May 17, 2024

Chitradurga hoysala

Kannada news portal

ವಿಕಚೇತನರು ಸಮಾಜದಲ್ಲಿ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಿ: ಶಾಸಕ ಟಿ.ರಘುಮೂರ್ತಿ

1 min read

ಚಿತ್ರದುರ್ಗ:ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿರುವುದರಿಂದ ಸರ್ಕಾರದ ಜೊತೆ ವಿವಿಧ ಸಂಘ ಸಂಸ್ಥೆಗಳವರ ನೆರವು ಅತ್ಯವಶ್ಯಕ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಸ್ಪೂರ್ತಿ ವಿಕಲಚೇತನರ ಟ್ರಸ್ಟ್ ಚಿತ್ರದುರ್ಗ, ಪ್ರಗತಿ ಚಾರಿಟಬಲ್ ಟ್ರಸ್ಟ್ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಪತ್ರಕರ್ತರ ಭವನದಲ್ಲಿ ಮಂಗಳವಾರ ಅಂಗವಿಕಲರಿಗೆ ವೀಲ್‌ಚೇರ್‌ಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರಿಗೆ ಅಂಗಾಂಗದ ಕೊರತೆಯಿದೆ ಎನ್ನುವುದನ್ನು ಬಿಟ್ಟರೆ ಉಳಿದಂತೆ ಅವರುಗಳಿಗೆ ಬುದ್ದಿಶಕ್ತಿ ಸಾಮಾನ್ಯ ಜನರಿಗಿಂತ ಜಾಸ್ತಿಯಿರುತ್ತದೆ. ಪ್ರಗತಿ ಚಾರಿಟಬಲ್ ಟ್ರಸ್ಟ್ ಹಾಗೂ ಸ್ಪೂರ್ತಿ ವಿಕಲಚೇತನರ ಟ್ರಸ್ಟ್‌ನವರು ಮಾನವೀಯ ಗುಣಗಳನ್ನಿಟ್ಟುಕೊಂಡು ವಿಕಲಚೇತನರಿಗೆ ವೀಲ್‌ಚೇರ್‌ಗಳನ್ನು ವಿತರಿಸುತ್ತಿರುವುದು ಪುಣ್ಯದ ಕೆಲಸ. ಗ್ರಾಮೀಣ ಪ್ರದೇಶಗಳಲ್ಲಿನ ಅಂಗವಿಕಲರ ಅವಿದ್ಯಾವಂತ ಪೋಷಕರುಗಳಿದ್ದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿಯಿರುವುದಿಲ್ಲ. ಅಂತಹವರನ್ನು ಗುರುತಿಸಿ ಇಂತಹ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಸಂಸ್ಥೆಗಳು ಕೆಲಸ ಮಾಡಬೇಕಿದೆ. ಸರ್ಕಾರಿ ಸೌಲಭ್ಯಗಳಿಂದ ವಿಕಲಚೇತನರ್‍ಯಾರು ವಂಚಿತರಾಗಬಾರದೆಂದು ತಿಳಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಅಂಗವಿಕಲರಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಂಗವಿಕಲರಿಗೆ ವಿಶಿಷ್ಟ ಗುರುತಿನ ಚೀಟಿ ಕೊಡಲಾಗಿದೆ. ಈ ಯೋಜನೆ ಕೇಂದ್ರ ಸರ್ಕಾರದ್ದಾಗಿರುವುದರಿಂದ ಆಧಾರ್ ಜೋಡಣೆಯಾಗುತ್ತದೆ. ಹಾಗಾಗಿ ಎಲ್ಲಿಯೂ ನಕಲಿಯಾಗುವುದಿಲ್ಲ. ಯಾರೂ ನಿರ್ಲಕ್ಷಿಸಬಾರದು. ಒಂದರಿಂದ ಸ್ನಾತಕೋತ್ತರ ಶಿಕ್ಷಣ ಪಡೆಯುವ ವಿಕಲಚೇತನರಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿಯಲ್ಲಿ ಶೇ.೬೦ ಕ್ಕಿಂತ ಹೆಚ್ಚಿನ ಅಂಕ ಗಳಿಸುವ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಸಾಧನ ಸಲಕರಣಗಳನ್ನು ಒದಗಿಸಲಾಗುವುದು ಎಂದು ಸರ್ಕಾರದಿಂ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಅಂಧರಿಗೆ ಟಾಕಿಂಗ್ ಲ್ಯಾಪ್‌ಟಾಪ್, ಸ್ವಂತ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಒಂದು ಲಕ್ಷ ರೂ.ಸಾಲ ಸಿಗುತ್ತದೆ. ಅದರಲ್ಲಿ ಐವತ್ತು ಸಾವಿರು ರೂ.ಸಬ್ಸಿಡಿಯನ್ನು ಇಲಾಖೆಯಿಂದ ನೀಡಲಾಗುವುದು. ಶಿಶುಪಾಲನಾ ಭತ್ಯೆಯೂ ಸಿಗುತ್ತದೆ. ನಮ್ಮ ಜಿಲ್ಲೆಯಲ್ಲಿ ಅಂಧ ಮಕ್ಕಳ ಶಾಲೆ, ಶ್ರವಣ ದೋಷ, ಬುದ್ದಿಮಾಂಧ್ಯ ಮಕ್ಕಳ ಶಾಲೆಯಿದೆ. ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದಕ್ಕಾಗಿ ಸರ್ಕಾರದ ಹಲವಾರು ಯೋಜನೆಗಳಿವೆ. ವಿಕಲಚೇತನರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಸಾನಿಧ್ಯ ವಹಿಸಿದ್ದರು.
ಸ್ಪೂರ್ತಿ ವಿಕಲಚೇತನರ ಟ್ರಸ್ಟ್‌ನ ತಿಪ್ಪಮ್ಮ. ಚಿನ್ಮಯಿ ಚಾರಿಟಬಲ್ ಟ್ರಸ್ಟ್‌ನ ಗೀತ, ಹರ್ತಿಕೋಟೆ ವೀರೇಂದ್ರಸಿಂಹ, ಪತ್ರಕರ್ತ ನರೇನಹಳ್ಳಿ ಅರುಣ್‌ಕುಮಾರ್, ಬೆಂಗಳೂರಿನ ಎ.ಬಿ.ಡಿ.ಸಂಸ್ಥೆಯ ಶ್ರೀಧರ್ ಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯ ಎನ್.ತಿಪ್ಪೇಸ್ವಾಮಿ, ಅನಿಲ್‌ಕುಮಾರ್ ಇನ್ನು ಮೊದಲಾದವರು ಇದ್ದರು.

About The Author

Leave a Reply

Your email address will not be published. Required fields are marked *