May 2, 2024

Chitradurga hoysala

Kannada news portal

ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಎ.ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಬಸರಾಜ ಬೊಮ್ಮಾಯಿ ಕಾರಣ: ಶಾಸಕ ಎಂ. ಚಂದ್ರಪ್ಪ.

1 min read



ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಎ.ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಬಸರಾಜ ಬೊಮ್ಮಾಯಿ ಕಾರಣ: ಶಾಸಕ ಎಂ. ಚಂದ್ರಪ್ಪ.

ಬಿಜೆಪಿ ಪಕ್ಷದಿಂದ ಹೊಳಲ್ಕೆರೆ ಶಾಸಕನ ಉಚ್ಛಾಟನೆ ಮಾಡುವಂತೆ ಮಾದಿಗ ಸಮುದಾಯದಿಂದ ಒತ್ತಾಯ.

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಹೊಳಲ್ಕೆರೆ:

ಒಳಮೀಸಲು ನೀತಿ ಜಾರಿಗೆ ಮುಂದಾಗಿದ್ದೇ ಬಿಜೆಪಿ ಸೋಲಿಗೆ ಕಾರಣವೆಂದು ಹೇಳುವ ಮೂಲಕ ಜಾತಿ-ಜಾತಿಗಳ ಮಧ್ಯೆ ಗಲಾಟೆ ಉಂಟು ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರಿಗೆ ಮಾದಿಗ ಸಮುದಾಯದ ನೂರಾರು ಮುಖಂಡರು ದಿಗ್ಬಂಧನ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವಾಸಿಮಂದಿರದ ಬಳಿ ಭಾನುವಾರ ಜಮಾಯಿಸಿದ ಮಾದಿಗ ಹಾಗೂ ದಲಿತ ಸಂಘರ್ಷ ಸಮಿತಿಯ ನೂರಾರು ಮುಖಂಡರು, ಚಂದ್ರಪ್ಪ ಅವರಿದ್ದ ಕಾರಿಗೆ ಕೆಲಕಾಲ ದಿಗ್ಬಂಧನ ಹಾಕಿ ದಿಕ್ಕಾರ ಕೂಗಿದರು.
ಯಾವುದೇ ಪಕ್ಷ ಚುನಾವಣೆಯಲ್ಲಿ ಸೋಲಲು ವಿವಿಧ ಕಾರಣಗಳು ಇರುತ್ತವೆ. ಆದರೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತ್ರ, ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಮಾದಿಗ ಸಮುದಾಯದ ರಾಜ್ಯದ ಪ್ರಭಾವಿ ನಾಯಕರಾದ ಎ.ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಹಾಗೂ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರೇ ಮುಖ್ಯ ಕಾರಣ ಎಂದು ಹೇಳಿಕೆ ನೀಡಿರುವುದು ಅತ್ಯಂತ ನೋವಿನ ವಿಷಯ‌ ಎಂದು ಬೇಸರಿಸಿದರು.

ಚುನಾವಣೆಗೆ ಮುನ್ನ ಈ ರೀತಿ ಹೇಳಿಕೆ ನೀಡಿದ್ದರೆ ಚಂದ್ರಪ್ಪ ಸೋಲು ಖಚಿತವಾಗುತ್ತಿತ್ತು. ಆದರೆ ಚುನಾವಣೆ ಮುಗಿದ ಬಳಿಕ ಈ ರೀತಿ ಹೇಳಿಕೆ ನೀಡಿ ಕ್ಷೇತ್ರದಲ್ಲಿ ಸಹೋದರರ ರೀತಿ ಜೀವನ ನಡೆಸುತ್ತಿರುವ ಮಾದಿಗ, ಭೋವಿ, ಲಂಬಾಣಿ, ಕೊರಚ ಇತರೆ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಗಲಭೆ ಹುಟ್ಟಿ ಹಾಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಆರು ತಿಂಗಳ ಹಿಂದೆ ತನ್ನ ಬೆಂಬಲಿಗನ ಮೂಲಕ ವೀರಶೈವ ಲಿಂಗಾಯತ ಮುಖಂಡನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದು, ಅಶಕ್ತ ಮಹಿಳೆಯೊಬ್ಬರ ಆಸ್ತಿಯನ್ನು ತನ್ನ ಕುಟುಂಬದ ಹೆಸರಿಗೆ ಅಕ್ರಮವಾಗಿ ನೋಂದಣಿ ಮಾಡಿಸಿಕೊಂಡು, ಕ್ಷೇತ್ರದಲ್ಲಿ ಸರ್ವಾಧಿಕಾರಿ ರೀತಿ ವರ್ತಿಸುತ್ತಿರುವ ಚಂದ್ರಪ್ಪ, ಈಗ ಜಾತಿ ಗಲಭೆ ಹುಟ್ಟುಹಾಕಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ವರಿಷ್ಢರು ಹಾಗೂ ಸಂಘಪರಿವಾರದ ನಿರ್ಧಾರದಂತೆ ಮುಖ್ಯಮಂತ್ರಿ ಆಗಿದ್ದ ಬಸವರಾಜ್ ಬೊಮ್ಮಾಯಿ ಒಳಮೀಸಲು ಜಾರಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದರು. ಈ ಸಂದರ್ಭ ಸಂಪುಟದಲ್ಲಿದ್ದ ಭೋವಿ, ಲಂಬಾಣಿ ಸಮುದಾಯದವರು ಕೂಡ ಒಪ್ಪಿಗೆ ನೀಡಿದ್ದಾರೆ. ಜೊತೆಗೆ ಆ ಸಂದರ್ಭ ಬಾಯಿಮುಚ್ಚಿಕೊಂಡಿದ್ದ ಚಂದ್ರಪ್ಪ, ಈ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಲ್ಲಷ್ಟೇ ಗೆದ್ದಿದ್ದೇನೆ ಎಂಬುದನ್ನು ಮರೆತು ಈಗ ಬಿಜೆಪಿ ಸೋಲಿಗೆ ಮಾದಿಗ ಸಮುದಾಯದ ಬಿಜೆಪಿ ಮುಖಂಡರೇ ಕಾರಣ ಎಂದು ಟೀಕೆ ಮಾಡುತ್ತಿರುವುದು ಪಕ್ಷ ವಿರೋಧಿ ಚಟುವಟಿಕೆ ಜೊತೆಗೆ, ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಮಾದಿಗ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಅವಮಾನ ಮಾಡುಂತಹದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೊತೆಗೆ ಕ್ಷೇತ್ರದಲ್ಲಿ ತನಗೆ ಮತ ಹಾಕದ ಲಂಬಾಣಿ ಸಮುದಾಯದ ಮೇಲೆ ಪರೋಕ್ಷವಾಗಿ ದ್ವೇಷ ತೀರಿಸಿಕೊಳ್ಳುವ ಹೇಳಿಕೆ ಚಂದ್ರಪ್ಪ ನೀಡಿದ್ದಾರೆ. ಆದ್ದರಿಂದ ಸಮುದಾಯಗಳ ವಿರುದ್ಧ ವಿಷಕಾರುತ್ತಿರುವ ಚಂದ್ರಪ್ಪನನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಬೇಕು. ಇಲ್ಲದಿದ್ದರೇ ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಜನಜಾಗೃತಿ ಮೂಡಿಸಲಾಗುವುದು ಎಂದು ಎಚ್ಚರಿಸಿದರು.

ಹೊಳಲ್ಕೆರೆ ಕ್ಷೇತ್ರದ ಮಾದಿಗರ ಹಟ್ಟಿಯಲ್ಲೂ ಚಂದ್ರಪ್ಪ ಅವರಿಗೆ ಮತ ಹಾಕಲಾಗಿದೆ. ಕೆಲ ಜಾತಿ ಮುಖಂಡರಿಗೆ ಹಣದ ಆಮಿಷ ತೋರಿಸಿ ಮತ ಪಡೆದಿರುವ ಚಂದ್ರಪ್ಪ ಈಗ ಅದೇ ಸಮುದಾಯದ ನಾಯಕರಾದ ನಾರಾಯಣಸ್ವಾಮಿ, ಗೋವಿಂದ ಕಾರಜೋಳ ವಿರುದ್ಧ ಹೇಳಿಕೆ ಜೊತೆಗೆ ಅಂದಿನ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಹಾಗೂ ಪಕ್ಷದ ವರಿಷ್ಠರ ನಿರ್ಧಾರವನ್ನೇ ಚಂದ್ರಪ್ಪ ವಿರೋಧಿಸಿ ಹೇಳಿಕೆ ನೀಡುತ್ತಿದ್ದಾರೆ.
ಜಾತಿಗಳ ಮಧ್ಯೆ ದ್ವೇಷ ಬಿತ್ತುವ ಇಂತಹ ಶಾಸಕನನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು ಹಾಗೂ ಜಾತಿ ಗಲಭೆಗೆ ಪ್ರಚೋದನೆ ನೀಡುತ್ತಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಆಗ್ರಹಿಸಿದರು.

ತಕ್ಷಣ ಪೊಲೀಸರು ಮಧ್ಯ ಪ್ರವೇಶಿಸಿ ಶಾಸಕರಿದ್ದ ಕಾರು ಪ್ರವಾಸಿಮಂದಿರದಿಂದ ಹೊರಡಲು ಅವಕಾಶ ಕಲ್ಪಿಸಿಕೊಟ್ಟು ಪರಿಸ್ಥಿತಿ ತಿಳಿಗೊಳಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಪಾಂಡುರಂಗಸ್ವಾಮಿ, ಮಾದಿಗ ಸಮುದಾಯದ ಮುಖಂಡರಾದ ಕೆಂಗುಂಟೆ ಜಯಪ್ಪ ಮತ್ತಿತರರಿದ್ದರು.

About The Author

Leave a Reply

Your email address will not be published. Required fields are marked *