May 4, 2024

Chitradurga hoysala

Kannada news portal

ನ್ಯುಮೊಕಾಕಲ್ ಕಾಂಜುಗೇಟ್ ಲಸಿಕಾ ತರಬೇತಿ ಕಾರ್ಯಗಾರದಲ್ಲಿ ಡಿಹೆಚ್‍ಒ ಡಾ. ಆರ್. ರಂಗನಾಥ್ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸಲು ನ್ಯುಮೊಕಾಕಲ್ ಕಾಂಜುಗೇಟ್ ಲಸಿಕೆ ಸಹಕಾರಿ

1 min read

ನ್ಯುಮೊಕಾಕಲ್ ಕಾಂಜುಗೇಟ್ ಲಸಿಕಾ ತರಬೇತಿ ಕಾರ್ಯಗಾರದಲ್ಲಿ ಡಿಹೆಚ್‍ಒ ಡಾ. ಆರ್. ರಂಗನಾಥ್
ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸಲು ನ್ಯುಮೊಕಾಕಲ್ ಕಾಂಜುಗೇಟ್ ಲಸಿಕೆ ಸಹಕಾರಿ

ಚಿತ್ರದುರ್ಗ,ಆಗಸ್ಟ್24:

ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ನ್ಯುಮೊಕಾಕಲ್ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸಲು ನ್ಯುಮೊಕಾಕಲ್ ಕಾಂಜುಗೇಟ್ (ಪಿಸಿವಿ) ಲಸಿಕೆಯನ್ನು ಪರಿಚಯಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ರಂಗನಾಥ್ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಮಂಗಳವಾರ ಚಿತ್ರದುರ್ಗ ತಾಲ್ಲೂಕಿನ ವೈದ್ಯಾಧಿಕಾರಿಗಳಿಗೆ, ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ನ್ಯುಮೊಕಾಕಲ್ ಕಾಂಜುಗೇಟ್ (ಪಿಸಿವಿ) ಲಸಿಕಾ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನ್ಯುಮೊಕಾಕಲ್ ಕಾಯಿಲೆ ಎಂದರೆ ನ್ಯುಮೊಕಾಕಸ್ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗ ಐದು ವರ್ಷದ ಒಳಗಿನ ಮಕ್ಕಳಲ್ಲಿ ಉಂಟಾಗುವ ನ್ಯುಮೋನಿಯಾ ಇದರಿಂದ ಭಾರತದಲ್ಲಿ ಶೇ.30 ರಷ್ಟು ನ್ಯುಮೋನಿಯಾ ಕಾರಣದಿಂದ ಸಾವು ಸಂಭವಿಸುತ್ತಿದೆ. ಹಾಗಾಗೀ ಮಕ್ಕಳ ರಕ್ಷಣೆಗಾಗಿ ಸಾಮಾಜಿಕ ಕಳಕಳಿಯಿಂದ ಈ ಲಸಿಕೆಯನ್ನು ಮಕ್ಕಳಿಗೆ ನೀಡಲು ಸರ್ಕಾರದ ಮಾರ್ಗಸೂಚಿಯಂತೆ ತರಬೇತಿ ಹಮ್ಮಿಕೊಂಡಿದೆ ಎಂದರು.
ಗ್ರಾಮೀಣ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರ ಉಪ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಗಳು ಕಾರ್ಯಗಾರದ ಸದುಪಯೋಗ ಪಡಿಸಿಕೊಳ್ಳಿ. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಿ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಿ ಎಂದು ತಿಳಿಸಿದರು.
ನ್ಯುಮೊಕಾಕಲ್ ಕಾಂಜುಗೇಟ್ (ಪಿಸಿವಿ) ಲಸಿಕೆಯ ಪ್ರಮುಖ ಅಂಶಗಳು: ಇದು ಒಂದು ನೂತನ ಲಸಿಕೆ. ಪಿಸಿವಿ ನ್ಯುಮೊಕಾಕಲ್ ಕಾಂಜುಗೇಟ್ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದು ನ್ಯುಮೊಕಾಕಲ್ ನ್ಯುಮೋನಿಯಾ ಹಾಗೂ ಇತರೆ ನ್ಯುಮೊಕಾಕಲ್ ಖಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ನ್ಯುಮೊಕಾಕಲ್ ನ್ಯೂಮೋನಿಯಾವು ಒಂದು ಶ್ವಾಸಕೋಶದ ಸೋಂಕಾಗಿದ್ದು, ಈ ಸೋಂಕು ತಗುಲಿದ ಮಗುವಿಗೆ ಉಸಿರಾಡಲು ಕಷ್ಟ. ಪಕ್ಕೆ ಸೆಳೆತ, ಜ್ವರ,ಕೆಮ್ಮು ಮತ್ತು ಇತರೆ ಸಮಸ್ಯೆಗಳು ಇರಬಹುದು. ಇದು ತೀವ್ರ ಸ್ವರೂಪ ಪಡೆದುಕೊಂಡಲ್ಲಿ ಮರಣವೂ ಸಂಭವಿಸಬಹುದು. ನ್ಯುಮೊಕಾಕಲ್ ಖಾಯಿಲೆಯು ಕೆಮ್ಮಿದಾಗ ಅಥವಾ ಸೀನಿದಾಗ ಸಿಡಿಯುವ ತುಂತುರುಗಳ ಮುಖಾಂತರ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.
ಪಿಸಿವಿಯನ್ನು 6 ವಾರ, 14 ವಾರಗಳು ಮತ್ತು 9 ತಿಂಗಳಿಗೆ ಮಗುವಿಗೆ ನೀಡಲಾಗುತ್ತದೆ. ನ್ಯುಮೊಕಾಕಲ್ ರೋಗದಿಂದ ರಕ್ಷಣೆ ಪಡೆಯಲು ಮಕ್ಕಳು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ನಿಗದಿತ ವೇಳಾಪಟ್ಟಿಯಂತೆ ಮೂರು ಡೋಸ್‍ಗಳನ್ನು ಪಡೆದಿರುವುದನ್ನು ಖಾತ್ರಿ ಮಾಡಿಕೊಳ್ಳಬೇಕು. ಮಗವಿನ ಬಲ ಮಧ್ಯ ತೊಡೆಯ ಸ್ನಾಯುವಿನೊಳಗೆ ಲಸಿಕೆಯನ್ನು ನೀಡಲಾಗುತ್ತದೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಅವರು ತರಬೇತಿಯಲ್ಲಿ ಲಸಿಕೆ ನೀಡುವ ಕ್ರಮ ಅವಧಿಯ ಬಗ್ಗೆ ತಿಳಿಸಿದರು.
ಕಾರ್ಯಗಾರದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್, ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ. ಕಾಶಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ಕಾವ್ಯ ಶ್ರೀಕುಮಾರ್, ದಸ್ತಗೀರ್, ಮ್ಯಾನೇಜರ್ ಅಲಿ, ಪರವೀನ್ ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *