April 26, 2024

Chitradurga hoysala

Kannada news portal

ದಾಖಲೆ ನಿರ್ಮಿಸಿದ ವಿವಿ ಸಾಗರ ಡ್ಯಾಂ 63 ವರ್ಷಗಳ ಬಳಿಕ 124.40 ಅಡಿ ನೀರು

1 min read


ದಾಖಲೆ ನಿರ್ಮಿಸಿದ ವಿವಿ ಸಾಗರ ಡ್ಯಾಂ 63 ವರ್ಷಗಳ ಬಳಿಕ 124.40 ಅಡಿ ನೀರು

ಚಿತ್ರದುರ್ಗ :ಏಷ್ಯಾದಲ್ಲಿಯೇ ಮಾನವನಿರ್ಮಿತ ಪ್ರಪ್ರಥಮ ಅತಿ ದೊಡ್ಡ ಜಲಾಶಯ ಎಂಬ ಪ್ರಖ್ಯಾತಿ ಪಡೆದಿರುವ ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರಿನ ಮಾರಿಕಣಿವೆ ಜಲಾಶಯದಲ್ಲಿ ಬರೋಬ್ಬರಿ 63 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಕೋಡಿ ಬೀಳಲು ಕೆಲವು ಅಡಿಗಳು ಮಾತ್ರ ಬಾಕಿ ಇದ್ದು, ಕೋಡಿ ಬೀಳುವುದನ್ನು ನೋಡಲು ಜಿಲ್ಲೆಯ ಜನತೆ ಕಾತುರದಿಂದ ಕಾಯುತ್ತಿದ್ದಾರೆ.ಯಾರ ಬಾಯಲ್ಲೂ ಕೇಳಿದರೂ ಇದೆ ಮೊದಲು ಇಷ್ಟೊಂದು ನೀರು ನೋಡ್ತಿರೋದು ಎಂಬ ಮಾತುಗಳೇ ಕೇಳಿ ಬರುತ್ತಿದ್ದರೆ,ಮತ್ತೊಂದು ಕಡೆ ರೈತಾಪಿ ವರ್ಗದಲ್ಲಿ ಮಲೆನಾಡಿನ ಕಲರವ ಕಂಗೊಳಿಸುವಂತೆ ಮಾಡಿದೆ.

ಹೆಚ್ಚು ಮಳೆ ಬೀಳದೆ ಬರದ ಭೂಮಿಯಾಗಿ ಬಯಲುಸೀಮೆಯಾಗಿದ್ದ ಚಿತ್ರದುರ್ಗ ಜಿಲ್ಲೆ ಹಾಗೂ ಹಿರಿಯೂರಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಲಿ ಎಂದು ಮೈಸೂರು ಮಹಾರಾಜರು ವೇದಾವತಿ ನದಿಗೆ ಅಡ್ಡಲಾಗಿ ವಾಣಿವಿಲಾಸಪುರ ಬಳಿ ಮಾರಿಕಣಿವೆ ಅಥವಾ ವಾಣಿ ವಿಲಾಸ ಜಲಾಶಯ ಕಟ್ಟಲಾಗಿದೆ.ಇದೀಗ ಈ ಅಣೆಕಟ್ಟಿಗೆ 112 ವರ್ಷ ಇತಿಹಾಸವಿದೆ.

ಚಂಡಮಾರುತದ ಎಫೆಕ್ಟ್ ನಿಂದ ಕಳೆದ ತಿಂಗಳ ಹಿಂದೆ ಸುರಿದ ಜಿಟಿ ಜಿಟಿ ಮಳೆ ಹಾಗೂ ಭದ್ರಾ ಜಲಾಶಯದಿಂದ ಹರಿಸಿದ ನೀರಿನಿಂದ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರಲು ಕಾರಣವಾಯಿತು. 1956 ರಲ್ಲಿ 125 ಅಡಿ, 1957 ರಲ್ಲಿ 125.05 ಅಡಿ, 1958 ರಲ್ಲಿ 124.25 ಅಡಿ ನೀರು ಸಂಗ್ರಹವಾಗಿತ್ತು. 2000 ರಲ್ಲಿ 122.50 ಅಡಿ, 2021 ರಲ್ಲಿ 124.40 ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಇದೀಗ 1958 ರ ದಾಖಲೆಯನ್ನು ಹಿಂದಿಕ್ಕಿ (65 ವರ್ಷಗಳ ನಂತರ) 125 ಅಡಿ ದಾಟಿ ಹೊಸ ದಾಖಲೆಯನ್ನು ನಿರ್ಮಿಸುವತ್ತಾ ಡ್ಯಾಂ ದಾಪುಗಾಲಿಡುತ್ತಿರುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ರಾಜ್ಯದ ಬಹುತೇಕ ಜಲಾಶಯಗಳು ಮುಂಗಾರು ಮಳೆಯಲ್ಲಿ ತುಂಬುವುದು ವಾಡಿಕೆ. ಆದರೆ ವಿವಿ ಸಾಗರ ಜಲಾಶಯದ ನೀರಿನ ಹರಿವು ಗಮನಿಸಿದಾಗ ಹಿಂಗಾರು ಮಳೆಗೆ ಡ್ಯಾಂ ನಲ್ಲಿ ನೀರು ಶೇಖರಣೆಯಾಗುತ್ತಿರುವುದು ವಿಶೇಷವಾಗಿದೆ.

ವೇದಾವತಿ ನದಿ ಅಡ್ಡಲಾಗಿ ಕಟ್ಟಿರುವ ಡ್ಯಾಂ:”ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ ವೇದಾ ಎಂಬ ನದಿ ಕಡೂರಿನ ಬಳಿ ಅವತಿ ಎಂಬ ನದಿಯನ್ನು ಸೇರಿ ಅವು ಮುಂದೆ “ವೇದಾವತಿ ನದಿಯಾಗಿ” ಹರಿಯುತ್ತದೆ” ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಬಳಿ ಎರಡು ಗುಡ್ಡಗಳ ಮಧ್ಯೆ ನಿರ್ಮಿಸಿರುವ ಜಲಾಶಯವೇ ಮಾರಿಕಣಿವೆ ಡ್ಯಾಂ.ಇನ್ನೂ ವಾಣಿವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು 1897 ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ ” ತಾರಾ ಚಾಂದ್ ದಲಾಲ್” ಎಂಬ ಇಂಜಿನೀಯರ್ ನೇತೃತ್ವದ ತಂಡವು ಆಗಿನ ಮೈಸೂರು ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಮುಂದಾಳತ್ವದಲ್ಲಿ ನಿರ್ಮಿಸಲಾಗಿದೆ. ಅಲ್ಲದೇ ಮೈಸೂರಿನಲ್ಲಿ ಇರುವ ಕೆಆರ್ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಿವಿ ಸಾಗರದ ನೀಲಿನಕ್ಷಯೇ ಮೂಲ ಎಂದು ಹೇಳಲಾಗುತ್ತಿದೆ.

ಡೆಡ್ ಸ್ಟೋರೇಜ್ ತಲುಪಿದ್ದ ಡ್ಯಾಂ : ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಬತ್ತಿ ಹೋಗಿ, ಡೆಡ್ ಸ್ಟೋರೆಜ್ ತಲುಪಿದ್ದ ಡ್ಯಾಂ, ದಿನ ಕಳೆದಂತೆ ನೀರಿನ ಮಟ್ಟ ತುಂಬುವ ಹಂತಕ್ಕೆ ಬಂದು ನಿಂತ ಜಲಾಶಯ.
ತಾಲೂಕಿನಲ್ಲಿ ನೀರು ಇಲ್ಲದೆ ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಹಿರಿಯೂರು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ, ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಸಂಭವಿಸಿತ್ತು. ಹಾಗೂ ತೋಟಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
ಇದೀಗ ತಾಲ್ಲೂಕಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳಿಗೆ ಹೊಸ ಚಿಗುರು ಬಂದಿದೆ.

ಇನ್ನು ಹೊಸದುರ್ಗ, ಹಿರಿಯೂರು ಚಿತ್ರದುರ್ಗ ಭಾಗದಲ್ಲಿ 800 ರಿಂದ 1000 ಅಡಿ ಬೋರ್ವೆಲ್ ಕೊರೆಸಿದರು ನೀರು ಸಿಗುತ್ತಿರಲಿಲ್ಲ. ಆದರೆ ವಾಣಿವಿಲಾಸ ಜಲಾಶಯದಲ್ಲಿ ನೀರು ಭಾರಿ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದಂತೆ ಡ್ಯಾಂ ಸುತ್ತ ಮುತ್ತಲಿನ ಜಮೀನು ಪ್ರದೇಶಗಳ ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಬರುತ್ತಿವೆ. ಹೊಸದುರ್ಗ, ಹಿರಿಯೂರು ತಾಲೂಕಿನ ಕೆಲ ಭಾಗಗಳಲ್ಲಿ ಕೇವಲ 50 ರಿಂದ 200 ಅಡಿಗೆ ನೀರು ಸಿಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ, ಚಟುವಟಿಕೆಗಳು ಸಂಭ್ರಮದಿಂದ ಗರಿಗೆದರಿದ್ದು ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಜಲಾಶಯದಲ್ಲಿ ನೀರು ಹೆಚ್ಚಾಗುತ್ತಿದ್ದಂತೆ ಸುತ್ತಲಿನ ಪರಿಸರ ರಮ್ಯ ರಮಣೀಯವಾಗಿ ನೋಡುಗರನ್ನು ಆಕರ್ಷಿಸುತ್ತಿದೆ. ಜಲಾಶಯ ತುಂಬು ಹಂತಕ್ಕೆ ಬಂದಿರೋದು, ರೈತ ಸಮುದಾಯದಲ್ಲಿ ಚೈತನ್ಯ ಮೂಡಿಸಿದ್ರೆ, ಮತ್ತೊಂದು ಕಡೆ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ತಾಲೂಕಿನ ನಗರ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿನ ದಾಹ ನೀಗಿದಂತಾಗಿದೆ. ಸತತ ಬರದಿಂದ ಕೃಷಿಯನ್ನೇ ಮರೆತಿದ್ದ ರೈತರು ಹಗಲಿರುಳು ತಮ್ಮ ಜಮೀನು, ತೋಟಗಳಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವಂತೆ ಮಾಡಿದೆ ವಾಣಿವಿಲಾಸ ಜಲಾಶಯ.

ಡ್ಯಾಂ ತಲುಪುವುದು ಹೇಗೆ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರ ಗ್ರಾಮದ ಸಮೀಪ ಈ ಡ್ಯಾಂ ನಿರ್ಮಾಣ ಮಾಡಲಾಗಿದೆ.
ಬೆಂಗಳೂರಿನಿಂದ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಚಾರಿಸುವಾಗ ಹಿರಿಯೂರು ನಗರದ ಮೂಲಕ ಹೊಸದುರ್ಗ ರಸ್ತೆಯಲ್ಲಿ 18 ಕಿಲೋಮೀಟರ್ ದೂರದ ಎಡಭಾಗದಲ್ಲಿ ಡ್ಯಾಂ ಸಿಗುತ್ತದೆ. ಶಿವಮೊಗ್ಗ ದಿಂದ ತರೀಕೆರೆ, ಅಜ್ಜಂಪುರ, ಹೊಸದುರ್ಗ ಮಾರ್ಗವಾಗಿ ಹಿರಿಯೂರು ಕಡೆ ಬರುವಾಗ ( ಸುಮಾರು 25 ಕಿಮೀ) ಬಲಭಾಗಕ್ಕೆ ಜಲಾಶಯ ನೋಡಬಹುದು. ದಾವಣಗೆರೆಯಿಂದ ಚಿತ್ರದುರ್ಗ ಮೂಲಕ, ಬಳ್ಳಾರಿಯಿಂದ ಚಳ್ಳಕೆರೆ, ಹಿರಿಯೂರು, ಪಾವಗಡ ಧರ್ಮಪುರ ಹೋಬಳಿ ಮೂಲಕ ಮಾರಿಕಣಿವೆ ತಲುಪಬಹುದು. ತುಮಕೂರಿನಿಂದ ಹಿರಿಯೂರು ಮೂಲಕ ಜಲಾಶಯ ತಲುಪಿ ಜಲಾಶಯ ವೀಕ್ಷಿಸಬಹುದು.
ಹಿರಿಯೂರಿನಿಂದ ಹೊಸದುರ್ಗ,ಹೊಸದುರ್ಗ ದಿಂದ ಹಿರಿಯೂರು ಮಾರ್ಗವಾಗಿ ಖಾಸಗಿ ಬಸ್ ಸೌಲಭ್ಯ ಇದೆ. ಡ್ಯಾಂ ವೀಕ್ಷಿಸಿದ ಬಳಿಕ ಕಣಿವೆ ಮಾರಮ್ಮ ಹಾಗೂ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿಯ ದರ್ಶನ ಪಡೆಯಬಹುದು. (ವಿಶೇಷವಾಗಿ ಶ್ರೀ ರಂಗನಾಥ ದೇವರಿಗೆ ಹಾವು ಚೇಳು ಜರಿ ಹರಕೆ ಸಲ್ಲಿಸುವ ಪದ್ಧತಿಯು ಇಂದಿಗೂ ನಡೆದುಕೊಂಡು ಬಂದಿದೆ).

ಒಟ್ಟಾರೆಯಾಗಿ ಮಳೆ ಇಲ್ಲದೆ ಬಳಲಿ ಬೆಂಡಾಗಿ ಬಯಲು ಸೀಮೆಯಾಗಿದ್ದ ಜಿಲ್ಲೆಯ ಏಕೈಕ ಜೀವನಾಡಿ ವಾಣಿವಿಲಾಸ ಸಾಗರದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಇಡೀ ಜಿಲ್ಲೆಯ ರೈತ ಸಮುದಾಯದಲ್ಲಿ ಹೊಸ ಭರವಸೆ ಉಂಟು ಮಾಡಿದೆ. ಈ ಮೂಲಕ ಜಿಲ್ಲೆಗೆ ಅಂಟಿಕೊಂಡಿದ್ದ ಬರದ ನೀರಿನ ಬವಣೆ ದೂರವಾಗಿದೆ.

About The Author

Leave a Reply

Your email address will not be published. Required fields are marked *