May 4, 2024

Chitradurga hoysala

Kannada news portal

ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪರೀಕ್ಷೆ ಪ್ರಮಾಣ ದುಪ್ಪಟ್ಟು ಮಾಡಬೇಕು: ಉಸ್ತುವಾರಿ ಕಾರ್ಯದರ್ಶಿ ಎಂ.ದೀಪಾ

1 min read

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ದೀಪಾ ಸೂಚನೆ
ಕೋವಿಡ್-19 ಜಾಗೃತಿ ಮೂಡಿಸಿ, ಪರೀಕ್ಷೆ ಪ್ರಮಾಣ ಹೆಚ್ಚಿಸಿ
ಚಿತ್ರದುರ್ಗ, ಅಕ್ಟೋಬರ್17:
ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಹಂತದಲ್ಲಿಯೂ ಹೆಚ್ಚಿನ ಜಾಗೃತಿ ಮೂಡಿಸುವುದರ ಜೊತೆಗೆ ಇದರ ಪರೀಕ್ಷೆ ಪ್ರಮಾಣವನ್ನು ಸಹ ಗಣನೀಯವಾಗಿ ಹೆಚ್ಚಿಸಿ ಕೋವಿಡ್-19 ನಿಯಂತ್ರಣಕ್ಕೆ ವ್ಯಾಪಕ ಕ್ರಮಕೈಗೊಳ್ಳಬೇಕು ಎಂದು ಸರ್ವಶಿಕ್ಷಣ ಅಭಿಯಾನ ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಂ.ದೀಪಾ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಪ್ರಸ್ತುತ ದಿನಗಳಲ್ಲಿ ಮಳೆಗಾಲ ಹಾಗೂ ಇನ್ನೂ ಸ್ವಲ್ಪ ದಿನಗಳಲ್ಲಿ ಚಳಿಗಾಲ, ಸಾಲು ಸಾಲು ಹಬ್ಬಗಳಿರುವುದರಿಂದ ಕೋವಿಡ್-19 ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಗುಂಪು ಸೇರದಂತೆ ನೋಡಿಕೊಳ್ಳುವುದು ಸೇರಿದಂತೆ ಕೋವಿಡ್-19 ಬಗ್ಗೆ ಜನರಲ್ಲಿ ವ್ಯಾಪಕ ಅರಿವು ಮೂಡಿಸಬೇಕು ಎಂದು ತಿಳಿಸಿದರು.
 ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪರೀಕ್ಷೆ ಪ್ರಮಾಣ ದುಪ್ಪಟ್ಟು ಮಾಡಬೇಕು. ಸೋಂಕು ಹರಡುವಿಕೆ ತಡೆಗಟ್ಟಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್ ಅವರಿಗೆ ಸೂಚನೆ ನೀಡಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಮಾತನಾಡಿ, ಜಿಲ್ಲೆಯಲ್ಲಿ 17 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಅದರಲ್ಲಿ 12,786 ಹೆಕ್ಟೇರ್ ಈರುಳ್ಳಿ ಬೆಳೆ ನಷ್ಟವಾಗಿದೆ. ಇದರ ಜೊತೆಗೆ ಇತರೆ ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ. ಸರ್ಕಾರದ ಮಾನದಂಡದ ಪ್ರಕಾರ ರೂ.17.21 ಕೋಟಿ ಪರಿಹಾರ ಬರಬೇಕಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಬೆಳೆ ಹಾನಿಗೆ ಸಂಬಂಧಿಸಿದಂತೆ ನಷ್ಟದ ವಿವರವನ್ನು ಆದಷ್ಟು ಬೇಗ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ ನೀಡಿದರು.
ಅತಿವೃಷ್ಠಿಯಿಂದಾಗಿ ಕೃಷಿ ಬೆಳೆಗಳಿಗೆ ಸಂಬಂಧಿಸಿದಂತೆ ಬೆಳೆ ಹಾನಿಯ ಕುರಿತು ಹಾಗೂ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಅಧಿಕ ಮಳೆಯಾಗಿರುವುದರಿಂದ ಶೇಂಗಾ ಬೆಳೆಯ ಇಳುವರಿಯಲ್ಲಿ ಸಾಕಷ್ಟು ಕುಂಠಿತವಾಗಿದೆ. ಸಂಭವಿಸಿದ ನಷ್ಟದ ಕುರಿತು ಪರಿಹಾರ ತಂತ್ರಾಂಶದಲ್ಲಿ ಅಳವಡಿಸಿ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ತಿಳಿಸಿದರು.
7123.08 ಲಕ್ಷ ವಿಮಾ ಪರಿಹಾರ: 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 76538 ಜನ ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ನೋಂದಣಿ ಮಾಡಿರುತ್ತಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ 39 ಗ್ರಾಮ ಪಂಚಾಯಿತಿಗಳಿಗೆ, ಹಿರಿಯೂರು ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಿಗೆ, ಚಿತ್ರದುರ್ಗ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಿಗೆ, ಮೊಳಕಾಲ್ಮುರು ತಾಲ್ಲೂಕಿನ 11 ಗ್ರಾಮ ಪಂಚಾಯಿತಿಗಳಿಗೆ, ಹೊಸದುರ್ಗ ತಾಲ್ಲೂಕಿನ 04 ಹೋಬಳಿಗಳು ಸೇರಿದಂತೆ ಒಟ್ಟು 50577 ಫಲಾನುಭವಿಗಳಿಗೆ ರೂ.7123.08 ಲಕ್ಷಗಳ ವಿಮಾ ಪರಿಹಾರವನ್ನು ಪಾವತಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ತಿಳಿಸಿದರು.
 ಇಳುವರಿ ಆಧಾರದ ಮೇಲೆ 459 ಫಲಾನುಭವಿಗಳಿಗೆ ರೂ.61.12 ಲಕ್ಷ ವಿಮಾ ಪರಿಹಾರ ನೀಡಲಾಗಿದೆ. 2019-20ನೇ ಸಾಲಿನ ಹಿಂಗಾರು ಹಂಗಾಮಿಗೆ 16385 ರೈತರು ಬೆಳೆವಿಮೆಗೆ ನೋಂದಣಿ ಮಾಡಿದ್ದು, ವಿಮಾ ಪರಿಹಾರ ಘೋಷಣೆಯಾಗಬೇಕಿದೆ. 2019- 20ನೇ ಸಾಲಿನ ಬೇಸಿಗೆ ಹಂಗಾಮಿಗೆ 39 ರೈತರು ಬೆಳೆವಿಮೆಗೆ ನೋಂದಣಿ ಮಾಡಿದ್ದು, ವಿಮಾ ಪರಿಹಾರ ಘೋಷಣೆಯಾಗಬೇಕಿದೆ. ಪ್ರಸಕ್ತ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ 85912 ರೈತರು ಬೆಳೆವಿಮೆ ನೋಂದಣಿ ಮಾಡಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
 ಜಿಲ್ಲೆಯ ವಾಡಿಕೆ ಮಳೆ 535 ಮಿ.ಮೀ ಇದ್ದು ಆದರೆ ಸೆಪ್ಟೆಂಬರ್ ಅಂತ್ಯದವರೆಗೆ 657 ಮಿ.ಮೀ ವಾಸ್ತವಿಕ ಮಳೆಯಾಗಿದ್ದು ಶೇ 48 ರಷ್ಟು ಅಧಿಕ ಮಳೆಯಾಗಿದೆ. ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ಹಾಗೂ ಚಿತ್ರದುರ್ಗ ತಾಲ್ಲೂಕಿನ ಕೆಲವು ಭಾಗದಲ್ಲಿ ಶೇಂಗಾ ಬೆಳೆ ಹೆಚ್ಚು ಬೆಳೆಯಲಾಗುತ್ತಿದ್ದು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಶೇಂಗಾ ಇಳುವರಿಯಲ್ಲಿ ಕುಸಿತವಾಗಿದೆ. ಆದ್ದರಿಂದ ಈಗಾಗಲೇ ರೈತ ಸಂಘಟನೆಗಳು ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದು ಇದು ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಸಭೆಗೆ ತಿಳಿಸಿದಾಗ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತದೆ ಎಂದರು.
182 ಮಕ್ಕಳು ಮುಖ್ಯವಾಹಿನಿಗೆ: 2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 244 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ವಿವಿಧ ಕಾರ್ಯಕ್ರಮಗಳ ಮೂಲಕ ನೇರ ದಾಖಲಾತಿ 21 ಮಕ್ಕಳು ಹಾಗೂ ಸ್ವಯಂ ಸೇವಕ ರಹಿತ ಕಾರ್ಯತಂತ್ರದಡಿ 161 ಮಕ್ಕಳು ಒಟ್ಟು 182 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ. ಬಾಕಿ ಉಳಿದ 62 ಮಕ್ಕಳನ್ನು ತ್ವರಿತವಾಗಿ ಮುಖ್ಯವಾಹಿನಿಗೆ ತರಲು ಕ್ರಮಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ ಹೇಳಿದರು.
ಧೂಳು ನಿಯಂತ್ರಿಸಲು ತುರ್ತಾಗಿ ಕಾಮಗಾರಿ ಮುಗಿಸಿ: ಚಿತ್ರದುರ್ಗ ನಗರದಲ್ಲಿ ನಗರೋತ್ಥಾನ ಹಾಗೂ ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಸುಮಾರು ವರ್ಷಗಳಿಂದ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುವುದರ ಜೊತೆಗೆ ಜನರಿಗೆ ಧೂಳಿನ ಸಮಸ್ಯೆ ಉಂಟಾಗುತ್ತಿದೆ ಹಾಗಾಗಿ ಇನ್ನೂ ಮೂರು ತಿಂಗಳೊಳಗೆ ರಸ್ತೆ ಕಾಮಗಾರಿಯನ್ನು ತುರ್ತಾಗಿ ಮುಗಿಸಬೇಕು ಎಂದು ಲೋಕೋಪಯೋಗಿ ಇಂಜಿನಿಯರ್‍ಗೆ ತಾಕೀತು ಮಾಡಿದರು.
ಅಗಸರಿಗೆ, ಕ್ಷೌರಿಕರಿಗೆ ರೂ.2.26 ಕೋಟಿ ಪರಿಹಾರ: ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಅಗಸ ಹಾಗೂ ಕ್ವೌರಿಕ ವೃತಿಯ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ತಲಾ ರೂ.5000/- ದಂತೆ ಪರಿಹಾರ ನೀಡಲಾಗಿದೆ.
ಜಿಲ್ಲೆಯ 3064 ಅಗಸ ವೃತ್ತಿಯ ಕಾರ್ಮಿಕರಿಗೆ ಹಾಗೂ 1454 ಕ್ಷೌರಿಕ ವೃತ್ತಿಯ ಕಾರ್ಮಿಕರು ಸೇರಿದಂತೆ ಒಟ್ಟು 4518 ಕಾರ್ಮಿಕರಿಗೆ ತಲಾ ರೂ.5000/- ದಂತೆ ಒಟ್ಟು ರೂ.2.26 ಕೋಟಿ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾ ಕಾರ್ಮಿಕರ ಅಧಿಕಾರಿ ವಿನುತಾ ಸಭೆಗೆ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ಯೋಗೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *