April 30, 2024

Chitradurga hoysala

Kannada news portal

ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಣೀಯ

1 min read

ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಣೀಯ

ಚಿತ್ರದುರ್ಗ,ಆಗಸ್ಟ್11:
ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರ ತ್ಯಾಗ, ಬಲಿದಾನಗಳನ್ನು ಸ್ಮರಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಭಾರತದ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ “ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ರದುರ್ಗದ ಕೊಡುಗೆ ಹಾಗೂ ಮಾಧ್ಯಮಗಳ ಪಾತ್ರ” ಕುರಿತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಸಂದಿರುವ ಶುಭ ಸಂದರ್ಭದ ಸವಿನೆನಪಿನಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ್” ಕಾರ್ಯಕ್ರಮವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ರಾಜ್ಯದಲ್ಲಿಯೂ “ಅಜಾದ್ ಕಾ ಅಮೃತ್ ಮಹೋತ್ಸವ” ಆಚರಣೆಯನ್ನು 2021ರ ಮಾರ್ಚ್ 12 ರಿಂದ 2023ರ ಆಗಸ್ಟ್ 15 ರವರೆಗೆ ಆಚರಿಸಲು ತೀರ್ಮಾನಿಸಿದ್ದು, ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹಳ್ಳಿಗಳ ಮೂಲೆ ಮೂಲೆಗಳಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಬೇಕು. ಗ್ರಾಮೀಣ ಪ್ರದೇಶದ ಹಲವರನ್ನು ಇದು ತಲುಪಬೇಕು ಎಂಬುದು ಪ್ರಧಾನಮಂತ್ರಿಯವರ ಆಶಯವಾಗಿದೆ ಎಂದರು.
ಸ್ವಾತಂತ್ರ್ಯದ ಇತಿಹಾಸ ಯುವ ಜನಾಂಗಕ್ಕೆ ತಿಳಿಸಬೇಕು. ದೇಶಾಭಿಮಾನ, ದೇಶದ ಏಕತೆ ಮತ್ತು ದೇಶದ ಅಭಿವೃದ್ಧಿಯತ್ತ ಯುವಜನತೆಯನ್ನು ಸೆಳೆಯುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ವರ್ಷಾಚರಣೆ ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ತ್ಯಾಗ, ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರಿಗೆ ಸಂಬಂಧಿಸಿದಂತೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛಾಯ ಚಿತ್ರ ಸ್ಪರ್ಧೆ, ರಸಪ್ರಶ್ನೆ ಸೇರಿದಂತೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಹೇಳಿದರು.
ನಾಡು-ನುಡಿ, ಕಲೆ ಸಂಸ್ಕøತಿ, ಸ್ಮಾರಕ, ಕಟ್ಟಡಗಳು ಇವುಗಳ ಮೌಲ್ಯದ ಬಗ್ಗೆ ಯುವಜನರಿಗೆ ತಿಳಿವಳಿಕೆ ಮೂಡಿಸಬೇಕು. ಸ್ಮಾರಕಗಳ ಸಂರಕ್ಷಣೆ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ನಮ್ಮ ಸಂಸ್ಕøತಿ ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಎಸ್.ನಿಜಲಿಂಗಪ್ಪ ಅವರ ಪಾತ್ರ ಮಹತ್ವವಾದುದು. ಕೆಂಚಪ್ಪ, ಕೊಟ್ರೆನಂಜಪ್ಪ, ಎ.ಭೀಮಪ್ಪ ನಾಯಕ, ಬಳ್ಳಾರಿ ಸಿದ್ದಮ್ಮ ಸೇರಿದಂತೆ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ಟಿಪ್ಪುಸುಲ್ತಾನ್ ಅಳ್ವಿಕೆಯ ಕಾಲಕ್ಕೆ ಇಡೀ ದೇಶದ ಬಹುತೇಕ ಭಾಗ ಬ್ರಿಟೀಷರು ವಶಕ್ಕೆ ಪಡೆದಿದ್ದರು. ಬ್ರಿಟೀಷ್ ಆಳ್ವಿಕೆಯ ಕಾಲದಲ್ಲಿ ಮೈಸೂರು ಅರಸರು ನಮ್ಮನ್ನು ಆಳುತ್ತಿದ್ದರು. ಇವರು ರಸ್ತೆ ಸೇರಿ ಹಲವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರು. ಇದನ್ನು ಕಂಡು ಮಹಾತ್ಮ ಗಾಂಧೀಜಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಹೇಳಿದರು.
ಆಧುನಿಕ ಚಿತ್ರದುರ್ಗದ ನಿರ್ಮಾತೃ ಎ.ಭೀಮಪ್ಪ ನಾಯಕ. 1958ರಲ್ಲಿಯೇ ಸಿಮೆಂಟ್ ರಸ್ತೆ ನಿರ್ಮಾಣ ಮಾಡಿದರು. ಎಸ್.ರಂಗರಾವ್, ಎಸ್.ನಿಜಲಿಂಗಪ್ಪ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡಲಾಯಿತು. ಪ್ರಜಾಪ್ರತಿನಿಧಿ ಸಭೆಗೆ ಭೀಮಪ್ಪ ನಾಯಕ ಹಾಗೂ ರಂಗರಾವ್ ಆಯ್ಕೆಯಾಗಿದ್ದರು. ಸ್ವಾತಂತ್ರ್ಯ ಹೋರಾಟದ ಬಗ್ಗೆ ಅದ್ಭುತವಾದ ಭಾಷಣ ಮಾಡುತ್ತಿದ್ದರು ಎಂದರು.
ಈಚಲು ಮರದ ಸತ್ಯಾಗ್ರಹದ ಹೋರಾಟವನ್ನು ಎಸ್.ನಿಜಲಿಂಗಪ್ಪ ಅವರು ನೇತೃತ್ವ ವಹಿಸಿದ್ದರು. ಇವರ ಬಂಧನದ ನಂತರವೂ ಹೋರಾಟ ನಡೆಯಿತು. ಸುಭಾಷ್ ಚಂದ್ರಬೋಸ್ ಹಾಗೂ ಅನೇಕ ಮಹನೀಯರ ತ್ಯಾಗದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ ಎಂದರು.
ಸರ್ಕಾರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾದ ಡಾ.ಕೆ.ಚಿದಾನಂದ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಸಮಾಜವಾದಿ ಚಳುವಳಿಯು ಬೆಳೆಯಿತು. ದೇಶದ ಮೂಲಸಂಸ್ಕøತಿ ನಾಶ ಮಾಡದಂತೆ ಬ್ರಿಟಿಷ್ ಸರ್ಕಾರದ ಬಳಿ ಗಾಂಧೀಜಿ ಮನವಿ ಮಾಡಿಕೊಂಡಿದ್ದರು. ಗಾಂಧೀಜಿಯವರು ಆಧುನೀಕರಣ, ನಗರೀಕರಣ, ಯಾಂತ್ರೀಕರಣವನ್ನು ದೊಡ್ಡಮಟ್ಟದಲ್ಲಿ ವಿರೋಧಿಸಿದರು. ಅಸ್ಪ್ಯಶ್ಯತೆ ಹೋಗಲಾಡಿಸಲು ಶ್ರಮಿಸಿದರು ಎಂದರು.

ಸ್ವಾತಂತ್ರ್ಯದ ಪರಿಕಲ್ಪನೆ ಗಾಂಧಿ ಕಂಡ ಕನಸು ನನಸಾಗುವ ರೀತಿ ಕಾರ್ಯಕ್ರಮ ಜಾರಿಗೆ ತರಬೇಕು. ಘನತೆಯುಕ್ತ ಜೀವನ ಎಲ್ಲರಿಗೂ ಸಿಗಬೇಕು. ಅದುವೇ ನಿಜವಾದ ಸ್ವಾತಂತ್ರ್ಯ ಎಂದು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಧನಂಜಯ ಸೇರಿದಂತೆ ಪತ್ರಕರ್ತರು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *