April 20, 2024

Chitradurga hoysala

Kannada news portal

ಆಶ್ರಯ ಬಡಾವಣೆಯಲ್ಲಿ ವಾಂತಿಬೇಧಿ ಪ್ರಕರಣ : ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಪ್ರಾರಂಭ:ಡಿ.ಹೆಚ್.ಓ ಡಾ.ರಂಗನಾಥ್

1 min read

ಆಶ್ರಯ ಬಡಾವಣೆಯಲ್ಲಿ ವಾಂತಿಬೇಧಿ ಪ್ರಕರಣ : ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಪ್ರಾರಂಭ:ಡಿ.ಹೆಚ್.ಓ ಡಾ.ರಂಗನಾಥ್

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:

ಚಿತ್ರದುರ್ಗ ನಗರ ಸಮೀಪದ ಆಶ್ರಯ ಬಡಾವಣೆಯಲ್ಲಿ ಕಳೆದ ಆ. 16 ರಂದು ವಾಂತಿಬೇಧಿ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು, ಆಶ್ರಯ ಬಡಾವಣೆಯಲ್ಲಿ ತಾತ್ಕಾಲಿಕ ಚಿಕಿತ್ಸಾಲಯ ತೆರೆದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗನಾಥ್ ಅವರು ತಿಳಿಸಿದ್ದಾರೆ.

ಆಶ್ರಯ ಬಡಾವಣೆಯಲ್ಲಿ ವಾಂತಿ ಬೇಧಿ ಪ್ರಕರಣಗಳು ಜಿಲ್ಲಾ ಆಸ್ಪತ್ರೆಗೆ ದಾಖಲಾಗುತ್ತಿರುವ ಬಗ್ಗೆ ಮಾರುತಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಕಳೆದ ಆ. 16 ರಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ತಕ್ಷಣವೇ ಜಿಲ್ಲಾ ಸರ್ವೇಕ್ಷಣಾ ಘಟಕ ಆರ್.ಆರ್.ಟಿ. ತಂಡವು ಅದೇ ದಿನದಂದು ಬೆಳಿಗ್ಗೆ ಇಲ್ಲಿನ ಆಶ್ರಮ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದೆ. ಗ್ರಾಮದಲ್ಲಿ ಒಟ್ಟು 01 ಬೋರ್‍ವೆಲ್, 01 ಓವರ್ ಹೆಡ್ ಟ್ಯಾಂಕ್ ಇವೆ. ಈಗಾಗಲೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮನೆ ಮನೆ ಸರ್ವೆ ಮಾಡಿ, ಜನರಿಗೆ ಸ್ವಚ್ಛ ಕುಡಿಯುವ ನೀರು ಉಪಯೋಗಿಸಲು ಅರಿವು ಮೂಡಿಸಲಾಗಿದ್ದು, ಬಿಸಿ ಹಾಗೂ ಶುದ್ಧ ಆಹಾರ ಸೇವಿಸುವಂತೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಲು ಹಾಗೂ ಸ್ವಚ್ಛವಾಗಿ ಕೈ ತೊಳೆದುಕೊಳ್ಳುವ ವಿಧಾನ, ವೈಯಕ್ತಿಕ ಸ್ವಚ್ಛತೆ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗಿದೆ. ಈವರೆಗೆ ಒಟ್ಟು 13 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 03 ಪ್ರಕರಣಗಳನ್ನು ಮಾತ್ರ ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಶ್ರಯ ಬಡಾವಣೆಯಲ್ಲಿ ತಾತ್ಕಾಲಿಕ ಚಿಕಿತ್ಸಾಲಯ ತೆರೆದು, ವೈದ್ಯರು ಮತ್ತಿತರೆ ಆರೋಗ್ಯ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ತೆರನಾದ ಔಷಧಿ, ಮಾತ್ರೆ ಇರಿಸಲಾಗಿದೆ, ಅಲ್ಲದೆ ತುರ್ತು ಮುಂಜಾಗ್ರತೆಗಾಗಿ ಆಂಬ್ಯಲೆನ್ಸ್ ಕೂಡ ನಿಯೋಜಿಸಲಾಗಿದೆ.ರೋಗ ಪತ್ತೆಗಾಗಿ 03 ನೀರಿನ ಮಾದರಿ ಹಾಗೂ 02 ಮಲದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಶಾಲೆಗೆ ಕಳುಹಿಸಲಾಗಿದೆ.

ಜಿಲ್ಲಾ ಆರ್.ಆರ್.ಟಿ. ತಂಡ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಲಾಗುತ್ತಿದ್ದು, ಅಲ್ಲಿ ಕಂಡು ಬರುವ ಪ್ರಕರಣಗಳನ್ನು ಹತ್ತಿರದ ತಾತ್ಕಾಲಿಕ ಚಿಕಿತ್ಸಾಲಯಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಶ್ರಯ ಬಡಾವಣೆಗೆ ಸರಬರಾಜಾಗುತ್ತಿರುವ ನೀರಿನ ಮೂಲಗಳಿಗೆ ಭೇಟಿ ನೀಡಿ, ಅಲ್ಲಿನ ಪೈಪ್‍ಲೈನ್‍ಗಳು, ಸೋರಿಕೆಗಳನ್ನು ಗುರುತಿಸಿ, ಸರಿಪಡಿಸಲು ಅಲ್ಲಿನ ವಾಟರ್ ಮ್ಯಾನ್‍ಗಳಿಗೆ ತಿಳಿಸಲಾಗಿದೆ. ಈ ಪ್ರದೇಶದ ಚರಂಡಿಗಳಲ್ಲಿ ನಿಂತ ನೀರನ್ನು ಬ್ಲೀಚಿಂಗ್ ಪೌಡರ್‍ನಿಂದ ಶುಚಿಗೊಳಿಸಲು ತಿಳಿಸಲಾಗಿದ್ದು, ನೊಣ ಹಾಗೂ ಇತರೆ ಕೀಟಗಳು ಬಾರದಂತೆ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ.

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಜಿಲ್ಲಾ ಆಸ್ಪತ್ರೆ ಮತ್ತು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಂತಿ ಬೇಧಿ ಪ್ರಕರಣಗಳ ರೋಗಿಗಳ ಆರೋಗ್ಯ ವಿಚಾರಿಸಿದ್ದು, ಆಶ್ರಯ ಬಡಾವಣೆಗೂ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗನಾಥ್ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *