ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಉಲ್ಲಾಸದಿಂದ ಇರಬಹುದು: ಪ್ರೇಮಾವತಿ ಮನಗೋಳಿ
1 min readಚಿತ್ರದುರ್ಗ:
ಕೆಲಸದ ಒತ್ತಡದಲ್ಲಿರುವ ಸರ್ಕಾರಿ ನೌಕರರಿಗೆ ಒಂದು ದಿನವಾದರೂ ಕ್ರೀಡೆ ಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪ್ರೇಮಾವತಿ ಮನಗೋಳಿರವರು ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಪೆರೇಡ್ ಮೈದಾನದಲ್ಲಿ ಭಾನುವಾರದಿಂದ ಆರಂಭಗೊಂಡಿರುವ ಅಂತರ್ ಇಲಾಖಾ ಕ್ರಿಕೆಟ್ ಪಂದ್ಯಾವಳಿ ಪೊಲೀಸ್ ಕಪ್ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಉಲ್ಲಾಸದಿಂದ ಇರಬಹುದು. ಹಾಗಾಗಿ ಕ್ರೀಡೆ ಎನ್ನುವುದು ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಸೋಲು-ಗೆಲುವಿಗಿಂತ ಸ್ಪರ್ಧಾ ಮನೋಭಾವನೆಯಿಂದ ಕ್ರೀಡೆಯಲ್ಲಿ ತೊಡಗುವ ಮೂಲಕ ನಿಮ್ಮೆಲ್ಲಾ ಚಿಂತೆಯನ್ನು ಮರೆಯಿರಿ ಎಂದು ನೌಕರರಿಗೆ ಹೇಳಿದರು.
ಜಿಲ್ಲಾ ರಕ್ಷಣಾಧಿಕಾರಿ ರಾಧಿಕಾ ಮಾತನಾಡಿ ಜಿಲ್ಲೆಯಲ್ಲಿ ಬೇರೆ ಬೇರೆ ಇಲಾಖೆ ನೌಕರರುಗಳಿದ್ದಾರೆ. ಆದರೆ ಒಬ್ಬರಿಗೊಬ್ಬರು ಪರಿಚಯವಿರುವುದಿಲ್ಲ. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಅಂತರ್ ಇಲಾಖಾ ಕ್ರಿಕೆಟ್ ಪಂದ್ಯಾವಳಿ ಪೊಲೀಸ್ ಕಪ್ ಆಯೋಜಿಸಲಾಗಿದೆ. ಹದಿನೇಳು ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದು, ಒಂದು ವಾರಗಳ ಕಾಲ ನಡೆಯಲಿದೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉತ್ತಮವಾಗಿ ಕೆಲಸ ಮಾಡಿದಾಗ ಒಳ್ಳೆಯ ಹೆಸರು ಗಳಿಸಲು ಸಾಧ್ಯ ಎಂದರು.
ಯಾರ್‍ಯಾರು ಯಾವ್ಯಾವ ತಂಡದ ಜೊತೆ ಆಡಬೇಕೆಂಬುದನ್ನು ಲಕ್ಕಿ ಡ್ರಾ ಮೂಲಕ ತೀರ್ಮಾನಿಸಿದ್ದು, ಎಲ್ಲಾ ಇಲಾಖೆಯ ಸಹಕಾರದಿಂದ ಕ್ರಿಕೆಟ್ ಪಂದ್ಯಾವಳಿ ಪೊಲೀಸ್ ಕಪ್‌ನ್ನು ಯಶಸ್ವಿಗೊಳಿಸುವಂತೆ ಅಧಿಕಾರಿಗಳು ಹಾಗೂ ನೌಕರರಲ್ಲಿ ಮನವಿ ಮಾಡಿದರು.
ನ್ಯಾಯಾಧೀಶರಾದ ಚಗರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನಂದಿನಿದೇವಿ, ಉಪ ಕಾರ್ಯದರ್ಶಿ ವೇದಿಕೆಯಲ್ಲಿದ್ದರು.
ಅಬಕಾರಿ ಇಲಾಖೆಯ ಮಾರುತಿ ಪ್ರಾರ್ಥಿಸಿದರು. ಡಿ.ವೈ.ಎಸ್ಪಿ. ಪಾಂಡುರಂಗಪ್ಪ ಸ್ವಾಗತಿಸಿದರು. ಸಶಸ್ತ್ರ ಮೀಸಲು ಪಡೆಯ ಡಿ.ವೈ.ಎಸ್ಪಿ.ತಿಪ್ಪೇಸ್ವಾಮಿ ನಿರೂಪಿಸಿದರು.