May 23, 2024

Chitradurga hoysala

Kannada news portal

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
ಮೂಲಭೂತ ಸೌಕರ್ಯ ವೃದ್ಧಿಗೆ ಕ್ರಮ.

1 min read


ಚಿತ್ರದುರ್ಗ, ಫೆಬ್ರವರಿ23:
 ವಿಪತ್ತು ಸಂಭವಿಸದಂತೆ ಹಾಗೂ ವಿಪತ್ತು ಸಂಭವಿಸಿದಾಗ ಅದನ್ನು ಯಾವ ರೀತಿಯಾಗಿ ತಡೆಗಟ್ಟಬಹುದು ಮತ್ತು ಇದರ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಮೂಲಭೂತ ಸೌಕರ್ಯಗಳ ವೃದ್ದಿಗಾಗಿ ಕ್ರಿಯಾ ಯೋಜನೆ ರೂಪಿಸಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಪತ್ತು ಸಂಭವಿಸಿದಾಗ ಅದರಿಂದ ನಾವು ಯಾವರೀತಿಯಾಗಿ ರಕ್ಷಣೆ ಪಡೆಯಬಹುದು ಎಂಬುವುದರ ಕುರಿತು ಆಯಾ ಇಲಾಖೆಗಳು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದರು.
ತೆರೆದ ಬಾವಿ ಮುಚ್ಚಲು ಸೂಚನೆ; ವಿಫಲವಾದ ಕೊಳವೆಬಾವಿಗಳನ್ನು ಯಾವುದೇ ಕಾರಣಕ್ಕೂ ತೆರೆಯಕೂಡದು. ಕೂಡಲೇ ವಿಫಲವಾದ ಕೊಳವೆಬಾವಿಗಳನ್ನು ಮುಚ್ಚಬೇಕು. ಯಾವುದಾದರೂ ಅನಾಹುತ ಸಂಭವಿಸಿದರೂ ಕೊಳವೆಬಾವಿಗಳ ಮಾಲೀಕರ ಮೇಲೆ ಹಾಗೂ ಇದನ್ನು ಕೊರೆದ ರಿಗ್ ಮಾಲಿಕರ ಮೇಲೆಯು ಕ್ರಮಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.  
 ತಾಪ ನಿಯಂತ್ರಣಕ್ಕೆ ಸೂಚನೆ; ಬೇಸಿಗೆ ಸಂದರ್ಭದಲ್ಲಿ ಬಿಸಿಲಿನ ತೀವ್ರತೆ ಅಧಿಕವಾಗಿರುವುದರಿಂದ ಎನ್‍ಆರ್‍ಇಜಿ ಸೇರಿದಂತೆ ಸರ್ಕಾರದ ಪ್ರಾಯೋಜಿತ ಕಾಮಗಾರಿಗಳ ಸ್ಥಳದಲ್ಲಿ ಕಾರ್ಮಿಕರಿಗೆ ಸೂಕ್ತ ನೆರಳಿನ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದ ಅವರು, ಬಿಸಿಲಿನ ತೀವ್ರತೆಯಿಂದಾಗಿ ತೊಂದರೆಗೊಳಗಾಗುವವರ ತುರ್ತು ಆರೈಕೆಗಾಗಿ ವೈದ್ಯಕೀಯ ಸಾಮಗ್ರಿಗಳು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸಕಾಲದಲ್ಲಿ ದೊರೆಯುವ ಬಗ್ಗೆ ಕ್ರಮವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.
  ಗ್ರಾಮೀಣ ರಸ್ತೆ ಮತ್ತು ದುರಸ್ತಿಗಾಗಿ ರೂ.18.44 ಲಕ್ಷ, ಪ್ರಾಥಮಿಕ ಶಾಲೆಗಳ ದುರಸ್ಥಿಗಾಗಿ ರೂ.12.85 ಲಕ್ಷ ಹಾಗೂ ಅಂಗನವಾಡಿ ಕಟ್ಟಡಗಳ ದುರಸ್ಥಿಗಾಗಿ ರೂ.29.64 ಲಕ್ಷ ಅನುದಾನ ಹಂಚಿಕೆಯಾಗಿದ್ದು, ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ತಯಾರಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಿಗಧಿತ ಶುಲ್ಕ ಪಾವತಿಸಿ ತಮ್ಮ ಇಲಾಖೆಯ ಹಂತದಲ್ಲಿ ಫೈರ್ ಆಡಿಟ್ ಮಾಡಿಸಿಕೊಳ್ಳುವಂತೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ: ಬೇಸಿಗೆ ಪ್ರಾರಂಭವಾಗಲಿದ್ದು, ಯಾವ ಯಾವ ವಾರ್ಡ್‍ಗಳಲ್ಲಿ, ಗ್ರಾಮಗಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತವೆ ಎಂಬ ಬಗ್ಗೆ ಸಮೀಕ್ಷೆ ಮಾಡಿ, ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಸಿದ್ದಪಡಿಸಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಪಾಸ್ ಆದಾಗ ನೀರು ಸರಬರಾಜಿಗೆ ಕ್ರಮವಹಿಸಬೇಕು. ಬೇಸಿಗೆ ಸಂದರ್ಭದಲ್ಲಿ ನೀರು ಸರಬರಾಜು ಮಾಡಿ ನಂತರ ಬಿಲ್ ಪಾವತಿಗೆ ಸಮಸ್ಯೆ ಆಗಬಾರದು ಎಂದು ಸೂಚನೆ ನೀಡಿದರು.
 ಗ್ರಾ.ಪಂ. ಮಟ್ಟದಲ್ಲಿ ಸಮಿತಿ ರಚಿಸಿ: ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣಾ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿಯನ್ನು ಶೀಘ್ರವಾಗಿ ರಚನೆ ಮಾಡಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗಳ ಅವಶ್ಯಕತೆಗೆ ಅನುಗುಣವಾಗಿ ಗ್ರಾಮಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆಗಳನ್ನು ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.  
ಕಲ್ಲು ಕ್ವಾರಿಗಳ ಮೇಲೆ ನಿಗಾವಹಿಸಿ: ಶಿವಮೊಗ್ಗದ ಹುಣಸೋಡು ಮಾದರಿಯಲ್ಲಿ ಚಿಕ್ಕಬಳ್ಳಾಪುರದಲ್ಲೂ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಜಿಲೆಟಿನ್ ಸ್ಟೋಟಗೊಂಡು ಪ್ರಾಣಹಾನಿ ಸಂಭವಿಸಿದೆ. ಹಾಗಾಗಿ ಜಿಲ್ಲಾ ವ್ಯಾಪ್ತಿಯಲ್ಲಿನ ಕಲ್ಲು ಕ್ವಾರಿಗಳ ಮೇಲೆ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಹಶೀಲ್ದಾರ್‍ಗಳಿಗೆ ಸೂಚನೆ ನೀಡಿದರು.
 ಜಿಲ್ಲಾ ವ್ಯಾಪ್ತಿಯಲ್ಲಿನ ಕಲ್ಲು ಕ್ವಾರಿಗಳ ಕಡೆ ಪರಿಶೀಲನೆ ನಡೆಸಬೇಕು. ಎಲ್ಲಿಯಾದರೂ ಕಣ್ಣುತಪ್ಪಿಸಿ ಬ್ಲಾಸ್ಟಿಂಗ್ ಮಾಡಿದರೆ ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಮೇವಿನ ಸಮಸ್ಯೆ ಇಲ್ಲ: ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಿಲ್ಲೆಯಲ್ಲಿ ಜಾನುವಾರಿಗಳಿಗೆ ಯಾವುದೇ ಮೇವಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಕೃಷ್ಣಪ್ಪ ಸಭೆಗೆ ಮಾಹಿತಿ ನೀಡಿದರು.
 ಮುಂಬರುವ ಮೇ ಹಾಗೂ ಜೂನ್ ತಿಂಗಳವರೆಗೂ ಜಾನುವಾರುಗಳಿಗೆ ಯಾವುದೇ ರೀತಿಯಲ್ಲಿ ಮೇವಿನ ಸಮಸ್ಯೆಯಾಗುವುದಿಲ್ಲ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಪ್ರಸನ್ನ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಸತೀಶ್‍ರೆಡ್ಡಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

About The Author

Leave a Reply

Your email address will not be published. Required fields are marked *