ಮಾಲೀಕನ ಕೋಪಕ್ಕೆ ಗ್ರಾಹಕ ಬಲಿ. ಏಕೆ ಗೊತ್ತೆ ಮಿಸ್ ಮಾಡದೆ ಓದಿ?
1 min readಚಿಕ್ಕಬಳ್ಳಾಪುರ: ಅಂಗಡಿ ಮುಂದೆ ಎಂಜಲು ಉಗಿದ ಗ್ರಾಹಕನನ್ನು ಮಾಲೀಕನೇ ಚಾಕುವಿನಿಂದ ಮನಸೋಇಚ್ಛೆ ಇರಿದು ಕೊಂದ ಘಟನೆ ಚಿಂತಾಮಣಿ ತಾಲೂಕು ಉಲಪ್ಪನಹಳ್ಳಿಯಲ್ಲಿ ಸಂಭವಿಸಿದೆ.
ಉಲ್ಲಪನಹಳ್ಳಿಯ ಮುನಿಕೃಷ್ಣ (24) ಕೊಲೆಯಾದ ದುರ್ದೈವಿ, ಅಂಗಡಿ ಮಾಲೀಕ 26 ವರ್ಷದ ಚೇತನ್ ಆರೋಪಿ. ಪ್ರತಿದಿನ ಚೇತನ್ನ ಅಂಗಡಿಯಲ್ಲಿ ಮುನಿಕೃಷ್ಣ ಟೀ ಕುಡಿಯುತ್ತಿದ್ದ. ಅದೇ ರೀತಿ ಬುಧವಾರ ಬೆಳಗ್ಗೆಯೂ ಟೀ ಕುಡಿಯಲು ಬಂದಿದ್ದ. ಈ ವೇಳೆ ಪಾನ್ ಪರಾಗ್ ತೆಗೆದುಕೊಂಡ ಯುವಕ ಅಂಗಡಿ ಮುಂದೆಯೇ ಎಂಜಲು ಉಗಿದ. ಇದನ್ನು ಕಂಡು ಗರಂ ಆದ ಚೇತನ್, ಮುನಿಕೃಷ್ಣನನ್ನು ತರಾಟೆಗೆ ತೆಗೆದುಕೊಂಡ. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಇದನ್ನೂ ಓದಿರಿ ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!
ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಕುಪಿತಗೊಂಡ ಚೇತನ್, ಚಾಕುವಿನಿಂದ ಗ್ರಾಹಕ ಮುನಿಕೃಷ್ಣನ ಹೊಟ್ಟೆ, ಎದೆ ಭಾಗಕ್ಕೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಮುನಿಕೃಷ್ಣನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದ.
ಈ ಘಟನೆಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತೆಯಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.