March 3, 2024

Chitradurga hoysala

Kannada news portal

ನೋವನ್ನು ಉಂಡು ಸರ್ವಜನಾಂಗಕ್ಕೆ ಸಮಾನತೆ ನೀಡಿದವರು ಅಂಬೇಡ್ಕರ್: ಉಪ ನಿರ್ದೇಶಕಿ ಮಮತ.

1 min read

ಚಿತ್ರದುರ್ಗ:
ಗಾಂಧಿ, ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರುಗಳು ಅಸ್ಪೃಶ್ಯತೆ, ಜಾತೀಯತೆ ವಿರುದ್ದ ಹೋರಾಡಿದ್ದಾರೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತ ಹೇಳಿದರು.
ಅಸ್ಪೃಶ್ಯತೆ ನಿರ್ಮೂಲನೆ ಮಾಸಾಚರಣೆ ಅಂಗವಾಗಿ ಕಂದಾಯ ಇಲಾಖೆ, ಪಂಚಾಯತ್‌ರಾಜ್, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಚಿತ್ರದುರ್ಗ, ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆ ಮೊಳಕಾಲ್ಮುರು ಇವರುಗಳ ಸಹಯೋಗದೊಂದಿಗೆ ಸರ್ಕಾರಿ ಕಲಾ ಕಾಲೇಜು ಬಿ.ಹಾಸ್ಟೆಲ್, ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಲಯ ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳ ಬಿ.ಹಾಸ್ಟೆಲ್‌ನಲ್ಲಿ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರ ಮೇಲಿನ ದೌರ್ಜನ್ಯ ತಡೆ ಕಾಯಿದೆ ಹಾಗೂ ಅಸ್ಪೃಶ್ಯತೆ ನಿವಾರಣೆ ಕುರಿತ ವಿಚಾರ ಗೋಷ್ಟಿ ಮತ್ತು ಕಾರ್ಯಾಗಾರವನ್ನು ಕಂಜರ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬಾಲ್ಯದಲ್ಲಿಯೇ ಅಂಬೇಡ್ಕರ್ ಸಾಕಷ್ಟು ನೋವು, ಸಂಕಟ, ಅವಮಾನ ಅನುಭವಿಸಿ ನಮ್ಮ ಜನಾಂಗಕ್ಕೆ ಇಂತಹ ಪರಿಸ್ಥಿತಿ ಬರಬಾರದೆಂದು ದೇಶಕ್ಕೆ ಭದ್ರವಾದ ಸಂವಿಧಾನವನ್ನು ರಚಿಸಿ ಎಲ್ಲರಿಗೂ ಸಮಾನತೆ ನೀಡಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಶೇ.೨೫ ರಷ್ಟು ಅನುದಾನವನ್ನು ಎಸ್ಸಿ.ಎಸ್ಟಿ.ಗಳಿಗೆ ಮೀಸಲಿಟ್ಟಿದೆ. ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗಪಡಿಸಿಕೊಂಡು ಶಿಕ್ಷಣವಂತರಾದಾಗ ಮಾತ್ರ ಅಸ್ಪೃಶ್ಯತೆ ಜಾತಿ ಪದ್ದತಿಯನ್ನು ನಿರ್ಮೂಲನೆಗೊಳಿಸಲು ಸಾಧ್ಯ. ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಪದವಿ, ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾದರೆ ಪ್ರೋತ್ಸಾಹ ಧನ ಇಲಾಖೆಯಿಂದ ನೀಡಲಾಗುವುದು. ಎಲ್ಲವನ್ನು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್‌ರವರ ಆಶಯಗಳು ಈಡೇರಲಿದೆ ಎಂದು ತಿಳಿಸಿದರು.
ಎಸ್ಸಿ,ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಸಮಿತಿ ಸದಸ್ಯ ದಲಿತ ಮುಖಂಡ ಬಿ.ರಾಜಪ್ಪ ಮಾತನಾಡಿ ದೇಶಕ್ಕೆ ಸಂವಿಧಾನವನ್ನು ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್‌ರವರ ಆಶಯದಂತೆ ಶಿಕ್ಷಣ ಸಂಘಟನೆ ಹೋರಾಟದಿಂದ ಮಾತ್ರ ದಲಿತರ ಬದುಕು ಹಸನುಗೊಳ್ಳಲಿದೆ. ಹಾಗಾಗಿ ಅವರ ಆಚಾರ, ವಿಚಾರ, ತತ್ವ ಸಿದ್ದಾಂತಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣವಂತರಾಗಬೇಕೆಂದು ಕರೆ ನೀಡಿದರು.
ಪತ್ರಕರ್ತ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಇನ್ನು ಜೀವಂತವಾಗಿದೆ. ಅಂಬೇಡ್ಕರ್‌ರವರ ವಿಚಾರ ತತ್ವಸಿದ್ದಾಂತಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಸಂವಿಧಾನವನ್ನು ಗೌರವಿಸಬೇಕಾಗಿದೆ. ಸಂವಿಧಾನವನ್ನು ಬದಲಾವಣೆ ಮಾಡುವ ಹುನ್ನಾರ ದೇಶದಲ್ಲಿ ನಡೆಯುತ್ತಿದೆ. ಸಂವಿಧಾನದ ಬಗ್ಗೆ ಅಪಪ್ರಚಾರವಾಗುತ್ತಿರುವುದನ್ನು ತಡೆಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ನಿಲಯ ಪಾಲಕ ಹನುಮಂತಪ್ಪ ಪೂಜಾರ್, ಪ್ರಕಾಶ್, ಕಚೇರಿ ವ್ಯವಸ್ಥಾಪಕ ನಾಗೇಂದ್ರಪ್ಪ, ವಾರ್ಡ್‌ನ್ ನಾಗರಾಜ್, ಡಿ.ಓ.ಮುರಾರ್ಜಿ ವೇದಿಕೆಯಲ್ಲಿದ್ದರು.
ಅಸ್ಪೃಶ್ಯತೆ ಮತ್ತು ಜಾತಿ ಪದ್ದತಿ ನಿವಾರಣೆ ಕುರಿತು ಮೊಳಕಾಲ್ಮುರು ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆಯ ತಂಡ ರೂಪಕ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿತು.

About The Author

Leave a Reply

Your email address will not be published. Required fields are marked *