ಶ್ರೀಮಠ ಸರ್ಕಾರಕ್ಕೆ ಸಂಪೂರ್ಣ ಆರ್ಶೀವಾದ ಮಾಡಿದೆ:ಶಾಸಕ ಬಿ ಜಿ ಗೋವಿಂದಪ್ಪ
1 min read
ಶ್ರೀಮಠ ಸರ್ಕಾರಕ್ಕೆ ಸಂಪೂರ್ಣ ಆರ್ಶೀವಾದ ಮಾಡಿದೆ:ಶಾಸಕ ಬಿ ಜಿ ಗೋವಿಂದಪ್ಪ
ಭಗೀರಥ ಪೀಠದಲ್ಲಿ ಪ್ರತಿಭಾ ಪುರಸ್ಕಾರ – ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ :
ಶ್ರೀಮಠಕ್ಕೆ ಬರುವ ಗ್ರಾಮ ಮಾರ್ಗದಲ್ಲಿ ಶೀಘ್ರ ಬೈಪಾಸ್ ರಸ್ತೆ ನಿರ್ಮಿಸಲಾಗುವುದು:ಸಚಿವ ಸತೀಶ್ ಜಾರಕಿಹೊಳಿ
ಚಿತ್ರದುರ್ಗಹೊಯ್ಸಳ ನ್ಯೂಸ್/
ಹೊಸದುರ್ಗ :
1960 ರ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಶ್ರೀಮಠಕ್ಕೆ 500 ಎಕರೆ ಭೂಮಿಯನ್ನು ಲೀಜ್ ನಲ್ಲಿ ನೀಡಿದ್ದು, ಅದರ ಅವಧಿ ಮುಗಿದಿದೆ. ಈ ಬಗ್ಗೆ ಸ್ವಾಮೀಜಿಯವರಿಗೆ ಗೊಂದಲ ಬೇಡ. ಈ ಸಂಪೂರ್ಣ ಆಸ್ತಿಯನ್ನು ಮಠಕ್ಕೆ ಶಾಶ್ವತವಾಗಿ ನೀಡುವ ಬಗ್ಗೆ ಚರ್ಚೆ ನಡೆಸಿ, ಮಂಜೂರು ಮಾಡಲಾಗುವುದು ಶ್ರೀಮಠಕ್ಕೆ ಬರುವ ಗ್ರಾಮ ಮಾರ್ಗದಲ್ಲಿ ಶೀಘ್ರ ಬೈಪಾಸ್ ರಸ್ತೆ ನಿರ್ಮಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ತಾಲ್ಲೂಕಿನ ಭಗೀರಥ ಗುರುಪೀಠದಲ್ಲಿ ಭಾನುವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಚಿವರು, ಶಾಸಕರು ಹಿರಿಯ ಅಧಿಕಾರಿಗಳಿಗೆ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ ಸಮಾರಂಭ ಹಾಗೂ ನಾನು ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಈ ಕಾರ್ಯ ಮೆಚ್ಚುವಂಥದ್ದು. ಶ್ರೀಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯದ ಸಂಘಟನೆಯಲ್ಲಿ ತೊಡಗಿದ್ದಾರೆ. ಸಮುದಾಯದವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು. ಸಮುದಾಯದವರು ಸ್ವಾಮೀಜಿಗೆ ಬಲಪಡಿಸಬೇಕು. ಸರ್ಕಾರಿ ಸೌಲಭ್ಯಗಳನ್ನು ಬೆಳೆಸಿಕೊಳ್ಳಬೇಕು. ನಮ್ಮದು ಬಡವರ ಪರ ಸರ್ಕಾರ, ಅವರ ಏಳ್ಗೆಗಾಗಿ ಶ್ರಮಿಸುತ್ತಿದೆ ಎಂದರು.
ಶೋಷಿತ ಸಮಾಜದ ಪರವಾಗಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ.ಭಾರತದ ಇತಿಹಾಸವನ್ನು ಚೆನ್ನಾಗಿ ತಿಳಿಯಲು ಪ್ರಯತ್ನಿಸಿ, ಇತಿಹಾಸದ ಬಗ್ಗೆ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಮಹಾನ್ ನಾಯಕರ ಇತಿಹಾಸ ತಿಳಿದಾಗ ಮಾತ್ರ ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯ ಎಂದು ಹೇಳಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಸಮಾಜ ಅಭಿವೃದ್ಧಿ ಆಗಬೇಕಾದರೆ ಗುರಿ ಮತ್ತು ಗುರುಗಳ ಅನುಗ್ರಹ ಇರಬೇಕು. ಸಮಾಜದ ಮಕ್ಕಳು ವಿದ್ಯಾವಂತರಾಗಿ,ಆರ್ಥಿಕ ಸದೃಢರಾದಾಗ ಮಾತ್ರ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು. ಸಮುದಾಯದಲ್ಲಿ ಒಗ್ಗಟ್ಟು ಇದ್ದರೆ, ಬಹುಬೇಗ ಮುನ್ನಡೆಯಬಹುದು. ವಿದ್ಯಾರ್ಥಿಗಳು ಕೇವಲ ಅಂಕಗಳಿಕೆ ಸೀಮಿತವಾಗದೆ, ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳಬೇಕ. ರಾಜಕೀಯವಾಗಿ ಮುನ್ನಡೆಯಬೇಕು, ಅಧಿಕಾರ ಯಾರ ಮನೆಬಾಗಿಲಿಗೂ ಬಂದಿಲ್ಲ ಸಂಘರ್ಷದಿಂದ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಸಿದ್ಧರಾಮಯ್ಯನವರ ಅನ್ನಭಾಗ್ಯ ಯಾಜನೆ ಇಲ್ಲದಿದ್ದರೆ ಕೋವಿಡ್ ಸಮಯದಲ್ಲಿ ಕಷ್ಟದ ದಿನ ಎದುರಿಸಬೇಕಾಗಿತ್ತು. ಸರ್ಕಾರ ನೀಡಿರುವ ಗ್ಯಾರಂಟಿಗಳಿಗೆ ಹಣ ಮನೆಯಿಂದ ಕೊಡುತ್ತಿಲ್ಲ ಎಂದು ಹಲವರು ಟೀಕಿಸುತ್ತಾರೆ. ಹಾಗಾದರೆ ಇವರು ಅವಧಿಯಲ್ಲಿ ಇದೇ ಹಣ ಬಳಸಿ, ಯೋಜನೆ ಕಲ್ಪಿಸಲಿಲ್ಲ ಏಕೆ?. ಬಡತನದಿಂದ ಬಂದವರಿಗೆ ಮಾತ್ರ ಬಡವರು ಕಷ್ಟ ಗೊತ್ತಾಗುತ್ತದೆ. ಆರ್ಥಿಕ ನೆರವಿನ ಮೂಲಕ ಎಲ್ಲಾ ಸಮುದಾಯದವರ ಕುಟುಂಬಕ್ಕೆ ನೆರವಾಗಿದೆ. ನುಡಿದಂತೆ ನಡೆದಿರುವ ಏಕೈಕ ಸರ್ಕಾರ ನಮ್ಮದು ಎಂದು ಅಭಿಮಾನ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಮಾತನಾಡಿ, ಹೆಚ್ಚು ಶಿಕ್ಷಣವಂತರಾದರೆ ಮಾತ್ರ ಸಮಾಜ ಗಟ್ಟಿಯಾಗುತ್ತದೆ. ಶ್ರೀಗಳು ಸಮಾಜದ ಪರವಾಗಿ ಕೆಲಸ ಮಾಡಿದ್ದಾರೆ. ಸರ್ಕಾರದ ಕೆಲಸಕ್ಕೆ ಕೈಜೋಡಿಸಿ, ಉಪ್ಪಾರ ಸಮಾಜದ ಪರವಾಗಿರುತ್ತೇವೆ ಎಂದು ಭರವಸೆ ನೀಡಿದರು.
ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರು ನೂರಾರು ಮಕ್ಕಳು ಇಲ್ಲಿ 15-20 ವರ್ಷಗಳಿಂದ ಉಚಿತ ವಿದ್ಯಾಭ್ಯಾಸ ಮಾಡಿದ್ದಾರೆ. ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ಸಂಸ್ಕಾರ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಆರಂಭದ ಬಗ್ಗೆ ಕನಸಿದೆ, ಶೀಘ್ರ ಈ ಕಾರ್ಯ ಆರಂಭಿಸಲಾಗುವುದು. ಭಗೀರಥ ಏಕಶಿಲಾ ಮೂರ್ತಿ ಕಾಮಗಾರಿ ಆರಂಭವಾಗಿದೆ, ಸರ್ಕಾರದಿಂದ ₹ 12 ಕೋಟಿ ಅನುದಾನ ಬಂದಿದ್ದು, ಅದನ್ನು ಮಂಜೂರು ಮಾಡಬೇಕೆಂದು ಸಚಿವರಿಗೆ ಒತ್ತಾಯಿಸಿದರು.
ಶಾಸಕ ಬಿ ಜಿ ಗೋವಿಂದಪ್ಪ ಮಾತನಾಡಿ, ಶ್ರೀಮಠ ಸರ್ಕಾರಕ್ಕೆ ಸಂಪೂರ್ಣ ಆರ್ಶೀವಾದ ಮಾಡಿದೆ. ಅದಕ್ಕೆ ಪ್ರತ್ಯುಪಕಾರ ನೀಡುವುದು ನಮ್ಮ ಕರ್ತವ್ಯವನ್ನು. ಗ್ರಾಮಮಿತಿ ರಸ್ತೆ ಮಾರ್ಗದಲ್ಲಿ ಸಮಸ್ಯೆ ಹೋಗಲಾಡಿಸಲು ಸೇತುವೆ ನಿರ್ಮಿಸಿ, ಮೂಲ ರಸ್ತೆಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಗೆ ಅಂದಾಜು ಪಟ್ಟಿ ತಯಾರು ಮಾಡಿ, ಸಚಿವರಿಗೆ ಸಲ್ಲಿಸಲಾಗುವುದು. ಕ್ಷೇತ್ರ ಅಭಿವೃದ್ಧಿಗೆ ಸಂಪೂರ್ಣ ಸಹಕರಿಸುವುದಾಗಿ ತಿಳಿಸಿದರು.
ಈ ವೇಳೆ ಮಾಚಿ ಸಚಿವ ಹೆಚ್. ಆಂಜನೇಯ,ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ, ಶಾಸಕ ಎ.ಆರ್ ಕೃಷ್ಣಮೂರ್ತಿ, ಚಳ್ಳಕೆರೆ ಶಾಸಕ ಟಿ ರಘುಮೂರ್ತಿ, ಗಣ್ಯರುಗಳಾದ ಬಸವರಾಜಪ್ಪ, ಲಕ್ಷ್ಮಣ್ ಉಪ್ಪಾರ್, ಶಿವಶಂಕರ್, ಹೆಚ್.ಎಸ್. ವಿಜಯ್, ಚಂದ್ರಪ್ಪ, ಉಮೇಶ್ ಬಾಬು ಸೇರಿದಂತೆ ಹಲವರಿದ್ದರು.