ಜಿಲ್ಲಾಮಟ್ಟದ ಕಚೇರಿಗಳಲ್ಲಿ ಕೆಂಪು ದೀಪ ಅಳವಡಿಸಿ ಸಾರ್ವಜನಿಕರಿಗೆ ಜಾಗೃತಿ ಏಕೆ ಗೊತ್ತೆ?
1 min readಜಿಲ್ಲಾಮಟ್ಟದ ಕಚೇರಿಗಳಲ್ಲಿ ಕೆಂಪು ದೀಪ ಅಳವಡಿಸಿ ಸಾರ್ವಜನಿಕರಿಗೆ ಜಾಗೃತಿ
***
ಚಿತ್ರದುರ್ಗ,ಫೆಬ್ರುವರಿ23:
ಫೆಬ್ರವರಿ 22ರಂದು ವಿಶ್ವ ಮೆದುಳಿನ ಉರಿಯೂತ ದಿನದ ಅಂಗವಾಗಿ ನಗರದ ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಸರ್ಕಾರಿ ಕಚೇರಿ ಕಟ್ಟಡ ಹಾಗೂ ಆಸ್ಪತ್ರೆಗಳನ್ನು ಕೆಂಪುದೀಪಗಳಿಂದ ಬೆಳಗಿಸಲಾಯಿತು.
ನಗರದ ಜಿಲ್ಲಾಡಳಿತ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಆಸ್ಪತ್ರೆ, ನಗರ ಸಭಾ ಕಾರ್ಯಾಲಯ, ನಗರಾಭಿವೃದ್ಧಿ ಪ್ರಾಧಿಕಾರ, ತಾಲ್ಲೂಕು ಅಧಿಕಾರಿಗಳ ಕಚೇರಿ ಹಾಗೂ ಇನ್ನೂ ಮುಂತಾದ ಜಿಲ್ಲಾ ಮಟ್ಟದ ಕಚೇರಿಗಳನ್ನು ಕೆಂಪು ದೀಪಗಳನ್ನು ಅಳವಡಿಸುವುದರ ಮೂಲಕ ವಿಶ್ವ ಮೆದುಳಿನ ಉರಿಯೂತ ದಿನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಶೇ.78 ರಷ್ಟು ಜನರಿಗೆ ಮೆದುಳಿನ ಉರಿಯೂತ ರೋಗದ ಬಗ್ಗೆ ತಿಳಿಯದಿರುವ ಪ್ರಯುಕ್ತ ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷ ಫೆಬ್ರುವರಿ 22 ರಂದು ವಿಶ್ವ ಮೆದುಳಿನ ಉರಿಯೂತ ದಿನವನ್ನಾಗಿ ಆಚರಿಸಲಾಗುತ್ತಿದೆ. ಮೆದುಳಿನ ಸೋಂಕಿನಿಂದ ಬಳಲಿದವರು ಮತ್ತು ಅವರ ಕುಟುಂಬದವರು ಒಗ್ಗೂಡಿ ಈ ರೋಗದ ಬಗ್ಗೆ ಬೆಳಕು ಚೆಲ್ಲಲು ಮತ್ತು ಲಕ್ಷಾಂತರ ಪೀಡಿತರನ್ನು ಗೌರವಿಸಲೆಂದು ಜಿಲ್ಲಾಮಟ್ಟದ ಕಚೇರಿಗಳನ್ನು ಕೆಂಪುದೀಪಗಳಿಂದ ಬೆಳಗಿಸಲಾಯಿತು.
ಎಇಎಸ್‍ಗೆ ಅನೇಕ ರೀತಿಯ ವಿಷಾಣುಗಳು ಕಾರಣವಾಗಿವೆ. ಅದರಲ್ಲಿ ಮೆದುಳು ಜ್ವರ ಎಂಬ ಕಾಯಿಲೆಯು ಸಹ ಮೆದುಳಿನ ಉರಿಯೂತವನ್ನು ಉಂಟು ಮಾಡಬಹುದಾಗಿದೆ. ಮೆದುಳು ಜ್ವರವು ಜಪಾನೀಸ್ ಎನ್ಸೆಫಾಲಿಟಿಸ್ ಕಾಯಿಲೆಯ ಕ್ಯುಲೆಕ್ಸ್ ವಿಷ್ಣಯಿ ಎಂಬ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ. ಈ ಕಾಯಿಲೆಯು ವೈರಾಣುವಿನ ಸೋಂಕನ್ನು ಹೊಂದಿದ ಹಂದಿ, ಜಾನುವಾರುಗಳನ್ನು ಕಚ್ಚಿದಾಗ ಈ ವೈರಾಣುಗಳು ಸೊಳ್ಳೆಗಳ ದೇಹವನ್ನು ಸೇರಿ ಒಂಬತ್ತರಿಂದ ಹನ್ನೆರಡು ದಿನಗಳಲ್ಲಿ ಅಭಿವೃದ್ಧಿ ಹೊಂದಿ ನಂತರ ಆಕಸ್ಮಿಕವಾಗಿ ಮನುಷ್ಯರನ್ನು ಕಚ್ಚಿದಾಗ ಮನುಷ್ಯರಲ್ಲಿ ತೀವ್ರತರ ಜ್ವರ, ಪ್ರಜ್ಞೆ ಕಳೆದುಕೊಳ್ಳುವುದು ಕತ್ತಿನ ಜಿಗಿತ, ತಲೆ ನೋವು ಮುಂತಾದ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು, ಹೀಗಾದ ಮೂರು ದಿನದೊಳಗೆ ಆಸ್ಪತ್ರೆಗೆ ದಾಖಲಾದರೆ ಮರಣ ತಪ್ಪಿಸಬಹುದು. ಎಇಎಸ್ ಎನ್ಸೆಫಾಲಿಟಿಸ್‍ಗೆ ತುತ್ತಾದ 250 ಜನರಲ್ಲಿ ಒಬ್ಬರು ಮರಣ ಹೊಂದುತ್ತಾರೆ.
ಮೆದುಳು ಜ್ವರವನ್ನು ತಡೆಗಟ್ಟಲು ವಹಿಸ ಬೇಕಾದ ಮುನ್ನೆಚ್ಚರಿಕೆಗಳು: ರೋಗ ಲಕ್ಷಣಗಳು ಕಂಡು ಬಂದಲ್ಲಿ ತಡಮಾಡದೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆಯುವುದು. ಹಂದಿಗಳನ್ನು ಜನರ ವಾಸ ಸ್ಥಳದಿಂದ ಕನಿಷ್ಠ ಪಕ್ಷ ಮೂರು ಕಿಲೋ ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕು. ಹಂದಿ ಗೂಡುಗಳಿಗೆ ಕೀಟನಾಶಕ ಹಾಗೂ ಸೊಳ್ಳೆನಿರೋಧಕಗಳನ್ನು ಅಳವಡಿಸುವುದು. ಮನೆಯ ಹೊರಗಡೆ ಅಥವಾ ಜಾನುವಾರುಗಳ ಸಂಪರ್ಕಕ್ಕೆ ಹತ್ತಿರವಾಗಿ ಮಲಗಿಸುವುದನ್ನು ತಪ್ಪಿಸಬೇಕು. ಮಲಗುವಾಗ ತಪ್ಪದೇ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು. ಬೇವು ಮಿಶ್ರಿತ ಗೊಬ್ಬರವನ್ನು ಭತ್ತದ ಗದ್ದೆಗಳಲ್ಲಿ ಬಳಸುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಗಟ್ಟಬಹುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.