ಅಳಿಗೊಂಡಿಹರೆಂದು ಅಂಜಲದೇಕೆ?
1 min readವೆಬ್ ಸಂಪಾದಕರು: ಕುಮಾರ್. ಸಿ.ಎನ್
ಸಂಗ್ರಹ: ವಿಜಯ್ ತೂಡರನಾಳ್
ಲೇಖನ:ಟಿ.ಪಿ.ಉಮೇಶ್
ಅಳಿಗೊಂಡಿಹರೆಂದು ಅಂಜಲದೇಕೆ?
ಅಳಿಗೊಂಡಿಹರೆಂದು ಅಂಜಲದೇಕೆ? ನಾಸ್ತಿಕವಾಡಿಹರೆಂದು ನಾಚಲದೇಕೆ? ಆರದಡಾಗಲಿ ಶ್ರೀ ಮಹದೇವಂಗೆ ಶರಣೆನ್ನಿ! ಏನು ಅರಿಯೆನೆಂದು ಮೌನಗೊಂಡಿರಬೇಡ; ಕೂಡಲಸಂಗಮದೇವರ ಮುಂದೆ ದಂದಣ ದತ್ತಣ ಎನ್ನಿ! ಎಂಬ ಜಗದಣ್ಣ ಬಸವಣ್ಣನವರ ವಚನವು ಕುಹಕ ಕುತ್ಸಿತ ಮಾತುಗಳಿಗೆ ಕಿವಿಗೊಡದೆ ಮತ್ಸರಿತ ಮದದ ಮಾತುಗಳಿಗೆ ಅಂಜದೆ ಲೋಕಕ್ಕೆ ಸರಿಯೆನಿಸಿದ ವಿಚಾರಗಳ ನಿರ್ಭಿಡೆಯಾಗಿ ಹೇಳಲು; ಲೋಕ ಕಲ್ಯಾಣ ಕಾರ್ಯಗಳ ಎದೆಗುಂದದೆ ನಿರ್ವಹಿಸಲು ಪ್ರೋತ್ಸಾಹ ನೀಡುತ್ತಾ ಧೈರ್ಯವನ್ನು ತುಂಬುತ್ತದೆ. ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ ಎಂದೆನ್ನುವ ಒಂದು ವಚನದಿ ಲೋಕದ ಗೊಡವೆ ಬೇಡ ಎಂದು ಧ್ವನಿಸುವಂತ ಮಾತು ಕಂಡರು ಅದು ಲೋಕದ ಡೊಂಕ ತಿದ್ದುವ ಮುನ್ನವೇ ನಮ್ಮ ನಮ್ಮ ತನು ಮನ ನಡೆ ನುಡಿಗಳು ಅಂಕುಡೊಂಕಿಗೆ ಒಳಗಾಗಿರಬಾರದು ಎಂದೆ ಮನನ ಮಾಡುತ್ತದೆ. ನಮ್ಮ ಆಚಾರ ವಿಚಾರಗಳು ಶುದ್ಧವಾಗಿದ್ದು ಮಾತು ವರ್ತನೆ ಕಾಯಕ ಪ್ರಾಮಾಣಿಕವಾಗಿದ್ದರೆ ಸಾಕು ಯಾರಿಗೆ ಅಂಜುವುದೇಕೆ? ನಾಚಲದೇಕೆ? ಏನು ಅರಿಯದಂತೆ ಸುಮ್ಮನಿದ್ದರೆ ಈ ಜನ ಜಗತ್ತು ನೋವು ನಲಿವುಗಳ ಗಮನಿಸದು. ಹಸಿದಾಗ ಬೇಡದಿದ್ದರೆ ಕೂತಲ್ಲಿಯೇ ಇದ್ದರೆ ಕರೆದು ಊಟ ಹಾಕದು ಎಂದೇ ಹೇಳುತ್ತಿದ್ದಾರೆ.
ಗೂರಲು ಹತ್ತದೆ ಗುರುವಾಗಲಾಗದು ಎಂಬ ನಾಣ್ಣುಡಿಯಂತೆ ಬದುಕು ಹದಗೊಳ್ಳಲು ಅನುಭವ ಬೇಕು. ಎಮರ್ಸನ್ ಎಂಬ ಪಾಶ್ಚಾತ್ಯ ದಾರ್ಶನಿಕ “ಅನುಭವ ಎಂಬುದು ತಲೆ ಬೋಳಾದ ಮೇಲೆ ಸಿಗುವ ಬಾಚಣಿಕೆ!” ಎಂದೇ ಹೇಳುತ್ತಾನೆ. ಆದರೆ ಕೇಳುವ ನೋಡುವ ಓದುವ ಬರೆಯುವ ಒಡನಾಡುವ ಮೂಲಕ ಬಾಲ್ಯದಿಂದಲು ಎಲ್ಲರು ಸಾಕಷ್ಟು ಜೀವನದ ಅನುಭವ ಹೊಂದುತ್ತಲೇ ಇರುತ್ತೇವೆ. ಸರಿ ತಪ್ಪುಗಳು ತಿಳಿಯುತ್ತಲೇ ಇರುತ್ತವೆ. ಹಾಗಾಗಿ ಯಾವುದೇ ಅವಹೇಳನಕ್ಕೆ ಅವಮಾನಕ್ಕೆ ಕುಸಿಯದೆ ಯಾವುದಕ್ಕು ಸೂಕ್ತ ತೀಕ್ಷ್ಣ ಪ್ರತಿಕ್ರಿಯೆ ನೀಡುವ ಮನೋಭಾವ ಹೊಂದಬೇಕು. ಸೋಲು ಗೆಲುವಿನ ಸೋಪಾನ. ‘ಫೇಲ್’ ಎಂಬುದು ಫೈಟ್ ಎಗೈನ್ ಇನ್ ಲೈಫ್ ಎಂಬ ಅರ್ಥ ನೀಡುವುದನ್ನು ಮನಗಾಣಬೇಕು. ತೆರೆದ ಕಣ್ಣುಗಳಿಂದ ಸದಾ ಜಗದ ಬದಲಾವಣೆ ಗಮನಿಸುತ್ತಾ ಅದಕ್ಕೆ ತಕ್ಕನಾಗಿ ಬದುಕು ನಡೆಸುತ್ತಾ, ಹೊಂದಿಸಿಕೊಳ್ಳುತ್ತಾ ಸಾಗುವುದೇ ಸಾಧಕನ ಸಾರ್ಥಕ ಲಕ್ಷಣ.
ಯಾವುದೆ ಕೆಲಸಕ್ಕು ಇಂದು ಸ್ಪರ್ಧೆ ಇದ್ದೇ ಇದೆ. ಪ್ರತಿ ಮಾತಿಗು ಬೆಲೆಯಿದೆ. ದಿನಕರ ದೇಸಾಯಿಯವರು ಮಾತು ಮಾತು ಕೂಡಿದರೆ ನುಡಿ ಮಾತು ಮಾತು ತಾಕಿದರೆ ಕಿಡಿ ಎಂದು ಹೇಳಿರುವುದು ಯಾವತ್ತೂ ಸತ್ಯವಾದುದು. ಮಾತಿನ ಈಟಿಯ ಮೂಲಕ ಸಾಧನೆಗೆ ಮುನ್ನುಗ್ಗುವ ವ್ಯಕ್ತಿಗಳ ಜಂಘಾಬಲ ಉಡುಗಿಸಲು ಯತ್ನಿಸುವುದು ಸಾಮಾನ್ಯ. ಮಾತಿನ ಈಟಿಯನ್ನೆ ಛಲವಾಗಿ ಗುರಿಯೆಡೆಗೆ ಬಾಣವಾಗಿಸಿಕೊಂಡವರು ಲೋಕದಿ ಜಾಣರಾಗಿ ಸಾಧಕರಾಗಿದ್ದಾರೆ. ಇದಿರ ಹಳಿಯಬಾರದೆಂದರು ಹಳಿದು ಅಣಕಿಸುವವರು ಇದ್ದೇ ಇರುತ್ತಾರೆ. ಅವರೆಲ್ಲರು ಮೊಂದೊಂದು ದಿನ ಮುಂದೆ ಬಂದು ಕೈಕುಲುಕಿ ಸಾಧನೆಗಳ ಹೊಗಳುವ ಮಾರ್ಧನಿಗಳಾಗುವ ಚೈತನ್ಯ ಪ್ರತಿಯೊಬ್ಬರಲ್ಲು ಇದೆ. ತಪ್ಪುಗಳ ತಿದ್ದಿಕೊಂಡು ದಾರಿಗಳ ಸರಿ ಮಾಡಿಕೊಂಡು ಏಕಾಗ್ರತೆಯಿಂದ ನಡೆದರೆ ಇಚ್ಛಿತ ಗುರಿ ತಲುಪುವುದು ಸುಲಭ.
ಇಂದಿನ ಸೋಷಿಯಲ್ ಮೀಡಿಯಾಗಳಲ್ಲಿ ಬಣ್ಣ ಬಳಿದ ಮುಖ ಚಹರೆಗಳಿಗೆ ವಿಕಾರದ ಮಾತುಗಳಿಗೆ ಅನಗತ್ಯ ರೂಮರ್ರುಗಳಿಗೆ ಒದಗುವ ಲೈಕು ಇಮೋಜಿ ಕಮೆಂಟುಗಳಲ್ಲಿ ಸಾಧಕರಾಗುವವರು ತನುಮನ ಕಳೆದುಕೊಳ್ಳಬಾರದು. ಪ್ರಜ್ಞೆಯನ್ನು ಬರಡಾಗಿಸಿಕೊಳ್ಳಬಾರದು. ವಿದ್ಯಾತುರಾಣಾಂ ನ ಸುಖಂ ನ ನಿದ್ರಾಃ ಎಂಂಬಂತೆ ವಿದ್ಯೆಯ ಅಗ್ರಣಿಯಾಗುವವರಿಗೆ ಸುಖದ ಚಪಲವಾಗಲಿ ಅತಿ ನಿದ್ದೆಯ ಬಯಕೆಯಾಗಲಿ ಹತ್ತಿರವೂ ಸುಳಿಯಬಾರದು. ಯಾವುದೇ ವೃತ್ತಿಯವರೇ ಆಗಲಿ ಅದರಲ್ಲಿ ಶ್ರೇಷ್ಠತೆ ಸಾಧಿಸಲು ಸ್ವಸುಖದ ತ್ಯಾಗ ಮಾಡಬೇಕಾದ್ದು ಅನಿವಾರ್ಯ. ಜನ ಸೇವೆ ಮಾಡುವ ಬಯಕೆ ಹೊತ್ತು ಸರ್ಕಾರಿ ಕೆಲಸಕ್ಕೊ ಸಮಾಜ ಸೇವೆಗೋ ರಾಜಕೀಯಕ್ಕೋ ಬಂದರೆ ಜೀವನ ಮುಗಿಯದು. ಇಪ್ಪತ್ನಾಲ್ಕು ಗಂಟೆ ತನ್ನ ವ್ಯಾಪ್ತಿಯ ಜನರ ನೋವು ಕಷ್ಟ ದುಃಖ ದುಮ್ಮಾನಗಳ ಪರಿಹರಿಸಲು ಹೆಣಗಬೇಕಾದುದು ಅವಶ್ಯಕ. ವೃತ್ತಿ ಒತ್ತಡದಿ ಮೈ ಮನ ಹಣ್ಣಾಗಿ ಹೈರಾಣಾದರು ಬೇಸರಿಸದೆ ಜನಸೇವೆಯಲ್ಲಿ ತೃಪ್ತಿ ಕಂಡರೆ ಮುಂದೊಂದು ದಿನ ಅಗಾಧವಾದ ಕೀರ್ತಿ ಪ್ರತಿಷ್ಟೆಗಳು ಮುಡಿಗೇರಿ ಹೆಸರು ಅಜರಾಮರವಾಗುವುದರಲ್ಲಿ ಸಂದೇಹವಿಲ್ಲ. ಹುಟ್ಟಿದ ಬಳಿಕ ಲೋಕದಲ್ಲಿ ಮಾದರಿಯಾಗುವ ಕಾರ್ಯಗಳ ಸಾಧಿಸದೆ ಒಳಿತನ್ನ ಉಳಿಸದೆ ಕಳೆದುಹೋದರೆ ಸಾವಿಗು ಅವಮಾನಿಸಿದಂತೆ.
ಲೋಕೋ ಭಿನ್ನ ರುಚಿಃ. ಎಲ್ಲರನ್ನೂ ಸಮಾಧಾನಿಸಲು ಜನಾರ್ಧನನಿಗು ಸಾಧ್ಯವಿಲ್ಲ. ಹಾಗಾಗಿ ಹಿಡಿದ ಓದು ಬರಹದಲ್ಲಿ ಪೂರ್ಣತೆ ಹೊಂದಲು, ಕೈಗೂಡಿದ ವೃತ್ತಿ ಸೇವೆಗಳಲ್ಲಿ ಅನುಭವಿಯಾಗುತ್ತಾ ಅಗಣಿತ ಮಾನ್ಯರಾಗಲು ಅವರಿವರ ಮಾತುಕತೆಗೆ ಗಮನ ಕೊಡದೆ ತಾನಾಯಿತು ತನ್ನ ಕಾರ್ಯವಾಯಿತು ಎಂದು ಸಾಧನೆಯ ಶಿಖರವೇರಿದರೆ ಅಣಕವಾಡಿದವರು ಅಡಗುವರು ನಗಾಡಿದವರು ನಗಣ್ಯವಾಗುವರು.
ಟಿ.ಪಿ.ಉಮೇಶ್
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು
ತುಪ್ಪದಹಳ್ಳಿ, ಹೊಳಲ್ಕೆರೆ .ತಾ.
9008461178