April 28, 2024

Chitradurga hoysala

Kannada news portal

ತುರ್ತು ಸಂಪರ್ಕ ಸಾಧಿಸಲು ಬಂದಂತ ಮೊಬೈಲ್‌, ಸುದ್ಧಿ, ಹವಾಮಾನ ತಿಳಿಯಲು ಬಂದಂತಹ ಟಿ.ವಿ. ಇಂದು ನಮ್ಮ ಮನೆ, ಮನದ ಸಂಬಂಧಗಳ ಸಂಪರ್ಕವನ್ನೇ ನಿಲ್ಲಿಸುವ ಮಟ್ಟಕ್ಕೆ ಬಂದು ನಿಂತಿವೆ : ಶಿಕ್ಷಕ – ಟಿ.ಪಿ.ಉಮೇಶ್

1 min read



ಪೋಷಕರೆ ಟಿವಿ ಮೊಬೈಲ್ ಬಿಡಿ ಮಕ್ಕಳಿಗೆ ಪಾಠ ಹೇಳಿಕೊಡಿ

ಹೊಳಲ್ಕೆರೆ :
ತುರ್ತು ಸಂಪರ್ಕ ಸಾಧಿಸಲು ಬಂದಂತ ಮೊಬೈಲ್‌, ಸುದ್ಧಿ, ಹವಾಮಾನ ತಿಳಿಯಲು ಬಂದಂತಹ ಟಿ.ವಿ. ಇಂದು ನಮ್ಮ ಮನೆ, ಮನದ ಸಂಬಂಧಗಳ ಸಂಪರ್ಕವನ್ನೇ ನಿಲ್ಲಿಸುವ ಮಟ್ಟಕ್ಕೆ ಬಂದು ನಿಂತಿವೆ. ಬೇಕಾದ್ದಕ್ಕಿಂತ ಬೇಡವಾದ ಸುದ್ಧಿಗಳನ್ನೇ ಮತ್ತೆ ಮತ್ತೆ ತೋರಿಸಿ ಮನೆಮಂದಿ ಮಕ್ಕಳ ಮನಸ್ಸುಗಳ ಅರಳಿಸುವುದಕ್ಕಿಂತ ಕೆರಳಿಸುವುದೇ ಹೆಚ್ಚಾಗಿವೆ. ಪೋಷಕರೆ ಮೊಬೈಲ್‌ , ಟಿ.ವಿ.ಬಿಡಿ ಮಕ್ಕಳಿಗೆ ಪಾಠ ಹೇಳಿಕೊಡಿ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ.ಉಮೇಶ್ ತಿಳಿಸಿದರು.
ಅಮೃತಾಪುರ ಗ್ರಾಮದಿ ಲಸಿಕೆ ಪಡೆಯಿರಿ ಕರೋನಾ ಓಡಿಸಿರಿ ಜಾಗೃತಿ ಅಭಿಯಾನದಲ್ಲಿ ಶಾಲಾ ಮಕ್ಕಳ ಸುರಕ್ಷತೆಗಾಗಿ ಜಾಥಾ ಸಂಘಟಿಸಿ ಅವರು ಮಾತನಾಡಿದರು. ಕರೋನಾ ಸಂದರ್ಭದ ಸಂಕಷ್ಟದಿ ಭೌತಿಕ ಶಾಲಾ ಪಾಠಗಳ ಕಲಿಕೆ ಇರದ ಕಾಲದಿ ಕಲಿಕೆಯ ನಿರಂತರತೆಗೆ ಕೊಂಚ ಸಹಾಯಕವಾಗಿ ಮೊಬೈಲ್ ವಾಟ್ಸಪ್ ಯೂಟೂಬ್ ಪಾಠ ಬಳಸಲಾಯ್ತು. ಇದು ಪೋಷಕರ ನೇರ ನಿಗಾವಣೆಯಲ್ಲೆ ನಡೆಯುವ ನಿರ್ಬಂಧವನ್ನು ಹೊಂದಿತ್ತು. ಕರೋನಾಕ್ಕೆ ಲಸಿಕೆ ಬಂದು ಅದನ್ನು ಸರ್ಕಾರ ಸಾರ್ವತ್ರಿಕವಾಗಿ ನೀಡುತ್ತ ರೋಗ ತಹಬಂದಿಗೆ ಬಂದಿರುವ ಈಗ ಶಾಲೆ ತರಗತಿಗಳು ನಡೆಯುತ್ತಿವೆ. ಶಿಕ್ಷಕರ ಸಮ್ಮುಖದಿ ಮಕ್ಕಳು ನಲಿಯುತ್ತ ಕಲಿಯುತ್ತಿದ್ದಾರೆ. ಈಗ ಮೊಬೈಲ್ ಅನವಶ್ಯಕ. ಅದರಲ್ಲೂ ಪ್ರಾಥಮಿಕ ಹಾಗು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಅನಗತ್ಯವಾಗಿದೆ. ಮೊಬೈಲ್ ನಲ್ಲಿ ಅನಗತ್ಯ ಚಿತ್ರ, ಟಿಕ್ ಟಾಕ್ ವಿಡಿಯೋ ಸಿನೆಮಾ ಹಾಡು ವೀಕ್ಷಿಸುವ ಗೀಳಿಗೆ ಮಕ್ಕಳು ಒಳಗಾದರೆ ಅವರನ್ನ ಕಲಿಕೆಯ ದಾರಿಗೆ ತರುವುದು ದುಸ್ತರ. ಕಳೆದ ಒಂದೂವರೆ ವರ್ಷದ ಶಾಲೆಗಳಿಲ್ಲದೆ ಮಕ್ಕಳ ಕಲಿಕೆ ನಡೆದಿದ್ದರು ಅದು ಪ್ರಾಯೋಗಿಕವಾಗಿ ಪರಿಣಾಮಕಾರಿಯಾಗಿಲ್ಲ.
ಈಗ ಶಾಲೆಗಳಲ್ಲಿ ನಿರಂತರ ಕಲಿಕೆ ನಡೆಯುತ್ತಿದೆ. ಮಕ್ಕಳು ಶಾಲೆಯಲ್ಲಿ ಕಲಿತ ಪಾಠಗಳನ್ನು ಪೋಷಕರು ಮನೆಯಲ್ಲಿ ಪುನಃ ಅಭ್ಯಾಸ ಮಾಡಿಸಿರಿ. ಕಲಿತ ಲೆಕ್ಕಗಳನ್ನು ಪುನರ್ಮನನ ಮಾಡಿಸಿರಿ. ಕೇವಲ ಶಿಕ್ಷಕರೊಬ್ಬರೆ ಮಕ್ಕಳ ಸಂಪೂರ್ಣ ಕಲಿಕೆಯ ನಿರ್ವಹಿಸಲಾಗದು. ಶಿಕ್ಷಕರು ಕಲಿಸಿದ ವಿಷಯಗಳನ್ನು ಮನೆಯಲ್ಲಿ ನಿತ್ಯವೂ ಸಂಜೆ ಮತ್ತು ಮುಂಜಾನೆ ಪೋಷಕರು ತಮ್ಮ ಮಕ್ಕಳಿಗೆ ಓದಲು ಹಚ್ಚಬೇಕು. ಸಹನೆ ಸಮಾಧಾನದಿಂದ ಕುಳಿತು ಹೇಳಿಕೊಡಬೇಕು. ಮನೆಯೇ ಮೊದಲ ಪಾಠಶಾಲೆ ತಂದೆತಾಯಿ ಮೊದಲ ಗುರುಗಳು, ನೂಲಿನಂತೆ ಸೀರೆ ತಂದೆ ತಾಯಿಯಂತೆ ಮಕ್ಕಳು ಎಂಬ ಮಾತುಗಳನ್ನು ಪೋಷಕರು ಸದಾ ನೆನಪಿಟ್ಟುಕೊಂಡು ಉತ್ತಮರಾಗಿ ನಡೆಯಬೇಕು. ಇಂದು ತಂದೆ ತಾಯಿ ಪೋಷಕರು ತಮ್ಮ ಬಿಡುವಿನ ವೇಳೆಯಲ್ಲಿ ಟಿ.ವಿ.ಮುಂದೆ ಕೂತು ಇಲ್ಲವೇ ಮೊಬೈಲ್ ಹಿಡಿದು ಕೂರುವುದು ಮಕ್ಕಳ ಮನಸ್ಸಿನ ಮೇಲೆಯು ದುಷ್ಪರಿಣಾಮ ಬೀರುತ್ತದೆ. ಪುಸ್ತಕಗಳು ಜ್ಞಾನದ ಹೆಬ್ಬಾಗಿಲುಗಳು. ಪುಸ್ತಕ ಹಿಡಿಯಿರಿ ಏಳ್ಗೆ ಹೊಂದಿರಿ. ಕರೋನಾ ಮತ್ತೆ ಬಂದರೆ, ಶಾಲೆಗಳು ಮುಚ್ಚಲ್ಪಟ್ಟರೆ ಮಕ್ಕಳ ಕಲಿಕೆ ಮತ್ತೆ ಕುಂಠಿತವಾಗುತ್ತದೆ. ಹಾಗಾಗಿ ಎಲ್ಲ ಪೋಷಕರು ಮಕ್ಕಳ ಭವ್ಯ ಭವಿಷ್ಯಕ್ಕಾಗಿ ತಪ್ಪದೆ ಎರಡು ಡೋಜ್ ಲಸಿಕೆ ಪಡೆಯಿರಿ ಎಂದು ತಿಳಿಸಿದರು.
ಮಕ್ಕಳ ಸುರಕ್ಷತೆಗಾಗಿ ಗ್ರಾಮದ ಪೋಷಕರ ಜಾಗೃತಿ ಅಭಿಯಾನದಲ್ಲಿ ಶಾಲಾ ಮುಖ್ಯಶಿಕ್ಷಕರಾದ ಡಿ.ಸಿದ್ಧಪ್ಪ. ಸಹಶಿಕ್ಷಕಿ ರೇಷ್ಮಾ ಅಂಗನವಾಡಿ ಶಿಕ್ಷಕಿ ರಾಧ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಲೋಕೇಶಪ್ಪ ಗ್ರಾಮಸ್ಥರಾದ ಪೂ.ಈರಪ್ಪ, ಪ್ರಕಾಶ್, ಕುಮಾರ್, ರುದ್ರಸ್ವಾಮಿ, ನಾಗೇಶಪ್ಪ, ಮಂಜಮ್ಮ, ತಿಮ್ಮಕ್ಕ, ಶಾರದಮ್ಮ, ವೀಣಾ, ಆಶಾ ಕಾರ್ಯಕರ್ತೆ ರತ್ನಮ್ಮ ರಾಮಚಂದ್ರಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಸಾಕಮ್ಮ ಮತ್ತು ಅಮೃತಾಪುರ ಶಾಲಾ ಮಕ್ಕಳು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *