ನನ್ನಿಂದಲೇ ಸಿಎಂ ಆಗಿದ್ದ ಯಡಿಯೂರಪ್ಪ,ನನಗೆ ದ್ರೋಹ ಬಗೆದರು- ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹೇಳಿಕೆ.
1 min read
ನನ್ನಿಂದಲೇ ಸಿಎಂ ಆಗಿದ್ದ ಯಡಿಯೂರಪ್ಪ,ನನಗೆ ದ್ರೋಹ ಬಗೆದರು- ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹೇಳಿಕೆ.
ಚಿತ್ರದುರ್ಗ ಹೊಯ್ಸಳ ಸುದ್ದಿ:
ಹೊಸದುರ್ಗ:
2008 ರಲ್ಲಿ ಪ್ರಥಮ ಬಾರಿಗೆ ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಾಗ, ಬಿಜೆಪಿ ಸರ್ಕಾರ ರಚನೆ ಮಾಡಲು ಶಾಸಕರ ಸಂಖ್ಯೆ ಬಲ ಕಡಿಮೆ ಇದ್ದಂತಹ ಸಂದರ್ಭದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ನನ್ನ ಪಾತ್ರ ಬಹಳ ಮುಖ್ಯವಾಗಿತ್ತು. ನನ್ನಿಂದ ಮುಖ್ಯಮಂತ್ರಿಯಾದ ವ್ಯಕ್ತಿ ನನಗೆ ದ್ರೋಹ ಬಗೆದಿದ್ದಾರೆ. ಈ ಈ ಮಾತನ್ನು ನೂರು ಬಾರಿ ಎದೆ ತಟ್ಟಿಕೊಂಡು ಹೇಳುವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ರಾಧಾಕೃಷ್ಣ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ʼಗೂಳಿಹಟ್ಟಿ ಶೇಖರ್ ಅವರಿಗೆ 2008 ರಿಂದಲೂ ಬೆಂಬಲಕ್ಕೆ ನಿಂತು ಶ್ರಮಿಸಿದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಪುನರ್ ಸಮ್ಮಿಲನ ಸಭೆʼ ನೇತೃತ್ವ ವಹಿಸಿ ಮಾತನಾಡಿದರು.
ನಾನು ಮಂತ್ರಿಯಾದ ಅವಧಿಯಲ್ಲಿ ಒಬ್ಬ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸರ್ಕಾರ ರಚನೆ ಮಾಡಲು ಮೊದಲ ಅವಧಿಯಲ್ಲಿ ಅವರ ಸಮುದಾಯದ ಕೆಲವು ಶಾಸಕರು ಅವರಿಗೆ ಸಹಕಾರ ಕೊಡಲಿಲ್ಲ. ಆಪರೇಷನ್ ನಡೆದಾಗ ಅವರ ಸ್ವಜಾತಿಯವರು ರಾಜೀನಾಮೆ ನೀಡಿ, ಬಿಜೆಪಿ ಸೇರಿದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಹಿಂದುಳಿದ ವರ್ಗದವರು ಬೇಕು ಎಂದು ವ್ಯಂಗ್ಯವಾಡಿದರು.
ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ದೇವಿಗೆರೆ ಕಾರ್ಯಕ್ರಮವೊಂದರಲ್ಲಿ ಎಸ್.ಲಿಂಗಮೂರ್ತಿ ಅವರು, ಹೊಸದುರ್ಗ ವಿಧಾನಸಭಾ ಕ್ಷೇತ್ರ ಸಾಮಾನ್ಯರಿಗಿದೆ. ಪಕ್ಕದ ಕ್ಷೇತ್ರ (ಹೊಳಲ್ಕೆರೆ) ಮೀಸಲು ಕ್ಷೇತ್ರವಿದೆ, ಅಲ್ಲಿ ಸ್ಪರ್ಧಿಸಿ ಎಂದು ಅವಮಾನ ಮಾಡಿದ್ದರು. ಆಗ ಧೃತಿಗೆಡದೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡು ಪಕ್ಷದ ಅಭ್ಯರ್ಥಿಗಳಿದ್ದಾರೆ. ಕಾರ್ಯಕರ್ತರು ಸೂಚಿಸಿದ ವ್ಯಕ್ತಿಗೆ ಅಥವಾ ತಾವು ಸೂಚಿಸಿದ ವ್ಯಕ್ತಿಗೆ ಎಲ್ಲರೂ ಸಹಕಾರ ನೀಡೋಣ. ಮತ್ತೋಮ್ಮೆ ಸಭೆ ಕರೆದು, ನಮ್ಮ ಬೆಂಬಲ ಯಾರಿಗೆ ಎಂಬುದನ್ನು ನಿರ್ಧರಿಸೋಣ. ಇನ್ಮುಂದೆ ಹೊಸದುರ್ಗದಲ್ಲೆ ಇರುತ್ತೇನೆ. ತಾ.ಪಂ ಮತ್ತು ಜಿ.ಪಂ ಚುನಾವಣೆಗಳನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಎದುರಿಸೋಣ, ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ನಿಶ್ಚಿತ. ಕಾರ್ಯಕರ್ತರಿಗೆ ಯಾವುದೇ ದೌರ್ಜನ್ಯವಾದರೂ ಸದಾ ನಿಮ್ಮ ಪರವಾಗಿರುತ್ತೇನೆ. ಈ ಬಗ್ಗೆ ಯಾರಿಗೂ ಗೊಂದಲಬೇಡ ಎಂದು ಸ್ಪಷ್ಟನೆ ನೀಡಿದರು.
ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಕೇವಲ 30 ರಿಂದ 50.ಸಾವಿರ ಮತಗಳ ಅಂತರದಲ್ಲಿ ಮಾತ್ರ ಗೆಲುವು ಸಾಧಿಸಬಹುದು. ಗೂಳಿಹಟ್ಟಿ ಶೇಖರ್ ಬೆಂಬಲಿಗರ ಸಹಕಾರವೂ ಮುಖ್ಯವಾಗಿದೆ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕೊನೆ ಸಮಯದಲ್ಲಿ ನೀಡಿದ ಹೇಳಿಕೆಯಿಂದ ಒಬ್ಬ ಅಭ್ಯರ್ಥಿಗೆ 30 ಸಾವಿರ ಮತಗಳು ಶಿಫ್ಟ್ ಆದವು. ಒಟ್ಟು ಗೂಳಿಹಟ್ಟಿ ಶೇಖರ್ ಮತಗಳು 40 ಸಾವಿರ ಇವೆ.
ಭದ್ರಾ ನೀರು ಬರುತ್ತಿಲ್ಲ : ತಾಲ್ಲೂಕಿನ ರೈತರು ಹಲವೆಡೆ ಟ್ಯಾಂಕರ್ ನಿಂದ ನೀರು ಹಾಯಿಸುತ್ತಿದ್ದಾರೆ. ಭದ್ರಾಯಿಂದ ಇನ್ನೂ ನೀರು ಬಂದಿಲ್ಲ. ಜನರಿಗೆ ನೀರಿನ ಅವಶ್ಯಕತೆ ಇರುವುದು ಈ ಸಮಯದಲ್ಲಿ. ಆ ಭಾಗದಲ್ಲೇ ನೀರಿಲ್ಲ, ಅಲ್ಲಿನ ಜನ ನೀರು ನೀಡಲು ಒಪ್ಪುತ್ತಾರಾ?. ಅದರ ಬದಲು ಇಲ್ಲೆ ಪಕ್ಕದ ವಿವಿ ಸಾಗರದಿಂದ ನೀರು ತರಬಹುದು, ಅದು ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಲೋಕಸಭಾ ಚುನಾವಣೆ ನಂತರ ಪ್ರತಿ ಹಳ್ಳಿಗೂ ಪಾದಾಯಾತ್ರೆ ಮಾಡಿ, ಈ ಬಗ್ಗೆ ಜನರಿಗೆ ಮಾಹಿತಿ ನೀಡುತ್ತೇನೆ ಎಂದರು.