May 2, 2024

Chitradurga hoysala

Kannada news portal

ಕೋವಿಡ್-19 ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಡಿಸಿ ಸೂಚನೆ

1 min read

ಚಿತ್ರದುರ್ಗ,ಸೆಪ್ಟೆಂಬರ್25:
ರಾಜ್ಯಾದ್ಯಂತ ಆನ್‍ಲಾಕ್ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿಯೂ ಸಹ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುತ್ತವೆ. ಈ ಹಿನ್ನಲೆಯಲ್ಲಿ ಸೋಂಕಿನಿಂದ ಉಂಟಾಗುತ್ತಿರುವ ಜೀವಹಾನಿಯನ್ನು ತಪ್ಪಿಸಲು ಜಿಲ್ಲೆಯ ಜನತೆ ಕೆಲವು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಬರುವುದು, ಗುಂಪು ಸೇರುವುದನ್ನು ನಿರ್ಬಂಧಿಸಿದೆ. ಅಂಗಡಿ ಮುಂಗಟ್ಟುಗಳ ಮುಂದೆ ಅನಗತ್ಯವಾಗಿ ಗುಂಪು ಸೇರತಕ್ಕದ್ದಲ್ಲ. 60 ವರ್ಷ ಮೇಲ್ಪಟ್ಟವರು ಅನಗತ್ಯವಾಗಿ ಮನೆಯಿಂದ ಹೊರಬರುವಂತಿಲ್ಲ ಮತ್ತು 10 ವರ್ಷ ಒಳಗಿನ ಮಕ್ಕಳನ್ನು ಹೊರಕರೆತರುವಂತಿಲ್ಲ. ಪ್ರಸ್ತುತ ಮಳೆಗಾಲವಾಗಿದ್ದು, ವಾತಾವರಣವು ಶೀತದಿಂದ ಕೂಡಿರುವುದರಿಂದ ಬಿ.ಪಿ, ಶುಗರ್, ಅಸ್ತಮಾ, ಹೃದಯ, ಕಿಡ್ನಿ ಸಂಬಂಧಿತ ರೋಗಗಳು, ಇನ್ನಿತರೆ ಗಂಭೀರ ಆರೋಗ್ಯ ಸಮಸ್ಯೆಗಳುಳ್ಳವರು ಸೋಂಕಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆ ಇರುವುದರಿಂದ ಅಂತಹವರು ಅನಗತ್ಯವಾಗಿ ಸುತ್ತಾಡದೆ ಅತ್ಯಂತ ಸುರಕ್ಷತೆ, ಎಚ್ಚರಿಕೆಯಿಂದ ಇರುವುದು. ಜ್ವರ, ಕೆಮ್ಮು, ನೆಗಡಿ, ಗಂಟಲು ಸಮಸ್ಯೆ ಇನ್ನಿತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸುವುದು ಹಾಗೂ ಸ್ವಯಂಪ್ರೇರಿತರಾಗಿ ಕುಟುಂಬ ಸದಸ್ಯರಿಂದ, ಪ್ರಮುಖವಾಗಿ ವಯೋವೃದ್ಧರು ಮತ್ತು ಚಿಕ್ಕಮಕ್ಕಳಿಂದ ಅಂತರವನ್ನು ಕಾಪಾಡಿಕೊಳ್ಳುವುದು ಇದರಿಂದ ಸೋಂಕು ಹಬ್ಬುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ.
ಸಾರ್ವಜನಿಕ ಮತ್ತು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಕೆಮ್ಮುವಾಗಿ, ಸೀನುವಾಗಿ ವೈರಾಣು ಬೇರೆಯವರಿಗೆ ಹರಡುವುದು ತಪ್ಪುತ್ತದೆ. ಸೋಂಕು ಹರಡುವುದನ್ನು ತಪ್ಪಿಸಲು ಸಾರ್ವಜನಿಕರು ಒಬ್ಬರಿಂದ ಒಬ್ಬರು ಕನಿಷ್ಟ 6 ಅಡಿ ಅಂತರವನ್ನು ಕಡ್ಡಾಯವಾಗಿ ಪಾಲಿಸುವುದು.
ವೈರಾಣು ಪ್ರಮುಖವಾಗಿ ಬಾಯಿ ಮತ್ತು ಮೂಗಿನ ಮೂಲಕ ಪ್ರವೇಶಿಸುವುದರಿಂದ ಮಾಸ್ಕ್ ಬಳಸುವುದು, ಮೂಗು, ಬಾಯಿ, ಕಣ್ಣು, ಕಿವಿಯನ್ನು ಮುಟ್ಟದಂತೆ ಜಾಗೃತೆ ವಹಿಸುವುದು. ಇದಲ್ಲದೆ ಸಾರ್ವಜನಿಕರು ಸೋಪಿನಿಂದ ಕೈತೊಳೆಯುವುದನ್ನು ರೂಢಿಸಿಕೊಳ್ಳುವುದು. ಅಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್‍ನಿಂದ ಆಗಾಗ ಕೈಯನ್ನು ಶುದ್ದಗೊಳಿಸಿಕೊಳ್ಳುವುದು. ಇದರಿಂದ ವೈರಾಣು ದೇಹ ಪ್ರವೇಶಿಸದಂತೆ ತಡೆಯಬಹುದು.
ಮನೆಯಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳು ಹಾಗೂ ಅವರ ಸಮೀಪದ ಪ್ರಾಥಮಿಕ ಸಂಪರ್ಕಿತರು ಕೂಡಲೇ ಕೋವಿಡ್ ಪರೀಕ್ಷೆಗೆ ಒಳಗಾಗುವುದು.
ಸಾರ್ವಜನಿಕರು ಕೋವಿಡ್ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ತುರ್ತಾಗಿ ಪರೀಕ್ಷೆಗೆ ಒಳಪಟ್ಟು, ಐಸೊಲೇಷನ್‍ನಲ್ಲಿ ಇದ್ದು, ಚಿಕಿತ್ಸೆ ಪಡೆದಲ್ಲಿ ಕೋವಿಡ್‍ನಿಂದ ಬೇಗ ಗುಣಮುಖರಾಗಬಹುದಾಗಿರುತ್ತದೆ. ಅಲ್ಲದೆ ಪ್ರಾಣಹಾನಿಯನ್ನು ತಡೆಗಟ್ಟಬಹುದಾಗಿರುತ್ತದೆ. ಆದುದರಿಂದ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು.

ಸರ್ಕಾರದ ನಿಯಮಾಳಿಗಳಂತೆ ಖಾಸಗಿ ಲ್ಯಾಬ್‍ಗಳಲ್ಲಿಯೂ ಸಹ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *