May 5, 2024

Chitradurga hoysala

Kannada news portal

ಬಿ.ದುರ್ಗ ಕೋವಿಡ್-19 ಆಸ್ಪತ್ರೆಗೆ ಡಿಎಚ್‍ಓ ಭೇಟಿ: ಮೂಲಸೌಕರ್ಯಗಳ ಪರಿಶೀಲನೆ

1 min read

ಚಿತ್ರದುರ್ಗ, ಸೆಪ್ಟೆಂಬರ್08:
 ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಕೋವಿಡ್-19 ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ ಅವರು ಇತ್ತೀಚೆಗೆ ದಿಢೀರನೆ ಭೇಟಿ ಮಾಡಿ ರೋಗಿಗಳ ಚಿಕಿತ್ಸೆ ಬಗ್ಗೆ ಮತ್ತು ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.
 ಕೋವಿಡ್-19ಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದವರಿಗೆ ಪುಷ್ಪ ಸಮರ್ಪಿಸಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ನಂತರ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ, ಜಿಲ್ಲೆಯಲ್ಲಿ ಕೋವಿಡ್-19ಗೆ ಚಿಕಿತ್ಸೆ ನೀಡುವ ಪರಿಯನ್ನು ನಾವು ಅವಲೋಕನ ಮಾಡಬೇಕಾದರೆ ಕೋವಿಡ್‍ಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳುತ್ತಿರುವವರ ಅನಿಸಿಕೆಗಳನ್ನು ನಾವು ಅವಲೋಕಿಸಿದಾಗ ಚಿಕಿತ್ಸೆಯು ಯಶಸ್ವಿಯಾಗಿ ನಡೆಯುತ್ತಿದ ಎಂಬುದು ನಮಗೆ ತಿಳಿಯುತ್ತದೆ. ಯಾವುದೇ ಅಡೆತಡೆಗಳಿಲ್ಲದೆ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ ಎಂದು ಹೇಳಿದರು.
 ಗುಣಮುಖರಾಗಿ ಮನೆ ತೆರಳುತ್ತಿರುವವರು ಮನೆಯಲ್ಲಿಯಲ್ಲಿ ಪ್ರತ್ಯೇಕವಾಗಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವದರ ಜೊತೆಗೆ ಮಾಸ್ಕ್ ತಪ್ಪದೇ ಧರಿಸಿ ಪರಸ್ಪರ ಅಂತರ ಕಾಯ್ದುಕೊಂಡು ಆಸ್ಪತ್ರೆಯಲ್ಲಿ ವಿತರಿಸಿದ ಮಾತ್ರೆಗಳನ್ನು ಚಾಚುತಪ್ಪದೆ ಸೇವನೆ ಮಾಡಿ ಹತ್ತು ದಿನಗಳ ಕಾಲ ಹೊರಗಡೆ ಹೋಗದೆ ಮನೆಯಲ್ಲಿ ಇದ್ದು, ವಿರಾಮ ಪಡೆಯುವಂತೆ ಸಲಹೆ ನೀಡಿದರು.
 ಕೊರೊನಾ ರೋಗಕ್ಕೆ ತುತ್ತಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಚಿಕಿತ್ಸೆ ನೀಡಲು ಅಡಚಣೆಯಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಆದರೆ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆರೋಗ್ಯ ಶಿಕ್ಷಣಾಧಿಕಾರಿಗಳು ಮತ್ತು ವೈದ್ಯರ ಮಾರ್ಗದರ್ಶನ ಪಡೆದು ಸಾರ್ವಜನಿಕರು ಕೈಜೋಡಿಸಿದರೆ ಕೊರೊನಾ ಹತೋಟಿ ಸಾಧ್ಯ ಎಂದರು.
 ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
 ಫೋಟೋ ವಿವರ:   ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರಿಗೆ ಪುಷ್ಪ ಸಮರ್ಪಿಸಿ ಬೀಳ್ಕೊಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ ಇದ್ದರು.

About The Author

Leave a Reply

Your email address will not be published. Required fields are marked *