಮಿಡಿತ ಗೊತ್ತಾಗುತ್ತದೆ. ರಾಜ್ಯದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಪಕ್ಷ ಗೆದ್ದು, ಅಧಿಕಾರ ಹಿಡಿಯುವುದು ಖಚಿತ ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ವಿಶ್ವಾಸ ವ್ಯಕ್ತಪಡಿಸಿದರು.

*ಸಂವಿಧಾನ ಉಳಿವಿಗೆ ಮತ*
ಮೆ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಭ್ರಷ್ಟ ಬಿಜೆಪಿಯನ್ನು ಹೊರದೂಡಿಸುವ ದಿನ. ಸಂವಿಧಾನ ಉಳಿವಿನ ದಿನ ಪ್ರತಿ ಮತದಾರ ಮನಸ್ಸು ಮಾಡಬೇಕು. ಹೊಳಲ್ಕೆರೆ ಕ್ಷೇತ್ರದ ಅಭ್ಯರ್ಥಿ ಎಚ್.ಆಂಜನೇಯ ಸುಮಾರು 25 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಂಸದ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಹೇಳಿದರು.

About The Author

Leave a Reply

Your email address will not be published. Required fields are marked *