April 28, 2024

Chitradurga hoysala

Kannada news portal

ಬ್ಲ್ಯಾಕ್ ಫಂಗಸ್ ತಡೆ ಬಗ್ಗೆ ಆರೋಗ್ಯಾಧಿಕಾರಿಗಳ ಸಭೆ, ಲಕ್ಷಣಗಳು ಕಂಡು ಬಂದಲ್ಲಿ ವರದಿ ಮಾಡಲು ಸೂಚನೆ: ಡಿಸಿ

1 min read

ಚಿತ್ರದುರ್ಗ,ಮೇ.18:
 ಕೊರೋನಾ ನಡುವೆ ಬ್ಲ್ಯಾಕ್ ಫಂಗಸ್ ಹರಡುತ್ತಿದ್ದು ಇಂತಹ ರೋಗ ಲಕ್ಷಣಗಳು ಡುಬಂದಲ್ಲಿ ದಿನನಿತ್ಯ ವರದಿ ಮಾಡಲು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
 ಅವರು (ಮೇ.18) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿರುವುದಿಲ್ಲ. ಮೂಗಲ್ಲಿ ಕಫತರಹ ರಕ್ತ, ಮೂಗಿನ ನಾಳಗಳಲ್ಲಿ ಕೆಂಪು ಬದಲಾಗಿ ಕಪ್ಪಾಗುವುದು, ಕಣ್ಣು, ಮೂಗಿನ ಮೂಲಕ ಮೆದುಳಿಗೆ ಹೋಗುತ್ತದೆ. ಆದ್ದರಿಂದ ಇದನ್ನು ಆರಂಭದಲ್ಲಿಯೇ ತಡೆಗಟ್ಟಬೇಕಾಗಿದ್ದು ಇಂತಹ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯರು ಸೂಕ್ತ ಚಿಕಿತ್ಸೆಗೆ ಸಲಹೆ ನೀಡಬೇಕೆಂದರು.
 ಇಎನ್‍ಟಿ ವೈದ್ಯರ ಮೂಲಕ ಎಲ್ಲಾ ವೈದ್ಯರುಗಳಿಗೆ ಈ ರೋಗ ಲಕ್ಷಣಗಳ ಬಗ್ಗೆ ಆನ್‍ಲೈನ್‍ನಲ್ಲಿ ಕಾರ್ಯಗಾರ ಏರ್ಪಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದರು. ಪ್ರತಿ ತಾಲ್ಲೂಕಿನಲ್ಲಿ ಇಎನ್‍ಟಿ ವೈದ್ಯರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಪ್ರತಿನಿತ್ಯ ಚಿಕಿತ್ಸೆ ಮಾಡುವ ವೇಳೆ ಈ ಲಕ್ಷಣಗಳು ಕಂಡುಬಂದ ರೋಗಿಗಳ ವಿವರವನ್ನು ಕಳುಹಿಸಲು ತಿಳಿಸಿದರು.
 ಚಿತ್ರದುರ್ಗ ನಗರದ ಇಎನ್‍ಟಿ ತಜ್ಞರಾದ ಡಾ; ಪ್ರಹ್ಲಾದ್ ರವರು ಮಾತನಾಡಿ ಈ ರೋಗ ಬಹಳ ಅಪಾಯಕಾರಿಯಾಗಿದ್ದು ಆರಂಭದಲ್ಲಿ ನೋಡಿಕೊಂಡಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ಗುಣಪಡಿಸಬಹುದಾಗಿದೆ. ಮೂಗಿನ ಎರಡು ಕಡೆ ಕೆಂಪಗಿನ ಬದಲಾಗಿ ಕಪ್ಪಾಗಿರುತ್ತದೆ. ಕಣ್ಣು ನೋವು, ತಲೆನೋವು ನಂತಹ ಲಕ್ಷಣಗಳು ಕಂಡು ಬರುತ್ತವೆ. ದಂತ ವೈದ್ಯರು, ನರರೋಗ ತಜ್ಞರು ಇದನ್ನು ಗಮನಿಸಿ ವರದಿ ಮಾಡಬಹುದಾಗಿದೆ. ಆರಂಭದಲ್ಲಿ ಕಂಡುಕೊಂಡಲ್ಲಿ ಇದನ್ನು ಗುಣಪಡಿಸಬಹುದಾಗಿದೆ ಎಂದರು.
ಕೋವಿಡ್ ಲಸಿಕೆ;
 ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಲಸಿಕೆಯನ್ನು ಹಾಕಲಾಗುತ್ತಿದ್ದು 28500 ಲಸಿಕೆಗಳು ಬಂದಿರುತ್ತವೆ. ಎರಡನೇ ಡೋಸ್ ಅವಶ್ಯಕತೆ ಇರುವ 4800 ಫಲಾನುಭವಿಗಳನ್ನು ಸಹ ಗುರುತಿಸಲಾಗಿದೆ. ಮತ್ತು 1750 ಕೋವ್ಯಾಕ್ಸಿನ್ ಎರಡನೇ ಲಸಿಕೆಯನ್ನು ಹಾಕಲಾಗುತ್ತದೆ. ಲಸಿಕೆ ಹಾಕಲು ಜಿಲ್ಲೆಯಲ್ಲಿ 500 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಿಗಧಿತ ಶಾಲೆಯಲ್ಲಿ ಹಾಕಲಾಗುತ್ತದೆ. ಮತ್ತು ಉಪ ಕೇಂದ್ರಗಳ ವ್ಯಾಪ್ತಿಯ ಗ್ರಾಮ ಹಾಗೂ ಇದೇ ವ್ಯಾಪ್ತಿಯ ಇನ್ನೊಂದು ಗ್ರಾಮದಲ್ಲಿ ಲಸಿಕೆ ಹಾಕಲಾಗುತ್ತದೆ. ಸಾರ್ವಜನಿಕರು ಆನ್‍ಲೈನ್‍ನಲ್ಲಿ ನೊಂದಣಿ ಮಾಡಿಸಬಹುದಾಗಿದೆ. ಮತ್ತು ಲಸಿಕಾ ಕೇಂದ್ರಕ್ಕೆ ಆಗಮಿಸುವವರಿಗೂ ಶೇ 50 ರಷ್ಟು ಲಸಿಕೆ ಹಾಕಲಾಗುತ್ತದೆ. ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
 ಸಮರ್ಪಕ ಆಕ್ಸಿಜನ್ ಪೂರೈಕೆ;
 ಜಿಲ್ಲೆಗೆ 8.5 ಕೆ.ಎಲ್. ಆಕ್ಸಿಜನ್ ಬೇಕಾಗಿದ್ದು ಅಷ್ಟನ್ನು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ನಿತ್ಯ ಜಿಲ್ಲಾ ಆಸ್ಪತ್ರೆಗೆ 3 ಕೆ.ಎಲ್, ಬಸವೇಶ್ವರ ಆಸ್ಪತ್ರೆಗೆ 2.5 ಕೆ.ಎಲ್, ರೇಣುಕಾ ಗ್ಯಾಸ್‍ಗೆ 1 ಕೆ.ಎಲ್, ಸದರನ್ ಪೂರೈಕೆದಾರರಿಗೆ 2 ಕೆ.ಎಲ್ ಹಂಚಿಕೆ ಮಾಡಿ ಪೂರೈಸಲಾಗುತ್ತಿದೆ. ಇದರೊಂದಿಗೆ 379 ಜಂಬೂ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಗೆ 80, ಬಸವೇಶ್ವರ ಆಸ್ಪತ್ರೆಗೆ 5, ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗೆ 40, ಕೃಷ್ಣಾ ನರ್ಸಿಂಗ್ ಹೋಂಗೆ 20, ಬಸಪ್ಪ ಆಸ್ಪತ್ರೆಗೆ 25, ಸಾಯಿ ನಾರಾಯಣ ಆಸ್ಪತ್ರೆಗೆ 20, ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ 8, ಸಿರಿಗೆರೆಗೆ 8, ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ 20, ಪರಶುರಾಂಪುರಕ್ಕೆ 5, ನಾಯಕನಹಟ್ಟಿಗೆ 5, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಗೆ 17 ಸೇರಿ 253 ಹಾಗೂ ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ 28, ಧರ್ಮಪುರಕ್ಕೆ 10, ಮರಡಿಹಳ್ಳಿಗೆ 10, ಹೊಳಲ್ಕೆರೆಗೆ 30, ಬಿ.ದುರ್ಗಕ್ಕೆ 9, ಹೊಸದುರ್ಗಕ್ಕೆ 20, ಕಂಚೀಪುರ-ಕಿಟ್ಟದಾಳ್‍ಗೆ 5 ಹಾಗೂ ಶ್ರೀರಾಂಪುರಕ್ಕೆ 4 ಸೇರಿ 126 ಸೇರಿದಂತೆ ಒಟ್ಟು 379 ಜಂಬೂ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ ಎಂದರು.
 ಕೋವಿಡ್ ಹರಡುವಿಕೆ ತಡೆಗೆ ಕಠಿಣ ಕ್ರಮ;
 ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದ್ದು ಇನ್ನು ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಕರೆ ತರಲಾಗುತ್ತದೆ. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿವಾರು ತಂಡಗಳನ್ನು ರಚಿಸಲಾಗಿದೆ. ಇದರ ಜೊತೆಗೆ ಗ್ರಾಮವಾರು ಸಾಮಾನ್ಯ ಲಕ್ಷಣ ಹೊಂದಿದವರನ್ನು ಸಹ ಪರೀಕ್ಷೆಗೆ ಒಳಪಡಿಸಿ ಪ್ರತ್ಯೇಕಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಆರೋಗ್ಯಾಧಿಕಾರಿಗಳು ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ತಿಸಿದರು.
 ಹೊಸದುರ್ಗ ತಾಲ್ಲೂಕಿನಲ್ಲಿ ಕೋವಿಡ್ ಪಾಸಿಟೀವ್ ಬಂದವರನ್ನು ಆಸ್ಪತ್ರೆಗೆ ಕರೆ ತಂದು ರೋಗದ ತೀವ್ರತೆಯನ್ನು ಆಧರಿಸಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‍ಗೆ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ವೈದ್ಯರು, ನರ್ಸ್‍ಗಳು ಇರುವುದರಿಂದ ಅವರ ಆಕ್ಸಿಜನ್ ಲೆವೆಲ್, ಉಸಿರಾಟ, ರಕ್ತದೊತ್ತಡ ಸೇರಿದಂತೆ ತಪಾಸಣೆ ಮಾಡಲಾಗುತ್ತದೆ. ಇದರಿಂದ ರೋಗದ ತೀವ್ರತೆಯನ್ನು ಆಧರಿಸಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದ್ದು ಮುಂದೆ ಸಂಭವಿಸಬಹುದಾದ ಅನಾಹುತಗಳು ತಪ್ಪಲಿವೆ. ಇದೇ ಮಾದರಿಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಪ್ರಾರಭಿಸಲಾಗಿದ್ದು ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಇದಕ್ಕೆ ಬೇಕಾಗಿರುವ ವಾಹನಗಳನ್ನು ಒದಗಿಸಲಾಗುತ್ತದೆ ಎಂದರು.
 296 ಸಾವು;
 ಕೋವಿಡ್ ಮೊದಲ ಅಲೆ ಹಾಗೂ ಈಗಿರುವ ಎರಡನೇ ಅಲೆಯಲ್ಲಿ ಕೋವಿಡ್‍ನಿಂದ 113 ಜನರು ಮರಣ ಹೊಂದಿದ್ದಾರೆ. ಆದರೆ ಕೋವಿಡ್ ಪರೀಕ್ಷೆಯಲ್ಲಿ ಕಂಡುಬರದೆ ಸಿಟಿ ಸ್ಕ್ಯಾನ್, ಎಕ್ಸ್‍ರೇಯಲ್ಲಿ ಕೋವಿಡ್ ಲಕ್ಷಣಗಳು ಪತ್ತೆಯಾದ ಐಎಲ್‍ಐ, ಸಾರಿ ಪ್ರಕರಣಗಳಲ್ಲಿ 183 ಜನರು ಸಾವ್ನಪ್ಪಿದ್ದು ಒಟ್ಟು 296 ಜನರು ಮರಣ ಹೊಂದಿರುತ್ತಾರೆ.

ಸಾರ್ವಜನಿಕರು ತಮಗೆ ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಚಿಕಿತ್ಸೆ ಪಡೆಯದೆ ವಿಳಂಬ ಮಾಡುತ್ತಾರೆ. ವಿಳಂಬ ಮಾಡಿದವರಿಗೆ ರೋಗಾಣುಗಳು ತೀವ್ರಗೊಂಡು ಹಾನಿಯನ್ನು ಉಂಟು ಮಾಡುತ್ತದೆ. ಆದ್ದರಿಂದ ಸಾರ್ವಜನಿಕರು ಮುಂಜಾಗ್ರತೆ ವಹಿಸಿ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಿಳಿಸಿದರು.
 ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಪಾಲಾಕ್ಷ, ಜಿಲ್ಲಾ ಸರ್ಜನ್ ಡಾ; ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ; ರಂಗನಾಥ್, ಡಾ; ತುಳಸಿರಂಗನಾಥ್, ಆರ್.ಸಿ.ಹೆಚ್. ಅಧಿಕಾರಿ ಡಾ; ಕುಮಾರಸ್ವಾಮಿ, ಹೊಸದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ; ಚಂದ್ರಶೇಖರ್ ಕಂಬಾಳಿಮಠ, ಬಿಸಿಎಂ ಅಧಿಕಾರಿ ಅವೀನ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ; ಕಾಶಿ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *