ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ SSLC ಮಕ್ಕಳಿಗೆ ಉಚಿತವಾಗಿ ಗೂಗಲ್ ಮೀಟ್ ಬೋಧನೆ : ಮುಖ್ಯೋಪಾಧ್ಯಾಯ ಮಹೇಶ್
1 min readವಿಶೇಷ ವರದಿ: ನಗರ ಪ್ರದೇಶಕ್ಕೆ ಕಮ್ಮಿ ಇಲ್ಲವೆಂಬಂತೆ ಚಿತ್ರದುರ್ಗ ತಾಲೂಕಿನ ಕಡ್ಲೆಗುದ್ದು ಶ್ರೀ ಆಂಜನೇಯಸ್ವಾಮಿ ಪ್ರೌಢ ಶಾಲೆಯಲ್ಲಿ SSLC ಮಕ್ಕಳಿಗೆ ಗೂಗಲ್ ಮೀಟ್ ಮೂಲಕ ಬೋಧನೆ ಮಾಡಲಾಗುತ್ತಿದೆ.
ನಗರ ಪ್ರದೇಶಗಳ ಮಕ್ಕಳಿಗೆ ಮಾತ್ರ ಸೀಮಿತವಾಗಿರುವ ಆನ್ ಲೈನ್ ಶಿಕ್ಷಣ ಅದು ಸಹ ಹಣ ನೀಡಿ ಪಡೆಯುತ್ತಿದ್ದಾರೆ .ಆದರೆ ಇಂದು ಗ್ರಾಮೀಣ ಭಾಗದ ಮಕ್ಕಳಿಗೂ ಉಚಿತವಾಗಿ ತಲುಪಿಸುವ ಮೂಲಕ ಅವರ ಶೈಕ್ಷಣಿಕ ಚಟುವಟಿಕೆಗಳು ಕೋವಿಡ್-19ರ ರಜಾ ಅವಧಿಯಲ್ಲೂ ನಿರಂತರವಾಗಿ ಮುಂದುವರೆಯುವ ಉದ್ದೇಶದಿಂದ ಕಡ್ಲೇಗುದ್ದು ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಮಹೇಶ್ ಅವರು ಗೂಗಲ್ ಮೀಟ್ ಮೂಲಕ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಹತ್ತನೆ ತರಗತಿಯ ಮಕ್ಕಳಿಗೆ ನಿತ್ಯ ಆನ್ ಲೈನ್ ತರಗತಿ ನಡೆಸುತ್ತಿದ್ದು ಮಾದರಿಯಾಗಿದ್ದಾರೆ.
ಹತ್ತನೆ ತರಗತಿಯ ಮಕ್ಕಳಿಗೆ ನಿರಂತರವಾಗಿ ಬೋಧಿಸುವ ಸಲುವಾಗಿ ಪ್ರತಿನಿತ್ಯ ಸಂಜೆ 6 ರಿಂದ 7.30 ರವರೆಗೆ ಗೂಗಲ್ ಮೀಟ್ ಮೂಲಕ ಅನ್ ಲೈನ್ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳೊಂದಿಗೆ ಮುಖಾಮುಖಿಯಾಗಿ ಸಂವಾದ ನಡೆಸಲು ಈ ತಂತ್ರಾಂಶ ಸಹಕಾರಿಯಾಗಿದೆ.
ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ತೆರಳಿ ಗೂಗಲ್ ಮೀಟ್ ಉಪಯೋಗಿಸುವ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟಿದ್ದು ಎಲ್ಲಾ ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೆ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಿರುವುದು ಖುಷಿತಂದಿದೆ. ಈ ಸೌಲಭ್ಯವಿಲ್ಲದ ವಿದ್ಯಾರ್ಥಿಗಳಿಗೆ ಸೌಲಭ್ಯವಿರುವ ವಿದ್ಯಾರ್ಥಿಗಳೊಂದಿಗೆ ಜೊತೆಗೆ ಸೇರಿಸಲಾಗಿದೆ. ಬೋಧನೆಯ ವೀಡಿಯೋಗಳನ್ನು ಶಾಲೆಯ ಬ್ಲಾಗ್ ಮತ್ತು ಯೂ ಟ್ಯೂಬ್‍ನಲ್ಲೂ ಪ್ರಸಾರ ಮಾಡಲಾಗುತ್ತಿದೆ. ಪೋಷಕರಿಗೂ ಸಹ ಆನ್ ಲೈನ್ ಶಿಕ್ಷಣದ ಬಗ್ಗೆ ತಿಳಿಸಿದ್ದು ಪ್ರತಿಷ್ಟಿತ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ದೊರಕುವ ಆನ್ ಲೈನ್ ಶಿಕ್ಷಣ ನಮ್ಮ ಮಕ್ಕಳಿಗೂ ದೊರಕುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವುದಕ್ಕೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಗೂಗಲ್ ಮೀಟ್ ಮೂಲಕ ಆನ್ ಲೈನ್ ಶಿಕ್ಷಣ ಪಡೆಯುತ್ತಿರುವುದೆ ಸಾಕ್ಷಿ-ಮಹೇಶ್
ನಮ್ಮ ಶಾಲೆಯಲ್ಲೂ ಆನ್ ಲೈನ್ ಶಿಕ್ಷಣ ನೀಡುತ್ತಿರುವುದು ಸಂತೋಷವಾಗಿದೆ ಎಲ್ಲಾ ಶಿಕ್ಷಕರಿಗೂ ಧನ್ಯವಾದಗಳು-ದೀಕ್ಷಿತಾ ವಿದ್ಯಾರ್ಥಿನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.