April 29, 2024

Chitradurga hoysala

Kannada news portal

ನನ್ನ ಗೆಳೆಯ ಗಣೇಶನಿಗೆ ಹಬ್ಬದ ಶುಭಾಶಯಗಳನ್ನು ಹೇಳುತ್ತಾ ಒಂದು ಆತ್ಮೀಯ ಪತ್ರ : ನಿನ್ನನ್ನು ಪ್ರಾಣಕ್ಕಿಂತ ಹೆಚ್ಚು ನಂಬಿರುವ ಜನಕ್ಕೆ ನೀನು ಮೋಸ ಮಾಡಿದ ಪಾಪ ಕಟ್ಟಿಕೊಳ್ಳಬೇಕಾಗುತ್ತದೆ.

1 min read

ನನ್ನ ಗೆಳೆಯ ಗಣೇಶನಿಗೆ ಹಬ್ಬದ ಶುಭಾಶಯಗಳನ್ನು ಹೇಳುತ್ತಾ ಒಂದು ಆತ್ಮೀಯ ಪತ್ರ……….‌‌
____________________________________

ಆತ್ಮೀಯ ಗಣೇಶ,

ಹೇಗಿದ್ದೀಯ ?
ನಿನ್ನ ಹೊಟ್ಟೆ ನೋಡಿದರೆ ತುಂಬಾ ಆರಾಮವಾಗಿ ಇರಲೇಬೇಕು ಅನಿಸುತ್ತಿದೆ.

ನಿನಗೇನು ಕಡಿಮೆ ಗೆಳೆಯ,
100 ಕೋಟಿಗೂ ಹೆಚ್ಚು ಜನ ಪ್ರತಿನಿತ್ಯ ಭಕ್ಷ್ಯಬೋಜನಗಳನ್ನು ಉಣಬಡಿಸುತ್ತಾರೆ. ವರ್ಷಕ್ಕೊಮ್ಮೆ ನಿನ್ನನ್ನು ಹಾಡಿ ಹೊಗಳಿ ಬೀದಿಬೀದಿಗಳಲ್ಲಿ ಕುಣಿದು ಕುಪ್ಪಳಿಸುತ್ತಾರೆ.
ನೀನು ಅದರಲ್ಲಿ ಮೈಮರೆತು ನಮ್ಮನ್ನು ಮರೆತಿರಬಹುದು. ಅದನ್ನು ನೆನಪಿಸುವ ಸಲುವಾಗಿಯೇ ಮತ್ತು ಇಲ್ಲಿನ ನಿಜ ಸ್ಥಿತಿ ನಿನಗೆ ತಿಳಿಸಲು ಈ ಪತ್ರ ಬರೆಯುತ್ತಿದ್ದೇನೆ.

ಗೆಳೆಯ,
ನಮ್ಮ ಜನ ನಿನ್ನನ್ನು ತುಂಬಾ ಪ್ರೀತಿಸುತ್ತಾರೆ. ನಿನ್ನನ್ನು ಕಂಡರೆ ಅವರಿಗೆ ಅಪಾರ ಅಭಿಮಾನ – ಬಹಳ ಭಕ್ತಿ. ನಮ್ಮ ಗಣೇಶ ನಮ್ಮೆಲ್ಲಾ ಕಷ್ಟ ಪರಿಹರಿಸುವ ವಿಘ್ನ ವಿನಾಯಕ ಎಂದು ನಂಬಿದ್ದಾರೆ.
ಅನೇಕ ಹೆಸರುಗಳಿಂದ ನಿನ್ನನ್ನು ಕರೆಯುತ್ತಾರೆ. ಎಲ್ಲಾ ಶುಭ ಕಾರ್ಯಗಳಲ್ಲಿ ನಿನಗೇ ಅಗ್ರ ಪೂಜೆ. ಒಂಥರಾ ಎಲ್ಲರಿಗೂ ನೀನೇ ಬಾಸ್.

ಆದರೆ ಗೆಳೆಯ,
ನನ್ನ ಜನಗಳಿಗೆ ನೀನು ಮೋಸ ಮಾಡುತ್ತಿರುವೆ ಎಂಬ ಅನುಮಾನ ನನ್ನದು. ನಮ್ಮ ಅಪ್ಪ ಅಮ್ಮ,ಅಜ್ಜ ಅಜ್ಜಿ, ಮುತ್ತಾತ ಮುತ್ತಜ್ಜಿ ——— ಎಲ್ಲರೂ ನೀನು ಬಂದು ನಮ್ಮ ಕಷ್ಟಗಳನ್ನೆಲ್ಲಾ ಪರಿಹರಿಸುವೆ, ನಮಗೆ ನೆಮ್ಮದಿ ಕಲ್ಪಸುವೆ ಎಂದು ಕಾಯುತ್ತಲೇ ಇದ್ದಾರೆ. ನೀನು ಮಾತ್ರ ಬರಲೇ ಇಲ್ಲ. ಅವರ ಗೋಳು ಕೇಳಲೇ ಇಲ್ಲ.

ನೋಡು ಗೆಳೆಯ,
ಇಲ್ಲಿಗೆ ಬಂದು ಕಣ್ಣಾರೆ ನೋಡು.
ಕೆಲವರು ವೈಭವೋಪೇತ ಬಂಗಲೆಗಳಲ್ಲಿ ವಾಸಿಸುತ್ತಾ ಅವರ ಮುಂದಿನ ಏಳು ತಲೆಮಾರು ತಿಂದರೂ ಸವೆಯದಷ್ಟು ಆಸ್ತಿ ಮಾಡಿಕೊಂಡು ಮೆರೆಯುತ್ತಿದ್ದಾರೆ. ಅದೇ ಬಲದಿಂದ ಅಧಿಕಾರ ಹಿಡಿದು ಸಾಮಾನ್ಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಅವರಿಗೆ ನಿನ್ನ ಅವಶ್ಯಕತೆಯೇ ಇಲ್ಲ.

ಆದರೆ ಗೆಳೆಯ,
ಇದನ್ನು ಬರೆಯುತ್ತಿರುವಾಗಲೂ ನನಗೆ ಅರಿವಿಲ್ಲದೆ ನನ್ನ ಕಣ್ಣಿನಿಂದ ನೀರು ಜಾರುತ್ತಿದೆ ಗಣೇಶ ,
ಇಲ್ಲಿ ಎಷ್ಟೋ ಜನ ಊಟಕ್ಕೂ ಗತಿಯಿಲ್ಲದೆ ಇಲಿ, ಹಾವು, ಬೆಕ್ಕು, ಜಿರಲೆ, ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದಾರೆ ಕಣಯ್ಯ.
ವಾಸಿಸಲು ಮನೆಯಿಲ್ಲದೆ ರಸ್ತೆ, ಬೀದಿ, ಬಸ್ ನಿಲ್ದಾಣಗಳಲ್ಲಿ ಬಿಸಿಲಿಗೆ ಬೆಂದು, ಮಳೆಯಲ್ಲಿ ನೆಂದು, ಚಳಿಗೆ ನಡುಗುತ್ತಾ ಮಲಗುತ್ತಿದ್ದಾರೆ. ಅವರಿಗೆ ನಿನ್ನ ಅವಶ್ಯಕತೆ ಇದೆ.

ಅಲ್ವೋ ಗಣೇಶ,
3 ವರ್ಷದ ಏನೂ ಅರಿಯದ ಕಂದಮ್ಮಗಳಿಗೆ ಕ್ಯಾನ್ಸರ್, ಏಡ್ಸ್ ಕಾಯಿಲೆ ಬಂದಿದೆ, 5 ವರ್ಷದ ಪಾಪುವಿನ ಮೇಲೆ ಲೋಫರ್ ಗಳು ಅತ್ಯಾಚಾರ ಮಾಡುತ್ತಾರೆ. ನಿನಗೇನು ಗೊತ್ತಾಗ್ತಾ ಇಲ್ವಾ ಅಥವಾ ಅರ್ಥ ಆಗ್ತಾ ಇಲ್ವಾ,

ಅಲ್ಲಯ್ಯಾ ,
ಒಳ್ಳೆಯವರು ಕಷ್ಟ ನೋವುಗಳಿಂದಲೂ, ದುಷ್ಟ ಭ್ರಷ್ಟರು ಆರಾಮವಾಗಿಯೂ ಇರಲು ಬಿಟ್ಟಿದ್ದೀಯಲ್ಲಪ್ಪ ನಿನಗೇನು ಬುದ್ದಿ ಇಲ್ವಾ.

” ಓ ಇದಕ್ಕೆಲ್ಲಾ ನೀವೇ ಕಾರಣ, ನಿಮ್ಮ ದುರಹಂಕಾರ ದುಷ್ಟತನದಿಂದ ನೀವು ಅನುಭವಿಸುತ್ತಿದ್ದರೆ ನಾನೇನು ಮಾಡಲಿ ” ಎಂದು ಪಲಾಯನ ಮಾಡಬೇಡ. ಜನ ನಿನ್ನನ್ನು ನಂಬಿದ್ದಾರೆ. ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆ ನಿನ್ನ ಜವಾಬ್ದಾರಿ ಎಂದು.

ಅದು ಬಿಟ್ಟು ನೀನು ಎಲ್ಲೋ ಕುಳಿತು ಆಟ ನೋಡುವುದು ಸರಿಯಲ್ಲ ಗೆಳೆಯ.

ಈಗಾಗಲೇ ಜನ ನಿನ್ನ ಬಗ್ಗೆ ಸ್ವಲ್ಪ ಸ್ವಲ್ಪ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ತಮ್ಮ ರಕ್ಷಣೆಗೆ ತಾವೇ ಕಾನೂನು, ಪೊಲೀಸ್‌, ಮಿಲಿಟರಿ ಅಂತ ಮಾಡಿಕೊಂಡಿದ್ದಾರೆ. ನಿನಗೆ ಬೆಲೆ ಕಡಿಮೆಯಾಗಿದೆ.

ಆದಷ್ಟು ಬೇಗ ಇಲ್ಲಿಗೆ ಬಂದು ನಮ್ಮೆಲ್ಲರ ಸಮಸ್ಯೆ ಆಲಿಸಿ ಒಂದಷ್ಟು ಸಮಾನತೆಯ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದರೆ ಉತ್ತಮ. ಇಲ್ಲದಿದ್ದರೆ ನಿನ್ನನ್ನು ಪ್ರಾಣಕ್ಕಿಂತ ಹೆಚ್ಚು ನಂಬಿರುವ ಜನಕ್ಕೆ ನೀನು ಮೋಸ ಮಾಡಿದ ಪಾಪ ಕಟ್ಟಿಕೊಳ್ಳಬೇಕಾಗುತ್ತದೆ.

ಗಣು,
ನಿನಗೆ ಗೊತ್ತಿರಬೇಕು. ಪಕ್ಕದ ಚೀನಾ ದೇಶದಿಂದ ಅದೆಂತದೋ ಕೊರೋನಾ ವೈರಸ್ ಬಂದು ಜನ ತತ್ತರಿಸಿ ಹೋಗಿದ್ದಾರೆ. ಪ್ರಾಣ ಭೀತಿಯಿಂದ ಮನೆಗಳಲ್ಲಿ ಅಡಗಿ ಕುಳಿತಿದ್ದರು. ನಿನ್ನ ಹಬ್ಬದ ಸಂಭ್ರಮ ಆಚರಿಸಲು ಹೆದರುತ್ತಿದ್ದಾರೆ. ಆದರೂ ನಿನ್ನ ಮೇಲಿನ ಪ್ರೀತಿ – ಭಕ್ತಿ – ನಂಬಿಕೆಯಿಂದ ಉತ್ಸಾಹದಿಂದಲೇ ಆಚರಿಸುವ ತೀರ್ಮಾನ ಮಾಡಿದ್ದಾರೆ. ದಯವಿಟ್ಟು ಬೇಗ ಕೊರೋನಾಗೆ ಔಷಧಿ ಕಂಡು ಹಿಡಿಯಲು ಸಹಾಯ ಮಾಡಪ್ಪ. ಜನ ವ್ಯಾಪಾರ ವಹಿವಾಟು ಇಲ್ಲದೆ ಕಂಗಾಲಾಗಿ ಹೋಗಿದ್ದಾರೆ. ಏನೋ ನಿನಗೆ ಸ್ವಲ್ಪವೂ ಕರುಣೆ, ಜವಾಬ್ದಾರಿ ಇಲ್ಲವೇ ?

ಕ್ಷಮಿಸು ಗೆಳೆಯ,
ಏನೋ ಆತ್ಮೀಯ ಸ್ನೇಹಿತನಾಗಿದ್ದುದಕ್ಕೆ ಸಲುಗೆಯಿಂದ ನಿನ್ನ ಒಳ್ಳೆಯದಕ್ಕೆ ನಾಲ್ಕು ಮಾತು ಜೋರಾಗಿ ಹೇಳಿದೆ ಪ್ರೀತಿಯಿಂದ. ಬೇಜಾರಾಗಬೇಡ.

ಮತ್ತೆ ಮನೆಯಲ್ಲಿ ನಿಮ್ಮ ಅಪ್ಪ ಅಮ್ಮ ಎಲ್ಲರೂ ಕ್ಷೇಮವೇ. ಎಲ್ಲರಿಗೂ ನಾನು ಕೇಳಿದೆನೆಂದು ಹೇಳು. ಆರೋಗ್ಯದ ಬಗ್ಗೆ ಎಚ್ಚರ. ಹಬ್ಬದ ಸಂಭ್ರಮದಲ್ಲಿ ಸಿಕ್ಕಿದ್ದನ್ನೆಲ್ಲಾ ತಿನ್ನಬೇಡ. ಇಲ್ಲಿನ ಜನ ಇತ್ತೀಚೆಗೆ ಎಲ್ಲಾ ಆಹಾರ ಕಲಬೆರಕೆ ಮಾಡುತ್ತಿದ್ದಾರೆ ಹುಷಾರು. ಆಗಾಗ ಸಂದೇಶಗಳನ್ನು ಕಳುಹಿಸುತ್ತಿರು. ಆತ್ಮೀಯತೆ ಪ್ರೀತಿ ವಿಶ್ವಾಸ ಹಾಗೇ ಇರಲಿ.
ವಂದನೆಗಳೊಂದಿಗೆ,
ಇಂತಿ,
ನಿನ್ನ ಪ್ರಾಣ ಸ್ನೇಹಿತ ಅವಿವೇಕ.
ಭೂ ಲೋಕದಲ್ಲಿರುವ ಭಾರತದ ಕರ್ನಾಟಕದಿಂದ…………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಹೆಚ್.ಕೆ.
9844013068

About The Author

Leave a Reply

Your email address will not be published. Required fields are marked *