ಅರಿವು-ನೆರವು ಪ್ರಧಾನಮಂತ್ರಿ ಮಾತೃವಂದನಾ ಜಿಲ್ಲೆಯ 5900 ಫಲಾನುಭವಿಗಳಿಗೆ ನೆರವು:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜನಾಯ್ಕ
1 min readಚಿತ್ರದುರ್ಗ, ಸೆಪ್ಟೆಂಬರ್16:
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯು ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೋವಿಡ್-19 ಲಾಕ್‍ಡೌನ್ ಸಮಯದಿಂದ ಇಲ್ಲಿಯವರೆಗೆ ಜಿಲ್ಲೆಯ 5900 ಫಲಾನುಭವಿಗಳು ಈ ಯೋಜನೆಯಡಿ ಪ್ರಯೋಜನ ಪಡೆದಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜನಾಯ್ಕ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೌಲಭ್ಯಗಳ ಕುರಿತು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಮೊದಲ ಪ್ರಸವದ ಗರ್ಭೀಣಿ ಮತ್ತು ಬಾಣಂತಿಯರಿಗೆ ರೂ.5000 ರೂಗಳ ಸಹಾಯಧನವನ್ನು ನೇರವಾಗಿ ಫಲಾನುಭವಿಯ ಆಧಾರ್ ಲಿಂಕ್ ಖಾತೆಗೆ 3 ಕಂತುಗಳಲ್ಲಿ ಸಹಾಯಧನವನ್ನು ವರ್ಗಾಯಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶೇ. 48 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಇಲಾಖೆಯಾಗಿದ್ದು, ಈ ಇಲಾಖೆಯಲ್ಲಿ ಅನೇಕ ಕಾರ್ಯಕ್ರಮಗಳಿವೆ. ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮಗಳು, ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳು, ಸಾಮಾಜಿಕ ರಕ್ಷಣಾ ಕಾರ್ಯಕ್ರಮಗಳು ಎಂದು ಇಲಾಖೆಯ ಕಾರ್ಯಕ್ರಮಗಳನ್ನು ಮೂರು ಮುಖ್ಯ ಭಾಗಗಳಾಗಿ ವರ್ಗೀಕರಿಸಲಾಗಿದೆ ಎಂದರು.
ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಕೇಂದ್ರ ಪುರಸ್ಕøತ ಯೋಜನೆಯಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಇದೆ. ಈ ಯೋಜನೆಯಡಿಯಲ್ಲಿ ಗರ್ಭಿಣಿ, ಬಾಣಂತಿ, 0-6 ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಪೂರಕ ಪೌಷ್ಠಿಕ ಆಹಾರ, ರೋಗ ನಿರೋಧಕ ಚುಚ್ಚುಮದ್ದು, ಆರೋಗ್ಯ ತಪಾಸಣೆ, ಮಾಹಿತಿ ಸೇವೆ, 3-6 ವರ್ಷದ ಮಕ್ಕಳಿಗೆ ರೂಢಿಗತವಲ್ಲದ ಶಾಲಾ ಪೂರ್ವ ಶಿಕ್ಷಣ ನೀಡಲಾಗುತ್ತಿದೆ. ಜಿಲ್ಲೆಯ 6 ತಾಲ್ಲೂಕುಗಳ 7 ಶಿಶು
ಅಭಿವೃದ್ಧಿ ಯೋಜನೆಗಳಲ್ಲಿ 2217 ಅಂಗನವಾಡಿ ಕೇಂದ್ರಗಳು ಹಾಗೂ 116 ಮಿನಿ ಅಂಗನವಾಡಿ ಕೇಂದ್ರಗಳು ಸೇರಿ ಒಟ್ಟು 2333 ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನಗೊಳಿಸಲಗುತ್ತಿದೆ. ಕೋವಿಡ್ ಹಿನ್ನಲೆಯಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅವರ ಮನೆಗೆ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ ಎಂದರು.
ಮಾತೃಪೂರ್ಣ ಯೋಜನೆಯ ಮೂಲಕ ಗರ್ಭೀಣಿ ಮತ್ತು ಬಾಣಂತಿಯರಿಗೆ ಪ್ರತಿ ದಿನ ಮಧ್ಯಾಹ್ನ ಪೌಷ್ಠಿಕ ಬಿಸಿಯೂಟ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದ್ದು, ಅದರಂತೆ ಪ್ರತಿದಿನ ಆಯಾ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಗರ್ಭೀಣಿ ಮತ್ತು ಬಾಣಂತಿಯರಿಗೆ ಪ್ರತಿ ಫಲಾನುಭವಿಗೆ ರೂ.21 ರಂತೆ ಪ್ರತಿ ದಿನಕ್ಕೆ ವೆಚ್ಚ ಭರಿಸಲು ಅವಕಾಶವಿದ್ದು, ಪ್ರಸ್ತುತ ಕೋವಿಡ್-19 ಇರುವ ಕಾರಣ ಫಲಾನುಭವಿಯ ಮನೆಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಸಕ್ತ ವರ್ಷದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಪೌಷ್ಠಿಕತೆ ತಡೆಗಟ್ಟಲು ಸೆಪ್ಟೆಂಬರ್ 8 ರಿಂದ 31ರ ವರೆಗೆ ಪೋಷಣ್ ಅಭಿಯಾನ ನಡೆಯಲಿದೆ. ಗರ್ಭೀಣಿಯರಿಗೆ ಮತ್ತು ಬಾಣಂತಿಯರಿಗೆ ಪೋಷಣ್ ಅಭಿಯಾನದ ಕುರಿತು ಅರಿವು ಮೂಡಿಸುವುದರ ಜೊತೆಗೆ ಅಪೌಷ್ಠಿಕತೆಯಿಂದ ಪೌಷ್ಠಿಕತೆ ಕಡೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
2006-07ರಿಂದ ಹೆಣ್ಣು ಮಕ್ಕಳ ರಕ್ಷಣೆಗಾಗಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಯೋಜನೆಯ ಸೌಲಭ್ಯವನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಸೀಮಿತಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 12 ನಿರ್ಗತಿಕರ ಮಕ್ಕಳ ಕುಟೀರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಯೋಜನೆಯಡಿ ಪ್ರತಿ ಮಗುವಿನ ಪೋಷಣೆಗಾಗಿ ತಿಂಗಳಿಗೆ ಸಾವಿರ ರೂಪಾಯಿಗಳನ್ನು ಮತ್ತು ಪ್ರತಿ ಮಗುವಿಗೆ 50 ರೂಪಾಯಿಯಂತೆ ಬಾಡಿಗೆ ಕೊಡಲಾಗುತ್ತಿದೆ ಎಂದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಾರ್ಯಕ್ರಮಗಳಾದ ಉದ್ಯೋಗಿನಿ, ಸಮೃದ್ಧಿ, ಕಿರುಸಾಲ, ಚೇತನಾ, ಧನಶ್ರೀ ಯೋಜನೆ ಸೇರಿದಂತೆ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿಗಮದಿಂದ ಸಾಲಸೌಲಭ್ಯ ಮತ್ತು ಸಹಾಯಧನ ನೀಡುವ ಮೂಲಕ ಲಿಂಗತ್ವ ಅಲ್ಪಸಂಖ್ಯಾತರ ಜೀವನ ಉತ್ತಮಗೊಳಿಸಲು ಸರ್ಕಾರ ಯೋಜನೆಗಳನ್ನು ರೂಪಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಮಾತನಾಡಿ, ಕಳೆದ ಒಂದು ತಿಂಗಳಿಂದ ಜಿಲ್ಲಾ ಪಂಚಾಯಿತಿ ವತಿಯಿಂದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಅರಿವು-ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಈಗಾಗಲೇ ಪೋಷಣ್ ಅಭಿಯಾನ ಪ್ರಾರಂಭಿಸಲಾಗಿದೆ. ಇಲಾಖೆಯಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಲವಾರು ಯೋಜನೆಗಳಿವೆ. ಅಪೌಷ್ಠಿಕತೆ ಹೋಗಲಾಡಿಸಲು ಗರ್ಭೀಣಿಯರಿಗೆ ಮತ್ತು ಬಾಣಂತಿಯರಿಗೆ ಊಟ, ಮೊಟ್ಟೆ ವಿತರಣೆ ಸೇರಿದಂತೆ ಪೌಷ್ಠಿಕ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಭಾಗ್ಯಲಕ್ಷ್ಮಿ ಯೋಜನೆ, ಉದ್ಯೋಗಿನಿ ಯೋಜನೆ ಸೇರಿದಂತೆ ಹಲವಾರು ಸೌಲಭ್ಯಗಳಿವೆ. ಈ ಎಲ್ಲ ಯೋಜನೆಯ ಸೌಲಭ್ಯಗಳನ್ನು ಜಿಲ್ಲೆಯ ಜನರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಸುಧಾ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.