ಬೆಳಗಾವಿ ರಾಜಕಾರಣಕ್ಕೆ ಜಾರಕಿಹೊಳಿ ಕುಟುಂಬದ ಮತ್ತೊಂದು ಕುಡಿ ಎಂಟ್ರಿ? ಲೋಕಸಭೆಗೆ ಟಿಕೆಟ್ ಫಿಕ್ಸ್?
1 min readಬೆಳಗಾವಿ: ಕೇಂದ್ರ ಸಚಿವ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರೋ ಬೆಳಗಾವಿ ಲೋಕಸಭಾ ಉಪಚುನಾವಣೆ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಹತ್ತಾರು ಆಕಾಂಕ್ಷಿಗಳು ತಮ್ಮ ತಮ್ಮ ನಾಯಕರು, ಸಂಘ ಪರಿವಾರದ ಮುಖಂಡರ ಮೂಲಕ ಲಾಭಿ ನಡೆಸಿದ್ದಾರೆ. ಈ ಮಧ್ಯೆ ತೆರೆಮರೆಯಲ್ಲಿ ಹೊಸದೊಂದು ಬೆಳವಣಿಗೆ ಆರಂಭವಾಗಿದ್ದು ಸಮ್ಮಿಶ್ರ ಸರ್ಕಾರವನ್ನ ಪತನಗೊಳಿಸಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಮೇಶ ಜಾರಕಿಹೊಳಿ ಪುತ್ರ ಅಮರನಾಥ ಜಾರಕಿಹೊಳಿ ಹೆಸರು ಹೊಸ ಟ್ರೆಂಡ್ ಸೃಷ್ಟಿಸಿದೆ. ಹೌದು ಬಿಜೆಪಿ ವರಿಷ್ಠರು ಅನುಮತಿಸಿದರೇ ಕೆಎಂಎಫ್ ನಿರ್ದೇಶಕರಾಗುವ ಮೂಲಕ ರಾಜಕೀಯಕ್ಕೆ ಕಾಲಿಟ್ಟಿರುವ ಅಮರನಾಥ ಜಾರಕಿಹೊಳಿಯವರನ್ನ ಬೆಳಗಾವಿ ಲೋಕಸಭಾ ಸದಸ್ಯ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕೂಡ ಉತ್ಸುಕರಾಗಿದ್ದಾರೆ. ಅಮರನಾಥ ಜಾರಕಿಹೊಳಿ ಹೆಸರು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಕೇಳಿ ಬಂದಿರುವುದಕ್ಕೂ ಹಾಗೂ ಇತ್ತೀಚೆಗೆ ರಮೇಶ ಜಾರಕಿಹೊಳಿ ಮಹಾರಾಷ್ಟ್ರ ಸಿಎಂ ದೇವೆಂದ್ರ ಫಡ್ನವಿಸ್ ಅವರನ್ನ ಭೇಟಿಯಾಗಿರುವುದಕ್ಕೂ ಸಂಬಂಧವಿದೆ ಎಂದೇ ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನ ಪ್ರತಿಷ್ಠಾಪಿಸಿದಂತೆ ಮಹಾರಾಷ್ಟ್ರದಲ್ಲೂ ಬಿಜೆಪಿ ಸರಕಾರವನ್ನ ಪ್ರತಿಷ್ಠಾಪಿಸಿ ದೇವೆಂದ್ರ ಫಡ್ನವಿಸ್ ಅವರನ್ನ ಮತ್ತೊಮ್ಮೆ ಸಿಎಂ ಮಾಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇದರೊಟ್ಟಿಗೆ ಅಮರನಾಥ ಜಾರಕಿಹೊಳಿ ಅವರನ್ನ ಬೆಳಗಾವಿ ಲೋಕಸಭಾ ಅಭ್ಯರ್ಥಿಯನ್ನಾಗಿಸುವ ಆಲೋಚನೆ ಕೂಡ ಹೊಂದಿದ್ದಾರೆ ಎನ್ನಲಾಗಿದೆ. ಬಿಜೆಪಿ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿಗಿ ಹಿಡಿತವಿದೆ, ಪ್ರಧಾನಿ ಮೋದಿ ಪ್ರಭಾವವಿದೆ. ಜೊತೆಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಇದರೊಟ್ಟಿಗೆ ರಮೇಶ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿಯೊಂದಿಗೆ ಮರಾಠ ಮತದಾರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಹೀಗಾಗಿ ಅಮರನಾಥ ಜಾರಕಿಹೊಳಿ ಕಣಕ್ಕಿಳಿದರೇ ಲಕ್ಷಾಂತರ ಮತಗಳ ಅಂತರದಲ್ಲಿ ಗೆಲುವಿನ ನಗೆ ಬೀರಬಹುದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪ್ರಭಾವ ಹೊಂದಿರುವ ರಮೇಶ ಜಾರಕಿಹೊಳಿ ಬಿಜೆಪಿ ನಾಯಕರ ಜೊತೆಯೂ ಉತ್ತಮ ಬಾಂದವ್ಯ ಹೊಂದಿದ್ದು ಅವರೆಲ್ಲ ಅಮರನಾಥ ಜಾರಕಿಹೊಳಿ ಹೆಸರು ಶಿಫಾರಸ್ಸು ಮಾಡುವ ಸಾಧ್ಯತೆ ಇದ್ದು ಹೀಗಾಗಿ ವರಿಷ್ಠರು ಕೂಡ ಅಮರನಾಥ ಜಾರಕಿಹೊಳಿಗೆ ಟಿಕೆಟ್ ನೀಡುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಅಮರನಾಥ ಜಾರಕಿಹೊಳಿಗೆ ಟಿಕೆಟ್ ನೀಡಿದ್ದೆ ಆದರೆ ಜಾರಕಿಹೊಳಿ ಕುಟುಂಬದ ಮತ್ತೊಂದು ಕುಡಿ ಸಂಸತಗೆ ಎಂಟ್ರಿ ಕೊಡುವ ಮೂಲಕ ಜಾರಕಿಹೊಳಿ ಕುಟುಂಬದ ಪ್ರತಿಷ್ಠೆ ಮತ್ತಷ್ಟು ಹೆಚ್ಚಾಗಲಿದೆ.