ಅಕ್ರಮ ಸಕ್ರಮ ಯೋಜನೆ: ಹಣ ಪಾವತಿಸಿದ ಮೂಲ ರಸೀದಿಯೊಂದಿಗೆ ಬೆವಿಕಂ ಕಚೇರಿ ಸಂಪರ್ಕಿಸಲು ಮನವಿ
1 min readಚಿತ್ರದುರ್ಗ, ಅಕ್ಟೋಬರ್07:
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆವಿಕಂ) ಹಿರಿಯೂರು ವಿಭಾಗದ ವ್ಯಾಪಿಯ ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕಿನಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಹಣಪಾವತಿಸಿ, ಸ್ಥಳ ಸಿಗದೇ ಇರುವ ಅರ್ಜಿದಾರರ ವಿವರಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಬೆವಿಕಂ ಹಿರಿಯೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಬೆವಿಕಂ ಹಿರಿಯೂರು ವಿಭಾಗದ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವ್ಯಾಪಿಯಲ್ಲಿ ಬರುವ ಗ್ರಾಹಕರು ಬೆವಿಕಂಗೆ ಹಣ ಪಾವತಿಸಿ ಆರ್.ಆರ್. ಸಂಖ್ಯೆಗಳನ್ನು ಪಡೆದಿದ್ದು, ಕಂಪನಿ ನಿಯಮಾನುಸಾರ ಗ್ರಾಹಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಶಾಖಾಧಿಕಾರಿಗಳು ಸ್ಥಳ ಪರಿಶೀಲನೆಗೆ ಹೋದಾಗ ಅರ್ಜಿದಾರರ ವಿಳಾಸವು ಪತ್ತೆಯಾಗದೆ ಇರುವುದು, ಸ್ಥಳ ಬದಲಾವಣೆಯಾಗಿದ್ದರೆ, ಕೊಳವೆಬಾವಿ ಬತ್ತಿ ಹೋಗಿದ್ದರೆ, ಗ್ರಾಹಕರು ಊರನ್ನು ತೊರೆದಿದ್ದರೆ ಅಥವಾ ಗ್ರಾಹಕರು ಮಾಹಿತಿಯು ಲಭ್ಯವಿಲ್ಲದೆ ಇರುವುದರಿಂದ ನಿಯಮಾನುಸಾರ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗಿರುವುದಿಲ್ಲ.
ಸಂಬಂಧಪಟ್ಟ ಗ್ರಾಹಕರು 15 ದಿನಗಳೊಳಗಾಗಿ ಹಣ ಪಾವತಿಸಿದ ಮೂಲ ರಸೀದಿಯೊಂದಿಗೆ, ಸರ್ವೆ ನಂಬರ್‍ನ ನಿಖರವಾದ ಮಾಹಿತಿಯೊಂದಿಗೆ ಮತ್ತು ಮೂಲ ಗುರುತಿನ ಚೀಟಿಯೊಂದಿಗೆ ಸಂಬಂಧಿಸಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಬೆವಿಕಂ ಉಪವಿಭಾಗ ಅಥವಾ ಶಾಖಾಧಿಕಾರಿ ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಇಲ್ಲವಾದಲ್ಲಿ ಅರ್ಜಿದಾರರು ಪಾವತಿಸಿರುವ ಹಣವನ್ನು ಬೆವಿಕಂನಿಂದ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲು ಅವಕಾಶವಿರುವುದಿಲ್ಲ ಎಂದು ಬೆವಿಕಂ ಹಿರಿಯೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.