ಕೋವಿಡ್ ಚಿಕಿತ್ಸೆಗೆ ಹೆಚ್ಚು ಹಣ ಪಡೆದರೆ ಆಸ್ಪತ್ರೆ ವಿರುದ್ದ ಕ್ರಮ: ಸಚಿವ ಸುಧಕರ್
1 min readತುಮಕೂರು; ಕೊರೋನಾ ಹೆಸರಲ್ಲಿ ಹೆಚ್ಚಿನ ದರ ವಸೂಲಿ ಮಾಡಬಾರದು ಎಂಬ ಉದ್ದೇಶದಿಂದ ಕೊರೋನಾ ಚಿಕಿತ್ಸೆಗೆ ಶುಲ್ಕ ನಿಗದಿ ಮಾಡಲಾಗಿದೆ. ಹೆಚ್ಚು ಶುಲ್ಕ ವಿಧಿಸುತ್ತಿದ್ದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.
ಆದರೆ, ಕೆಲವೊಮ್ಮೆ ಕೊರೋನಾ ಸೋಂಕಿತರಿಗೆ ವಿವಿಧ ಅಂಗಗಳ ವೈಫಲ್ಯ ರೋಗಗಳು ಇದ್ದರೆ ಅಂತಹ ಚಿಕಿತ್ಸೆಗೆ ಪ್ರತ್ಯೇಕ ಶುಲ್ಕವಿರುತ್ತದೆ. ಅದಕ್ಕೂ ಕೊರೋನಾ ಚಿಕಿತ್ಸೆಗೂ ಸಂಬಂಧವಿರುವುದಿಲ್ಲ. ಇದನ್ನು ಗಮನದಲ್ಲಿರಿಸಬೇಕು ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿರುವ ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಹೈಫ್ಲೋ ಆಕ್ಸಿಜನ್ ಸೌಲಭ್ಯವಿರುವ ಕನಿಷ್ಠ 100 ಬೆಡ್‍ಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು
ನಗರದಲ್ಲಿ ಶನಿವಾರ ಕೋವಿಡ್-19 ಸಂಬಂಧ ಅಧಿಕಾರಿಗಳ ಸಭೆ ನಡೆಸಿ ತಿಳಿಸಿದರು.
ಜಿಲ್ಲೆಯಲ್ಲಿರುವ ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ ಬೆಡ್‍ಗಳ ಸೌಲಭ್ಯ ಒದಗಿಸಬೇಕು. ಅಲ್ಲದೆ ಜಿಲ್ಲೆಯಲ್ಲಿ ಕೊರೋನಾ ಪರೀಕ್ಷೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೊಳ್ಳಬೇಕು ಎಂದರು.
ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಐಸಿಯೂ, ವೆಂಟಿಲೇಟರ್, ಹೈಫ್ಲೋ ಆಕ್ಸಿಜನ್ ಸೌಲಭ್ಯವಿರುವ ಹಾಸಿಗೆ ಸೌಲಭ್ಯ ಕಲ್ಪಿಸಿದರೆ ತಾಲ್ಲೂಕು ಮಟ್ಟದಿಂದ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಒತ್ತಡವನ್ನು ಕಡಿಮೆ ಮಾಡಬಹುದು.
ಜಿಲ್ಲೆಯಲ್ಲಿರುವ ಕೋವಿಡ್ ಪ್ರಕರಣಗಳ ಸಂಖ್ಯೆ, ಗುಣಮುಖವಾಗುತ್ತಿರುವವರ ಪ್ರಮಾಣ, ಮರಣ ಪ್ರಮಾಣ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಕೋವಿಡ್ ನಿಯಂತ್ರಣದ ಬಗ್ಗೆ ಮಾಹಿತಿ ಪಡೆದ ಸಚಿವರು, ಪ್ರತಿ ಹಳ್ಳಿಗೊಂದು ಟಾಸ್ಕ್ ಪೋರ್ಸ್ ಸಮಿತಿ ರಚಿಸಿ, ಈ ಸಮಿತಿಗಳ ಮೂಲಕ ಕೊರೋನಾ ನಿಯಂತ್ರಣಕ್ಕೆ ಜನ ಜಾಗೃತಿ ಮೂಡಿಸಬೇಕು. ಆ ಮೂಲಕ ಕೋವಿಡ್ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇದೆ. ಸಿಬ್ಬಂದಿಗಳ ಕೊರತೆ ನೀಗಿಸಿ, ತಾಲ್ಲೂಕು ಆಸ್ಪತ್ರೆಗಳನ್ನು ಇನ್ನಷ್ಟು ಬಲಪಡಿಸಿದರೆ ಕೊರೋನಾ ಮರಣ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸಚಿವರಿಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು.
ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಐಸಿಯು ಬೆಡ್‍ಗಳನ್ನು ನಿರ್ಮಾಣ ಮಾಡಿದರೆ ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ. ಪರಮೇಶ್ವರ್, ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್‍ಕುಮಾರ್, ಜಿ.ಪಂ. ಸಿಇಓ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಡಿಹೆಚ್‍ಓ ಡಾ.ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ ಮತ್ತಿತರರು ಹಾಜರಿದ್ದರು.
ಸಭೆಗೂ ಮುನ್ನ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವರು, ರಾಜ್ಯದಲ್ಲಿ ಪ್ರಸ್ತುತ ಆಕ್ಸಿಜನ್ ಕೊರತೆ ಇಲ್ಲ. ಮುಂದೆ ಕೊರತೆಯಾಗದಂತೆ ಗುಜರಾತ್‍ನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರತೆಯಾದರೂ ಸಹ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು