ಕೋವಿಡ್ ವೈರಸ್ ನಿಯಂತ್ರಣಕ್ಕೆ ಬರೋಕೆ ಎಷ್ಟು ಸಮಯ ಬೇಕು, ಆರೋಗ್ಯ ಸಂಸ್ಥೆ ಹೇಳಿದ್ದೇನು.
1 min readಜಿನೀವಾ: ಆಗಸ್ಟ್ 22: ಕೋವಿಡ್-19 ಸಂಕಷ್ಟವನ್ನು ಶತಮಾನಕ್ಕೆ ಒಮ್ಮೆ ಎದುರಾಗುವ ಆರೋಗ್ಯ ಬಿಕ್ಕಟ್ಟು ಎಂದು ವ್ಯಾಖ್ಯಾನಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಸ್ಪ್ಯಾನಿಶ್ ಫ್ಲೂ ಅನ್ನು ನಿಯಂತ್ರಿಸಿದ್ದಕ್ಕೂ ಹೆಚ್ಚು ವೇಗವಾಗಿ ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸಲು ಸಾಧ್ಯವಿದೆ ಎಂದಿದೆ.
ಕೊರೊನಾವೈರಸ್ ಪಿಡುಗನ್ನು ಜಗತ್ತು ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಅಂತ್ಯಗೊಳಿಸಲು ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧನೊಮ್ ಘೆಬ್ರೆಯಿಸಸ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1918ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಶ್‌ನಿಂದಲೂ ವೇಗವಾಗಿ ಈ ವೈರಸ್ ಹರಡಲು ಜಾಗತೀಕರಣ ಅವಕಾಶ ನೀಡಿದೆ. ಆದರೆ ಶತಮಾನದ ಹಿಂದೆ ಇರದ ತಂತ್ರಜ್ಞಾನಗಳು ಈಗ ನಮ್ಮ ಬಳಿ ಇವೆ. ವೈರಸ್ ನಿಯಂತ್ರಣಕ್ಕೆ ಈ ತಂತ್ರಜ್ಞಾನಗಳು ಸಹಕಾರಿಯಾಗಲಿವೆ ಎಂದಿದ್ದಾರೆ.
ಎರಡು ವರ್ಷದೊಳಗೆ ಅಂತ್ಯ
‘ಈ ಪಿಡುಗನ್ನು ಎರಡು ವರ್ಷಗಳ ಒಳಗೆ ಅಂತ್ಯಗೊಳಿಸುವ ವಿಶ್ವಾಸವಿದೆ. ನಮ್ಮ ಪ್ರಯತ್ನಗಳನ್ನು ಒಗ್ಗೂಡಿಸಿದರೆ ಇದು ಸಾಧ್ಯವಿದೆ’ ಎಂದು ಹೇಳಿದ್ದಾರೆ. 1918ರಲ್ಲಿ ವ್ಯಾಪಿಸಿದ್ದ ಮಾರಣಾಂತಿಕ ಫ್ಲೂಗಿಂತಲೂ ತ್ವರಿತವಾಗಿ ಲಭ್ಯವಿರುವ ಸಲಕರಣೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ನಾವಲ್ ಕೊರೊನಾ ವೈರಸ್ ಅನ್ನು ನಿಯಂತ್ರಿಸಬಹುದಾಗಿದೆ ಎಂದಿದ್ದಾರೆ.
ಈಗ ಹೆಚ್ಚು ತಂತ್ರಜ್ಞಾನವಿದೆ
ಆದರೆ ಜಗತ್ತು ಆಗಿನ ಸಂದರ್ಭಕ್ಕಿಂತಲೂ ಉತ್ತಮ ತಂತ್ರಜ್ಞಾನದ ಸೌಲಭ್ಯ ಕೂಡ ಹೊಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಲಭ್ಯವಿರುವ ತಂತ್ರಜ್ಞಾನಗಳು, ಲಸಿಕೆಯಂತಹ ಹೆಚ್ಚುವರಿ ಸವಲತ್ತುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಮೂಲಕ ನಾವು 1918ರ ಫ್ಲೂಗಿಂತಲೂ ಬೇಗನೆ ಕೊರೊನಾ ವೈರಸ್‌ಅನ್ನು ಅಂತ್ಯಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.