April 27, 2024

Chitradurga hoysala

Kannada news portal

ಶಿವಾನಂದ ತಗಡೂರು ಹೇಳಿದ ಕೋವಿಡ್ ಕಥೆಗಳು ‌‌‌‌ ಇದು ಕಥೆಯಲ್ಲ. ಕಟು ವಾಸ್ತವ… ಆಸ್ಪತ್ರೆಯವರೇ ಹಣ ಹಿಂದಿರುಗಿಸಬೇಕಾಯಿತು…

1 min read



ಶಿವಾನಂದ ತಗಡೂರು ಹೇಳಿದ ಕೋವಿಡ್ ಕಥೆಗಳು ‌‌‌‌

ಇದು ಕಥೆಯಲ್ಲ. ಕಟು ವಾಸ್ತವ…

ಆಸ್ಪತ್ರೆಯವರೇ ಹಣ ಹಿಂದಿರುಗಿಸಬೇಕಾಯಿತು…

ಕೊರೊನಾಕ್ಕೆ ಬಲಿಯಾದ ಮೊದಲ ಪತ್ರಕರ್ತ ಸಿಂಕ ಸುರೇಶ್, ‘ಕನ್ನಡಪ್ರಭ’ ಪತ್ರಿಕೆಯ ಕೆ ಆರ್ ಪೇಟೆ ವರದಿಗಾರ, ಯಡಿಯೂರಪ್ಪ ಅವರ ತವರು ಕ್ಷೇತ್ರ ಬೂದಿಗೆರೆ ಸಮೀಪದ ಕೆ ಆರ್ ಪೇಟೆಯವರು. ಪತ್ರಿಕೆಯ ವರದಿಗಾರ ಮಾತ್ರವಲ್ಲದೇ ತಮ್ಮ ಬದುಕನ್ನು ತೂಗಿಸಿಕೊಳ್ಳಲು ಮನೆ ಮನೆಗೆ ಪತ್ರಿಕೆ ಹಾಕುತ್ತಿದ್ದರು. ಪತ್ರಿಕೆಗಳ ಏಜೆನ್ಸಿಯನ್ನು ತೆಗೆದುಕೊಂಡಿದ್ದರು.

ಬದುಕಿನ ಉಯ್ಯಾಲೆಯಲ್ಲಿ ಆರಕ್ಕೇರದಂತೆ ಮೂರಕ್ಕಿಳಿಯದಂತೆ ಜೀಕುತ್ತಲೇ ಇದ್ದ ಸುರೇಶ್‌ಗೆ, ಅವರ ಬದುಕಿನ ಸಣ್ಣಪುಟ್ಟ ಖುಷಿಗೆ ಆ ವರ್ಷದ ಗೌರಿಹಬ್ಬವೇ ಕೊನೆಯ ಹಬ್ಬವಾಯ್ತು, ಗೌರಿಹಬ್ಬಕ್ಕೆ ಎಂದು ಸುರೇಶ್, ಪತ್ನಿಯ ತವರಿಗೆ ತುಂಬ ಖುಷಿಯಿಂದಲೇ ಬಂದರು. ಹೊರಟು ನಿಂತಾಗ ಇನ್ನಷ್ಟು ದಿನ ಇರಿ ಎನ್ನುವ ಒತ್ತಾಯ. ‘ಇಲ್ಲೇ ಪಕ್ಕದ ಊರೇ ಅಲ್ವೇ ಯಾವಾಗ ಕರೆದರೂ ಬರ್ತೀವಿ’ ಎಂದ ಸುರೇಶ್ ಮಾತು ಅಲ್ಲಿಗೆ ಕೊನೆಯಾಯ್ತು.

ತಮ್ಮ ಮನೆಗೆ ಹಿಂದಿರುಗಿದ ನಂತರ ಸುರೇಶ್‌ಗೆ ಕೆಮ್ಮು ಶುರುವಾಯ್ತು. ಅದು ಹಸಿ ಕಡಲೆಕಾಯಿ ತಿಂದಿದ್ದಕ್ಕೆ ಬಂದಿದೆ ಎಂದು ಸುರೇಶ್ ತಮಗೆ ತಾವೇ ಸಮಾಧಾನ ಮಾಡಿಕೊಂಡರಲ್ಲದೆ ಹೆಂಡತಿಗೂ ಹಾಗೇ ಧೈರ್ಯ ಹೇಳಿದರು. ಕೋವಿಡ್ ಇರಬಹುದೇನೋ ಎನ್ನುವ ಪುಟ್ಟ ಸಂಶಯವೂ ಅವರಿಗೆ ಬರಲಿಲ್ಲ. ಪರೀಕ್ಷೆ ಮಾಡಿಸುವುದಂತೂ ದೂರವೇ ಉಳಿಯಿತು. ಒಂದು ಪುಟ್ಟ ನಿರ್ಲಕ್ಷ್ಯ ಅವರ ಬದುಕನ್ನೇ ಅಡಿಮೇಲು ಮಾಡಿ ಹಾಕಿತು.

ಕೋವಿಡ್ ಎಂದು ಗೊತ್ತಾದಾಗ ಮನೆಯವರೆಲ್ಲಾ ಹೌಹಾರಿದರು. ತಕ್ಷಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಪತ್ನಿ ಉಮಾಗೂ ಕೋವಿಡ್ ಲಕ್ಷಣ ಕಾಣಿಸಿತು. ಅವರನ್ನು ಸ್ಥಳೀಯ ಆಸ್ಪತ್ರೆಗೆ ಅಡ್ಡಿಟ್ ಮಾಡಿದರು. ತಾನು ಸ್ಥಳೀಯ ಆಸ್ಪತ್ರೆಯಲ್ಲಿದ್ದರೂ, ಗಂಡನಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಳ್ಳೆ ಚಿಕಿತ್ಸೆ ಸಿಗುತ್ತಿರುವ ಕಾರಣಕ್ಕೆ ಅವರು ಬದುಕಿ ಬರುತ್ತಾರೆ ಎನ್ನುವ ಬಲವಾದ ನಂಬಿಕೆ ಹೆಂಡತಿಗೆ ಹಾಗೂ ಅವರ ಮನೆಯವರಿಗೆಲ್ಲ. ಆದರೆ ಆಗಿದ್ದೇ ಬೇರೆ. ಆರೋಗ್ಯ ತಪ್ಪಿದ ಕೇವಲ 10 ದಿನಕ್ಕೆ ಸುರೇಶ್ ಜಗತ್ತಿನ ಜೊತೆಗಿನ ಕೊಂಡಿ ಕಳಚಿಕೊಂಡರು.

ಇದ್ದಷ್ಟು ಕಾಲವೂ ಪತ್ರಿಕೆ ಹಾಗೂ ಸಮಾಜ ಸೇವೆ ಎರಡೇ ಸುರೇಶ್ ಕಣ್ಣ ಮುಂದೆ ಇದ್ದದ್ದು. ಸಂಸಾರಕ್ಕೆ ಆಧಾರವಾಗಿ ನಾನಿದ್ದೇನಲ್ಲ ಎಂದೇ ಅವರು ಯಾವತ್ತೂ ಸಮಾಧಾನ ಹೇಳುತ್ತಿದ್ದದ್ದು. ನಮ್ಮ ಬದುಕು ಹೆಂಡತಿಗೆ ಸರಾಗವಾಗಿ ಸಾಗುತ್ತದೆ ನಾನಿರುವವರೆಗೆ ಎನ್ನುವ ಧೈರ್ಯ ಮೇಲಿಂದ ಮೇಲೆ ಹೇಳುತ್ತಿದ್ದರು. ಆದರೆ ಅವರು ಇರುವವರೆಗೆ ಮಾತ್ರ.. ಎನ್ನುವ ಕಟು ಸತ್ಯ ಗೊತ್ತಾದದ್ದು ಕೋವಿಡ್‌ನಿಂದ ಅವರು ಇಲ್ಲವಾದ ಮರು ಕ್ಷಣದಿಂದಲೇ.

ಅವರು ಇಲ್ಲವಾದ ಮರುಕ್ಷಣ ಆಸ್ಪತ್ರೆಯವರು ತಯಾರಿಸಿದ ಬಿಲ್ ನೋಡಿದ್ದೇ ಹೇಗಾದರೂ ಮಕ್ಕಳ ಮುಖ ನೋಡಿಯಾದರೂ ಬದುಕುತ್ತೇನೆ ಎಂದು ಮನಸ್ಸು ಗಟ್ಟಿಮಾಡಿಕೊಳ್ಳುತ್ತಿದ್ದ ಉಮಾ ಅವರಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದ ಅನುಭವವಾಯ್ತು.
ನಾನು ಆರೋಗ್ಯವಾಗಿದ್ದೇನೆ. ಅಂದಂದಿನ ಬದುಕಿಗೆ ಬೇಕಾದಷ್ಟು ದುಡಿಯುತ್ತಿದ್ದೇನೆ ಎನ್ನುವ ಧೈರ್ಯದ ಮೇಲೆ ಸುರೇಶ್ ಬೇರೆ ಏನೂ ಮಾಡಿದವರಲ್ಲ.ಆದರೆ ಅನಿರೀಕ್ಷಿತವಾಗಿ ಬಂದ ಕೋವಿಡ್ ಅವರನ್ನು ಇಲ್ಲವಾಗಿಸಿತು.ಸುರೇಶ್ ಅವರಿಗೆ ಹೇಳಿಕೊಳ್ಳುವಂತಹ ಆದಾಯದ ಮೂಲವೂ ಇರಲಿಲ್ಲ. ಅವರಿದ್ದ ಕೆ ಆರ್ ಪೇಟೆಯಲ್ಲಿ ಅವರದ್ದು ಎನ್ನುವ ಮನೆಯಾಗಲೀ, ನಿವೇಶನವಾಗಲೀ ಇರಲಿಲ್ಲ.

ಅವರು ಅಪಾರವಾಗಿ ಗಳಿಸಿದ್ದು ಊರ ಜನರ ನಮಸ್ಕಾರ ಮಾತ್ರ ಪರಿಚಿತರಿಂದ ಒಂದು ಕಾಫಿ, ಟೇ. ಕೋವಿಡ್ ಪಾಸಿಟಿವ್ ಎಂದಾದಾಗ ಅವರನ್ನು ಮಂಡ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಕೈ ಮೀರುತ್ತಿದೆ ಎಂದಾದಾಗ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಬದುಕಿನ ಆಧಾರವಾದ ಪತಿಯನ್ನು ಉಳಿಸಿಕೊಡಿ ಎಂಬುದು ಒಂದೇ ಪತ್ನಿ ಉಮಾರ ಕೋರಿಕೆಯಾಗಿತ್ತು.ಆಸ್ಪತ್ರೆಯ ಪ್ರತಿ ದಿನದ ಖರ್ಚೇ ಹೆಚ್ಚು ಕಮ್ಮಿ 1 ಲಕ್ಷ ರೂ.ಆದಾಗ ಉಮಾ ತಬ್ಬಿಬ್ಬಾದರು. ಹಣ ತರುವುದು ಎಲ್ಲಿಂದ ಎಂದು ಗೊತ್ತಾಗಲಿಲ್ಲ. ಗೊತ್ತಿರುವವರ ಬಳಿ, ಕುಟುಂಬದವರ ಬಳಿ ಸಾಲ ಮಾಡಿ 3 ಲಕ್ಷ ರೂ. ಆಸತೆಗೆ ಆಸ್ಪತ್ರೆಗೆ ಕಟ್ಟಿದ್ದಾಯ್ತು.

ಇದೆಲ್ಲಾ ಇಲ್ಲಿಯವರೆಗಿನ ಚಿಕಿತ್ಸೆಗಾಯ್ತು.ಮುಂದಿನ ಚಿಕಿತ್ಸೆ ಮಾಡಬೇಕೆಂದರೆ ಮತ್ತೆ ಹಣ ಕಟ್ಟಿ ಎಂದು ಆಸ್ಪತ್ರೆಯವರು ತಾಕೀತು ಮಾಡಿದಾಗ ಉಮಾ ತಬ್ಬಿಬ್ಬು,ಕಣ್ಣಿಗೆ ಕತ್ತಲೆ ಆವರಿಸಿದ ಅನುಭವ. ಕತ್ತಿನಲ್ಲಿದ್ದ ತಾಳಿಯೊಂದನ್ನು ಬಿಟ್ಟು ಇದ್ದಬದ್ದ ಒಡವೆಯನ್ನೆಲ್ಲಾ ಅಡವಿಟ್ಟರು.ಮತ್ತೆ 3.5 ಲಕ್ಷ ರೂ.ಆಸ್ಪತ್ರೆಗೆ ಕಟ್ಟಿದರು.

ಆದರೂ ಸುರೇಶ್ ಬದುಕುಳಿಯಲಿಲ್ಲ.ಉಮಾ ಬದುಕು ತತ್ತರಿಸಿತು.ಸುರೇಶ್ ಸಾವಿನ ನೋವಿನಿಂದ ತತ್ತರಿಸುತ್ತಿದ್ದಾಗಲೇ ಆ ಗಾಯಕ್ಕೆ ಉಪ್ಪು ಸವರುವ ಕೆಲಸವನ್ನು ಆಸ್ಪತ್ರೆ ಮಾಡಿತು. ಯಾವ ಕಾರಣಕ್ಕೂ ಒಟ್ಟು ಬಿಲ್ 13 ಲಕ್ಷ ಪಾವತಿಸುವವರೆಗೆ ಶವವನ್ನು ಹಸ್ತಾಂತರಿಸಲು ಸಾಧ್ಯವೇ ಇಲ್ಲ ಎಂದರು.

ಆಸ್ಪತ್ರೆಯಲ್ಲಿದ್ದ ಏಳೆಂಟು ದಿನಕ್ಕೆ ಆದ ಬಿಲ್ ಬರೋಬರಿ 13 ಲಕ್ಷ ರೂ.!!

ಬದುಕಿನ ಆಧಾರವಾಗಿದ್ದ,ಪ್ರೀತಿಯ ಪತಿಯನ್ನೇ ಕಳೆದುಕೊಂಡ ಹೆಣ್ಣುಮಗಳಿಗೆ ಶವಸಂಸ್ಕಾರ ಮಾಡುವುದು ಹೇಗೆ ಎನ್ನುವ ಸಮಸ್ಯೆ ಎದುರಾಯಿತು.ಸ್ಥಳೀಯ ಮುಖಂಡರ ಆಗ್ರಹ, ಮತ್ತೆ ಗಲಾಟೆ ಆಗಬಹುದು ಎಂಬ ಕಾರಣಕ್ಕೆ ಆಸ್ಪತ್ರೆಯವರು ಒಂದು ಷರತ್ತು ಹಾಕಿ ಶವವನ್ನು ಒಪ್ಪಿಸಿದರು.

ಆ ಷರತ್ತು ಏನೆಂದರೆ ಅಂತ್ಯ ಸಂಸ್ಕಾರದ ನಂತರ ಆಸ್ಪತ್ರೆಯ ಬಿಲ್ ಕಟ್ಟಬೇಕು ಎಂಬುದು.ಅಂತೂ ಇಂತೂ ಶವಸಂಸ್ಕಾರ ಮುಗಿಸಿ

ಕುಟುಂಬಸ್ಥರು ಮನೆಗೆ ಹಿಂದಿರುಗುತ್ತಿದ್ದಂತೆಯೇ ಆಸ್ಪತ್ರೆಯವರ ದೂರವಾಣಿ ಕರೆ-ಬಾಕಿ ಬಿಲ್ ಕಟ್ಟಿ ಅಂತ!!

ಒಟ್ಟು ಆಸ್ಪತ್ರೆಯ 13 ಲಕ್ಷ ಬಿಲ್ಲಿನಲ್ಲಿ ಮೊದಲೇ ಆರೂವರೆ ಲಕ್ಷ ಕಟ್ಟಿಯಾಗಿತ್ತು.ಮಿಕ್ಕ ಬಿಲ್ಲನ್ನು ಕಟ್ಟಿ ಅಂತ ಪ್ರತಿದಿನವೂ ಆಸ್ಪತ್ರೆಯವರ ಕರೆ,ಆಕೆ ಪತಿಯ ಚಿಕಿತ್ಸೆಗಾಗಿ ತನ್ನ ಮೈಮೇಲಿದ್ದ ಒಡವೆ,ತವರು ಮನೆಯವರಿಂದ ಸಹಾಯ ಎಲ್ಲವನ್ನೂ ಪಡೆದು ಈಗ ಬರಿಗೈಲ್ಲಿದ್ದಾಳೆ.

ಇಂತಹ ಭಾರದ ದಿನಗಳಲ್ಲಿ, ತತ್ತರಗೊಂಡಿದ್ದ ಉಮಾ ಅವರು ತಮ್ಮ ಮಗನೊಂದಿಗೆ ಪತ್ರಕರ್ತರ ಸಂಘಕ್ಕೆ ಬಂದರು.ನನ್ನನ್ನು ಭೇಟಿಯಾದ ಅವರು ನೀವು ಈಗ ನನಗೆ ಸಹಾಯ ಮಾಡದಿದ್ದರೆ ನನಗೆ ಬದುಕಲು ದಾರಿಯೇ ಇಲ್ಲ. ಸಾವೇ ಗತಿ ಎಂದು ಕಣ್ಣೀರಿಡಲು ಆರಂಭಿಸಿದರು. ನಿಲ್ಲದ ಅಳು ಅದು.

ಅವರಿಂದ ಅರ್ಜಿಯನ್ನು ಪಡೆದು ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ವಸ್ತುಸ್ಥಿತಿಯನ್ನು ವಿವರಿಸಿದೆ. ಆಸ್ಪತ್ರೆಗೆ ಸಂಬಂಧಿಸಿದಂತೆ ಸ್ಪಷ್ಟ ನಿರ್ದೇಶನವಿದ್ದರೂ ಸಹಾ ಆಗುತ್ತಿರುವ ಸುಲಿಗೆಯ ಬಗ್ಗೆ ಅವರ ಗಮನಕ್ಕೆ ತಂದೆ.ಮುಖ್ಯಮಂತ್ರಿಗಳಿಗೆ ಪರಿಸ್ಥಿತಿ ಅರ್ಥವಾಯಿತು.

ಆಸ್ಪತ್ರೆಯವರ ಲೂಟಿಗೆ ಪುರಾವೆಯಾಗಿದ್ದ ಆ 13 ಲಕ್ಷ ರೂ.ನ ಬಿಲ್ ಕೂಡ ಅವರ ಮುಂದಿಟ್ಟೆ. ಕುಟುಂಬಕ್ಕೆ ಪರಿಹಾರ ಮಾತ್ರ ಅಲ್ಲ ಸರ್ ಈ ಆಸ್ಪತ್ರೆಯ ಲೂಟಿಯ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದೆ.

ಆ ವೇಳೆಗಾಗಲೇ ಸಾಕಷ್ಟು ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ದುರುಪಯೋಗ ಪಡೆದು, ಭಯವನ್ನೇ ಬಿತ್ತಿ,ಸಾವನ್ನೇ ಆಧಾರ ಮಾಡಿಕೊಂಡು ಕೋವಿಡ್ ಹೆಸರಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆಯುತ್ತಿದ್ದಾರೆ ಎಂಬುದು ಮಾಧ್ಯಮದಲ್ಲೇ ಸಾಕಷ್ಟು ವರದಿಯಾಗುತ್ತಿತ್ತು. ಕೆಲವು ಆಸತೆಗಳಂತೂ 50 ಲಕ್ಷದಿಂದ ಒಂದು ಕೋಟಿಯವರೆಗೂ ಬಿಲ್ ಮಾಡಿದ್ದ ಉದಾಹರಣೆಯೂ ಕಣ್ಣ ಮುಂದೆ ಇತ್ತು.

ಈ ಪ್ರಕರಣದ ನಂತರವೇ ಸರ್ಕಾರ ಕೋವಿಡ್ ರೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಾದರೆ ಬೆಡ್ ಚಾರ್ಜ್ ಎಷ್ಟಿರಬೇಕು, ಚಿಕಿತ್ಸಾ ವೆಚ್ಚ ಎಷ್ಟು ಇರಬೇಕು ಎಂಬುದರ ಬಗ್ಗೆ ಒಂದು ಮಾರ್ಗದರ್ಶಿ ನಿರ್ದೇಶನವನ್ನು ನೀಡಿತು. ಅದರ ಹಿನ್ನೆಲೆಯಲ್ಲಿ ಸರಕಾರದಿಂದ ಸುರೇಶ್ ಸಾವಿಗೆ ಸಂಬಂಧಿಸಿದ ಲೂಟಿಯ ಪ್ರಕರಣದ ಬಗ್ಗೆ ತಕ್ಷಣವೇ ತನಿಖೆ ನಡೆಸುವ ಭರವಸೆಯೂ ಸಿಕ್ಕಿತು.

ಸರ್ಕಾರ ಕೇವಲ ಭರವಸೆಯನ್ನು ನೀಡಿರಲಿಲ್ಲ. ತಕ್ಷಣ ತನಿಖೆ ಕೈಗೆತ್ತಿಕೊಂಡಿತು. ಇದರ ಬಿಸಿ ಎಲ್ಲಿಮುಟ್ಟಬೇಕೋ ಅಲ್ಲಿ ಮುಟ್ಟಿತು.ಮಾರನೆಯ ದಿನದಿಂದಲೇ ಉಮಾ ಅವರಿಗೆ ಮೇಲಿಂದ ಮೇಲೆ ಬೇರೆ ಬೇರೆ ನಂಬರುಗಳಿಂದ ಸಿಕ್ಕಾಪಟ್ಟೆ ಫೋನ್ ಕರೆಗಳು ಬರಲು ಆರಂಭವಾಯಿತು. ಮೊದಲೇ ಹೆದರಿಕೆಯಲ್ಲಿದ್ದ ಹೆಣ್ಣುಮಗಳು ಆಕೆ. ಬಾಕಿ ಕಟ್ಟಿ ಎನ್ನುವ ಬೆದರಿಕೆಯ ಕರೆಗಳಿಂದ ನುಜ್ಜುಗುಜ್ಜಾಗಿ ಹೋಗಿದ್ದ ಆಕೆ ಫೋನ್ ಕರೆಗಳನ್ನು ಸ್ವೀಕರಿಸುವುದನ್ನೇ ಬಿಟ್ಟುಬಿಟ್ಟಿದ್ದರು.

ಆದರೆ ಫೋನ್‌ನ ಸುರಿಮಳೆ ನಿಲ್ಲಲೇ ಇಲ್ಲ. ಕೊನೆಗೆ ಧೈರ್ಯ ಮಾಡಿದ ಆಕೆ ಆದದ್ದಾಗಲಿ ಎಂದು ಕಾಲ್ ರಿಸೀವ್ ಮಾಡಿದರು. ಅಲ್ಲಿಯವರೆಗೆ ದುರಹಂಕಾರದ ಮಾತುಗಳಾಡುತ್ತಿದ್ದ ಆಸ್ಪತ್ರೆಯ ಸಿಬ್ಬಂದಿಯ ದನಿಯೇ ಬದಲಾಗಿ ಹೋಗಿತ್ತು. ಅತ್ಯಂತ ನಯವಾಗಿ ಸಂಧಾನ ಸೂತ್ರದ ಮಾತುಗಳನ್ನು ಆಡಲು ಆರಂಭಿಸಿದರು.

ನೀವು ಆಸ್ಪತ್ರೆಗೆ ಬನ್ನಿ ಸೆಟಲ್ಮಂಟ್ ಮಾಡಿಕೊಳ್ಳೋಣ ಎನ್ನುವ ಇನ್ನಿಲ್ಲದ ಒತ್ತಾಯ. ಉಮಾ ಆಸ್ಪತ್ರೆಗೆ ಹೋದಾಗ ನೀವು ಇನ್ನೇನೂ ದುಡ್ಡು ಕೊಡುವುದು ಬೇಡ. ನೀವು ಕೊಡೋದು, ನಾವು ತಗೊಳ್ಳೋದು ಏನೂ ಇಲ್ಲ ಅಂತ ನೀವು ಬರೆದುಕೊಡಿ, ಪ್ರಕರಣ ಕ್ಲೋಸ್ ಮಾಡೋಣ’ಎಂದು ಮೊದಲು ನಯವಾಗಿ, ನಂತರ ಒತ್ತಡ ಹೇರಲು ಆರಂಭಿಸಿದರು.

ಈ ಮಧ್ಯೆ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ತನಿಖಾ ತಂಡ ಆಸ್ಪತ್ರೆಗೆ ಚುರುಕು ಮುಟ್ಟಿಸಲು ಆರಂಭಿಸಿತ್ತು. ತನಿಖಾ ತಂಡ ಆಸ್ಪತ್ರೆಗೆ ಭೇಟಿ ನೀಡಿ ಲೆಕ್ಕ ಹಾಕಲು ಶುರು ಮಾಡಿದರೆ ಆಸ್ಪತ್ರೆಯವರ ಚಿಕಿತ್ಸಾ ವೆಚ್ಚಕ್ಕೂ ಮತ್ತು ಬಿಲ್‌ಗೂ ಸಂಬಂಧವೇ ಇರಲಿಲ್ಲ.

ಉಮಾ ಅವರು ಚಿಕಿತ್ಸೆಗಾಗಿ ಮೊದಲೇ ಆರೂವರೆ ಲಕ್ಷ ರೂ. ಕಟ್ಟಿದ್ದರು.ಆಸ್ಪತ್ರೆಯ ದಾಖಲೆ ತಿರುಗಿಸಿದರೆ ಅಲ್ಲಿ ಸುರೇಶ್‌ ಚಿಕಿತ್ಸೆಗೆ ವೆಚ್ಚವಾಗಿದ್ದು,3 ಲಕ್ಷ ರೂ.ಮಾತ್ರ ಎಂದಿತ್ತು. ಇಷ್ಟು ಸಾಲದು ಎಂಬಂತೆ ಭಯ ಹುಟ್ಟಿಸಿ ಕಟ್ಟಿದ 6.5 ಲಕ್ಷದ ಮೇಲೆ ಮತ್ತೆ 6.5 ಲಕ್ಷ ಕಟ್ಟಲು ಕಿರುಕುಳ ನೀಡುತ್ತಿದ್ದರು.

ತನಿಖೆ ಬಿಸಿ ಅರಿವಾಗುತ್ತಿದ್ದಂತೆ ಆಸ್ಪತ್ರೆಯವರು ತಲೆಬಾಗಿ ತಮ್ಮ ತಪ್ಪು ಒಪ್ಪಿಕೊಂಡರು.ಉಮಾಗೆ ಹೆಚ್ಚುವರಿಯಾಗಿ ವಸೂಲು ಮಾಡಿದ್ದ 3.5 ಲಕ್ಷ ರೂ.ಗಳನ್ನು ಹಿಂದಿರುಗಿಸಲು ಮುಂದಾದರು.ಅದೂ ಚೆಕ್ಕಿನಲ್ಲಿ! ಆಸ್ಪತ್ರೆಯವರು ಹೆಚ್ಚುವರಿ ವಸೂಲು ಮಾಡಿದ್ದನ್ನು ಕ್ಯಾಶ್‌ನಲ್ಲಿ ವಾಪಸ್ ಕೊಡುತ್ತೇವೆ ಎಂದರು. ಆದರೆ ಈ ಪ್ರಕರಣ ಆಸ್ಪತ್ರೆಗಳ ವಂಚನೆಗೊಂದು ದಾಖಲಾತಿಯಾಗಿ ಇರಬೇಕು’ಎಂದೇ ಚೆಕ್‌ನಲ್ಲಿ ಪಾವತಿ ಮಾಡಲು ಒತ್ತಾಯಿಸಿದೆವು.ಅಂತೆಯೇ ಆ ಹಣ ಚೆಕ್. ರೂಪದಲ್ಲಿ ವಾಪಸ್ ಬಂತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೊದಲ ದಿನದಿಂದ ಸುರೇಶ್ ಕುಟುಂಬಕ್ಕೆ ಬೆಂಗಾವಲಾಗಿ ನಿಂತಿತ್ತು.ಆಕೆ ದಬ್ಬಾಳಿಕೆಗೆ, ಬೆದರಿಕೆಗೆ ಜಗ್ಗದಂತೆ ನೋಡಿಕೊಂಡಿತ್ತು.ಇದರ ಫಲ ಈ ಹಣ ವಾಪಸ್ ಬಂದದ್ದು.

ಆದರೆ ನಮ್ಮ ಕೆಲಸ ಅಲ್ಲಿಗೆ ನಿಲ್ಲುವಂತಿರಲಿಲ್ಲ. 3 ಲಕ್ಷ ಆಸ್ಪತ್ರೆ ಖರ್ಚನ್ನು ಉಮಾ ಕಟ್ಟಿದ್ದರು. ಸುರೇಶ್ ಸಾವು ಇಡೀ ಕುಟುಂಬದ ಆಧಾರವನ್ನೇ ರಾತ್ರೋರಾತ್ರಿ ಕಿತ್ತೊಗೆದಿತ್ತು. ಹಾಗಾಗಿ ನಾವು ಆ ಕುಟುಂಬಕ್ಕೆ ಪರಿಹಾರ ಕೊಡಿಸಬೇಕು ಎಂದು ಮುಂದಾದೆವು.ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ.ಪರಿಹಾರ ಧನ ದೊರೆಯಿತು.

ಶಿವಾನಂದ ತಗಡೂರು
ಪತ್ರಕರ್ತರು-ಲೇಖಕರು-ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,ಬೆಂಗಳೂರು.

About The Author

Leave a Reply

Your email address will not be published. Required fields are marked *