May 12, 2024

Chitradurga hoysala

Kannada news portal

ಸರ್ಕಾರಿ ಇಲಾಖೆಗಳ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ..

1 min read

ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2020′ ಜಾರಿ ಮಾಡಿರುವ ಕರ್ನಾಟಕ ರಾಜ್ಯ ಸರ್ಕಾರ ಮುಂದಿನ ನೇಮಕಾತಿಗಳಿಗೆ ಅನ್ವಯವಾಗುವಂತೆ ಹೊಸ ನಿಯಮಗಳನ್ನು ಜಾರಿ ಮಾಡಿದೆ.
ಎಲ್ಲಾ ಹಂತದಲ್ಲಿ ನೆಗೆಟಿವ್ ಅಂಕ ಹಿಂದೆ ಕೆಪಿಎಸ್‌ಸಿ ನಡೆಸುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಈವರೆಗೂ ಗ್ರೂಪ್‌ ‘ಎ’ ಮತ್ತು ‘ಬಿ’ ವೃಂದದ ಹುದ್ದೆಗಳ ನೇಮಕಾತಿಗೆ ಮಾತ್ರ ನೆಗೆಟಿವ್ ಅಂಕಗಳನ್ನು ನೀಡಲಾಗುತ್ತಿತ್ತು. ಆದರೆ ಇನ್ನುಮುಂದೆ ಗ್ರೂಪ್‌ ‘ಎ’ ಇಂದ ಗ್ರೂಪ್‌ ‘ಡಿ’ ಹುದ್ದೆಗಳವರೆಗೂ ನಡೆಸಲಾಗುವ ನೇಮಕ ಪರೀಕ್ಷೆಯಲ್ಲಿ ನಾಲ್ಕನೇ ಒಂದರಷ್ಟು ಋಣಾತ್ಮಕ ಅಂಕ ನೀಡುವ ಪದ್ಧತಿ ಜಾರಿಗೆ ತರಲಾಗಿದೆ. ಆದರೆ ಚಾಲಕರ ನೇಮಕಾತಿಗೆ ಮಾತ್ರ ಈ ನಿಯಮ ಅನ್ವಯವಾಗುವುದಿಲ್ಲ.

ಕಂಪ್ಯೂಟರ್ ಜ್ಞಾನ ಪತ್ರಿಕೆ ಸೇರ್ಪಡೆ
ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಜ್ಞಾನ ಎಂಬ ಎರಡು ಪತ್ರಿಕೆಗಳಿದ್ದು, ಎರಡೂ ಪತ್ರಿಕೆಗಳಿಗೆ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಜತೆಗೆ, ಎರಡು ಪತ್ರಿಕೆಗಳಲ್ಲಿ ನಿಗದಿಪಡಿಸಿದ್ದ (ಕಟ್‌ಆಫ್‌ ಮಾರ್ಕ್ಸ್‌) ಒಟ್ಟು ಅಂಕಗಳನ್ನು ಗಳಿಸಿದಲ್ಲಿ ಆಯ್ಕೆಗೆ ಅರ್ಹತೆ ಪಡೆಯುತ್ತಿದ್ದರು. ಆದರೆ ಇದೀಗ ಎಲ್ಲ ನೇಮಕಾತಿಗಳಲ್ಲಿ ಕಡ್ಡಾಯ ಕನ್ನಡ, ಕಡ್ಡಾಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನವನ್ನು ಸೇರಿಸಲಾಗಿದೆ. ಈ ಮೂರು ವಿಷಯಗಳಲ್ಲಿ ಶೇಕಡ.35 ಅಂಕಗಳು ಪಡೆಯುವುದು ಕಡ್ಡಾಯಗೊಳಿಸಲಾಗಿದೆ. 2 ವಿಷಯಗಳಲ್ಲಿ ಶೇಕಡ.100 ರಷ್ಟು ಅಂಕ ಪಡೆದು ಒಂದು ವಿಷಯಗಳಲ್ಲಿ ಶೇಕಡ.35 ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ್ದಲ್ಲಿ ಅನರ್ಹರಾಗಲಿದ್ದಾರೆ.

ಪತ್ರಿಕೆ 2 ರಲ್ಲಿ ಹುದ್ದೆಯಾಧಾರಿತ ಪ್ರಶ್ನೆಗಳು
ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ವೃಂದದ ಹುದ್ದೆಗಳ ನೇಮಕಾತಿ ಪತ್ರಿಕೆ 1 ರಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ಘಟನೆಗಳು, ಸಾಮಾನ್ಯ ವಿಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರಲಿವೆ. ಆದರೆ ಪತ್ರಿಕೆ 2 ರಲ್ಲಿ ಯಾವ ಇಲಾಖೆಯ ಹುದ್ದೆ ಎಂಬುದರ ಆಧಾರಿತವಾಗಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಬೇಕಾಗುತ್ತದೆ. ಗ್ರೂಪ್ ‘ಸಿ’ ಹುದ್ದೆಗಳು, ಡಿಪ್ಲೊಮ, ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯ ಹುದ್ದೆಗಳಿಗೆ ನೇಮಕ ಮಾಡುವಲ್ಲಿ ಸಾಮಾನ್ಯ ಜ್ಞಾನದ ಜತೆಗೆ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಲಿದೆ.

ಮಾ.05 ರ ನಂತರದ ಅಧಿಸೂಚನೆಗಳಿಗೆ ಹೊಸ ನಿಯಮ
ಹೊಸ ವ್ಯವಸ್ಥೆಯನ್ನು ಜಾರಿ ಮಾಡುವ ಸಂಬಂಧ 2021 ರ ಜನವರಿ 4 ರಂದು ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ರಾಜ್ಯ ಸರ್ಕಾರ ಆಹ್ವಾನಿಸಿತ್ತು. ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಮಾರ್ಚ್‌ 05 ರ ನಂತರದ ಎಲ್ಲ ನೇಮಕಾತಿ ಅಧಿಸೂಚನೆಗಳಿಗೆ ಈ ಹೊಸ ನಿಯಮಗಳು ಅನ್ವಯವಾಗಲಿವೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕೃತ ರಾಜ್ಯಪತ್ರದಲ್ಲಿ ಉಲ್ಲೇಖಿಸಿದೆ.

About The Author

Leave a Reply

Your email address will not be published. Required fields are marked *