ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಜನರಿಗೆ ತಲುಪಿಸಿ ಜಿಲ್ಲಾಧಿಕಾರಿ
1 min read
ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಜನರಿಗೆ ತಲುಪಿಸಿ
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ
CHITRADIRGAHOYSALA NEWS/
ಚಿತ್ರದುರ್ಗ:
ಜನಸಂಖ್ಯೆಯ ಶೇ.1 ರಿಂದ 2 ರಷ್ಟು ಪ್ರಮಾಣದಲ್ಲಿ ಇರುವ ಸರ್ಕಾರಿ ನೌಕರರ ವರ್ಗ ಜನರ ಸೇವೆ ಮಾಡಬೇಕು. ಸರ್ಕಾರ ಯೋಜನೆಗಳನ್ನು ಜನರಿಗೆ ಅನುಕೂಲವಾಗುವಂತೆ ಸಕಾಲದಲ್ಲಿ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಜನರ ಅಭ್ಯುದಯಕ್ಕಾಗಿ ಸರ್ಕಾರ ಹಲವಾರು ನೂತನ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳು ಫಲಾನುಭವಿಗಳ ಜೀವನದಲ್ಲಿ ಮಹತ್ತರ ಬದಲಾವಣೆ ತರಲಿವೆ. ಈ ಯೋಜನೆಗಳನ್ನು ನಿಗದಿತ ಕಾಲ ಮಿತಿಯಲ್ಲಿ ಜನರಿಗೆ ತಲುಪಿಸಿದರೆ, ಇದೇ ಸರ್ಕಾರಿ ನೌಕರರು ದೇಶಕ್ಕೆ ನೀಡುವ ಕೊಡುಗೆಯಾಗಿದೆ. ಸರ್ಕಾರಿ ನೌಕರರನ್ನು ಜನರ ಸೇವಕ ಎಂದು ಕರೆಯಲಾಗಿದೆ. ಜನರ ಸೇವೆಗಾಗಿಯೇ ನಾವು ಇದ್ದೇವೆ. ನಿಷ್ಪಕ್ಷಪಾತ ಜನರ ಸೇವೆ ಮಾಡುವುದಾಗಿ ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಅಧಿಕಾರಗಳು ಹಾಗೂ ನೌಕರರು ಪ್ರತಿಜ್ಞೆ ಮಾಡಬೇಕು ಎಂದು ಅವರು ಹೇಳಿದರು.
ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಾನವ ಸಂಪನ್ಮೂಲ ಹೆಚ್ಚಾಗಿದೆ. ಯುವ ಜನರು ಹೆಚ್ಚಾಗಿದ್ದು ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೊಡುಗೆ ನೀಡಿದರೆ ದೇಶ ಸಮೃದ್ಧವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮಧುಸೂದನ್ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಇದ್ದರು.