ರೈತರು ಸಂಕಷ್ಟಕ್ಕೆ ಸಿಲುಕಿರುವುದು ತುಂಬಾ ಬೇಸರ ತಂದಿದೆ: ಶಾಸಕ ಟಿ.ರಘುಮೂರ್ತಿ
1 min readಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿರುವುದು ನಿಜಕ್ಕೂ ನನಗೆ ಬೇಸರವನ್ನುಂಟು ಮಾಡಿದೆ. ರೈತರ ಸಂಕಷ್ಟ ಆಲಿಸಲು ಸದಾ ಸಿದ್ಧನಿದ್ದು, ರಾಜ್ಯ ಮುಂಗಾರು ಅಧಿವೇಶನದಲ್ಲಿ
ಜಿಲ್ಲೆಯಲ್ಲಿ ರೈತರು ಬೆಳೆದಿರುವ ಬೆಳೆ ಹಾನಿಗೆ ಪರಿಹಾರ ಒದಗಿಸುವಂತೆ ಗಮನ ಸೆಳೆಯಲಾಗಿತ್ತು. ಜೊತೆಗೆ ಮಾನ್ಯ ಕೃಷಿ ಸಚಿವರು ಹಾಗೂ ಪೌರಾಡಳಿತ ಸಚಿವರಿಗೂ ಈ ಸಂಬಂಧ ಪತ್ರ ಬರೆಯಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಬಹುಮುಖ್ಯವಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ 8000 ಎಕರೆ ಜಮೀನಿನಲ್ಲಿ ಈರುಳಿ ಬಿತ್ತನೆ ಮಾಡಿದ್ದು, ಸದರಿ ಬೆಳೆಯು ಸಂಪೂರ್ಣವಾಗಿ ಹಾಳಾಗಿದೆ. ಗಂಭೀರವಾಗಿರುವ ಇಂಥ ಪರಿಸ್ಥಿತಿಯಲ್ಲಿ ಅನ್ನದಾತರಿಗೆ ಪರಿಹಾರ ಒದಗಿಸಿ ಕೊಡುವಂತೆ ಸಂಬಂಧಪಟ್ಟ ಇಲಾಖೆಗೆ ಕೋರಲಾಗಿತ್ತು.
ಈ ಕುರಿತಂತೆ ರಾಜ್ಯ ಸರ್ಕಾರ ಹಾಗೂ ಪೌರಡಳಿತ ಇಲಾಖೆಯಿಂದ ಉತ್ತರ ದೊರೆತ್ತಿದ್ದು, ಚಿತ್ರದುರ್ಗ ಜಿಲ್ಲೆಯ 20981 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆಯಲಾಗಿದೆ. ಒಟ್ಟು ಬೆಳೆಯ ಪ್ರದೇಶದಲ್ಲಿ 7186.30 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 10272 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಕಾರ್ಯ ಕೈಗೊಳ್ಳಲಾಗಿದ್ದು, ಅದರಲ್ಲಿ 2640 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎನ್ನವುದರ ಬಗ್ಗೆ ಉತ್ತರ ದೊರೆತಿದೆ.
ಬೆಳೆ ಹಾನಿಯ ಮೊತ್ತ 970.15ಲಕ್ಷ ಪರಿಹಾರ ಅವಶ್ಯಕತೆ ಇದ್ದು, ಬೆಳೆ ಹಾನಿ ಪರಿಹಾರ ವಿತರಣೆಗೆ ಕ್ರಮ ವಹಿಸಲು ಕಂದಾಯ ಇಲಾಖೆಗೆ ವರದಿ ಸಲ್ಲಿಸಿರುವುದಾಗಿ ಉತ್ತರ ದೊರತಿದೆ.
ರಾಜ್ಯ ಸರ್ಕಾರ, ಕೃಷಿ ಹಾಗೂ ತೋಟಗಾರಿಕಾ ಸಚಿವರು ಮತ್ತು ಮಾನ್ಯ ಕಂದಾಯ ಇಲಾಖೆ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದು, ನಮ್ಮ ಜಿಲ್ಲೆಯಲ್ಲಿನ ರೈತರ ಸಂಕಷ್ಟ ನಿಜಕ್ಕೂ ಹೇಳತೀರದು. ಸಂಕಷ್ಟದಲ್ಲಿರುವ ಅನ್ನದಾತರ ಸಂಕಷ್ಟ ಆಲಿಸುವುದು ನನ್ನ ಆದ್ಯ ಕರ್ತವ್ಯವಾಗಿದ್ದು, ಈ ಕೂಡಲೇ ಮತ್ತೊಮ್ಮೆ ಬೆಳೆಹಾನಿ ಬಗ್ಗೆ ಪರಿಶೀಲನೆ ನಡೆಸಿ, ರೈತರಿಗೆ ಬೆಳೆ ಪರಿಹಾರ ಒದಗಿಸಿ ಕೊಡಲು ಅನುವು ಮಾಡಿಕೊಡಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇನೆ.