ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಪಡೆಯಿರಿ:ಸಚಿವ ಬಿ.ಶ್ರೀರಾಮುಲು ಸಲಹೆ.
1 min readಬಿ.ದುರ್ಗ ಇಂದಿರಾಗಾಂಧಿ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಬಿ.ಶ್ರೀರಾಮುಲು ಸಲಹೆ
ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಪಡೆಯಿರಿ
*******
ಚಿತ್ರದುರ್ಗ, ಮಾರ್ಚ್13:
ಮಕ್ಕಳ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದ ಪ್ರಮುಖ ಗುರಿಯಾಗಿದ್ದು, ಶಿಕ್ಷಣದ ಜೊತೆಗೆ ಮಕ್ಕಳು ಉತ್ತಮ ಸಂಸ್ಕಾರ ಪಡೆಯಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗದಲ್ಲಿ ಇಂದಿರಾಗಾಂಧಿ ವಸತಿ ಶಾಲೆ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯ ವಸತಿ ಶಾಲೆಗಳಲ್ಲಿ ರಾಜ್ಯದಲ್ಲಿ ಸುಮಾರು 1.50 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿನ ವಸತಿ ಶಾಲೆಯನ್ನು ಸಾಪ್ಟ್‍ವೇರ್ ಕಂಪನಿಯ ಹಾಗೇ ನಿರ್ಮಾಣ ಮಾಡಿದ್ದಾರೆ. ಸರ್ಕಾರವು ಹಲವಾರು ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ, ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಶಾಲೆಗಳು ಕೇವಲ ಅಂಕಪಟ್ಟಿಗಳನ್ನು ನೀಡುವ ಕಾರ್ಖಾನೆಗಳಾಗಬಾರದು. ಕೇವಲ ಉದ್ಯೋಗದ ದೃಷ್ಠಿಯಿಂದ ಶಿಕ್ಷಣ ಪಡೆಯಬಾರದು. ಈ ಪರಿಕಲ್ಪನೆ ಬದಲಾವಣೆಯಾಗಬೇಕು. ಶಿಕ್ಷಣದಿಂದ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.
ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಂಬೇಡ್ಕರ್ ಹಾಗೂ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳಿಂದಾಗಿ ಕೇಂದ್ರ ಸರ್ಕಾರದ ನವೋದಯ ಶಾಲೆಗಳಿಗಿಂತ ಉತ್ತಮ ಶಾಲೆಗಳಾಗಿ ಪರಿವರ್ತನೆಯಾಗುತ್ತಿದೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿಗಳು ಈ ಬಾರಿ ರಾಜ್ಯದಲ್ಲಿ 50 ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಗಳ ನಿರ್ಮಾಣ ಮಾಡಬೇಕು ಎಂದು ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ. ಹೊಳಲ್ಕೆರೆ ಶಾಸಕರ ಮನವಿಯಂತೆ ಹೊಳಲ್ಕೆರೆ ತಾಲ್ಲೂಕಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಮಂಜೂರಾತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸದ ಎ.ನಾರಾಯಣಸ್ವಾಮಿ, ಹೊಳಲ್ಕೆರೆ ಶಾಸಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಮ ಲಿಂಗರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ದೇವರಾಜ್, ಬಿ.ದುರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಟಿ.ರಮೇಶ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ವಿವರ: ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗದಲ್ಲಿ ಇಂದಿರಾಗಾಂಧಿ ವಸತಿ ಶಾಲೆಯ ನೂತನ ಕಟ್ಟಡವನ್ನು ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಉದ್ಘಾಟಿಸಿದರು.