ಆಸ್ಪತ್ರೆಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ: ಜಿ.ಪಂ.ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಸೂಚನೆ
1 min read
ಚಿತ್ರದುರ್ಗ, ನವೆಂಬರ್ 18:
ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳು (ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಸ್ಪತ್ರೆಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ವೈದ್ಯರು ಸಮಯಕ್ಕೆ ಸರಿಯಾಗಿ ಬಾರದಿರುವುದು, ಊಟೋಪಚಾರದ ವ್ಯವಸ್ಥೆ ಸರಿ ಇಲ್ಲದಿರುವುದು ಸೇರಿದಂತೆ ಅನೇಕ ದೂರುಗಳು ಬಂದಿವೆ. ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆಗೆ ಅವಕಾಶವಿದ್ದರೂ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುತ್ತಾರೆ.ಬಡವರು ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಬಡವರ ಹತ್ತಿರ ಸುಲಿಗೆ ಮಾಡಬೇಡಿ ಎಂದು ಅಧ್ಯಕ್ಷರು ಜಿಲ್ಲಾಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಟಿ.ಯೋಗೇಶ ದೂರುಗಳು ಬಂದಿರುವ ವೈದ್ಯರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ಕೋವಿಡ್ ಆಸ್ಪತ್ರೆಯಲ್ಲಿ ಸರಿಯಾದ ಊಟದ ವ್ಯವಸ್ಥೆ ಇಲ್ಲ. ಸೋಂಕಿತರಿಗೆ ಆಕ್ಸಿಜನ ವ್ಯವಸ್ಥೆ ಇಲ್ಲವಾಗಿದೆ. ಕೋವಿಡ್ ಅಂದ ತಕ್ಷಣ ಎಲ್ಲರೂ ಹಿಂದೆ ಸರಿಯುತ್ತಾರೆ. ಜನಸಾಮಾನ್ಯರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಕೋವಿಡ್ ಚಿಕಿತ್ಸೆಗೆ ಉಳ್ಳವರು ಬೇರೆ ಕಡೆಗೆ ಹೋಗುತ್ತಾರೆ. ಬಡವರು ಏನು ಮಾಡಬೇಕು ಎಂದು ಪ್ರಶ್ನಿಸಿದ ಅವರು, ಕೋವಿಡ್-19ಗೆ ಸಂಬಂಧಿಸಿದಂತೆ ಇದುವರೆಗೂ ಎಷ್ಟು ಅನುದಾನ ಬಂದಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಡಿಎಚ್‍ಒಗೆ ಸೂಚಿಸಿದರು.
ಕೋವಿಡ್ ಆಸ್ಪತ್ರೆಗೆ ವೈದ್ಯರು ಬರುತ್ತಿಲ್ಲ, ಕೇವಲ ಶುಶ್ರೂಷಕಿಯರು ಮಾತ್ರ ಬರುತ್ತಾರೆ ಎಂಬ ದೂರಗಳು ಬರುತ್ತಿವೆ. ದಿನಕ್ಕೆ ಎರಡು ಬಾರಿಯಾದರೂ ಬೆಳಿಗ್ಗೆ ಮತ್ತು ಸಾಯಂಕಾಲ ಸಮಯದಲ್ಲಿ ವೈದ್ಯರು ಭೇಟಿ ನೀಡುವಂತೆ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಕೋವಿಡ್ ಸಕ್ರಿಯ ಪ್ರಕರಣಗಳು ಹೆಚ್ಚಾದ ಸಂದರ್ಭದಲ್ಲಿ ತಿಂಗಳುಗಟ್ಟಲೆ ಊಟೋಪಚಾರಕ್ಕಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅನುದಾನ ಖರ್ಚು ಮಾಡಿದ್ದಾರೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಅನುದಾನ ಭರಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಿಎಚ್‍ಒಗೆ ಸೂಚಿಸಿದರು.
ಕೋವಿಡ್ ವರದಿ ವಿಳಂಬ: ನವೆಂಬರ್ 17 ರಿಂದ ವಿದ್ಯಾರ್ಥಿ ನಿಲಯಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಕೋವಿಡ್-19 ಪರೀಕ್ಷೆ ಕಡ್ಡಾಯವಾಗಿದೆ. ಜೊತೆಗೆ ವಿದ್ಯಾರ್ಥಿಗಳ ಪೋಷಕರ ಲಿಖಿತ ಒಪ್ಪಿಗೆ ಪತ್ರ ಬೇಕು. ಕೋವಿಡ್-19 ಪರೀಕ್ಷೆಯ ವರದಿ ಬರಲು ಎರಡು ದಿನಗಳ ಸಮಯ ಬೇಕಾಗಿದೆ ಹಾಗಾಗಿ ಇದುವರೆಗೂ ಯಾವುದೇ ವಿದ್ಯಾರ್ಥಿಯು ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆದಿಲ್ಲ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ ಅಧ್ಯಕ್ಷೆ ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳು ಆರಂಭವಾಗಿರುವುದರಿಂದ ಕೋವಿಡ್-19 ಪರೀಕ್ಷೆಗೆ ಹೆಚ್ಚಿನ ಕಿಟ್ ಕಳುಹಿಸಲು ಪ್ರಸ್ತಾವನೆ ಕಳುಹಿಸಬೇಕು. ಎರಡು-ಮೂರು ದಿನ ತಡಮಾಡದೇ ಶೀಘ್ರದಲ್ಲಿಯೇ ಕೋವಿಡ್ ವರದಿ ನೀಡಬೇಕು ಎಂದು ತಿಳಿಸಿದರು.
ಸಂಪೂರ್ಣ ವರದಿ ನೀಡಿ: ಸಭೆಯಲ್ಲಿ ಚರ್ಚೆಯಾಗುವ ವಿಷಯಗಳಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಯ ಅಧಿಕಾರಿಗಳು ಅನುಪಾಲನಾ ವರದಿಯಲ್ಲಿ ಸಂಪೂರ್ಣವಾದ ವರದಿ ನೀಡಬೇಕು. ಅನುಪಾಲನಾ ವರದಿಯಲ್ಲಿ ಅಪೂರ್ಣ ವರದಿ ನೀಡಬಾರದು ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಿಇಒ ಟಿ.ಯೋಗೇಶ ಸೂಚನೆ ನೀಡಿದರು.
ನ್ಯೂಟ್ರಿಷಿಯನ್ ಗಾರ್ಡ್‍ನ್ ಮಾಡಿ: ಪೋಷಣ್ ಅಭಿಯಾನ ಯೋಜನೆಯಡಿ ನ್ಯೂಟ್ರಿಷಿಯನ್ ಗಾರ್ಡ್‍ನ್ ಮಾಡುವಂತೆ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗೆ ಸಿಇಒ ಸೂಚನೆ ನೀಡಿದರು.
ಪಪ್ಪಾಯಿ, ನೇರಳೆ, ಮಾವು ಸೇರಿದಂತೆ ಹಣ್ಣಿನ ಗಿಡಗಳನ್ನು ಬೆಳೆಯುವ ಮೂಲಕ ಜಿಲ್ಲೆಯಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಾಲೆಗಳು, ಅಂಗನವಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳು, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಉತ್ತಮ ನೀರಿನ ಸೌಲಭ್ಯ ಹಾಗೂ ಜಾಗವಿದೆ. ಈ ಎಲ್ಲ ಕಡೆ ಪೌಷ್ಠಿಕ ಕೈತೋಟ ನಿರ್ಮಾಣ ಆಗಬೇಕು. ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಲಿಖಿತವಾಗಿ ತಮಗೆ ಅಗತ್ಯವಿರುವ ಪೌಷ್ಠಿಕ ಕೈತೋಟ ನಿರ್ಮಾಣಕ್ಕೆ ಅಗತ್ಯವಿರುವ ಸಸಿಗಳ ಬೇಡಿಕೆ ಪಟ್ಟಿ ಸಲ್ಲಿಸುವಂತೆ ಸಿಇಒ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನರಸಿಂಹರಾಜು, ತ್ರಿವೇಣಿ ಜಿ.ಶಿವಪ್ರಸಾದ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.