May 12, 2024

Chitradurga hoysala

Kannada news portal

ಜಿಲ್ಲೆಯ ಎಲ್ಲಾ ಗ್ರಂಥಾಲಯಗಳಿಗೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಿ: ಡಿಸಿ ಕವಿತಾ ಎಸ್.ಮನ್ನಿಕೇರಿ

1 min read

ಚಿತ್ರದುರ್ಗ, ಮಾರ್ಚ್10:
 ಜಿಲ್ಲೆಯ ಎಲ್ಲಾ ಗ್ರಂಥಾಲಯಗಳಿಗೆ ಕಡ್ಡಾಯವಾಗಿ ಕುಡಿಯುವ ನೀರು ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಓದುಗರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮುಖ್ಯ ಗ್ರಂಥಾಲಯಾಧಿಕಾರಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ 2021-22ನೇ ಸಾಲಿನ ಅಯ-ವ್ಯಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಓದುಗರ ಅಭಿರುಚಿಗೆ ಅನುಗುಣವಾಗಿ, ಬೇಡಿಕೆಗೆ ತಕ್ಕಂತೆ ಸ್ಪರ್ಧಾತ್ಮಕ ಪುಸ್ತಕಗಳನ್ನು ಖರೀದಿ ಮಾಡಬೇಕು ಎಂದು ಸೂಚನೆ ನೀಡಿದ ಅವರು, ಜಿಲ್ಲಾ ಕೇಂದ್ರ ಗ್ರಂಥಾಲಯದ ನೂತನ ಕಚೇರಿಯ ಕಟ್ಟಡವು ಮುಗಿಯುವ ಹಂತದಲ್ಲಿದ್ದು, ಹಸ್ತಾಂತರಗೊಂಡ ನಂತರ ನಿಯಮಾನುಸಾರ ಆದಷ್ಟು ಶೀಘ್ರವಾಗಿ ಪ್ರಾರಂಭ ಮಾಡಬೇಕು ಎಂದರು.
 ಹೊಸದುರ್ಗದ ಶಾಖಾ ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡಲು ನಿವೇಶನದ ಅವಶ್ಯಕತೆ ಇದ್ದು, ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿ ಆದಷ್ಟು ಬೇಗ ನಿವೇಶನ ಒದಗಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.  
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್. ತಿಪ್ಪೇಸ್ವಾಮಿ ಅವರು, ಜಿಲ್ಲೆಯ ಎಲ್ಲಾ ಗ್ರಂಥಾಲಯಗಳಿಗೂ ಕುಡಿಯುವ ನೀರು ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ಆದಾಗ್ಯೂ ಕುಡಿಯುವ ನೀರು ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಪುಸ್ತಕಗಳನ್ನು ಹಾಗೂ ಹೆಸರಾಂತ ಲೇಖಕರ ಪುಸ್ತಕಗಳನ್ನು ಗ್ರಂಥಾಲಯ ಪ್ರಾಧಿಕಾರದ ಕೋಟಾದಡಿ ಓದುಗರ ಬೇಡಿಕೆ ಅನ್ವಯ, ಇತರೆ ಹೆಸರಾಂತ ಪ್ರಕಟಣೆಯ ಪುಸ್ತಕಗಳು, ಅಧಿಕಾರಿಗಳ ಸಲಹೆ ಮೇರೆಗೆ ಐಎಎಸ್, ಕೆ.ಎ.ಎಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ಖರೀದಿ ಮಾಡಿ ಶಾಖಾ ಗ್ರಂಥಾಲಯ, ಸ್ಪರ್ಧಾತ್ಮಕ ಅಧ್ಯಯನ ಕೇಂದ್ರಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡುವ ಕಾರ್ಯ ನಡೆಯುತ್ತಿದೆ ಎಂದರು.
2021-22ನೇ ಸಾಲಿನ ಚಿತ್ರದುರ್ಗ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದಲ್ಲಿ ಒಟ್ಟು 90 ಲಕ್ಷ ರೂ. ಅಂದಾಜು ಆದಾಯ ಆಗುವ ನಿರೀಕ್ಷೆ ಇದ್ದು, ಇದರಲ್ಲಿ ಅಂದಾಜು ರೂ. 68 ಲಕ್ಷ ವ್ಯಯ ಆಗುವ ನಿರೀಕ್ಷೆ ಇದೆ ಎಂದು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಸಭೆಯು ಒಪ್ಪಿಗೆ ನೀಡಿತು.
ಸಂಚಾರಿ ಗ್ರಂಥಾಲಯ ಪ್ರಾರಂಭಕ್ಕೆ ಕ್ರಮ: ಚಿತ್ರದುರ್ಗ ಜಿಲ್ಲಾ ಗ್ರಂಥಾಲಯ ವ್ಯಾಪ್ತಿಯಲ್ಲಿ ಸಂಚಾರಿ ಗ್ರಂಥಾಲಯ ಪ್ರಾರಂಭ ಮಾಡಲು ಒಂದು ಸುಸಜ್ಜಿತವಾದ ವಾಹನ ಸೌಕರ್ಯವನ್ನು ನೀಡುವಂತೆ ಕೆಎಸ್‍ಆರ್‍ಟಿಎಸ್ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ನೀಡಿದರು.
ಡಿಜಿಟಲ್ ಗ್ರಂಥಾಲಯಕ್ಕೆ 39,375 ಸದಸ್ಯರು ನೊಂದಣಿ: ಡಿಜಿಟಲ್ ಗ್ರಂಥಾಲಯಕ್ಕೆ ಚಿತ್ರದುರ್ಗದಲ್ಲಿ ಇದುವರೆಗೂ 39,375 ಓದುಗರು ನೋಂದಣಿ ಮಾಡಿಕೊಂಡಿದ್ದು, ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ ಹೇಳಿದರು.
 ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಿ ನೋಂದಣಿ ಮಾಡಲು ಕ್ರಮವಹಿಸಲಾಗುವುದು ಎಂದು ಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಪಟ್ಟಿ ಕಳುಹಿಸಿದರೆ ನೋಂದಣಿ ಮಾಡಲಾಗುವುದು ಎಂದು ತಿಳಿಸಿದರು.
ಡಿಜಿಟಲ್ ಗ್ರಂಥಾಲಯದಲ್ಲಿ ನಿಯತಕಾಲಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ಮಕ್ಕಳ ಕಲಿಕೆಯ ವಿಡಿಯೋಗಳು, ಶೈಕ್ಷಣಿಕ ವಿಷಯದ ಪುಸ್ತಕಗಳು ಸೇರಿದಂತೆ ವಿವಿಧ ಭಾಷೆಗಳ ಪ್ರಾದೇಶಿಕ, ರಾಷ್ಟ್ರೀಯ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಲಭ್ಯವಿವೆ ಎಂದರು.
www.karnatakadigitalpubliclibrary     ಗೆ ವೆಬ್‍ಸೈಟ್‍ನಲ್ಲಿ ಲಾಗಿನ್ ಆಗುವುದರ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
 ಸಭೆಯಲ್ಲಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ ಡಾ.ಬಿ.ರಾಜಶೇಖರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜು, ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಸದಸ್ಯ ಪಿ.ಹೆಚ್. ಮುರುಗೇಶ್, ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಸದಸ್ಯ ಹೆಚ್.ಆಂಜನೇಯ, ನಿವೃತ್ತ ಪ್ರಾಂಶುಪಾಲ ಹೆಚ್.ಲಿಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *