ಆ.15 ರಂದು ಸ್ವಾತಂತ್ರ್ಯ ದಿನಾಚರಣೆ: ಸಚಿವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಸಂಭವ
1 min read ಆಗಸ್ಟ್ 13: ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರಾದ ಬಿ.ಶ್ರೀರಾಮುಲು ಅವರು ಕಳೆದ 5 ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ದೃಢವಾದ ಹಿನ್ನಲೆಯಲ್ಲಿ ಬೆಂಗಳೂರು ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಅವರು ಧ್ವಜಾರೋಹಣ ಮಾಡುವ ಲಕ್ಷಣಗಳು ಹೆಚ್ಚಾಗಿದೆ ಎಂಬುದು ತಿಳಿದು ಬಂದಿದೆ.
ಜಿಲ್ಲಾಡಳಿತದ ವತಿಯಿಂದ ಆಗಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ 74ನೇ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಯೋಜಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ರಾಷ್ಟ್ರ ಧ್ವಜಾರೋಹಣ ಮತ್ತು ಸ್ವಾತಂತ್ರ್ಯೋತ್ಸವ ಸಂದೇಶ ನೀಡುವರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ಸಂಸದ ಎ.ನಾರಾಯಣಸ್ವಾಮಿ, ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್, ಹೊಳಲ್ಕೆರೆ ಶಾಸಕ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಎಂ.ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹಿರಿಯೂರು ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.