September 17, 2024

Chitradurga hoysala

Kannada news portal

ಕಾಂಗ್ರೆಸ್ಸಿಗರ 2,200 ಕೋಟಿ ರೂ. ಸುಳ್ಳುಲೆಕ್ಕ: ಅಸಲಿ ಲೆಕ್ಕ 290.6 ಕೋಟಿ ರೂ.;ಡಿಸಿಎಂ ಮತ್ತು ಶ್ರೀರಾಮುಲು….

1 min read

ಬೆಂಗಳೂರು:

ಕೋವಿಡ್-19 ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಜಂಟಿಯಾಗಿ ಸ್ಪಷ್ಟನೆ ನೀಡಿದ್ದು ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿರುವ ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಪರಿಕರವನ್ನು ಆಯಾ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿಯೇ ಖರೀದಿ ಮಾಡಲಾಗಿದೆ. ಇದರಲ್ಲಿ ಒಂದು ನಯಾಪೈಸೆಯಷ್ಟೂ ಅಕ್ರಮ ನಡೆದಿಲ್ಲ. ಕೇವಲ ದುರುದ್ದೇಶದಿಂದ ಮಾತ್ರ ಪ್ರತಿಪಕ್ಷ ನಾಯಕರು ಅರೋಪ ಮಾಡುತ್ತಿದ್ದಾರೆಂದು ತಿರುಗೇಟು ನೀಡಿದರು.

ಕೋವಿಡ್‌ -19 ಉಪಕರಣಗಳ ಖರೀದಿಯಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬುದು ಪ್ರತಿಪಕ್ಷ ನಾಯಕರ ಕಪೋಲಕಲ್ಪಿತ ಊಹೆ ಮಾತ್ರ. ಕೇವಲ ಆರೋಪ ಮಾಡಲಿಕ್ಕೆ ಮಾತ್ರವೇ ಅವರು ಹೀಗೆ ಹೇಳಿರುವುದು ಎಂದು ಡಿಸಿಎಂ ಹೇಳಿದರೆ, ವೆಂಟಿಲೇಟರ್​​ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷ ನಾಯಕರು ಆರೋಪಿಸಿರುವುದು ಸರಿಯಲ್ಲ. ನನ್ನ ಅವಧಿಯಲ್ಲಿ ಒಂದು ವೇಳೆ ಅವ್ಯವಹಾರ ನಡೆದಿದ್ದರೇ ಒಂದು ಕ್ಷಣವೂ ನಿಲ್ಲದೆ ರಾಜೀನಾಮೆ ನೀಡುತ್ತೇನೆ ಎಂದು ಶ್ರೀರಾಮುಲು ಸವಾಲು ಹಾಕಿದರು.

ಅವರಿಬ್ಬರೂ ಹೇಳಿದ್ದಿಷ್ಟು ಹೀಗೆ:

*ಅಂಕಿ-ಅಂಶಗಳನ್ನು ಹೇಳುವ ಭರದಲ್ಲಿಯೇ ಪ್ರತಿಪಕ್ಷ ನಾಯಕರು ಸುಳ್ಳು ಲೆಕ್ಕ ಹೇಳಿದ್ದಾರೆ. 2,220 ಕೋಟಿ ರೂ. ಅಕ್ರಮ ನಡೆದಿದೆ ಎಂದು ಅವರು ಹೇಳಿದ್ದಾರೆ. ಆದರೆ, ಇಡೀ ಕೋವಿಡ್’ಗಾಗಿ ಸರಕಾರ ಖರೀದಿ ಮಾಡಿರುವ ಪರಿಕರಗಳ ಒಟ್ಟಾರೆ ಮೊತ್ತ 290.6 ಕೋಟಿ ರೂ. ಮಾತ್ರ. ವೈದ್ಯಕೀಯ ಶಿಕ್ಷಣ ಇಲಖೆಯಲ್ಲಿ 33 ಕೋಟಿಯಷ್ಟು ಮೊತ್ತದ ಪರಿಕರಗಳನ್ನು ಖರೀದಿಸಲಾಗಿದೆ. ಹಾಗಾದರೆ ಉಳಿದ ಲೆಕ್ಕದ ಬಗ್ಗೆ ಅವರು ಏನು ಹೇಳುತ್ತಾರೆ? ಅವರು ಜನರನ್ನು ದಿಕ್ಕು ತಪ್ಪಿಸಲು ಹಾಗೂ ಸರಕಾರಕ್ಕೆ ಮಸಿ ಬಳಿಯಲು ಇಂಥ ಲೆಕ್ಕಗಳನ್ನು ಸೃಷ್ಟಿಸಿದ್ದಾರೆ.

*ವೆಂಟಿಲೇಟರ್​​​​ ಖರೀದಿ ಎಂಬುದು ಸುಖಾಸುಮ್ಮನೆ ಮಾಡುವಂಥದ್ದಲ್ಲ. ಹತ್ತಾರು ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಜತೆಗೆ, ತಾಂತ್ರಿಕತೆ ಅಂಶಗಳ ಆಧಾರದ ಮೇಲೆ ಖರೀದಿ ಮಾಡಬೇಕಾಗುತ್ತದೆ. ಸುಮಾರು 4 ಲಕ್ಷ ರೂ.ಗಳಿಂದ 50-60 ಲಕ್ಷ ರೂ. ಮೌಲ್ಯದ ವೆಂಟಿಲೇಟರ್’​​ಗಳೂ ಇವೆ. ಅವುಗಳಲ್ಲಿ ಅಡಗಿರುವ ಸೌಲಭ್ಯಗಳ ಮೇಲೆ ದರ ನಿಗದಿ ಆಗುತ್ತದೆ. ಕೇವಲ 4 ಲಕ್ಷದ ದರದ ಮೇಲೆ ಮಾತ್ರ ವೆಂಟಿಲೇಟರ್’ಗಳನ್ನು​ ಖರೀದಿ ಮಾಡಲಾಗಿಲ್ಲ. ಜತೆಗೆ, ತುರ್ತು ನಿಗಾ ಘಟಕದಲ್ಲಿ ಬಳಸಲ್ಪಡುವ ವೆಂಟಿಲೇಟರ್‌ಗೆ 18 ಲಕ್ಷಕ್ಕೂ ಹೆಚ್ಚು ದರವಿದೆ. ಇವೆಲ್ಲ ಮಾಹಿತಿಯನ್ನು ಪ್ರತಿಪಕ್ಷ ನಾಯಕರು ಸೂಕ್ತವಾಗಿ ಸಂಗ್ರಹ ಮಾಡಬೇಕಾಗಿತ್ತು.

*ವೆಂಟಿಲೇಟರ್ ಖರೀದಿ ವ್ಯವಹಾರ ಒಂದರಲ್ಲೇ 120 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಅವರು ದೂರಿದ್ದಾರೆ. ಇದುವರೆಗೂ 10.61 ಕೋಟಿ ರೂ. ಮೌಲ್ಯದ ವೆಂಟಿಲೇಟರ್’ಗಳನ್ನಷ್ಟೇ ಖರೀದಿ ಮಾಡಲಾಗಿದೆ. ಇನ್ನು, ಪಿಪಿಇ ಕಿಟ್‌ ಖರೀದಿಗೆ 79.35 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗಿದೆ. ಇದೊಂದರಲ್ಲಿಯೇ 150 ಕೋಟಿ ರೂ.ಗಳಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಎಲ್ಲಿದೆ ಅವರ ಲೆಕ್ಕ? ಈಗ ಹೇಳಲಿ ಉತ್ತರ.

*N-95 ಮಾಸ್ಕ್ ಖರೀದಿಯಲ್ಲೂ ಸರಕಾರ ನಿಯಮಗಳನ್ನು ಬಿಟ್ಟು ಆಚೀಚೆ ಕದಲಿಲ್ಲ. ಪ್ರತಿ ಒಂದು ಮಾಸ್ಕ್ ಅನ್ನು ಆರಂಭದಲ್ಲಿ ಅಂದರೆ ಮಾರ್ಚ್ ನಲ್ಲಿ 147 ರೂ. ಖರೀದಿಸಿದ್ದೇವೆ. ಈಗ ಅದರ ಬೆಲೆ 44.75 ರೂಪಾಯಿಗೆ ಇಳಿದಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಈ ಮಾಸ್ಕ್ ಖರೀದಿಗೆ 11.51 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇದೇ ರೀತಿ ಅಗತ್ಯಕ್ಕೆ ತಕ್ಕಂತೆ ಸರ್ಜಿಕಲ್ ಗ್ಲೌಸ್‌’ಗಳನ್ನು ಖರೀದಿ ಮಾಡಲಾಗಿದೆ. ಕೇರಳದ ಕಂಪನಿಯವರು ತಲಾ ಒಂದು ಸರ್ಜಿಕಲ್ ಗ್ಲೌಸ್‌ಗೆ 8.10 ರೂ. ಕೊಡುತ್ತೇವೆಂದು ಒಪ್ಪಿದ್ದರು. ಬಳಿಕ ಅವರು ಸರಬರಾಜು ಮಾಡಲಿಲ್ಲ. ಆಮೇಲೆ ಬೆಂಗಳೂರಿನ ಕಂಪನಿಯೊಂದಕ್ಕೆ ಆದೇಶ ನೀಡಲಾಯಿತು. ಪ್ರತಿ ಒಂದು ಗ್ಲೌಸ್​​ 9.50 ರೂ.ಗೆ ಕೊಡುತ್ತೇವೆ ಎಂದು ಅವರು ತಿಳಿಸಿದ್ದರು. ಅವರಿಗೆ 3 ಲಕ್ಷ ಗ್ಲೌಸುಗಳಿಗೆ ಆದೇಶ ನೀಡಲಾಗಿತ್ತು. ಅವರು ನೋಡಿದರೆ ಕೇವಲ 30 ಸಾವಿರ ಗ್ಲೌಸುಗಳನ್ನು ಪೂರೈಕೆ ಮಾಡಿದ್ದಾರೆ. ಇದಕ್ಕೆ 28.5 ಲಕ್ಷ ಆಗಿದೆ.

*ಸ್ಯಾನಿಟೈಸರ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ ಸ್ಯಾನಿಟೈಸರ್ ಖರೀದಿ ಆಗಿದೆ. 500 ಎಂ.ಎಲ್. ಬಾಟಲಿಯ 25 ಸಾವಿರ ಲೀಟರ್‌ಗೆ ಆದೇಶ ನೀಡಿದ್ದೇವೆ. ಈವರೆಗೂ ಬೇರೆ ಬೇರೆ ಕಂಪನಿಗಳೊಂದಿಗೆ 2.65 ಕೋಟಿ ರೂ. ಮೊತ್ತದಷ್ಟು ಸ್ಯಾನಿಟೈಸರಗ ಖರೀದಿ ಮಾಡಲಾಗಿದೆ. ಸಿಎಸ್ ಆರ್ ಹಣದಿಂದ ಹಲವಾರು ಸರಬರಾಜು ‌ಮಾಡುತ್ತಿರುವ ಕಾರಣ ಇದರ ಖರೀದಿ‌ ನಿಲ್ಲಿಸಿದ್ದೇವೆ

ಶ್ರೀರಾಮುಲು ಸವಾಲು:

ಇಡೀ ದೇಶದಲ್ಲಿ ಕೊರೋನಾಗೆ ಮೊದಲ ಸಾವು ಆಗಿದ್ದು ಕಲ್ಬುರ್ಗಿಯಲ್ಲಿ. ನಾನು ಎರಡು ದಿನ ಅಲ್ಲೇ ಇದ್ದು ವೈದ್ಯರಿಗೆ ಧೈರ್ಯ ತುಂಬಿದೆ. ಕೇವಲ 4 ಕಾಂಪೋನೆಂಟ್ ಇರುವ ಪಿಪಿಇ ಕಿಟ್ ಕೊಟ್ಟರೇ ಆಗಲ್ಲ ಎಂದು ವೈದ್ಯರೇ ಹೇಳಿದ್ದರು. ಬಳಿಕ 6 ಕಾಂಪೋನೆಂಟ್ ಇರುವ ಪಿಪಿಇ ಕಿಟ್ ಬೇಕು ಎಂದರು. ಅದನ್ನು ತಯಾರು ಮಾಡಲು ಮುಂದಾಗಿದ್ದೆವು. 1 ಲಕ್ಷ ಕಿಟ್ ತಯಾರು ಮಾಡಲು ಆದೇಶ ನೀಡಿದೆವು. ಈವರೆಗೂ ನಮಗೆ 40 ಸಾವಿರ ಕಿಟ್ ಮಾತ್ರ ಪೂರೈಕೆಯಾಗಿದೆ. ನಾವು ಕೆಲಸ ಮಾಡುತ್ತಿರುವುದು ಪ್ರತಿಪಕ್ಷದ ಕಣ್ಣಿಗೆ ಕಾಣುವುದಿಲ್ಲವೇ? ಅಕ್ರಮವನ್ನು ಅವರು ಸಾಬೀತು ಮಾಡಿದರೆ ಈಗಲೇ ಕುರ್ಚಿ ಬಿಟ್ಟು ಎದ್ದು ಹೋಗುತ್ತೇನೆ ಎಂದು ಸವಾಲು ಹಾಕಿದರು ಶ್ರೀರಾಮುಲು.

ಮುಖ್ಯಮಂತ್ರಿಯಾದಿಯಾಗಿ ನಾವೆಲ್ಲರೂ ಬಹಳ ಕಷ್ಟಪಟ್ಟು ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ. ಅಂಥ ವೇಳೆಯಲ್ಲಿ 6 ಕಾಂಪೋನೆಂಟ್‌ನಿಂದ 10 ಕಾಂಪೋನೆಂಟ್ ಇರುವ ಪಿಪಿಇ ಕಿಟ್ ಬೇಕು ಎಂದು ವೈದ್ಯರು ಬೇಡಿಕೆ ಇಟ್ಟರು. ಚೀನಾ, ಸಿಂಗಾಪುರದಿಂದ ಈ ಕಿಟ್ ಖರೀದಿ ಮಾಡಿದ್ದೇವೆ. ಮೂರು ಕಂಪನಿಗಳಿಂದ ಒಟ್ಟು 10 ಲಕ್ಷ ಕಿಟ್ ಖರೀದಿಸಿದ್ದೇವೆ. ಆರಂಭದಲ್ಲಿ ಅದರ ಬೆಲೆ ಹೆಚ್ಚಿತ್ತು. ಇದರ ಬೆಲೆ ಇದ್ದಿದ್ದು ಬೇರೆ, ಈಗಿನ ದರ ಬೇರೆ ಇದೆ.

ವಸ್ತುಸ್ಥಿತಿ ಅರಿಯಬೇಕೆಂದ ಡಿಸಿಎಂ:

ಕೋವಿಡ್-19 ಬಂದಾಗ ಒಂದು‌ ಕಂಪನಿ ಮಾತ್ರ ವೆಂಟಿಲೇಟರ್’ಗಳನ್ನು ತಯಾರು ಮಾಡುತ್ತಿತ್ತು. ಹೀಗಾಗಿ ಆಗಲೇ 130 ವೆಂಟಿಲೇಟರ್‌ಗೆ ಆದೇಶ ನೀಡಲಾಗಿತ್ತು. ಅದನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಿಂದಲೂ ಆರ್ಡರ್ ಮಾಡಲಾಗಿತ್ತು. ಆ ಕಂಪನಿ 130 ವೆಂಟಿಲೇಟರ್ ಪೈಕಿ 80 ಮಾತ್ರ ಪೂರೈಸಿತ್ತು. ಪ್ರತಿಯೊಂದರ ಬೆಲೆ 5.65 ಲಕ್ಷ. 18 ಲಕ್ಷ ರೂ.ಗಳಿಗೆ ಐಸಿಯು‌ನಲ್ಲಿ‌ ಬಳಸಬಹುದಾದ ಉತ್ಕೃಷ್ಟ ಗುಣಮಟ್ಟದ ವೆಂಟಿಲೇಟರ್ ಖರೀದಿಯಾಗಿದೆ. ಇನ್ನು ತಮಿಳುನಾಡಿನಲ್ಲಿ ಕೇವಲ 4 ಲಕ್ಷಕ್ಕೆ ವೆಂಟಿಲೇಟರ್ ಕೊಡುತ್ತಾರೆ ಎನ್ನುತ್ತಾರೆ. ಅದು ಮೊಬೈಲ್ ವೆಂಟಿಲೇಟರ್. ಒಂದು‌ ಕಡೆಯಿಂದ ಇನ್ನೊಂದು ಕಡೆ ತೆಗೆದುಕೊಂಡು ಹೋಗಲು, ಕೇವಲ ಅಂಬ್ಯುಲೆನ್ಸ್‌ನಲ್ಲಿ ಬಳಕೆಯಾಗುವ ವೆಂಟಿಲೇಟರ್ ಅದು. ಶಿವಾನಂದ ಪಾಟೀಲ್ ಆರೋಗ್ಯ ಸಚಿವರಾಗಿದ್ದಾಗ 2019ರಲ್ಲಿ ವೆಂಟಿಲೇಟರ್ ಖರೀದಿಯಾಗಿದೆ. ಆಗ 15,12,000 ರೂ. ವೆಚ್ಚ ಮಾಡಲಾಗಿದೆ. ಅಂದಿನ ಪರಿಸ್ಥಿತಿ ಏನಿತ್ತು? ಇದುವರೆಗೆ ಮೂರು ಬಾರಿ ವೆಂಟಿಲೇಟರ್ ಖರೀದಿಯಾಗಿದೆ. ಇದೆಲ್ಲ ಪ್ರತಿಪಕ್ಷ ನಾಯಕರಿಗೆ ಗೊತ್ತಿಲ್ಲವೇ? ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಪ್ರಶ್ನಿಸಿದ್ದಾರೆ.

ರಾಜ್ಯ ಈ ವರ್ಷದ ಆರಂಭದಿಂದಲೂ ಕೋವಿಡ್-19 ಎದುರಿಸುವ ಪರಿಸ್ಥಿತಿ ಬಂದಿದೆ. ಆರೋಗ್ಯ ಇಲಾಖೆಯಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಬೇಕಿತ್ತು. ಬೇರೆ ಹಂತದಲ್ಲಿ ಹುಷಾರು ತಪ್ಪಿದವರು ಆಸ್ಪತ್ರೆಗೆ ಬರುತ್ತಾರೆ. ಹಿಂದೆ ದುಡ್ಡು ಕೊಟ್ಟರೂ ಸ್ಯಾನಿಟೈಜೇಷರ್, N-95 ಮಾಸ್ಕ್ ಸಿಗುತ್ತಿರಲಿಲ್ಲ. ಪಿಪಿಇ ಕಿಟ್ ಕೂಡ ಇರಲಿಲ್ಲ. ಎಲ್ಲಾ ಪರಿಕರಗಳನ್ನು ಚೀನಾದಿಂದಲೇ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈ ಸೋಂಕಿನಿಂದ ಏಕಾಏಕಿ ಬೇಡಿಕೆ ಹೆಚ್ಚಾಯಿತು. ಅಂತಹ ಸಂದರ್ಭದಲ್ಲಿ ಚೀನಾ ಕೂಡ ಕೈಕೊಟ್ಟಿತು. ಇವತ್ತು ಒಳ್ಳೆಯ ಪಿಪಿಇ ಕಿಟ್ 3,900 ರೂ. ಇದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ತನಿಖೆಯ ಪ್ರಶ್ನೆಯೇ ಇಲ್ಲ:

ಕಾಂಗ್ರೆಸ್ ಕೇವಲ ರಾಜಕೀಯಕ್ಕಾಗಿ ಆರೋಪ ಮಾಡುತ್ತಿದೆ. ಇದರಲ್ಲಿ ತನಿಖೆಯ ಪ್ರಶ್ನೆಯೇ ಇಲ್ಲ. ಅಗತ್ಯಬಿದ್ದರೆ ಸದನದಲ್ಲಿ ಉತ್ತರ ನೀಡಲು ಸರಕಾರ ಸಿದ್ಧವಿದೆ. ಸರಕಾರದ್ದು ಎಳ್ಳಷ್ಟು ತಪ್ಪಿಲ್ಲ. ಹೀಗೆ ತಪ್ಪಿಲ್ಲ ಎಂದ ಮೇಲೆ ತನಿಖೆಯ ಮಾತೇ ಬರುವುದಿಲ್ಲ. ಸುಖಾಸುಮ್ಮನೆ ಹಿಟ್ ಅಂಡ್ ರನ್ ಮಾಡಬಾರದು ಎಂದು ಡಿಸಿಎಂ ತರಾಟೆಗೆ ತೆಗೆದುಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದಶೀ ಜಾವೇದ್ ಆಖ್ತರ್, ರಾಜ್ಯ ಡ್ರಗ್ಸ್ ಲಾಜಿಸಿಕ್ಟಿಕ್ಸ್ ಸಂಸ್ಥೆ ಹೆಚ್ಚುವರಿ ನಿರ್ದೇಶಕಿ ಎನ್ ಮಂಜುಶ್ರೀ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.

About The Author

Leave a Reply

Your email address will not be published. Required fields are marked *