May 20, 2024

Chitradurga hoysala

Kannada news portal

ಅಧಿಕಾರದ ಆಸೆಗೆ ಕಾಂಗ್ರೆಸ್ ಈಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ : ಮಾಜಿ ಸಿಎಂ

1 min read



ಅಧಿಕಾರದ ಆಸೆಗೆ ಕಾಂಗ್ರೆಸ್ ಈಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ :ಮಾಜಿ ಸಿಎಂ

ಅಖಂಡ ಭಾರತ ಶ್ರೇಷ್ಠ ಭಾರತವಾಗಲು ನಾವೆಲ್ಲ ಪಣ ತೊಡಬೇಕು: ಮಾಜಿ ಸಿಎಂ ಬಸವ ರಾಜ್ ಬೊಮ್ಮಯಿ

 

ಬೆಂಗಳೂರು:

ಅಧಿಕಾರದ ಆಸೆಗೆ ಕಾಂಗ್ರೆಸ್ ಈಗಲೂ ತುಷ್ಟಿಕರಣ ರಾಜಕಾರಣ ಮಾಡುತ್ತಿದೆ. ಬೇರೆ ದೇಶಗಳಿಗೆ ಹೋಗಿ ಭಾರತದಲ್ಲಿ ಅಲ್ಪ ಸಂಖ್ಯಾತರು ಸುರಕ್ಷಿತ ಇಲ್ಲ ಅಂತ ಹೇಳುತ್ತಾರೆ. ಭಾರತದಲ್ಲಿ ಅಲ್ಪ ಸಂಖ್ಯಾತರು ಅತಿ ಹೆಚ್ಚು ಸುರಕ್ಷಿತವಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ದೇಶ ವಿಭಜನೆ ಒಂದು ದುರಂತ ಕಥೆ ಸ್ಮೃತಿ ದಿವಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವದ ಇತಿಹಾಸದಲ್ಲಿ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಭಾರತದಂತ ಕೆಟ್ಟ ಸಂದರ್ಭ ಯಾವ ದೇಶಕ್ಕೂ ಬಂದಿಲ್ಲ. ಪರಕೀಯರ ಆಡಳಿತದಿಂದ ಸ್ವಾತಂತ್ರ್ಯ ಬಂದಾಗ ದೇಶ ಅಲ್ಲೊಲ ಕಲ್ಲೊಲ ಆಗಿರುವ ಇತಿಹಾಸ ಭಾರತಕ್ಕೆ ಮಾತ್ರ ಇದೆ.
ಇಷ್ಟೆಲ್ಲಾ ಆದರೂ ಸತ್ಯ ಹೇಳುವ ವ್ಯವಸ್ಥೆ ಬರಲಿಲ್ಲ‌. ಈ ದೇಶ ಆಳುವ ಕಾಂಗ್ರೆಸ್ ನವರು ಅದನ್ನು ಮರೆ ಮಾಚಿದರು ಎಂದು ಅಭಿಪ್ರಾಯ ಪಟ್ಟರು.
ದೆಹಲಿಯಲ್ಲಿ ನಿರಾಶ್ರಿತರ ಕ್ಯಾಂಪ್ ಗಳು ಈಗಲೂ ಇವೆ. ಅವರು ಅನುಭವಿಸಿರುವ ಯಾತನೆ ಕೇಳಲು ಆಗುವುದಿಲ್ಲ. ಹೃದಯ ಕಿವುಚುತ್ತದೆ. ಇಂತಹ ಹೇಯ ಕೃತ್ಯ ನಮ್ಮ ದೇಶದಲ್ಲಿ ಆಗಿದಿಯಾ ಅಂತ ನೋಡಿದರೆ ನಮಗೆ ನಾಚಿಕೆಯಾಗುತ್ತದೆ.
ಒಂದು ಕಡೆ ಅಹಿಂಸೆಯ ಹೋರಾಟ ನಡೆಯುತ್ತದೆ. ಇದರಲ್ಲಿ ಲಕ್ಷಗಟ್ಟಲೇ ಅನಾಮಧೇಯ ಸ್ವಾತಂತ್ರ್ಯ ಸೇನಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅಂಗವಿಕಲರಾಗಿದ್ದಾರೆ, ಮನೆ ಮಠ ಕಳೆದುಕೊಂಡಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಮೂಲ ನಮ್ಮ ದೇಶದ ಅಂತರ್ ಸತ್ವ ಇರುವ ಜನರಿಂದ ಪ್ರಾರಂಭವಾಗಿದೆ. ಭಾರತೀಯರಿಗೆ ದೇಶಾಭಿಮಾನ ಕಲಿಸಲು ಯಾವುದೇ ಪಕ್ಷ ಬೇಕಿಲ್ಲ. ಕಾಂಗ್ರೆಸ್ ಹುಟ್ಟುವ ಮೊದಲೇ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಗಿದೆ. ವೀರ ಮಹಿಳೆ ಕಿತ್ತೂರು ಚೆನ್ನಮ್ಮ ಬ್ರಿಟೀಷರ ವಿರುದ್ದ ಕತ್ತಿ ಎತ್ತಿದರು ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ, ನರಗುಂದದ ಬಾಳಾ ಸಾಹೇಬ ಇವರು ಯಾರೂ ಈಗಿನ ಇತಿಹಾಸದಲ್ಲಿ ಕಾಣುವುದಿಲ್ಲ. ಬರೇ ಗಾಂಧಿ ನೆಹರು ಹಾಗೂ ಅವರ ಹಿಂಬಾಲಕರು ಮಾತ್ರ ಇದ್ದಾರೆ.
ಲೋಕಮಾನ್ಯ ತಿಲಕ, ಬಾಲ ಗಂಗಾಧರ ತಿಲಕ ಕಾಂಗ್ರೆಸ್ ಮಾರ್ಗದರ್ಶಕರಾಗಿದ್ದರು. ಸುಭಾಶ್ಚಂದ್ರಭೊಸ್ ಕಾಂಗ್ರೆಸ್ ನಿಂದ ಹೊರ ಬಂದು ಹೋರಾಟ ನಡೆಸಿದರು. ಮೈಲಾರ ಮಹಾದೇವನನ್ನು ಬ್ರಿಟೀಷರಿಗೆ ಹಿಡಿಯಲು ಆಗಲಿಲ್ಲ ಅವನನ್ನು ಮೋಸದಿಂದ ಕೊಂದರು, ಸಂಗೊಳ್ಳಿ ರಾಯಣ್ಣನನ್ನು ಮೋಸದಿಂದ ಹಿಡಿದು ಕೊಂದರು.
ಹುಬ್ಬಳ್ಳಿಯಲ್ಲಿ ನಾರಾಯಣ ಅನ್ನುವ ಹನ್ನೆರಡು ವರ್ಷದ ಹುಡುಗ ಒಂದೇ ಮಾತರಂ ಹೇಳಿದ ಕಾರಣಕ್ಕೆ ಅವನನ್ನು ಗುಂಡಿಕ್ಕಿ ಕೊಂದರು, ಅಂತಹ ಅನಾಮಧೇಯರು ಅನೇಕರಿದ್ದಾರೆ. ಅವನು ಯಾವದೇ ಪಕ್ಷಕ್ಕೆ ಸೇರಿದವನಲ್ಲ ಎಂದು ಹೇಳಿದರು.
ಬ್ರಿಟೀಷರು ದೇಶ ವಿಭಜನೆಗೆ ಒಪ್ಪಿದರೆ ಮಾತ್ರ ಸ್ವಾತಂತ್ರ್ಯ ನೀಡುತ್ತೇವೆ ಅಂದರು. ಆಗ ಗಾಂಧಿಜಿ ನೆಹರು ಮಾತಿಗೆ ಬೆಲೆ ಕೊಟ್ಟು ವಿಭಜನೆಗೆ ಒಪ್ಪಿದರು. ಇದು ಭೌಗೋಳಿಕವಾಗಿ ಮಾತ್ರ ಆಗಲಿಲ್ಲ, ಭಾರತೀಯರ ಜೀವನದ ವಿಭಜನೆ ಆಯಿತು.
ವಿಭಜನೆಯ ಸಂದರ್ಭದಲ್ಲಿ ರಕ್ತದ ಓಕುಳಿ ಆಯಿತು. ಅತ್ಯಾಚಾರ, ಕೊಲೆ ಅನಾಚಾರ ನಡೆಯಿತು. ವಿಭಜನೆಯ ಆಳ ಎಷ್ಟಾಗಿತ್ತು ಅಂದರೆ ಪ್ರತಿ ಊರಿನಲ್ಲಿಯೂ ಮನಸುಗಳು ಒಡೆದವು, ರಾಜಕೀಯ ಲಾಭಕ್ಕೆ ತುಷ್ಟೀಕರಣ ರಾಜಕೀಯ ಮಾಡಲಾಯಿತು. ಕಾಂಗ್ರೆಸ್ ಅಧಿಕಾರಕ್ಕಾಗಿ ಈಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಯಾವ ಮುಸ್ಲೀಂ ದೇಶಗಳಲ್ಲಿ ಅಲ್ಪ ಸಂಖ್ಯಾತರು ಸುರಕ್ಷಿತವಾಗಿದ್ದಾರೆ. ಪಾಕಿಸ್ತಾನದಲ್ಲಿ, ಅಪಘಾನಿಸ್ತಾನ, ಸಿರಿಯಾದಲ್ಲಿ ಮುಸ್ಲೀಮ್ ಮಹಿಳೆಯರು ಸುರಕ್ಷಿತವಾಗಿದ್ದಾರಾ ? ಎಂದು ಪ್ರಶ್ನಿಸಿದರು.
ಭಾರತ ಅಂದರೆ ಕೇವಲ ಭೌಗೋಳಿಕ ದೇಶ ಅಲ್ಲ, ಇದೊಂದು ಭಾವನಾತ್ಮಕ ದೇಶ, ನಮ್ಮನ್ನು ವಿರೋಧಿಸುವ ದೇಶಗಳೂ ಕೂಡ ನರೇಂದ್ರ ಮೋದಿಯವರ ವಿಶ್ವ ನಾಯಕತ್ವ ಇದೆ. ಚೀನಾದ ಪತ್ರಕರ್ತನೋರ್ವ ಪ್ರಧಾನಿ ಮೋದಿಯವರ ನಾಯಕತ್ವ ಹೊಗಳಿದ್ದಾನೆ. ಪಾಕಿಸ್ತಾನದ ಪ್ರಜೆಗಳು ಮೋದಿ ನಾಯಕತ್ವ ಮೆಚ್ಚಿದ್ದಾರೆ. ನಾವು ಸಂಕುಚಿತ ಮನೋಭಾವನೆಗಳಿಂದ ದೇಶವನ್ನು ವಿಭಜನೆ ಮಾಡುವ ಪ್ರಯತ್ನ ಮಾಡಬಾರದು, ಪಶ್ಚಿಮದಲ್ಲಿ ಒಂದು ಭಾವನೆ, ಪೂರ್ವ, ಉತ್ತರ, ದಕ್ಷಿಣ ಭಾರತದಲ್ಲಿ ಒಂದು ಭಾವನೆ ಮೂಡಿಸುವ ಕೆಲಸ ಆಗಬಾರದು. ಅಖಂಡ ಭಾರತವನ್ನು ಮುನ್ನಡೆಸುವ ನಾಯಕತ್ವ ನರೇಂದ್ರ ‌ಮೋದಿಯವರಿಗೆ ಮಾತ್ರ ಇದೆ. ಇದು ಕೇವಲ ಬಿಜೆಪಿಯವರಿಗೆ ಸಂಬಂಧಿಸಿದ್ದಲ್ಲ‌. ಇಡೀ ದೇಶದ ಪ್ರಜೆಗಳು ಯೋಚಿಸಬೇಕು. 2047 ಕ್ಕೆ ಅಖಂಡ ಭಾರತ ಶ್ರೇಷ್ಠ ಭಾರತ ಮಾಡಲು ನಾವೆಲ್ಲ ಪ್ರತಿಜ್ಞೆ ಮಾಡಬೇಕಿದೆ‌. ವಿಭಜನೆಯ ನೋವುಂಡು ಜೀವ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಭಾರತ ಮತ್ತೆ ಅಖಂಡವಾಗಿ ವಿಶ್ವ ನಾಯಕನಾಗಬೇಕು. ಈಗ ಭಾರತಕ್ಕಾಗಿ ಪ್ರಾಣ ಕೊಡುವವರು ಬೇಕಾಗಿಲ್ಲ. ಭಾರತಕ್ಕಾಗಿ ಬದುಕುವವರು ಬೇಕು. ನರೇಂದ್ರ ಮೋದಿಯವರು 370 ರದ್ದು ಮಾಡಿದ್ದಾರೆ. ತ್ರಿಪಲ್ ತಲಾಕ್ ರದ್ದು ಮಾಡಿದ್ದಾರೆ. ಏಕ ನಾಗರಿಕ ಸಂಹಿತೆ ತರುವವರಿದ್ದಾರೆ.
ಕಾಂಗ್ರೆಸ್ ನಾಯಕರು ಭಾರತ ಮಾತೆಯ ಹತ್ಯೆ ಅಂತ ಹೇಳಿದ್ದಾರೆ. ಭಾರತ ಮಾತೆಯ ಹತ್ಯೆಯ ಕಲ್ಪನೆ ಹೇಯವಾದದ್ದು, ಭಾರತ ಮಾತೆ ನಿತ್ಯ ನಿರಂತರ, ಸೂರ್ಯ ಚಂದ್ರರು ಇರುವವರೆಗೂ ಭಾರತ ಮಾತೆ ಇರುತ್ತಾಳೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಎಂ. ಕೃಷ್ಣಪ್ಪ, ಎನ್. ರವಿಕುಮಾರ್ , ಬೆಂಗಳೂರು ನಗರ ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಆರ್. ರಮೇಶ್, ಆರ್ ಎಸ್ ಎಸ್ ನ ಜಿ. ಆರ್.‌ಸಂತೋಷ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ. ಸಂದೀಪ್ ಹಾಜರಿದ್ದರು.

About The Author

Leave a Reply

Your email address will not be published. Required fields are marked *