ವಾಣಿ ಸಕ್ಕರೆ ಕಾರ್ಖಾನೆ ಆರಂಭದಿಂದ ಯುವಕರಿಗೆ ಉದ್ಯೋಗ ಸೃಷ್ಟಿ: ಕೆ.ಎಸ್.ನವೀನ್
1 min readಚಿತ್ರದುರ್ಗ: ಜಿಲ್ಲೆಯ ಏಕೈಕ ಸರ್ಕಾರಿ ಸ್ವಾಮ್ಯದ ಬೃಹತ್ ವಾಣಿ ಸಕ್ಕರೆ ಕಾರ್ಖಾನೆ ರೈತರ ಜೀವನಾಡಿಯಾಗಿದ್ದು ಈ ಕಾರ್ಖಾನೆ ಮಾರಾಟ ಮಾಡದೆ ಪುನಶ್ಚೇತನ ಕಾರ್ಯ ಮಾಡಿಸುವ ಮೂಲಕ ಸಾವಿರಾರು ಜನರಿಗೆ ರೈತರಿಗೆ ಅನುಕೂಲ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಭರವಸೆ ನೀಡಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಖಾನೆ ಆರಂಭಿಸುವುದರಿಂದ 500 ಜನ ಕಾರ್ಮಿಕರಿಗೆ ಕೆಲಸ ದೊರೆಯಲಿದೆ. ಅಲ್ಲದೆ ಪ್ರತ್ಯಕ್ಷ-ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಚಿತ್ರದುರ್ಗ ಜಿಲ್ಲೆಗೆ ರಾಜಯೋಗ ಕೂಡಿಬಂದಿದ್ದು ರಾಮರಾಜ್ಯದ ಕನಸು ನನಸಾಗುವ ದಿನಗಳು ದೂರವಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಗೆ ನೀರು ಹರಿದು ಬರಲಿದೆ. ವಿವಿ ಸಾಗರಕ್ಕೂ ಹೆಚ್ಚಿನ ನೀರು ಪ್ರತಿ ವರ್ಷ ಶೇಖರಣೆ ಆಗುವುದರಿಂದ ರೈತರು ಮತ್ತೊಮ್ಮೆ ಕಬ್ಬು ಬೆಳೆಯಲು ಮುಂದಾಗುತ್ತಾರೆ. ಇದರಿಂದಾಗಿ ಕಾರ್ಖಾನೆ ಪುನಶ್ಚೇತನ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗುವಂತೆ ಸಕ್ಕರೆ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುತ್ತದೆ ಎಂದು ಹೇಳಿದರು.
ಇದರ ಜೊತೆಯಲ್ಲಿ ಬಿಜೆಪಿ ಸರ್ಕಾರ ನುಡಿದಂತೆ ನಡೆಯುತ್ತಿದೆ. ಭದ್ರಾ ಮೇಲ್ದಂಡೆ ಕಾಮಗಾರಿಗೆ ಚುರುಕು ಮುಟ್ಟಿಸಲಾಗಿದೆ. 7 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಅಜ್ಜಂಪುರದ ರೈಲ್ವೆ ಸಮಸ್ಯೆ ಪೂರ್ಣಗೊಂಡಿದ್ದು ಈಗಾಗಲೇ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಯುತ್ತಿದೆ. ಚಳ್ಳಕೆರೆ-ಮೊಳಕಾಲ್ಮೂರು-ಹಿರಿಯೂರು ಭಾಗದಲ್ಲಿನ ಕೆರೆ, ಕಟ್ಟೆ ಬ್ಯಾರೇಜ್ ಗಳ ಭರ್ತಿ ಮಾಡಲಾಗುತ್ತದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗಕ್ಕೂ ಮುಕ್ತಿ ಕಾಣಿಸುವಂತೆ ಕೇಂದ್ರ ಸರ್ಕಾರದ ಸಚಿವರ ಬಳಿ ಶೀಘ್ರ ನಿಯೋಗ ತೆರಳಲಾಗುತ್ತದೆ. ಜಿಲ್ಲೆಗೆ ಈಗಾಗಲೇ ಮಡಿಕಲ್ ಕಾಲೇಜ್ ನಿರ್ಮಾಣಕ್ಕಾಗಿ 60 ಕೋಟಿ ಬಿಡುಗಡೆಯಾಗಿದೆ. ಚಿತ್ರದುರ್ಗ ನಗರದಲ್ಲಿ ಮದಕರಿ ಥೀಮ್ ಪಾರ್ಕ್ ನಿರ್ಮಾಣ, ಚಂದ್ರವಳ್ಳಿ ಸಮೀಪ ಬಯೋಲಾಜಿಕಲ್ ಪಾರ್ಕ್ ಸೇರಿದಂತೆ ಮತ್ತಿತರ ಕಾರ್ಯಗಳನ್ನು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಖ್ಯಸ್ಥರಾದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಶಾಸಕರು, ಸಂಸದರ ನೇತೃತ್ವದಲ್ಲಿ ನಿಯೋಗ ತೆರಳಿ ಮನವಿ ಮಾಡಲಾಗುತ್ತದೆ ಎಂದು ನವೀನ್ ಹೇಳಿದರು.
ಜಿಲ್ಲಾಧ್ಯಕ್ಷ ಎಂ.ಮುರುಳಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ಜಿಲ್ಲಾ ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಮಲ್ಲಿಕಾರ್ಜುನ್, ಶಿವಣ್ಣಾಚಾರ್, ಸಂಪತ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.