September 17, 2024

Chitradurga hoysala

Kannada news portal

ಕಾಯಕ ಶರಣರ ಜಯಂತಿ ವಿಶೇಷ ಲೇಖನ
ಕಾಯಕ ಶರಣರು ನಮ್ಮೆಲ್ಲರಿಗೂ ಆದರ್ಶ.

1 min read

ಚಿತ್ರದುರ್ಗ, ಮಾರ್ಚ್10: ವೃತ್ತಿಯನ್ನು ಗೌರವದಿಂದ ನಡೆಸಿದ ಮಹನೀಯರಾದ ಕಾಯಕ ಶರಣರು ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಅವರನ್ನು ಪಂಚ ಶರಣರು ಎಂದು ಕರೆಯುತ್ತಾರೆ. ಕಲ್ಯಾಣದ ಪರಂಪರೆಯ ಅನುಭವ ಮಂಟಪದಲ್ಲಿ ಹಿರಿಯ ಶರಣರಾಗಿದ್ದರು.
ಕಾಯಕ ಶರಣರು ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸಿ, ಸತ್ಯ, ಶುದ್ಧ ಕಾಯಕದಿಂದ ಬದುಕನ್ನ ನಡೆಸುವ ಮೂಲಕ ತಮ್ಮ ಆದರ್ಶಗಳನ್ನು ಮುಂದಿಟ್ಟು ಮಹಾಪುರುಷರಾಗಿದ್ದಾರೆ.

ಮಾದಾರ ಚೆನ್ನಯ್ಯ: ಮಾದಾರ ಚೆನ್ನಯ್ಯ ಅವರು 12ನೇ ಶತಮಾನದ ಪ್ರಮುಖ ಶರಣರು ಹಾಗೂ ಬಸವಣ್ಣನವರ ಮೆಚ್ಚಿನ ಶರಣರಲ್ಲಿ ಚೆನ್ನಯ್ಯ ಅವರು ಸಹ ಒಬ್ಬರಾಗಿದ್ದರು.
ಮಹಾನ್ ಶಿವಭಕ್ತ ಮಾದಾರ ಚೆನ್ನಯ್ಯ ಅವರು ಕ್ರಿ.ಶ 1050ರ ಹೊಸ್ತಿಲಲ್ಲಿ ಹುಣ್ಣಿಮೆಯ ದಿನದಂದು ಶಿವಯ್ಯ, ಶಿವಗಂಗಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ ಎಂಬ ಗ್ರಾಮದಲ್ಲಿ ಜನಿಸಿದರು.
ಬಳ್ಳಿಗಾವಿ ವಿದ್ಯಾಕೇಂದ್ರದಲ್ಲಿ ವಿದ್ಯೆ ಕಲಿತು ಚಮ್ಮಾರಿಕೆ ಕಾಯಕದಲ್ಲಿ ತೊಡಗಿಕೊಂಡರು. ನಿತ್ಯವು ಮಾದರ ಚೆನ್ನಯ್ಯ ಅವರು ಇಷ್ಟಲಿಂಗ ಪೂಜೆ ಮಾಡುತ್ತಿದ್ದರು.
ಮಾದರ ಚೆನ್ನಯ್ಯ ಅವರು ಅರಿ ನಿಜಾತ್ಮ  ರಾಮರಾಮನ ಎಂಬ ಅಂಕಿತ ನಾಮವನ್ನು ಹೊಂದಿದ್ದಾರೆ. ಚೆನ್ನಯ್ಯರವರ ವಚನಗಳಲ್ಲಿ ಕುಲ ಕೇಂದ್ರ ಬಿಂದುವಾಗಿದೆ. ಆಚಾರವೇ ಕುಲ, ಅನಾಚರವೇ ಹೊಲೆ, ಅವ ಕುಲವಾದರೂ ಅರಿದಲ್ಲಯೆ ಪರತತ್ವಭಾವಿ ಮರೆದಲ್ಲಿಯೆ ಮಲಮ ಬಂಧ ಸಾಂಖ್ಯ ಸ್ವಪಚ, ಅಗಸ್ತ್ಯ ಕಬ್ಬಿಲ ದುಆರ್ವಸ ಮಚ್ಚ್ಗ, ದಧೀಚಿ ಕೀಲಿಗ, ಕಶ್ಯಪ ಕುಮಾರ, ರೋಮಜ ಕಂಚುಗಾರ, ಕೌಂಡಿಲ್ಯ ಆವಿದ ನೆಂಬುದವರಿದು ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ? ಎಂಬ ವಿಚಾರಗಳು ಬಸವಾದಿ ಶರಣರ ಕಲ್ಯಾಣ ಕ್ರಾಂತಿಗೆ ಮೂಲಬೀಜಗಳಾಗಿದ್ದವು ಎಂದರೆ ತಪ್ಪಾಗಲಾರದು.
ಮಾದರ ಧೂಳಯ್ಯ: “ಕಾಮಧೂಮ ದೊಳೇಶ್ವರ” ಎಂಬ ಅಂಕಿತ ದಿಂದ ಪ್ರಸಿದ್ದರಾದ ಮಾದರ ಧೂಳಯ್ಯ ಅವರು ಚರ್ಮದ ಪಾದರಕ್ಷೆ ಮಾಡುವ ಕಾಯಕ ಮಾಡುತ್ತಿದ್ದರು. ತಂದೆ ಕಕ್ಕಯ್ಯ ತಾಯಿ ನುಲಿದೇವಿಯ ಮಗನಾಗಿ ಜನಿಸಿದ ಇವರು, ತನ್ನ ಕಾಯಕದಲ್ಲಿಯೇ ಶಿವನನ್ನು ಒಲಿಸಿಕೊಂಡ ವ್ಯಕ್ತಿ.
ಕಾಮಧೂಮ ದೊಳೇಶ್ವರ ಅಂಕಿತದಲ್ಲಿ 106 ವಚನಗಳನ್ನು ರಚಿಸಿ, ಕಾಯಕದ  ಮಹತ್ವ, ಜ್ಞಾನ-ಮೋಕ್ಷಗಳ ಸ್ವರೂಪ, ಭಕ್ತಿಯ ಶ್ರೇಷ್ಠತೆ ತಿಳಿಸಿದ್ದಾರೆ. ಕಾಯಕದಲ್ಲಿ  ನಿರತನಾದ ತನಗೆ  ಕೈಲಾಸದ ಅಗತ್ಯವಿಲ್ಲವೆನ್ನುವ ಧ್ಯೇಯವಾದಿ. ಅರಿವು ಮರವೆಯ ಬಗೆಗಿನ ಇವನ ಆಲೋಚನೆಗಳು ಚಿಂತನಾರ್ಹವಾಗಿವೆ. ಎನ್ನ ತನುವ, ಮನವ, ಪ್ರಾಣವ ನಿರ್ಮಲ ಮಾಡಿದವರು ಬಸವಣ್ಣ, ರವರ ಬಗೆಗಿನ ಗೌರವ ತನಗೆ ತಾನೇ ಪ್ರಕಟಗೊಳ್ಳುತ್ತದೆ. ತನ್ನ ಕಾಯಕವನ್ನು ಹೇಳುತ್ತಲೇ ಅದನ್ನು ಬೇರೊಂದು ಅರ್ಥ ವಲಯಕ್ಕೆ ತೆಕ್ಕೆ ಹಾಕುವ ಗುಣ ವಿಶೇಷ ಇವರಲ್ಲಿ ಕಂಡುಬರುತ್ತದೆ.
  ಪಾದರಕ್ಷೆ ಸಿದ್ಧಪಡಿಸುವ  ಕಾಯಕ ಮಾಡುವುದರ ಮೂಲಕ  ಕಾಯಕದಿಂದ ಗಳಿಸಿದ ಹಣದಲ್ಲಿ ದಾಸೋಹಕ್ಕೆ ಬಳಸುತ್ತಿದ್ದರು. ಇದನ್ನು ಕಂಡ ಶಿವನು ಭೂಲೋಕಕ್ಕೆ ಬಂದು ಪರೀಕ್ಷಿಸುತ್ತಾನೆ. ಆ ಸಮಯದಲ್ಲಿ ತಮ್ಮ ವಚನದ ಮೂಲಕ ಕಾಯಕದ ಕುರಿತು ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ, ಪ್ರತ್ಯಕ್ಷವಾದ ಪರಮೇಶ್ವರನ ಕಂಡು, ಇತ್ತಲೇಕಯ್ಯ, ಕಾಯದ ತಿತ್ತಿಯ ಹೊತ್ತಾಡುವ ಮುಂದೆ? ನಿನ್ನ ಭಕ್ತರಠವಿನಲ್ಲಿಗೆ ಹೋಗಿ ಮುಕ್ತಿಯ ಮಾಡು ನೀ ಹೊತ್ತ ಬಹುರೂಪ(ದಿ) ತಪ್ಪದೆ ರಜತಬೆಟ್ಟದ ಮೇಲಕ್ಕೆ ಹೋಗು, ನಿನ್ನ ಭಕ್ತರ ಮುಕ್ತಿಯ ಮಾಡು. ಕಾಮಧೂಮ ಧೂಳೇಶ್ವರನ ಕರುಣ ದಿಂದ ನೀನೆ ಬದುಕು ಎಂದು ಕಾಯಕದಲ್ಲಿ ನಿರತನಾದವನಿಗೆ ಕೈಲಾಸದ ಅಗತ್ಯವಿಲ್ಲ ಎಂದರು.
ಡೋಹರ ಕಕ್ಕಯ್ಯ: ಜಗಜ್ಯೋತಿ ಬಸವೇಶ್ವರರ ವಿಚಾರಕ್ಕೆ ಬಂದಾಗ ಡೋಹರ ಕಕ್ಕಯ್ಯ ಅವರ ಹೆಸರು ಕೇಳಿದವರಿಲ್ಲ. ಬಸವಣ್ಣ ಅವರ ನಡೆ ಮತ್ತು ನುಡಿಯಿಂದ ಪ್ರಭಾವಿತರಾಗಿ ಕೊನೆಗೆ ಅವರ ಅನುಯಾಯಿಯಾಗಿ ಸಮಾಜಕ್ಕೆ ದಾರಿದೀಪವಾಗುವ ವಚನಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ.
 ಇವರ ವಚನಗಳ ಅಂಕಿತ ನಾಮ ಅಭಿನವ ಮಲ್ಲಿಕಾರ್ಜುನ. ಬಸವಣ್ಣನವರ ಶರಣ ವಿಶೇಷ ಗೌರವಕ್ಕೆ ಪಾತ್ರನಾದ ಶರಣಾಗಿದ್ದಾರೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಚೆನ್ನಬಸವಣ್ಣನವರ ಜೊತೆಯಲ್ಲಿ ಸಾಗುತ್ತಾರೆ. “ಲಿಂಗಬಂಧು ಸೋಂಕಲೋಡನೆ ಎನ್ನ ಸರ್ವಾಂಗದ ಅವಲೋಹವಳಿಯತ್ತಯ್ಯಾ” ಎಂಬ ಮಾತು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಸ್ವರೂಪ ತೋರಿಸುತ್ತದೆ.
 ಉರಿಲಿಂಗ ಪೆದ್ದಿ: ಉರಿಲಿಂಗ ಪೆದ್ದಿ ಅವರು ಆಂದ್ರ ಪ್ರದೇಶದ ಗೋಧಾವರಿ ತೀರದ ಲತೋರ್ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ಮೂಲತಃ ಹೆಸರು ಪೆದ್ದಣ್ಣ. ಪೆದ್ದಣ್ಣ ಪೆದ್ದಿ ಯಾಗಿದ್ದು ಅವರ ಜೀವನವನ್ನು ಪರಿವರ್ತನೆ ಮಾಡಿದ್ದು ಒಂದು ವಿಶೇಷವಾಗಿದೆ. ಉರಿಲಿಂಗ ಪೆದ್ದಣ್ಣ ಅವರು ಆರಂಭದಲ್ಲಿ ಕಳ್ಳತನ ವೃತ್ತಿ ಮಾಡುತ್ತಿದ್ದರು. ಒಂದು ಸಲ ಅವರು ಉರಿಲಿಂಗ ದೇವರ ಮನೆಗೆ ಕಳ್ಳತನ ಮಾಡಲೇಂದು ಹೋದ ಸಮಯದಲ್ಲಿ ಉರಿಲಿಂಗ ದೇವರು ನಂದವಾಡ ಗ್ರಾಮದ  ಸೂರಯ್ಯನಿಗೆ ದೀಕ್ಷೆ ನೀಡುತ್ತಿದ್ದರು. ಇದನ್ನು ಕಂಡು ಮನಪರಿವರ್ತನೆಗೊಂಡ ಪೆದ್ದಣ್ಣ ಉರಿಲಿಂಗ ದೇವರ ಮಠಕ್ಕೆ ಸೌದೆ ತಂದು ಹಾಕುತ್ತಿದ್ದರು. ಕೊನೆಗೆ ಒಂದು ದಿನ ಗುರುಗಳನ್ನು ದೀಕ್ಷೆ ನೀಡಿ ಎಂದು ಕೇಳಿದ. ಉರಿಲಿಂಗ ದೇವರು ಪೆದ್ದಣ್ಣನಿಗೆ ಕಲ್ಲು ಕೊಟ್ಟು ಕಳುಹಿಸುತ್ತಾರೆ ಅದನ್ನು ಇಟ್ಟುಕೊಂಡು ಪೆದ್ದಣ್ಣ ಅವರು ಶಿವ ಎಂದು ಆರಾಧನೆ ಮಾಡುತ್ತಾರೆ. ನಂತರ ಕಾಲಘಟ್ಟದಲ್ಲಿ ಉರಿಲಿಂಗ ಮಠಕ್ಕೆ ಗುರುವಾಗಿ ವಚನಗಳನ್ನು ರಚಿಸಿ ಗುರುವಿನ ಮಹಿಮೆಯನ್ನು ಪ್ರಧಾನವಾಗಿ ಜಾತಿ, ಕುಲ, ಧರ್ಮ ಕುರಿತು ವಚನ ರಚನೆ ಮಾಡಿದ್ದಾರೆ. ಇವರ ಅಂಕಿತ ನಾಮ ಉರಿಲಿಂಗ ಪೆದ್ದೆ ವಿಶ್ವೇಶ್ವರ. ಇವರು ಒಟ್ಟು 366 ವಚನಗಳನ್ನು ರಚಿಸಿದ್ದಾರೆ. ಇವರ ವಚನ ನೋಡುವುದಾದರೆ ಸೂರ್ಯನಿಲ್ಲದೆ ಹಗಲುಂಟೆ ಅಯ್ಯಾ? ದೀಪವಿಲ್ಲದೇ ಬೇಳಕುಂಟೆ ಅಯ್ಯಾ? ಪುಷ್ಪವಿಲ್ಲದೆ ಪರಿಮಳವನರಿಯಬಹುದೆ ಅಯ್ಯಾ? ಸಕಲವಿಲ್ಲದೆ ನಿಷ್ಕಲ ಕಾಣಬಾರದು ಮಹಾಘನ ನಿರಳ ಪರಶಿವನಿಂದ ಲಿಂಗವು ತೋರಿತ್ತು ಉರಿಲಿಂಗ ಪೆದ್ದೆ ವಿಶ್ವೇಶ್ವರ.
ಸಮಗಾರ ಹರಳಯ್ಯ: ಯಾವ ವ್ಯಕ್ತಿ ಸಮಾಜಕ್ಕೆ ತನ್ನ ಜೀವನವನ್ನು ಕಾಣಿಕೆಯಾಗಿ ನೀಡುತ್ತಾನೋ ಆತನೇ ಮಹಾತ್ಮ ಎಂಬುವುದಕ್ಕೆ  ಸಮಗಾರ ಹರಳಯ್ಯ  ನಿದರ್ಶನ. ಅತ್ಯಂತ ಹಿರಿಯ ಶರಣರು. ಇವರು ಬಸವಧರ್ಮ ಎತ್ತಿ ಹಿಡಿದಿದ್ದರಿಂದ ಸಮರ್ಥ ಸಿದ್ದಿಯೋಗಿ ಸಂಕಲ್ಪ ಸಾಧಕ ಶರಣನೆನಿಸಿಕೊಂಡವರು. ಇವರು ವಿಜಾಪುರ ಜಿಲ್ಲೆಯ ಕಲಿಗೂಡು ಎಂಬಲ್ಲಿ ಜನಿಸಿದರು.  
ಒಮ್ಮೆ ಕಲ್ಯಾಣ ಪಟ್ಟಣದ ರಾಜಬೀದಿಯಲ್ಲಿ ದಿನನಿತ್ಯದಂತೆ ಹರಯ್ಯವರು ಪಾದರಕ್ಷೆಗಳನ್ನು ಮಾರಿಕೊಂಡು ಬರುತ್ತಿದರು ಆಕಸ್ಮಿಕವೂ ಎನೋ ಎಂಬಂತೆ ಬಸವಣ್ಣನವರು ಎದುರಿಗೆ ಬಂದಾಗ ಹರಳಯ್ಯನವರು “ಗುರು ಬಸವೇಶ್ವರ ಶರಣು ತಂದೆ ಶರಣು”ಎಂದು ಕೈ ಮುಗಿದರು ಅದಕ್ಕೆ ಪ್ರತಿಯಾಗಿ ಬಸವಣ್ಣನವರು “ಶರಣು ಶರಣಾರ್ಥಿಗಳು ಹರಳಯ್ಯನವರಿಗೆ” ಎಂದು ಭಾಗಿ ನಮಸ್ಕರಿಸಿದರು. ಇದನ್ನು ಕಂಡು ಹರಳಯ್ಯ ಅಚ್ಚರಿಗೊಳಗಾದರು.

12ನೇ ಶತಮಾನದಲ್ಲಿ ಶರಣರು ನೀಡಿದ ವಚನಗಳು ಕೇವಲ ವಚನಗಳಾಗಿರದೇ ಅವರ ವಚನಗಳ ಸಂದೇಶ ಬಹಳ ಪ್ರಾಮುಖ್ಯತೆ ಪಡೆದಿದ್ದು, ಕಾಯಕ ಶರಣರು ಕಾಯಕದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ.

About The Author

Leave a Reply

Your email address will not be published. Required fields are marked *