May 19, 2024

Chitradurga hoysala

Kannada news portal

*ಕಾಡಾ ಸಮಿತಿ ನಿರ್ಣಯಕ್ಕೆ ಜಿಲ್ಲಾ ನೀರಾವರಿ ಹೋರಾಟ ಸಮಿತಿ ವಿರೋದ*ಸಂಸದ ಜಿ.ಎಂ.ಸಿದ್ದೇಶ್ವರರ ಭದ್ರಾ ನೀರನ್ನು ಬಿಡಲ್ಲ, ಎಂಬ ಮಾತಿಗೆ ಕಡಿವಾಣವಿರಲಿ, ತಾವು ಚಿತ್ರದುರ್ಗ ತಾಲೂಕಿನ ನಿವಾಸಿ ನೆನಪಿರಲಿ ಎಂದ ರೈತ ಸಮಿತಿ

1 min read

ಕಾಡಾ ಸಮಿತಿ ನಿರ್ಣಯಕ್ಕೆ ಜಿಲ್ಲಾ ನೀರಾವರಿ ಹೋರಾಟ ಸಮಿತಿ ವಿರೋದ

(ಸಂಸದ ಜಿ.ಎಂ.ಸಿದ್ದೇಶ್ವರರ ಭದ್ರಾ ನೀರನ್ನು ಬಿಡಲ್ಲ, ಎಂಬ ಮಾತಿಗೆ ಕಡಿವಾಣವಿರಲಿ, ತಾವು ಚಿತ್ರದುರ್ಗ ತಾಲೂಕಿನ ನಿವಾಸಿ ನೆನಪಿರಲಿ ಎಂದ ರೈತ ಸಮಿತಿ )
———-
ಚಿತ್ರದುರ್ಗ :
ಭದ್ರಾ ಮೇಲ್ದಂಡೆಗೆ ಭದ್ರಾ ನೀರನ್ನು ಬಿಡಬಾರದು ಎಂಬ ಕಾಡಾ ಸಮಿತಿ ನಿರ್ಣಯವನ್ನು ಜಿಲ್ಲಾ ನೀರಾವರಿ ಹೋರಾಟ ಸಮಿತಿ ತೀವ್ರವಾಗಿ ವಿರೋದಿಸುತ್ತದೆ ಇದೊಂದು ಬಯಲು ಸೀಮೆ ರೈತರು ಹಾಗೂ ದಮನಿತ ಮನಸ್ಸುಗಳ ಘಾಸಿ ಗೊಳಿಸುವ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಈಗಾಗಲೇ ಹಂಚಿಕೆಯಾಗಿರುವ ನೀರಿನ ಸೂತ್ರಕ್ಕೆ ಗುಲಗಂಜಿಯಷ್ಟು ಧಕ್ಕೆಯಾದರೂ ಬಯಲುಸೀಮೆ ಜನರ ಆಕ್ರೋಶ ಇಮ್ಮಡಿಯಾಗುತ್ತದೆ ಎಂಬುದ ಸ್ಪಷ್ಟಪಡಿಸುತ್ತಿದ್ದೇವೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇಡೀ ಯೋಜನೆಯಲ್ಲಿ ಎಲ್ಲಿಯೂ ಗದ್ದೆ ಹೊಡೆಯುವ ಪ್ರಸ್ತಾಪವಿಲ್ಲ. ಕೆರೆ ತುಂಬಿಸುವ, ಹನಿ ನೀರಾವರಿ ಸೌಲಭ್ಯದ ಹಾಗೂ ಕುಡಿವ ನೀರು ಪೂರೈಕೆ ಬದ್ದತೆಗಳಿವೆ. ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಭ್ಯ ಕಲ್ಪಿಸುವ ಸಾಂವಿಧಾನಿಕ ಆಶಯಗಳನ್ನು ಈ ಯೋಜನೆ ಒಳಗೊಂಡಿದೆ.
ಭದ್ರಾ ಮೇಲ್ದಂಡೆಗೆ ಭದ್ರಾ ಜಲಾಶಯದಿಂದ 12.50 ಹಾಗೂ ತುಂಗಾ ಜಲಾಶಯದಿಂದ 17.40 ಟಿಎಂಸಿಯಷ್ಟು ನೀರು ಹಂಚಿಕೆಯಾಗಿದೆ. ಯೋಜನೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬರುತ್ತಿರುವ ಈ ವೇಳೆ ನೀರು ಹಂಚಿಕೆ ಸೂತ್ರಕ್ಕೆ ಕ್ಯಾತೆ ತೆಗೆಯುವುದು ಸರಿಯಾದ ಕ್ರಮವಲ್ಲ.ನೀರನ್ನು ತುಂಗಾದಿಂದಲೇ ತೆಗೆದುಕೊಳ್ಳಿ, ಭದ್ರಾದಿಂದ ಕೊಡಲು ಸಾಧ್ಯವಿಲ್ಲ ಎಂಬಿತ್ಯಾದಿ ಹೇಳಿಕೆಗಳು ಹಾಗೂ ನಿರ್ಣಯಗಳು ಸಾಧುವಲ್ಲದ ಮತ್ತು ರೈತರ ನಡುವೆ ಸಂಘರ್ಷ ಸೃಷ್ಟಿಸುವ ಪ್ರಮೇಯಗಳಾಗಿವೆ.
ಚಿತ್ರದುರ್ಗ ಸೇರಿದಂತೆ ಬಯಲು ಸೀಮೆ ರೈತರು ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದರೆ ರಾಜ್ಯಸರ್ಕಾರಕ್ಕೆ ಆರ್ಥಿಕ ಹೊರೆ ತಪ್ಪುತ್ತದೆ ಎಂಬ ಕಾಳಜಿಯಿಂದ ಕೇಂದ್ರದ ಮುಂದೆ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಇಂತಹ ವೇಳೆ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ರೈತರು ನೀರಿಗಾಗಿ ಕ್ಯಾತೆ ತೆಗೆಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೋರಾಟ ಸಮಿತಿ ಪ್ರಶ್ನಿಸುತ್ತದೆ.
ಚಿತ್ರದುರ್ಗ ಜಿಲ್ಲೆ ಕಳೆದ ಒಂದು ನೂರು ವರ್ಷದಲ್ಲಿ ಎಪ್ಪತ್ತು ವರ್ಷಗಳಷ್ಟು ಸುದೀರ್ಘ ಬರ ಅನುಭವಿಸಿದೆ. ಸಾವಿರ ಅಡಿ ಆಳದಲ್ಲಿ ಸಿಗುವ ಪ್ಲೊರೈಡ್ ಅಂಶವಿರುವ ನೀರನ್ನು ಇಂದಿಗೂ ಈ ಭಾಗದ ಜನ ಕುಡಿಯುತ್ತಿದ್ದಾರೆ. ಕುಡಿಯಲು ಶುದ್ದ ನೀರು ಸಿಗದಂತಹ ದೌರ್ಭಾಗ್ಯ ಈ ಜನರದ್ದು. ಈ ಎಲ್ಲ ವಾಸ್ತವಾಂಶಗಳು ನೀರು ಕೊಡಬಾರದು ಎಂಬ ಮನಸ್ಥಿತಿಗಳಿಗೆ ಮನವರಿಕೆಯಾಗಲಿ.
ನೀರಾವರಿ ವಿಚಾರವಾಗಿ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆ ಜನ ಗಸಗಸೆ ಪಾಯಸ ಕುಡಿಯುತ್ತಿದ್ದಾರೆ. ಬಯಲು ಸೀಮೆ ರೈತರು ಇವರ ಮುಂದೆ ನಮಗೆ ಗಂಜಿಯನ್ನಾದರೂ ಕುಡಿಯಲು ಅವಕಾಶ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಎಲ್ಲಿಯೂ ಕೂಡಾ ಪೂರ್ಣ ಪ್ರಮಾಣದ ಆಕ್ರೋಶ ಹೊರ ಹಾಕದೆ ವಿನಮ್ರತೆ ಪ್ರದರ್ಶಿಸುತ್ತಾ ಬಂದಿದ್ದಾರೆ. ಆದರೆ ನೀರಿನ ನಿರಾಕರಣೆ ಮಾಡಿದರೆ ಒಡಲ ಕಿಚ್ಚು ಧಗ ಧಗಿಸುತ್ತದೆ ಎಂಬ ಕನಿಷ್ಟ ತಿಳುವಳಿಕೆ ಕಾಡಾ ಸಮಿತಿಗೆ ಮೂಡಲಿ ಎಂದು ನೀರಾವರಿ ಹೋರಾಟ ಸಮಿತಿ ಆಶಿಸುತ್ತದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಇನ್ನು ಮುಂದೆ ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆ ಸೇರ್ಪಡೆಯಾಗಬೇಕಾಗುತ್ತದೆ. ಹಾಗಾಗಿ ಕಾಡಾ ಸಮಿತಿ ವ್ಯಾಪ್ತಿಗೆ ಈ ಮೂರು ಜಿಲ್ಲೆಗಳ ಪ್ರತಿನಿ„ಗಳ ನೇಮಕ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಹೊಟ್ಟೆ ತುಂಬಾ ನೀರು ಕುಡಿದ ಪ್ರದೇಶದವರ ಕಾಡಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸರ್ಕಾರದ ನಿಲುವು ಬದಲಾಗಬೇಕು. ಬಯಲು ಸೀಮೆ ವ್ಯಾಪ್ತಿಗೆ ಸೇರಿದವರನ್ನು ಕಾಡಾ ಸಮಿತಿ ಅಧ್ಯಕ್ಷ ರನ್ನಾಗಿ ಮಾಡಲು ಎಲ್ಲ ಪಕ್ಷಗಳು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ನೀರಾವರಿ ಹೋರಾಟ ಸಮಿತಿ ಮನವಿ ಮಾಡುತ್ತದೆ.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಭದ್ರಾ ನೀರನ್ನು ಬಿಡಲ್ಲ, ಕೊಡಲ್ಲ ಎಂಬ ರೈತರನ್ನು ಕುಟುಕುವ ಚೇಷ್ಟೆ ಮಾತುಗಳಿಗೆ ಕಡಿವಾಣ ಹಾಕಿಕೊಳ್ಳಬೇಕು. ತಾವು ಚಿತ್ರದುರ್ಗ ತಾಲೂಕಿನ ನಿವಾಸಿಯಾಗಿದ್ದು ರೈತ ಕುಟುಂಬದಿಂದ ಬಂದಿದ್ದೇವೆ ಎಂಬ ಪೂರ್ವಿಕರ ಬದುಕನ್ನು ನೆನಪಿಸಿಕೊಳ್ಳಬೇಕು. ಭದ್ರಾ ಮೇಲ್ದಂಡೆಯಿಂದ ತಮ್ಮ ಮತ ಕ್ಷೇತ್ರ ಜಗಳೂರಿಗೆ 2.40 ಟಿಎಂಸಿ ನೀರು ಹರಿಯುತ್ತದೆ ಎಂಬ ಸಂಗತಿ ಮನನ ಮಾಡಿಕೊಳ್ಳಲಿ ಎಂದು ಹೋರಾಟ ಸಮಿತಿ ನೆನಪಿಸುತ್ತದೆ.

About The Author

Leave a Reply

Your email address will not be published. Required fields are marked *