April 30, 2024

Chitradurga hoysala

Kannada news portal

ಒಳ್ಳೆಯದೆಲ್ಲವೂ ಒಳ್ಳೆಯದಾಗಿ ಇನ್ನೂ ಉಳಿದಿದೆಯೇ ? ಪರರ ಸ್ವತ್ತು, ಪರ ಸ್ತ್ರೀ ಮೇಲಿನ ಮೋಹ, ಅನೈತಿಕ ಅಸಹ್ಯಕ್ಕೆ ಸಮಾನ,

1 min read

ಅಪ್ಪ ಹೇಳುತ್ತಿದ್ದರು,
ಬೇಡುವ ಕೈ ನಿನ್ನದಾಗುವುದು ಬೇಡ,
ಕೊಡುವ ಕೈ ನಿನ್ನದಾಗಲಿ.
ಅಮ್ಮ ಹೇಳುತ್ತಿದ್ದರು,
ಅವಮಾನ ಸಹಿಸಬೇಡ,
ಸ್ವಾಭಿಮಾನದ ಬದುಕು ನಿನ್ನದಾಗಲಿ,

ಗುರುಗಳು ಹೇಳುತ್ತಿದ್ದರು,
ದೇಶದ್ರೋಹಿ ಸ್ವಾರ್ಥಿ ಆಗಬೇಡ,
ದೇಶಪ್ರೇಮಿ ತ್ಯಾಗ ಜೀವಿ ನೀನಾಗು.

ಮಾರ್ಗದರ್ಶಿಗಳು ಹೇಳುತ್ತಿದ್ದರು,
ದ್ವೇಷ ಭಾವನೆ ತೊಡೆದು ಹಾಕು,
ಪ್ರೀತಿಯ ಭಾಷೆ ನಿನ್ನದಾಗಲಿ.

ನೀತಿ ಕಥೆಗಳಲ್ಲಿ ಓದುತ್ತಿದ್ದೆ,
ಪರರ ಸ್ವತ್ತು, ಪರ ಸ್ತ್ರೀ ಮೇಲಿನ ಮೋಹ,
ಅನೈತಿಕ ಅಸಹ್ಯಕ್ಕೆ ಸಮಾನ,
ದುಡಿದ ಶ್ರಮದ ಫಲ ಮಾತ್ರ ನಿನ್ನದಾಗಲಿ.

ಹಿರಿಯರು ಹೇಳುತ್ತಿದ್ದರು,
ಮೋಸ ವಂಚನೆ ಕಳ್ಳತನ ನಿನ್ನ ಬಳಿ ಸುಳಿಯದಿರಲಿ,
ಸ್ನೇಹ ವಿಶ್ವಾಸ ತಾಳ್ಮೆ ನಿನ್ನಿಂದ ಅಳಿಯದಿರಲಿ.

ಪುಸ್ತಕಗಳಲ್ಲಿ ಬರೆದಿದ್ದರು,
ನಿನ್ನಲ್ಲಿರುವ ಹಣ ಆಸ್ತಿ ಯಾವಾಗ ಬೇಕಾದರೂ ನಾಶವಾಗಬಹುದು.
ಆದರೆ, ನೀನು ಕಲಿತಿರುವ ವಿಧ್ಯೆ ನಿನ್ನನ್ನು ಕೊನೆಯವರೆಗೂ ಕಾಪಾಡುತ್ತದೆ.

ಈಗಲೂ ಇದು ಪ್ರಸ್ತುತವೇ ?
ನಮ್ಮ ಮಕ್ಕಳಿಗೆ ಇದನ್ನು ಈಗಲೂ ಕಲಿಸುತ್ತಿದ್ದೇವೆಯೇ ?
ಇದು ಸಾರ್ವಕಾಲಿಕ ಸತ್ಯವೇ ?
ಬದಲಾವಣೆ ಅವಶ್ಯವೇ ?
ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದನ್ನು ನಮ್ಮ ಮಕ್ಕಳಿಗೆ ಕಲಿಸುವುದರಿಂದ ಅವರಿಗೆ ಯಶಸ್ಸು ಸಿಗುವುದೆ ? ಅಥವಾ ವಾಸ್ತವದಲ್ಲಿ ಗೊಂದಲಕ್ಕೆ ಒಳಗಾಗುವರೆ ?

ಒಳ್ಳೆಯದೆಲ್ಲವೂ ಒಳ್ಳೆಯದಾಗಿ ಇನ್ನೂ ಉಳಿದಿದೆಯೇ ?
ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಮಕ್ಕಳಿಗೆ ನಾವು ನೈತಿಕ ಶಿಕ್ಷಣದ ಪಾಠಗಳಲ್ಲಿ ಏನು ಹೇಳಿಕೊಡಬೇಕು ?
ಹಳೆಯದು ಮತ್ತು ಹೊಸದರ ಸಮ್ಮಿಲನ ಸಾಧಿಸುವುದು ಹೇಗೆ ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಸಾಗಲಿ.
ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಇದು ಅತ್ಯವಶ್ಯ………………
ವಿವೇಕಾನಂದ. ಹೆಚ್.ಕೆ.
9844013068

About The Author

Leave a Reply

Your email address will not be published. Required fields are marked *