ಕಂದಾಯ ಅಧಿಕಾರಿಗಳ ನಡೆ, ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ, ಸಾರ್ವಜನಿಕರಿಂದ ಅಹವಾಲು ಸ್ವೀಕಾರ
1 min readಚಿತ್ರದುರ್ಗ,ಫೆಬ್ರುವರಿ18:
ಸಾರ್ವಜನಿಕರ ಅಹವಾಲು ಮತ್ತು ಬೇಡಿಕೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವ ನಿಟ್ಟಿನಲ್ಲಿ ಇದೇ ಫೆಬ್ರವರಿ 20ರ ಮೂರನೇ ಶನಿವಾರ ಕಂದಾಯ ಅಧಿಕಾರಿಗಳು ಹಾಗೂ ಇತರೆ ಇಲಾಖಾ ಅಧಿಕಾರಿಗಳ ಗ್ರಾಮ ವಾಸ್ತವ್ಯ ಆರಂಭಗೊಳ್ಳಲಿದ್ದು, ಮೊಳಕಾಲ್ಮುರು ತಾಲ್ಲೂಕಿನ ಕಣಕುಪ್ಪೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ವಾಸ್ತವ್ಯ ಮಾಡಲಿದ್ದಾರೆ.
ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಇತರೆ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜಿಲ್ಲೆಯಲ್ಲಿ ಫೆಬ್ರುವರಿ 20ರಿಂದ ಅನುಷ್ಠಾನಗೊಳ್ಳಲಿದೆ.
ಜಿಲ್ಲಾಧಿಕಾರಿಯವರು ಗ್ರಾಮ ವಾಸ್ತವ್ಯ ಮಾಡಲಿರುವ ಮೊಳಕಾಲ್ಮುರು ತಾಲ್ಲೂಕಿನ ಕಣಕುಪ್ಪೆ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಅಧಿಕಾರಿಗಳು ಬೆಳಗ್ಗೆ 9.30 ರಿಂದ ಗ್ರಾಮದಲ್ಲಿ ಉಪಸ್ಥಿತರಿರಲಿದ್ದಾರೆ. ಎಲ್ಲಾ ತಾಲ್ಲೂಕುಗಳಲ್ಲಿ ಆಯಾ ತಹಶೀಲ್ದಾರರು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡಲಿರುವ ಗ್ರಾಮಗಳಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ವಾಸ್ತವ್ಯ ಹೂಡಲಿದ್ದಾರೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
ಪ್ರಮುಖವಾಗಿ ಜಿಲ್ಲಾಧಿಕಾರಿಗಳು, ಭೂದಾಖಲೆಗಳ ಉಪನಿರ್ದೇಶಕರು, ಭೂದಾಖಲೆಗಳ ಸಹಾಯಕ ನಿರ್ದೇಶಕರು ಪ್ರತಿ ತಿಂಗಳು 3ನೇ ಶನಿವಾರದಂದು ಉಪವಿಭಾಗ ಮಟ್ಟದ ಸಹಾಯಕ ಆಯುಕ್ತರು, ಸಂಬಂಧಪಟ್ಟ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರೊಂದಿಗೆ ಗ್ರಾಮಗಳಿಗೆ ಭೇಟಿ ನೀಡುವುದು ಹಾಗೂ ಹಳ್ಳಿ ವಾಸ್ತವ್ಯ ಮಾಡಲು ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳು ಯಾವ ತಾಲ್ಲೂಕಿಗೆ ಭೇಟಿ ನೀಡುತ್ತಾರೋ ಆ ತಾಲ್ಲೂಕಿನ ತಹಶೀಲ್ದಾರರನ್ನು ಹೊರತುಪಡಿಸಿ, ಉಳಿತ ತಾಲ್ಲೂಕು ತಹಶೀಲ್ದಾರರು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಪ್ರತಿ ತಿಂಗಳು 3ನೇ ಶನಿವಾರದಂದು ಭೇಟಿ ನೀಡಿ ವಾಸ್ತವ್ಯ ಮಾಡಲು ತಿಳಿಸಲಾಗಿದೆ.
ಜಿಲ್ಲಾಧಿಕಾರಿಗಳು ಫೆಬ್ರುವರಿ 20ರಂದು ಮೊಳಕಾಲ್ಮುರು ತಾಲ್ಲೂಕಿನ ಕಣಕುಪ್ಪೆ ಗ್ರಾಮ ಭೇಟಿ ನೀಡಿ ವಾಸ್ತವ್ಯ ಮಾಡಲಿದ್ದಾರೆ. ಚಿತ್ರದುರ್ಗ ತಹಶೀಲ್ದಾರ್ ಕಕ್ಕೆಹರವು, ಹಿರಿಯೂರು ತಹಶೀಲ್ದಾರ್ ಉಪ್ಪಾರಹಳ್ಳಿ, ಚಳ್ಳಕೆರೆ ತಹಶೀಲ್ದಾರ್ ಗಂಜಿಗುಂಟೆ, ಹೊಸದುರ್ಗ ತಹಶೀಲ್ದಾರ್ ಭಾಗಶೆಟ್ಟಿಹಳ್ಳಿ, ಹೊಳಲ್ಕೆರೆ ತಹಶೀಲ್ದಾರ್ ಮೇಕೇನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ್ಯ ಮಾಡಲಿದ್ದಾರೆ.
ಗ್ರಾಮಗಳಿಗೆ ಭೇಟಿ ನೀಡುವ ಒಂದು ವಾರದ ಮೊದಲೇ ಕಂದಾಯ ಅಧಿಕಾರಿಗಳು ಗ್ರಾಮ ಭೇಟಿ ಸಮಯದಲ್ಲಿ ನೀಡಲಾಗಿರುವ ಕಾರ್ಯಸೂಚಿಗಳನ್ವಯ ಫಲಾನುಭವಿಗಳ ಅರ್ಜಿಗಳನ್ನು ಸಂಗ್ರಹಿಸಿ ಅರ್ಜಿಗಳ ಮೇಲೆ ಯಾರ ಹಂತದಲ್ಲಿ ಕ್ರಮಕೈಗೊಳ್ಳಬೇಕು ಎಂದು ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಗ್ರಾಮ ವಾಸ್ತವ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಲೇವಾರಿಯಾಗಿರುವ ಬಗ್ಗೆ ಸಂಬಂಧಪಟ್ಟ ಫಲಾನುಭವಿಗಳಿಗೆ ತಿಳಿಸುವುದು. ಅರ್ಜಿಗಳ ಮೇಲೆ ಬೇರೆ ಬೇರೆ ಹಂತದಲ್ಲಿ ವಿಚಾರಣೆಯ ಅವಶ್ಯಕತೆ ಇದ್ದಲ್ಲಿ ಅದನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದು.
ಗ್ರಾಮ ಭೇಟಿ ಸಮಯದಲ್ಲಿ ಪರಿಶೀಲಿಸುವ ಕಡ್ಡಾಯ ವಿಷಯಗಳು: ಭೇಟಿ ನೀಡಿದ ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳು, ಪಹಣಿ ಕಾಲಂ3 ಮತ್ತು ಆಕಾರ್ ಬಂದ್ ತಾಳೆ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಎಲ್ಲಾ ಪಹಣಿಗಳಲ್ಲಿಯೂ ಕೂಡ 3 ಮತ್ತು ಕಾಲಂ 9 ತಾಳೆ ಹೊಂದುವಂತೆ ಸೂಕ್ತ ಆದೇಶಗಳನ್ನು ಹೊರಡಿಸುವುದು. ಗ್ರಾಮದಲ್ಲಿ ಪೌತಿ ಹೊಂದಿದ ಖಾತೆದಾರರ ಹೆಸರನ್ನು ಪಹಣಿಯ ಕಾಲಂ 9 ರಿಂದ ತೆಗೆದು ನೈಜ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮವಹಿಸುವುದು. ಗ್ರಾಮದ ಎಲ್ಲಾ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಪರಿಶೀಲಿಸುವುದು ಹಾಗೂ ಬಿಟ್ಟು ಹೊದಂತಹ ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಆದೇಶ ನೀಡುವುದು. ಗ್ರಾಮದಲ್ಲಿ ಸ್ಮಶಾನ ಲಭ್ಯತೆಯ ಬಗ್ಗೆ ಪರಿಶೀಲಿಸುವುದು ಹಾಗೂ ಸ್ಮಶಾನವಿಲ್ಲದಿದ್ದಲ್ಲಿ ಸರ್ಕಾರದ ಆದೇಶದಂತೆ ಕ್ರಮವಹಿಸುವುದು. ಗ್ರಾಮದಲ್ಲಿ ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನನ್ನು ಕಾಯ್ದಿರಿಸಲು ಕ್ರಮವಹಿಸುವುದು. ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ತೆರವುಗೊಳಿಸುವುದು. ಆಧಾರ್ ಕಾರ್ಡ್‍ನ ಅನುಕೂಲತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್ ಲೈನ್ ಮೂಲಕ ಸಂಬಂಧಪಟ್ಟ ನಾಡಕಚೇರಿಗಳಲ್ಲಿ ಅರ್ಜಿಸಲ್ಲಿಸಲು ಅವಕಾಶವಿರುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಸರ್ಕಾರದಿಂದ ಸಾರ್ವಜನಿಕರಿಗೆ ದೊರೆಯಬಹುದಾದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು. ಕಾಲಕಾಲಕ್ಕೆ ಮತದಾರರ ಪಟ್ಟಿ ಪರಿಷ್ಕರಣೆಯ ಮಾಹಿತಿ ನೀಡುವುದು. ಬರ, ಪ್ರವಾಹ ಇದ್ದಲ್ಲಿ ಪರಿಹಾರ, ಪ್ರವಾಹದ ಹಾನಿ ತಡೆಗಟ್ಟಲು ಸಲಹೆ ಸೂಚನೆಗಳನ್ನು ನೀಡುವುದು. ಅತಿವೃಷ್ಠಿ ಮತ್ತು ಅನಾವೃಷ್ಠಿ ಎದುರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು. ಹದ್ದುಬಸ್ತು, ಪೋಡಿ, ಪೋಡಿ ಮುಕ್ತ ಗ್ರಾಮ ದರಖಾಸ್ತು ಪೋಡಿವ (ನಮೂನೆ 1ರಿಂದ 5 ಮತ್ತು ನಮೂನೆ 6 ರಿಂದ 10ರ ಭರ್ತಿ ಮಾಡಿ ದರಖಾಸ್ತು ಪೋಡಿ ಮಾಡುವುದು) ಕಂದಾಯ ಗ್ರಾಮಗಳರಚನೆ. ಗ್ರಾಮದಲ್ಲಿ ಎಸ್‍ಸಿ, ಎಸ್‍ಟಿ, ಬಿಸಿಎಂ ವಸತಿ ನಿಲಯಗಳಿದ್ದಲ್ಲಿ ಭೇಟಿ ನೀಡಿ ಸುಸ್ಥಿತಿಯಲ್ಲಿರುವ ಬಗ್ಗೆ ಕ್ರಮವಹಿಸುವುದು. ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ, ಆಹಾರ ಕಲಿಕಾ ಪದ್ದತಿ, ಬಿಸಿಯೂಟ, ಶಾಲೆ ಬಿಟ್ಟ ಮಕ್ಕಳ ಪುನಃ ಶಾಲೆಗೆ ವಾಪಾಸಾಗಲು ಕ್ರಮವಹಿಸುವುದು. ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ದೊರೆತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಹಾಗೂ ಅನರ್ಹರು ಬಿಪಿಎಲ್ ಕಾರ್ಡ್ ಪಡೆದಿದ್ದಲ್ಲಿ, ಪತ್ತೆಹಚ್ಚಿ ಅವರ ಮೇಲೆ ನಿಯಮಾನುಸಾರ ಕ್ರಮವಹಿಸುವುದು.
ಗುಡಿಸಲು ರಹಿತ ವಾಸದ ಮನೆಗಳ ನಿರ್ಮಾಣ, ಗ್ರಾಮಗಳಿಗೆ ಭೇಟಿ ನೀಡಿದ ಸಮಯದಲ್ಲಿ ಗುಡಿಸಲುಗಳು ಇರುವ ವಾಸದ ಮನೆಗಳನ್ನು ಪತ್ತೆ ಹಚ್ಚಿ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳಡಿ ಮನೆಕಟ್ಟಲು ಅನುದಾನ ನೀಡುವಂತೆ ತಿಳಿಸುವುದು. ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಬಗ್ಗೆ ಪರಿಶೀಲಿಸುವುದು. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಲಭ್ಯವಿರುವ ಬಗ್ಗೆ ಪರಿಶೀಲಿಸುವುದು. ಅಪೌಷ್ಟಿಕ ಮಕ್ಕಳ ಪತ್ತೆ ಹಚ್ಚಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಅಂತಹ ಮಕ್ಕಳ ಆರೋಗ್ಯದ ಬಗ್ಗೆ ನಿಗಾ ಇಡಲು ಕ್ರಮವಹಿಸುವುದು ಮತ್ತು ಬಾಲ್ಯ ವಿವಾಹ ಪದ್ದತಿ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಇಂತಹ ಯಾವುದೇ ಪ್ರಕರಣಗಳು ನಡೆಯದಂತೆ ಕ್ರಮವಹಿಸುವುದು. ಗ್ರಾಮದಲ್ಲಿರುವ ಆಸ್ಪತ್ರೆ ಹಾಗೂ ವೈದ್ಯಕೀಯ ಸಿಬ್ಬಂದಿಯ ಲಭ್ಯತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸುವುದು. ಕೋವಿಡ್-19 ಮತ್ತು ಕೋವ್ಯಾಕ್ಸಿನ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಗ್ರಾಮದ ಹರಿಜನ ಮತ್ತು ಇತರೆ ಕಾಲೊನಿಗಳಿಗೆ ಭೇಟಿ ನೀಡುವುದು. ಮತ್ತು ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್, ಚರಂಡಿ ಇತರೆ ವ್ಯವಸ್ಥೆಗಳ ಕುರಿತು ಪರಿಶೀಲಿಸುವುದು. ಭೂದಾಖಲೆಗಳ ಇಲಾಖೆ ವತಿಯಿಂದ ಯಾವುದೇ ಸರ್ವೇ ಇದ್ದಲ್ಲಿ ನಿಯಮಾನುಸಾರ ಸರ್ವೇ ಕಾರ್ಯ ಮುಗಿಸುವುದು. ಬೆಸ್ಕಾಂ ವತಿಯಿಂದ ಸರ್ಕಾರದಿಂದ ಯೋಜನೆಗಳ ಅನ್ವಯ ವಿದ್ಯುತ್ ಸಂರ್ಪಕ ಕಲ್ಪಿಸುವುದು. ಹಾಗೂ ಯಾವುದೇ ಟ್ರಾನ್ಸ್‍ಫಾರ್ಮರ್‍ಗಳ ತೊಂದರೆಗಳಿದ್ದಲ್ಲಿ ಪರಿಹರಿಸುವುದು. ಗ್ರಾಮ ವಾಸ್ತವ್ಯಕ್ಕೆ ಸಂಬಂಧಿಸಿದಂತೆ ಒಂದು ವಾರ ಮುಂಚಿತವಾಗಿ ಸ್ವೀಕರಿಸಿದ ಅರ್ಜಿಗಳು ಹಾಗೂ ಆ ಅರ್ಜಿಗಳ ವಿಲೇವಾರಿಗೆ ಸಂಬಂಧಿಸಿದಂತೆ ತತ್‍ಕ್ಷಣದ ವರದಿಯನ್ನು ಈ ಕಚೇರಿಗೆ ಸಲ್ಲಿಸುವುದು ಹಾಗೂ ಗ್ರಾಮ ವಾಸ್ತವ್ಯ ಮುಕ್ತಾಯದ ನಂತರವೂ ಸಹ ಅಹವಾಲುಗಳ ವಿಲೇವಾರಿಯ ಪ್ರಗತಿ ಮಾಹಿತಿಯನ್ನು ಸಲ್ಲಿಸುವುದು. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಸ್ಯೆಗಳಾದಲ್ಲಿ ಅಹವಾಲುಗಳನ್ನು ಜಿಲ್ಲಾಧಿಕಾರಿ ಕಚೇರಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.