May 2, 2024

Chitradurga hoysala

Kannada news portal

ಭದ್ರಾ ಮೇಲ್ದಂಡೆ ಯೋಜನೆ: ಒಂದು ವರ್ಷದೊಳಗೆ ಪೂರ್ಣ: ಸಚಿವ ಡಿ.ಸುಧಾಕರ್

1 min read

ಭದ್ರಾ ಮೇಲ್ದಂಡೆ ಯೋಜನೆ: ಒಂದು ವರ್ಷದೊಳಗೆ ಪೂರ್ಣ: ಸಚಿವ ಡಿ.ಸುಧಾಕರ್

ಚಿತ್ರದುರ್ಗ,(ಕರ್ನಾಟಕ ವಾರ್ತೆ,)ಜೂನ್24)

ಬಯಲಸೀಮೆಯ ಚಿತ್ರದುರ್ಗ ಜಿಲ್ಲೆಗೆ ವರದಾನವಾಗಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಒಂದು ವರ್ಷದೊಳಗಾಗಿ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದು ಯೋಜನೆ ಹಾಗೂ ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಶಿವಮೊಗ್ಗ ಜಿಲೆಯ ಭದ್ರಾ ಮೇಲ್ದಂಡೆ ಕಾಮಗಾರಿ ಪ್ರದೇಶ ಆಗಿರುವ ಶಿವಮೊಗ್ಗ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಯೋಜನೆ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಪ್ಯಾಕೇಜ್-1ರಲ್ಲಿ ತುಂಗಾ ನಂದಿಯಿಂದ 17.40 ಟಿಎಂಸಿ ನೀರನ್ನು ಲಿಪ್ಟ್ ಮಾಡಿ ಭದ್ರಾ ಜಲಾಶಯಕ್ಕೆ ಹರಿಸುವ ಕಾಮಗಾರಿಗೆ ಇನ್ನಷ್ಟು ವೇಗ ನೀಡಲು ಶನಿವಾರದಂದು ಭದ್ರಾ ಮೇಲ್ದಂಡೆ ಯೋಜನೆಯ ವಿವಿಧ ಕಾಮಗಾರಿಗಳನ್ನು ಜಿಲ್ಲೆಯ ಎಲ್ಲ ಶಾಸಕರೊಂದಿಗೆ ವೀಕ್ಷಣೆ ಮಾಡಲಾಗಿದ್ದು, ಆಗಬೇಕಾದ ಕೆಲಸ ಕಾರ್ಯಗಳು ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಬಳಿ ಚರ್ಚಿಸಲಾಗುವುದು ಎಂದರು.
ಕಳೆದ ಐದು ವರ್ಷದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆದಿಲ್ಲ. ಕಾಮಗಾರಿಯು ಕುಂಠಿತವಾಗಿದೆ. ನಮ್ಮ ಸರ್ಕಾರದಿಂದ ಇದೀಗ ವೇಗ ನೀಡಬೇಕಾಗಿದೆ. ಜನರಿಗೆ ಆದಷ್ಟು ತ್ವರಿತವಾಗಿ ನೀರು ಪೂರೈಸಬೇಕಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಸುಮಾರು 10 ರಿಂದ 12 ಟವರ್ ನಿರ್ಮಿಸಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಇವರಿಂದ ಇನ್ನೂ ಅನುಮತಿ ದೊರೆತಿಲ್ಲ.ನಮ್ಮ ಸರ್ಕಾರ ಈ ಅನುಮತಿಯನ್ನು ತ್ವರಿತವಾಗಿ ಪಡೆಯಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಮಗಾರಿ ವಿಳಂಬದಿಂದ ಯೋಜನಾ ವೆಚ್ಚ ಹೆಚ್ಚಳವಾಗುವುದನ್ನು ತಡೆಗಟ್ಟಲು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಅದ್ಯತೆ ನೀಡುತ್ತೇವೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಅನುಮತಿ ಪಡೆಯುವುದು, ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಚರ್ಚಿಸಿ ಎಲ್ಲ ಶಾಸಕರೊಂದಿಗೆ ಸಮನ್ವಯ ಸಾಧಿಸಿ, ಕಗ್ಗಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾವುದು. ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಏನೇನು ತೊಂದರೆಗಳಿವೇ ಅವೆಲ್ಲನ್ನೂ ಪರಿಹರಿಸಲಾಗುವುದು. ತುಂಗಾ ನದಿಯಿಂದ 17.40 ಟಿಎಂಸಿ ನೀರನ್ನು ಪಡೆಯಲು ತುಂಗಾ ನದಿಯಿಂದ ಹೆಚ್ಚುವರಿಯಾಗಿ ಮಳೆಗಾಲದಲ್ಲಿ ಹರಿಯುವ ನೀರನ್ನು ಮಾತ್ರ ಪಡೆಯಲಾವುದು ಎಂದರು.
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ರೂ.5300 ಕೋಟಿ ಅನುದಾನ ಘೋಷಣೆಯಾಗಿದೆ. ಆದರೆ ಈವರೆಗೆ ಯಾವುದೇ ಅನುದಾನ ಬಂದಿಲ್ಲ. ರಾಷ್ಟ್ರೀಯ ಯೋಜನೆ ಎಂದು ಘೋಷಣೆಯನ್ನೂ ಮಾಡಿಲ್ಲ ಎಂದರು.
ಪ್ರಗತಿ ಪರಿಶೀಲನಾ ಸಭೆ: ಅಜ್ಜಂಪುರ ಬಳಿಯ ವೈಜಂಕ್ಷನ್ ಕಾಮಗಾರಿಯಡಿ ಅಬ್ಬಿನಹೊಳಲು ಗ್ರಾಮದ 33 ರೈತರು ಪೈಕಿ 26 ಮಂದಿ ರೈತರು ಭೂಸ್ವಾಧೀನಕ್ಕೆ ಸಂಬಂಧಪಟ್ಟ ಆವಾರ್ಡ್ ಪಡೆದಿದ್ದರೂ ಹೆಚ್ಚಿನ ಪರಿಹಾರ ಮೊತ್ತಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಾಗಿ ಈ ಕಾಮಗಾರಿ ಪೂರ್ಣಗೊಳಿಸಲು ಅಡ್ಡಿಯಾಗಿದೆ. ಈ ಸಮಸ್ಯೆ ಬಗೆಹರಿಸಲು ತರೀಕೆರೆ ಶಾಸಕ ಶ್ರೀನಿವಾಸ್ ಅಗತ್ಯ ಸಹಕಾರ ನೀಡುವಂತೆ ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಒಕ್ಕೂರಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತರೀಕೆರೆ ಶಾಸಕ ಶ್ರೀನಿವಾಸ್ ಅವರು ಈ ಭಾಗದಲ್ಲಿ ಭೂಮಿಯ ಮಾರುಕಟ್ಟೆದರ ಹೆಚ್ಚಿದೆ. ಆದರೆ ಭೂಸ್ವಾಧೀನ ಸಂದರ್ಭದಲ್ಲಿ ಎಕೆರೆಗೆ ಕೇವಲ ರೂ.4 ಲಕ್ಷ ನಿಗಧಿಯಾಗಿರುವುದರಿಂದ ಈ ಭಾಗದ ರೈತೆರು ಹೆಚ್ಚಿನ ಮೊತ್ತಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರೈತರೊಂದಿಗೆ ಸಮಾಲೋಚನೆ ನಡೆಸಿ, ಆದಷ್ಟು ಶೀಘ್ರ ಸಮಸ್ಯೆ ಇತ್ಯರ್ಥಪಡಿಸಲು ಯತ್ನಿಸಲಾಗುವುದು ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಭದ್ರಾ ಮೇಲ್ದಂಡೆಗೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಕೆಲವು ಕಾಮಗಾರಿಗಳಿಗೆ ಅನುಮತಿ ದೊರೆತಿಲ್ಲ ಎಂಬ ನೆಪವೊಡ್ಡಿ ಉಳಿದ ಸಿವಿಲ್ ಕಾಮಗಾರಿಗಳನ್ನು ಅಧಿಕಾರಿಗಳು ನಿಲ್ಲಿಸಬಾರದು. ಆದಷ್ಟು ಶೀಘ್ರವಾಗಿ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಮೊಳಕಾಲ್ಮರು ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಅರಣ್ಯ ಇಲಾಖೆಗೆ ಸಂಬಂಧಿಸಿದ ಅನುಮತಿ ಪಡೆಯುವ ನಿಟ್ಟಿನಲ್ಲಿ ಸದ್ಯದಲ್ಲೇ ಬೆಂಗಳೂರಿನಲ್ಲಿ ಜರುಗುವ ಅಧಿವೇಶನ ಸಂದರ್ಭದಲ್ಲಿ ಅರಣ್ಯ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಲ್ಲಿಯೇ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಂಡು ಸಮಸ್ಯೆ ಬಗೆಹರಿಸಬಹುದು ಎಂದರು. ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ವರದಿ ಸಿದ್ದಪಡಿಸುವಂತೆ ಸೂಚನೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಯೋಜನೆ ಅನುಸಾರ ತಾಲ್ಲೂಕುವಾರು ನೀರು ಹಂಚಿಕೆ ಮಾಡಬೇಕು. ಇಲ್ಲವಾದರೆ ಯೋಜನೆಯ ಕೊನೆಭಾಗದ ಪ್ರದೇಶಗಳಾದ ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿಗೆ ಸಮರ್ಪಕವಾಗಿ ನೀರು ಹರಿಯುವುದಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಮುಖ್ಯ ಇಂಜಿನಿಯರ್ ಶಿವಪ್ರಕಾಶ್ ಸಭಗೆ ಮಹಾಇತಿ ನೀಡಿ, ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ನೀರನ್ನು ಲಿಪ್ಟ್ ಮಾಡಿ ಹರಿಸುವ ರೂ.324 ಕೋಟಿ ವೆಚ್ಚದ ಕಾಮಗಾರಿಯಲ್ಲಿ 9.3 ಕಿ.ಮೀ ಅಗೆತ ಕಾಮಗಾರಿ, 7.95 ಕಿ.ಮೀ ಕಾಲುವೆ ತಳಪಾಯದವರೆಗಿನ ಕಾಮಗಾರಿ, 5.4 ಕಿ.ಮೀ ಲೈನಿಂಗ್ ಕಾಮಗಾರಿ ಮುಕ್ತಾಯವಾಗಿದ್ದು, 214..74 ಕೋಟಿ ವೆಚ್ಚವಾಗಿದೆ. ಎರಡು ಪಂಪ್ ಹೌಸ್ ಕಾಮಗಾರಿ ಪ್ರಗತಿಯಲಿವೆ. ರೈಸಿಂಗ್ ಮೇನ್ ಕಾಮಗಾರಿ ಪ್ರಗತಿಂiÀiಲ್ಲಿದೆ. ಅರಣ್ಯ ಇಲಾಖೆ ಷರತ್ತಿನತ್ಯವ ಕಾಡು ಪ್ರಾಣಿಗಳ ಸುಲಭ ಓಡಾಟಕ್ಕೆ ರೂ.58.21 ಕೋಟಿ ರೂ ವೆಚ್ಚದಲ್ಲಿ 12 ಸೇತುವೆ, 24 ರ್ಯಾಂಪ್, 3 ಕೊಳ ಮತ್ತು ಚೈಲ್‍ಲಿಂಕ್ ಬೇಲಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಹಾಗೂ 40.16 ಕೋಟಿ ವೆಚ್ಚದಲ್ಲಿ 500 ಮೀಟರ್ ಟನಲ್ ಕಾಮಗಾರಿ ಪ್ರಗತಿಯಲ್ಲಿದೆ.
ಭದ್ರಾ ಜಲಾಯಶದಿಂದ 29.90 ಟಿಎಂಸಿ ನೀರನ್ನು ಅಜ್ಜಂಪುರ ಹತ್ತಿರ ವಿತರಣಾ ತೊಟ್ಟಿಗೆ ಹರಿಸುವ ರೂ.1015 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದು, ವಾಣಿ ವಿಲಾಸ ಸಾಗರ ಜಲಾಶಯಕ್ಕೆ 2020-21ರಲ್ಲಿ 6.61 ಟಿಎಂಸಿ ನೀರು ಹಾಗೂ 2021-22ರಲ್ಲಿ 6.82 ಟಿಎಂಸಿ ನೀರು ಜಲಾಶಯಕ್ಕೆ ಹರಿಸಲಾಗಿದೆ. ಎಂದರು.
ಸಭೆಗೂ ಮುನ್ನ ಸಚಿವರು ಹಾಗೂ ಜಿಲ್ಲೆಯ ಶಾಸಕರು ಜೊತೆಗೂಡ ಶಿವಮೊಗ್ಗ ಜಿಲ್ಲೆಯ ಮುತ್ತಿನಕೊಪ್ಪ ಗ್ರಾಮದ ಬಳಿಯ ತುಂಗಾ ಇಂಟೇಕ್ ಕಾಲುವೆ, ಪಂಪ್ ಹೌಸ್, ಸಬ್‍ಸ್ಟೇಷನ್, ಟನಲ್ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಯೋಜನೆಯ ಕಾಮಗಾರಿಗಳ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಭದ್ರಾ ಜಲಾಶಯದಿಂದ ಚಿತ್ರದುರ್ಗ ಜಿಲ್ಲೆಗೆ ನೀರು ಪೂರೈಕೆಯಾಗುವ ಇಂಟೇಕ್ ಕಾಲುವೆ, ಪಂಪ್‍ಹೌಸ್‍ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರು.

ಈ ಸಂದರ್ಭದಲ್ಲಿ ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ, ಬಿ.ಜಿ.ಗೋವಿಂದಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ತರೀಕೆರೆ ಶಾಸಕ ಶ್ರೀನಿವಾಸ್ ಸೇರಿದಂತೆ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಶಿವಪ್ರಕಾಶ್, ಚೆಲುವರಾಜ್ ಸೇರಿದಂತೆ ಮತ್ತಿತರರು ಇದ್ದರು.

About The Author

Leave a Reply

Your email address will not be published. Required fields are marked *