ಬೇಸಿಗೆ ಹಿನ್ನೆಲೆಯಲ್ಲಿ ನರೇಗಾ ಕಾಮಗಾರಿಗಳು ನಿಯಮಿತ ನಡೆಯಲಿ:ಡಿಸಿ ಎಂ.ಸುಂದರೇಶಬಾಬು.
ಕೊಪ್ಪಳ:ಏಪ್ರಿಲ್ 28
ಉದ್ಯೋಗ ಅರಸಿ ಬರುವವರಿಗೆ ಅನುಕೂಲವಾಗುವ ಹಾಗೆ ಮತ್ತು ಕೆಲಸ ನೀಡುತ್ತಿಲ್ಲ ಎಂದು ಯಾರು ಸಹ ದೂರದ ಹಾಗೆ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲಿ ನರೇಗಾ ಕಾಮಗಾರಿಗಳು ನಿಯಮಿತವಾಗಿ ನಡೆಯುವಂತೆ ನರೇಗಾ ಸಮರ್ಪಕ ಅನುಷ್ಠಾನಕ್ಕೆ ಸಹ ಹೆಚ್ಚಿನ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಹೇಳಿದರು.
ಜಿಲ್ಲಾಡಳಿತ ಭವನದಲ್ಲಿನ ಕೇಶ್ವಾನ್ ಸಭಾಂಗಣದಲ್ಲಿ ಏಪ್ರೀಲ್ 28ರಂದು ನಡೆದ ಜಿಲ್ಲಾ ಟಾಸ್ಕ ಪೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಗೆ ಮುಕ್ತಾಯ ಪೂರ್ವದಲ್ಲಿಯೇ ನೀರು ಶೇಖರಣೆಯಂತಹ ಇಂಗುಗುಂಡಿ ನಿರ್ಮಾಣ ಮತ್ತು ಕೆರೆ ಹೂಳೆತ್ತುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ವೈಯಕ್ತಿಕ ಬದಲಾಗಿ ಸಾಮೂಹಿಕ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.
ಬೇಸಿಗೆ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸದಲ್ಲಿ ಶೇ.30ರಷ್ಟು ರಿಯಾಯಿತಿ ಇದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಮತ್ತು ಹಿಂದಿನ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಗ್ರಾಮಗಳಲ್ಲಿನ ಕೂಲಿಕಾರರಿಗೆ ಮತದಾನದ ಜಾಗೃತಿ ಮೂಡಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಲಜೀವನ್ ಮಿಷನ್ ಮತ್ತು ಡಿಬಿಓಟಿ ದುರಸ್ತಿಗೆ ಬಂದಿದ್ದಲ್ಲಿ ಅದಕ್ಕೆ ಗಮನ ಕೊಡಬೇಕು. ದುರಸ್ತಿ ಸಾಧ್ಯತೆ ಇರುವುದನ್ನು ಬೇಗನೆ ಪೂರ್ಣಗೊಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಿ ಸಾಧ್ಯವಾದಮಟ್ಟಿಗೆ ಜೆಜೆಎಂ ಮತ್ತು ಡಿಬಿಓಟಿ ಮೂಲಕವೇ ಜನರಿಗೆ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಬೇಸಿಗೆಯ ಅವಧಿಯಲ್ಲಿ ಜಿಲ್ಲೆಯ ಯಾವುದೇ ಹಳ್ಳಿಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದ ಹಾಗೆ ಬೇಸಿಗೆ ಮುಕ್ತಾಯದವರೆಗೆ ಮುಂಜಾಗ್ರತ ಕ್ರಮವಾಗಿ ಕುಡಿಯುವ ನೀರು ಪೂರೈಕೆಗೆ ರ‍್ಯಾಯವಾಗಿ ಖಾಸಗಿ ಬೋರವೆಲ್‌ಗಳನ್ನು ಗುರುತಿಸಿಟ್ಟುಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಯಾವುದೇ ಕಡೆಗಳಲ್ಲಿ ಜನ-ಜಾನುವಾರುಗಳಿಗೆ ನೀರಿನ ತೊಂದರೆಯಾಗಿದೆ ಎಂಬುದು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಅಲ್ಲಿಗೆ ಭೇಟಿ ನೀಡಿ ಸಮಸ್ಯೆಯನ್ನು 24 ಗಂಟೆಯೊಳಗಡೆ ಸರಿಪಡಿಸಬೇಕು. ದೊಡ್ಡ ಸಮಸ್ಯೆ ಇದ್ದಲ್ಲಿ ಎರಡ್ಮೂರು ದಿನಗಳಲ್ಲಿ ಸರಿಪಡಿಸಲು ಒತ್ತು ಕೊಡಬೇಕು ಎಂದು ತಿಳಿಸಿದರು.
ಬೇಸಿಗೆಯ ಅವಧಿಯಲ್ಲಿ ಜಾನುವಾರುಗಳಿಗೆ ಮೇವಿನ ಮತ್ತು ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಇದೆ ವೇಳೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.