May 23, 2024

Chitradurga hoysala

Kannada news portal

ದೃಷ್ಟಿಯಲ್ಲಿ ಭರವಸೆ ಮೂಡಿಸುವ ವಿಶ್ವ ದೃಷ್ಟಿ ದಿನ

1 min read

ನಮಗೆ ಸಾಮೀಪ್ಯವಿರುವವರನ್ನು ಕಣ್ಣುಗಳಿಗೆ ಹೋಲಿಸುವುದರ ಮೂಲಕ ಅವರೆಷ್ಟು ನಮಗೆ ಅಮೂಲ್ಯ ಎಂದು ವರ್ಣಿಸುತ್ತೇವೆ. ಏಕೆಂದರೆ ನಮ್ಮ ಶರೀರದಲ್ಲಿರುವ ಅತಿ ಸೂಕ್ಷ್ಮವಾದ ಅತ್ಯಮೂಲ್ಯವಾದ ಅಂಗಗಳು ಈ ನಮ್ಮ ಕಣ್ಣುಗಳು. ಕಣ್ಣುಗಳಿಂದ ಸಮಸ್ತ ಬ್ರಹಾಂಡವನ್ನೆ ನೋಡಬಹುದು,ದೃಷ್ಟಿಯುಳ್ಳವರಿಗೆ ನೇತ್ರಗಳೇ ವರದಾನ.ಆದರೆ ನಮ್ಮಲ್ಲಿ ಕೆಲವರಿಗೆ ಜಗವನ್ನ ನೋಡುವ ಭಾಗ್ಯವಿಲ್ಲ ಅಂಧರಿಗೆ ಬಾಳೆಲ್ಲಾ ಕತ್ತಲೆಯೇ…ಈ ಹಿನ್ನೆಲೆಯಲ್ಲಿ ಅಂಧತ್ವ, ದೃಷ್ಟಿದೋಷ ಹಾಗೂ ಪರಿಹಾರ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ವಿಶ್ವದಾದ್ಯಂತ ಪ್ರತಿವರ್ಷ ಅಕ್ಟೋಬರ್ ಮಾಹೆಯ ಎರಡನೇ ಗುರುವಾರದಂದು ವಿಶ್ವ ದೃಷ್ಟಿದಿನವನ್ನಾಗಿ ಆಚರಿಸಲಾಗುತ್ತಿದೆ. 2020ರ ದೃಷ್ಟಿದಿನವನ್ನು “ದೃಷ್ಟಿಯಲ್ಲಿ ಭರವಸೆ” ಎಂಬ ಘೋಷವಾಕ್ಯದೊಂದಿಗೆ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

ಹಿನ್ನೆಲೆ

ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ದೃಷ್ಟಿ ಮೊದಲು ಅಭಿಯಾನವನ್ನು 2000ನೇ ಸಾಲಿನಲ್ಲಿ ಪ್ರಪ್ರಥಮವಾಗಿ ಆಯೋಜಿಸಿತ್ತು. ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಅಂಧತ್ವದ ನಿವಾರಣೆಗಾಗಿ ಸ್ಥಾಪಿತವಾದ ಅಂತರಾಷ್ಟ್ರೀಯ ಅಂಧತ್ವ ನಿವಾರಣಾ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ವಿಷನ್-2020 ದೃಷ್ಟಿಯ ಹಕ್ಕು ಎಂಬ ಧ್ಯೇಯದೊಂದಿಗೆ ಪ್ರತಿವರ್ಷ ಅಕ್ಟೋಬರ್ ಮಾಹೆಯ ಎರಡನೇ ಗುರುವಾರದಂದು ವಿಶ್ವ ದೃಷ್ಟಿದಿನವನ್ನಾಗಿ ಆಚರಿಸಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಣತ ಸುಮಾರು 285 ಮಿಲಿಯನ್ ಜನರು ದೃಷ್ಟಿದೋಷದಿಂದ ನರಳುತ್ತಿದ್ದಾರೆ. ಇದರಲ್ಲಿ 39 ಮಿಲಿಯನ್ ಜನರು ಅಂಧರಾಗಿದ್ದಾರೆ.246 ಮಿಲಿಯನ್ ಕಡಿಮೆ ದೃಷ್ಟಿ ಹೊಂದಿದ್ದಾರೆ. ದೃಷ್ಟಿದೋಷಗಳಿಗೆ ಸಂಭಂದಿಸಿದಂತೆ ಸುಮಾರು ಶೇ.80ರಷ್ಟು ಕಾಯಿಲೆಯನ್ನು ತಡೆಗಟ್ಟಲು ಸಾಧ್ಯವಿದೆ.

ದೃಷ್ಟಿದೋಷಗಳಿಗೆ ಕಾರಣಗಳು

ದೃಷ್ಟಿದೋಷಗಳಲ್ಲಿ ಸುಮಾರು ಶೇ.80ರಷ್ಟು ಕಾಯಿಲೆಗಳನ್ನು ತಡೆಗಟ್ಟಬಹುದು. ಅವುಗಳಲ್ಲಿ ಮುಖ್ಯವಾಗಿ ವಕ್ರೀಕಾರಕ ದೋಷ,ಕಣ್ಣಿನ ನವೆ,ಬಾಲ ಅಂಧತ್ವ ವಯಸ್ಸಾದಂತೆ ಮಧುಮೇಹಿಗಳಲ್ಲಿ ಬರುವ ಗ್ಲಾಕೋಮಾ, ಮಧುಮೇಹ ರೆಟಿನೋಪತಿ ಮುಂತಾದ ಸಮಸ್ಯೆಗಳನ್ನು ನಿವಾರಿಸಬಹುದು. ಹುಟ್ಟಿದಾರಭ್ಯದಿಂದ ಬರುವ ಅಂಧತ್ವವನ್ನು ನಿವಾರಿಸುವುದು ಕಷ್ಟವಾಗಿದೆ.

ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಮೊಬೈಲ್ ಸೇರಿದಂತೆ ಡಿಜಿಟಲ್ ತಂತ್ರಜ್ಞಾನದ ಬಳಕೆ ಮಕ್ಕಳ ಜ್ಞಾನ ವೃದ್ದಿಸುವ ಬದಲು ಬದುಕನ್ನೆ ಕತ್ತಲಾಗಿಸುತ್ತಿವೆ. ಹೊರಾಂಗಣ ಕ್ರೀಡೆಗಳಿಂದ ವಿಮುಖವಾಗಿ ಮೊಬೈಲ್ ಟಿ.ವಿ.ಗಳಿಗೆ ಜೋತು ಬಿದ್ದು ದೃಷ್ಟಿದೋಷಗಳಿಗೆ ಗುರಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.
ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ತಪಾಸಣೆಗೆ ಒಳಪಡುವ ಸುಮಾರು ನೂರು ಮಕ್ಕಳಲ್ಲಿ 40-50 ಮಕ್ಕಳಿಗೆ ದೃಷ್ಟಿ ಸಮಸ್ಯೆಗೆ ಕನ್ನಡಕ ಸೂಚಿಸಲಾಗುತ್ತಿದೆ ಇದನ್ನು ಕೇಳಿದರೆ ಎದೆ ಝಲ್ ಎನ್ನುತ್ತದೆ.
ಕಂಪ್ಯೂಟರ್ ಬಳಸಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಸತತವಾಗಿ ಎಂಡು ಗಂಟೆಗಳಿಗೂ ಅಧಿಕವಾಗಿ ಮಾನಿಟರ್ ವೀಕ್ಷಿಸುವುದರಿಂದ ಎದುರಾಗುವ ಸ್ಥಿತಿಗೆ ತಜ್ಞರು ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದು ಹೆಸರಿಟ್ಟಿದ್ದಾರೆ. ಕಣ್ಣುಗಳು ಕೆಂಪಾಗಿ ನವೆ ಉಂಟಾಗುತ್ತದೆ.

ನಿರ್ಲಕ್ಷ್ಯ ಬೇಜವಬ್ದಾರಿತನ ನಿಲ್ಲಿಸೋಣ

ವಯಸ್ಸಾದ ನಂತರವೆ ದೃಷ್ಟಿದೋಷ ಬರುವುದು ಎಂಬ ಭ್ರಮೆ ಬಿಡಬೇಕಾಗಿದೆ. ಗರ್ಭಾವಸ್ಥೆಯಲ್ಲಿಯಾದರೂ,ಹೆರಿಗೆ ಸಮಯದಲ್ಲಾದರೂ ಅಥವಾ ವಿಟಮಿನ್ ಎ ಕೊರತೆಯಿಂದಾದರೂ ಮಕ್ಕಳಲ್ಲಿ ದೃಷ್ಟಿದೋಷಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಕಣ್ಣಿನ ಪರೀಕೆಯನ್ನು ಅಬಾಲವೃದ್ದರಾಗಿ ನಿಯಮಿತವಾಗಿ ತಪಾಸಣೆ ಮಾಡಿಸುವುದು ಉತ್ತಮ.

ಮುನ್ನೆಚ್ಚರಿಕಾ ಕ್ರಮಗಳು

*ವಿಟಮಿನ್ ಎ ಹೆಚ್ಚಿರುವ ಅಹಾರ ಪದಾರ್ಥಗಳಾದ ಕ್ಯಾರೆಟ್ ಸೊಪ್ಪು ಮೊಟ್ಟೆ ಹಾಲು ಇವುಗಳನ್ನು ಸೇವಿಸುವುದು.

  • ಸಕ್ಕರೆ ಕಾಯಿಲೆ ಇರುವವರಿಗೆ ಕಣ್ಣಿನ ಸಮಸ್ಯೆ ಬಹುಬೇಗ ಕಾಡುವುದರಿಂದ ವರ್ಷಕೊಮ್ಮೆ ಕಣ್ಣಿನ ತಪಾಸಣೆಗೆ ಮಾಡಿಸಿಕೊಳ್ಳಬೇಕು.
  • ದಿನನಿತ್ಯ ಬಳಸುವ ಡಿಜಿಟಲ್ ಸಾಧನಗಳ ಪ್ರಖರತೆ ಕಡಿಮೆ ಇರಲಿ.
  • ದೀರ್ಘ ಕಾಲ ಮಾನಿಟರ್ ಪರದೆ ನೋಡದೆ ಆಗಾಗ ದೃಷ್ಟಿಯನ್ನು ಬೇರೆಡೆ ಹೊರಳಿಸಿ
  • ಡಿಜಿಟಲ್ ಮೋಹದಿಂದ ಮಕ್ಕಳನ್ನು ಹೊರತನ್ನಿ.
  • ವೈದ್ಯರ ಸಲಹೆ ಪಡೆಯದೆ ಔಷದಿಗಳನ್ನು ಬಳಸಬಾರದು
  • ಕಣ್ಣುಗಳನ್ನು ಮುಟ್ಟುವ ಮನ್ನ ಕೈಗಳು ಶುಭ್ರವಾಗಿರಲಿ.

ವಿಶ್ವ ದೃಷ್ಟಿದಿನದ ಸವಿನೆನಪಿನಲ್ಲಿ ನಾವೆಲ್ಲರೂ ಅಮೂಲ್ಯವಾದ ಕಣ್ಣುಗಳ ರಕ್ಷಣೆಗೆ ವಿಶೇಷ ಕಾಳಜಿ ವಹಿಸೋಣ.ದೃಷ್ಟಿ ವಿಶೇಷ ಚೇತನರಿಗೆ ಸಹಾನುಭೂತಿ ಮಾನವೀಯತೆಯ ಸಹಾಯ ಹಸ್ತ ಚಾಚೋಣ. ನಾವು ಸತ್ತ ನಂತರ ಕಣ್ಣುಗಳನ್ನು ಮಣ್ಣಾಗಿಸದೆ ನೇತ್ರದಾನದ ಮೂಲಕ ಅಂಧರಿಗೆ ಬೆಳಕಿನ ಜ್ಯೋತಿಯಾಗುವ ಸಂಕಲ್ಪವನ್ನು ಕೈಗೊಳ್ಳೋಣ.

ಲೇಖನ:ಮಹೇಶ್ ಮುಖ್ಯ ಶಿಕ್ಷಕಕರು ಕಡ್ಲೆಗುದ್ದು…

About The Author

Leave a Reply

Your email address will not be published. Required fields are marked *